ಹಿಂದೆ ಟೀವಿ ವಾಹಿನಿಗಳು ಸಿನಿಮಾಗಳನ್ನು ಖರೀದಿಸುವ ಸಂಪ್ರದಾಯ ಆರಂಭಿಸಿದ್ದವು. ಚಿತ್ರ ಮುಹೂರ್ತದ ದಿನವೇ ಅಡ್ವಾನ್ಸ್‌ ನೀಡಿ ರೈಟ್ಸ್‌ ಪಡೆಯುತ್ತಿದ್ದರು.  ನಂತರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಿ ಚಿತ್ರೀಕರಣಕ್ಕೆ ಸಹಾಯ ಮಾಡುತ್ತಿದ್ದರು. ನಂಬಿಕೆ ಉಳಿಸಿಕೊಂಡಿದ್ದರೆ ಕನ್ನಡ ಚಿತ್ರರಂಗದ ನಿರ್ಮಾಪಕರು ಬೇರೆಯದ್ದೇ ಲೆವೆಲ್ಲಿಗೆ ತಲುಪುತ್ತಿದ್ದದ್ದು ನಿಜ. ಆದರೆ, ಕೆಲವು ನಿರ್ಮಾಪಕರು ಟೀವಿ ವಾಹಿನಿಗಳಿಗೆ ಮಾಡಿದ್ದು ಅಕ್ಷರಶಃ ಅನ್ಯಾಯವನ್ನ. ಸ್ಯಾಟಲೈಟ್‌ ರೈಟ್ಸ್‌ಗೆ ಸಿನಿಮಾಗಳನ್ನು ಮಾರಿ, ಬಂದ ಹಣದಲ್ಲಿ ಕಾಟಾಚಾರಕ್ಕೆ ಸಿನಿಮಾ ಸುತ್ತಿದರು. ನಂಬಿದ ಹೀರೋಗಳಿಗೂ ಗುನ್ನ ಬಿತ್ತು, ಹಣ ನೀಡಿದ ಟೀವಿ ಸಂಸ್ಥೆಗಳೂ ಯಾಮಾರಿದವು. ಕೆಲವು ನಿರ್ಮಾಪಕರಂತೂ ವಾಹಿನಿಗಳಿಂದ ಹಣ ಪಡೆದು ಸಿನಿಮಾವನ್ನೇ ಪೂರ್ತಿ ಮಾಡದೆ, ಕಾಸು ನುಂಗಿಬಿಟ್ಟರು.

ನಂತರ ಐಡಿಬಿಐ ಬ್ಯಾಂಕು ಸಿನಿಮಾ ನಿರ್ಮಾಣಕ್ಕೆ ಸಾಲ ನೀಡಲು ಮುಂದೆ ಬಂತು. ಒಂದೆರಡು ವರ್ಷಗಳಲ್ಲಿ ಗಾಂಧಿನಗರದ ಜನ ಆ ಬ್ಯಾಂಕನ್ನು ಯಾವ ಪರಿ ಮುಂಡಾಯಿಸಿದರೆಂದರೆ, ಅವರು ಮತ್ತೆ ಹಿಂತಿರುಗಿಯೂ ನೋಡದೆ ಬಂದ ದಾರಿಯಲ್ಲಿ ವಾಪಾಸು ಓಡಿಹೋದರು. ಯಾವ ಸಿನಿಮಾಗೆ ಸಾಲ ಕೊಡಬೇಕು, ಬೇಡ ಅಂತಾ ತೀರ್ಮಾನಿಸಲು ಚಿತ್ರರಂಗದ ಹಿರಿಯರನ್ನು ಆಯ್ಕೆ ಮಾಡಿ, ಕೋರ್‌ ಕಮಿಟಿ ರಚಿಸಲಾಗಿತ್ತು. ಆ ಕಮಿಟಿಯಲ್ಲಿದ್ದ ಸೀನಿಯರುಗಳೇ ಐಡಿಬಿಐಗೆ ನಾಮ ತೀಡಿದ್ದೀಗ ಇತಿಹಾಸ…

ಈಗ ಡಬ್ಬಿಂಗ್‌ ರೈಟ್ಸ್‌ ಸಿನಿಮಾ ನಿರ್ಮಾಪಕರ ಪಾಲಿಗೆ ವರವಾಗಿದೆ. ರಿಲೀಸಿಗೆ ಮುಂಚೆಯೇ ಸಿನಿಮಾಗಳನ್ನು ಒಳ್ಳೇ ಅಮೌಂಟು ಕೊಟ್ಟು ಖರೀದಿಸಲು ಒಂದಷ್ಟು ಕಂಪೆನಿಗಳಿವೆ.  ಪೂರ್ತಿ ಸಿನಿಮಾ ಕೂಡಾ ನೋಡದೆ ಬರಿಯ ʻಶೋ ರೀಲ್‌ʼ  ನೋಡಿ ಹಣ ನೀಡುವವರಿದ್ದಾರೆ. ಕನ್ನಡದ ಒಂದಿಬ್ಬರು ನಿರ್ಮಾಪಕರು ಅಂಥಾ ಕಂಪೆನಿಗಳನ್ನು ಯಾಮಾರಿಸಿ, ಪಿಗ್ಗಿಬೀಳಿಸಿದ್ದಾರೆ.

