ಎಲ್ಲಿಂದಲೋ ಬಂದ ಪೀಡೆ ಕರೋನಾ ವೈರಸ್ಸು, ಅದರಿಂದ ಬಚಾವಾಗಲು ನಡೆಯುತ್ತಿರುವ ಲಾಕ್ ಡೌನು, ಅದರ ಸೈಡ್ ಎಫೆಕ್ಟು ಇಡೀ ಜಗತ್ತನ್ನು ಜರ್ಝರಿತಗೊಳಿಸಿದೆ. ಕನ್ನಡ ಚಿತ್ರರಂಗ ಕೂಡಾ ಸುಧಾರಿಸಿಕೊಳ್ಳಲಾಗದಷ್ಟು ಏಟು ತಿಂದಿದೆ. ಹತ್ತಾರು ವರ್ಷಗಳಿಂದ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ನಿರ್ಮಾಪಕರು, ತಂತ್ರಜ್ಞರು ತತ್ತರಿಸಿಹೋಗಿದ್ದಾರೆ.
ವ್ಯಾಪಾರ ವಹಿವಾಟುಗಳೆಲ್ಲವೂ ಬಂದ್ ಆಗಿದ್ದರೂ ದುಡ್ಡು ಮಾಡಿರುವ ಕಲಾವಿದರು, ಲಾಭ ಕಂಡಿರುವ ಹೂಡಿಕೆದಾರರು, ವಿತರಕರು, ಪ್ರದರ್ಶಕರು ನಿರಾಳವಾಗಿದ್ದಾರೆ. ಅಷ್ಟೇ ಏಕೆ ವರ್ಷಾನುಗಟ್ಟಲೆಯಿಂದ ದುಡಿದ ದುಡ್ಡನ್ನು ಜೋಪಾನ ಮಾಡಿಕೊಂಡಿರುವ ಕಾರ್ಮಿಕರು, ಪ್ರೊಡಕ್ಷನ್ ಮ್ಯಾನೇಜರುಗಳು ಕೂಡಾ ವಿಶ್ರಾಂತಿಯಲ್ಲಿದ್ದಾರೆ. ಎಲ್ಲದಕ್ಕೂ ಕಾರಣವಾದ ನಿರ್ಮಾಪಕರು ಸ್ಥಿತಿ ಮಾತ್ರ ಚಿಂತಾಜನಕವಾಗಿದೆ!
ಕರೋನಾ ಸಮಸ್ಯೆಯಿಂದ ತೀರಾ ಸಂಕಷ್ಟಕ್ಕೆ ಸಿಲುಕಿರುವ ಬಹುಮುಖ್ಯ ವಲಯ ನಿರ್ಮಾಪಕರು ಮತ್ತು ನಿರ್ದೇಶನ ವಿಭಾಗದ ಮಂದಿ. ಕನ್ನಡ ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರ ಪರಿಸ್ಥಿತಿ ಹೇಗಿದೆಯೆಂದರೆ, ನಿರಂತರವಾಗಿ ಸಿನಿಮಾ ಕೆಲಸಗಳನ್ನು ನಡೆಸುತ್ತಾ, ಕಾಸು ರೊಟೇಷನ್ ಮಾಡಿದರೆ ಮಾತ್ರ ಜೀವನ ಮಾಡಲು ಸಾಧ್ಯ. ಎಲ್ಲೋ ಕೆಲವು ಸ್ಟಾರ್ ಡೈರೆಕ್ಟರುಗಳನ್ನು ಬಿಟ್ಟರೆ ಮಿಕ್ಕ ಹಳೆಯ ಮತ್ತು ಹೊಸ ಡೈರೆಕ್ಟರುಗಳು, ಅವರನ್ನೇ ನಂಬಿ ಬದುಕುತ್ತಿರುವ ಸಹಾಯಕ ಮತ್ತು ಸಹ ನಿರ್ದೇಶಕರ ಪಾಡಂತೂ ಬೀದಿಗೆ ಬಿದ್ದಂತಾಗಿದೆ. ಎಷ್ಟೋ ಜನ ಅಸಿಸ್ಟೆಂಟ್ ಡೈರೆಕ್ಟರುಗಳಿಲ್ಲಿ ಅಸಂಘಟಿತರಾಗಿಯೇ ಉಳಿದಿದ್ದಾರೆ. ಸರ್ಕಾರ, ಇನ್ನಿತರೆ ವ್ಯಕ್ತಿಗಳು, ಸಂಘ ಸಂಸ್ಥೆಗಳು ನೀಡುವ ಸಹಾಯ ಕೂಡಾ ಇವರ ಕೈಗೆಟುಕುವುದಿಲ್ಲ. ಒಂದಲ್ಲಾ ಒಂದು ದಿನ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿಕೊಳ್ಳಬೇಕೆಂದು ಹೆಣಗಾಡುತ್ತಿರುವ ಯುವ ಕಲಾವಿದರು, ನಿರ್ದೇಶನ ವಿಭಾಗದ ಯುವಕರ ಬದುಕು ಐಸಿಯೂ ಬೆಡ್ಡಿಗೆ ಬಿದ್ದಂತಾಗಿದೆ.
