ಚಿತ್ರರಂಗವೇ ಆಗಲಿ ಯಾವುದೇ ವೃತ್ತಿಗಳಲ್ಲಾಗಲಿ ಯೂನಿಟಿ, ಯೂನಿಯನ್ನುಗಳಿರಬೇಕು. ಕಾರ್ಮಿಕರು ತಮಗೆ ಕಾನೂನು ವ್ಯಾಪ್ತಿಯಲ್ಲಿ ದಕ್ಕಬೇಕಿರುವ ನ್ಯಾಯಕ್ಕಾಗಿ, ಉದ್ಯೋಗ ಭದ್ರತೆಗಾಗಿ ಹೋರಾಡಬೇಕು ನಿಜ. ಆದರೆ ಅದೇ ಯೂನಿಯನ್ನಿನ ಹೆಸರು ಬಳಸಿಕೊಂಡು ಕೆಲವರು ಗೂಂಡಾಗಿರಿಗೆ ಮುಂದಾಗಿದ್ದಾರೆ. ಕಾರ್ಡು ಹೊಂದಿಲ್ಲದೇ ಕೆಲಸ ಮಾಡುವ ತಂತ್ರಜ್ಞರ ವಿರುದ್ಧ ಚಿತ್ರರಂಗದ ಇನ್ನಿತರೆ ವಿಭಾಗಗಳಲ್ಲೂ ಆಗಾಗ ಘರ್ಷಣೆಗಳು ಘಟಿಸುತ್ತಿರುತ್ತವೆ. ಕನ್ನಡ ಚಿತ್ರರಂಗದಲ್ಲಿ ಸಾಹಸ ಕಲಾವಿದರ ಒಕ್ಕೂಟ ಈ ಹಿಂದೆಯೂ ಸಾಕಷ್ಟು ಬಾರಿ ಯೂನಿಯನ್ನಿನ ಹೆಸರಲ್ಲಿ ಹೊಡೆದಾಟಕ್ಕಿಳಿದ ಉದಾಹರಣೆಗಳಿವೆ. ಈಗ ಮತ್ತೆ ಅಂಥದ್ದೇ ಘಟನೆ ಮರುಕಳಿಸಿದೆ. ಸಿನಿಮಾಗಳಲ್ಲಿ ಡ್ಯೂಪ್ ಫೈಟ್ ಮಾಡಬೇಕಿದ್ದವರೆಲ್ಲಾ ರಿಯಲ್ ಫೈಟ್ಗಿಳಿದು ಅಕ್ಷರಶಃ ಗೂಂಡಾಗಿರಿ ಪ್ರದರ್ಶಿಸಿದ ಘಟನೆ ನಡೆದಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಯಾಗಿರುವ ವೈ.ಬಿ.ಎನ್. ಸ್ವಾಮಿ `ಧೀರನ್’ ಅನ್ನೋ ಸಿನಿಮಾವನ್ನು ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಚೇತನ್ ಡಿಸೋಜ ಎಂಬ ಒಕ್ಕೂಟದಲ್ಲಿ ನೋಂದಣಿಯಾಗಿ, ಕಾರ್ಡು ಪಡೆಯದ ಸಾಹಸ ನಿರ್ದೇಶಕ ಫೈಟ್ ಕಂಪೋಸ್ ಮಾಡುತ್ತಿದ್ದರಂತೆ. ಚಂದ್ರಾ ಲೇಔಟ್ ನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ಸಂದರ್ಭದಲ್ಲಿ ಸಾಹಸ ನಿರ್ದೇಶಕರ ಸಂಘದ ಪರವಾಗಿ ರಮೇಶ್, ಸುರೇಶ್, ವಿಜಿ ಮುಂತಾದವರು ದಾಳಿಯಿಟ್ಟು ಸರಿಸುಮಾರು ಎರಡು ಗಂಟೆಗಳಿಗೂ ಹೆಚ್ಚು ಅವಧಿ ಶೂಟಿಂಗ್ ಸ್ಟಾಪ್ ಮಾಡಿಸಿದ್ದಾರೆ. ಹೀಗೆ ಬಂದವರಲ್ಲಿ ಅನೇಕರು ಸಾಹಸ ನಿರ್ದೇಶಕ ಡಾ. ರವಿವರ್ಮ ಅವರ ನೆಂಟರು, ಭಂಟರೇ ಆಗಿದ್ದಾರಂತೆ.
ಯಾವುದೇ ಒಕ್ಕೂಟಕ್ಕಾಗಲಿ ಚಿತ್ರೀಕರಣದ ಸ್ಥಳಕ್ಕೆ ಹೋಗಿ ಕೆಲಸಕ್ಕೆ ಅಡ್ಡಿಪಡಿಸುವ ಅಧಿಕಾರವಿಲ್ಲ. ಆದರೆ ಸಾಹಸ ನಿರ್ದೇಶಕರ ಸಂಘದವರು ಯಾಕೆ ಆಗಾಗ ಹೀಗೆ ಯಡವಟ್ಟು ಸೃಷ್ಟಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದು ಮಾತ್ರವಲ್ಲದೆ, ಸದಸ್ಯತ್ವ ಪಡೆಯದ ಸಾಹಸ ನಿರ್ದೇಶಕರನ್ನು ಪಕ್ಕಕ್ಕೆ ನಿಲ್ಲಿಸಿ, ತಾವೇ ಎರಡು ಸನ್ನಿವೇಷವನ್ನು ಕಂಪೋಸ್ ಮಾಡಿ, ಅದರ ಸಂಭಾವನೆ ಇಪ್ಪತ್ತೈದು ಸಾವಿರ ಕೊಡಿ ಎಂದು ಬಿಲ್ಲು ಬರೆದುಕೊಟ್ಟು ಹೋಗಿದ್ದಾರೆ.
ಈ ವಿಚಾರ ಸದ್ಯ ಚಂದ್ರಾ ಲೇಔಟ್ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ. ಎಸ್.ಐ. ಮಂಜುನಾಥ್ ಪ್ರಕರಣಕ್ಕೆ ಸಂಬಂಧಿಸಿದವರನ್ನೆಲ್ಲಾ ಕರೆಸಿ ಮಾತಾಡಿರುವುದಾಗಿ ಸುದ್ದಿಯಿದೆ. ಇದಲ್ಲದೆ, ನಿರ್ದೇಶಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ದೂರು ದಾಖಲಾಗಿದೆಯಂತೆ. ಉದ್ಯೋಗ ಭದ್ರತೆಗಾಗಿ ಹೋರಾಡಬೇಕು ನಿಜ. ಆದರೆ ತಮ್ಮಂತೇ ಕೆಲಸ ಮಾಡಲು ಬಂದವರ ಮೇಲೆ ಉಕ್ಕೂಟದ ಹೆಸರಿನಲ್ಲಿ ಗೂಂಡಾಗಿರಿ ಪ್ರದರ್ಶಿಸಿದರೆ ಹೇಗೆ?
No Comment! Be the first one.