ಆಕ್ಷನ್‌ ಹೀರೋ ಅಂತಾ ಗುರುತಿಸಿಕೊಂಡಿರುವ ಒಂದಿಷ್ಟು ಜನರ ಸಿನಿಮಾಗಳು ಬಿಡುಗಡೆಗೆ ಮುಂಚೆ ಒಳ್ಳೇ ವ್ಯಾಪಾರ ಕುದುರಿಸುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ ಮರಿಟೈಗರ್‌ ವಿನೋದ್‌ ಪ್ರಭಾಕರ್‌ ಸದ್ಯ ಕನ್ನಡ ಚಿತ್ರರಂಗದ ಓಡುವ ಕುದುರೆ ಅನ್ನಿಸಿಕೊಂಡಿದ್ದಾರೆ. ಸಿನಿಮಾ ಥೇಟರಿಗೆ ಬರೋಮುಂಚೆಯೇ ನಿರ್ಮಾಪಕರಿಗೆ ಒಂದು ಹಿಡಿ ಲಾಭ ಮಾಡಿಕೊಡುವ ಹೀರೋ ವಿನೋದ್. ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ, ಅಸ್ತಿತ್ವ ದಂಥಾ ಉತ್ತಮ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ನೂತನ್‌ ಉಮೇಶ್‌. ಇವರ ನಿರ್ದೇಶನದಲ್ಲಿ ಫೈಟರ್‌ ಹೆಸರಿನ ಸಿನಿಮಾ ಶುರುವಾಗಿತ್ತು. ಇನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಸಿನಿಮಾ ಡಬ್ಬಿಂಗ್‌ ರೈಟ್ಸ್‌ ಅತ್ಯುತ್ತಮ ರೇಟಿಗೆ ಸೇಲ್‌ ಆಗಿದೆಯಂತೆ.

ಆದರೆ, ನಿರ್ಮಾಪಕ ಕಟ್ಟಿಗೇನಹಳ್ಳಿ ಸೋಮಶೇಖರ್ ಚಿತ್ರವನ್ನು ಕಂಪ್ಲೀಟ್‌ ಮಾಡಲು ವಿಳಂಬ ಮಾಡುತ್ತಿದ್ಧಾರೆ. ಹೇಗೂ ಹಾಕಿದ ಕಾಸು ಬಂದಿದೆಯಲ್ಲಾ? ಅಂತಾ ಉದಾಸೀನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಹಾಗೆಯೇ ಚಿರಂಜೀವಿ ಸರ್ಜಾ ನಟನೆಯ ರಾಜಮಾರ್ತಾಂಡ ಚಿತ್ರದ ನಿರ್ಮಾಪಕ ಕಾಡು ಶಿವಕುಮಾರ್‌ ಕೂಡಾ ಚಿತ್ರವನ್ನು ಎರಡೆರಡು ಕಡೆಗೆ ಸೇಲ್‌ ಮಾಡಿದ್ದಾರೆನ್ನುವ ಆಪಾದನೆಯೂ ಎದುರಾಗಿದೆ. ಈ ಎರಡೂ ಸಿನಿಮಾಗಳಿಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಿನ್ನೆಲೆಯಲ್ಲಿ ನಿಂತು ಸಹಕಾರ ನೀಡಿದ್ದರು.

ಒಂದು ವೇಳೆ ಈ ಇಬ್ಬರು ನಿರ್ಮಾಪಕರ ಕುರಿತು ಕೇಳಿಬರುತ್ತಿರುವ ಸುದ್ದಿ ನಿಜವಾಗಿದ್ದೇ ಆದಲ್ಲಿ, ಭವಿಷ್ಯದಲ್ಲಿ ಯಾವ ಕಂಪೆನಿಗಳೂ ಪ್ರಾಮಾಣಿಕ ನಿರ್ಮಾಪಕರನ್ನೂ ನಂಬದಂತಾಗುತ್ತದೆ. ದರ್ಶನ್‌ ಥರದ ದೊಡ್ಡ ಹೀರೋಗಳು ʻʻಯಾರಿಗೂ ಒಳ್ಳೇದುಮಾಡಲು ಹೋಗಬಾರದುʼʼ ಅಂತಾ ತೀರ್ಮಾನಿಸಿ ಸುಮ್ಮನಾಗುತ್ತಾರೆ. ಇಂಥವೆಲ್ಲಾ ಘಟಿಸದಿರಲಿ…!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶಿವತೇಜಸ್ ನಿರ್ದೇಶನದ ಈ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ!

Previous article

ನಂಬಿದವರ ತಲೆ ಮೇಲೆ ಕೈಯಿಟ್ಟ ತಲೈವಾ!

Next article

You may also like

Comments

Leave a reply

Your email address will not be published.