ಇದೆಲ್ಲದರ ನಡುವೆ ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಮುಂತಾದ ಕಡೆ ಅಧಿಕಾರ ಹಿಡಿದು ಕುಳಿತಿರುವವರು ವಾಣಿಜ್ಯ ಮಂಡಳಿಯನ್ನೇ ನುಂಗಿ ನೀರು ಕುಡಿಯುವ ಸಂಚು ರೂಪಿಸುತ್ತಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸರಿಸುಮಾರು ಸಾವಿರದ ನಾನ್ನುರು ಜನ ಸದಸ್ಯರಿದ್ದಾರೆ. 75 ವರ್ಷಗಳ ಹಿಂದೆ ಆರಂಭಗೊಂಡು ಸಾಕಷ್ಟು ಸಮಸ್ಯೆಗಳನ್ನೆಲ್ಲಾ ದಾಟಿ ಇವತ್ತು, ಸ್ವಂತ ಕಟ್ಟಡ, ಬಾಡಿಗೆ, ಸದಸ್ಯತ್ವ ಶುಲ್ಕ ಹೀಗೆ ವರಮಾನಗಳನ್ನು ಹೊಂದಿದ್ದು ಆರ್ಥಿಕವಾಗಿ ಬಲ ಹೊಂದಿದೆ. ಕಡಿಮೆಯೆಂದರೂ ಏಳೆಂಟು ಕೋಟಿ ಹಣ ಅಕೌಂಟಿನಲ್ಲಿದೆ. ಇದರಿಂದ ಬರುವ ಬಡ್ಡಿಯನ್ನು ಸಂಕಷ್ಟದಲ್ಲಿರುವ ಸದಸ್ಯರ ಅನುಕೂಲಕ್ಕೆ ಬಳಸಿಕೊಳ್ಳಲಾಗುತ್ತಿದೆ. ಯಾರೇ ಸದಸ್ಯರು ಸಾವನ್ನಪ್ಪಿದಾಗ, ಅವರ ಅಂತಿಮ ಸಂಸ್ಕಾರಕ್ಕೆಂದೇ ಐವತ್ತು ಸಾವಿರು ರುಪಾಯಿಗಳನ್ನು ನೀಡಲಾಗುತ್ತದೆ. ಹಾರ್ಟು, ಕಿಡ್ನಿ, ಕಣ್ಣುಗಳ ಆಪರೇಷನ್ನು ಸೇರಿದಂತೆ ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚಕ್ಕೆಂದು ಎರಡು ಲಕ್ಷ ರುಪಾಯಿಗಳ ತನಕ ಹಣ ಬಿಡುಗಡೆ ಮಾಡಲಾಗುತ್ತಿದೆ. ಇವೆಲ್ಲವೂ ಖಾತೆಯಲ್ಲಿರುವ ಮೊತ್ತದಿಂದ ಉತ್ಪತ್ತಿಯಾಗುತ್ತಿರುವ ಬಡ್ಡಿ ಹಣದಿಂದಲೇ ಸಾಧ್ಯವಾಗುತ್ತಿದೆ. ಆದರೆ ಕರೋನಾ ಹೆಸರಿನಲ್ಲಿ ಆ ಮೂಲ ಧನವನ್ನೇ ಮುಂಡಾಮೋಚುವ ಪ್ಲಾನು ಕೆಲವರದ್ದು.
ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ಕಾರ್ಯದರ್ಶಿ ಎ. ಗಣೇಶ್, ದಿನೇಶ್ ಗಾಂಧಿ ಮುಂತಾದವರ ಕಣ್ಣು ಈಗ ವಾಣಿಜ್ಯ ಮಂಡಳಿಯ ಖಾತೆಯಲ್ಲಿರುವ ಆ ಮೂಲಧನದ ಮೇಲೆ ಬಿದ್ದಿದೆ. ಕರೋನಾ ತಂದೊಡ್ಡಿರುವ ಸಂಕಷ್ಟದಿಂದ ನಿರ್ಮಾಪಕರು ಬದುಕೋದು ಕಷ್ಟವಾಗುತ್ತಿದೆ. ತಿಂಗಳಿಗೆ ಇಪ್ಪತ್ತೈದು ಸಾವಿರ ರುಪಾಯಿಗಳಂತೆ ಎರಡು ತಿಂಗಳು ಎಲ್ಲ ನಿರ್ಮಾಪಕರಿಗೂ ಹಣ ನೀಡಿ ಅನ್ನೋದು ಕೆಲವರ ಬೇಡಿಕೆ. ಸದ್ಯ ವಾಟ್ಸಾಪುಗಳಲ್ಲಿ ಹರಿದಾಡುತ್ತಿರುವ ಪತ್ರವಿದು –
ಸದಸ್ಯರ ಬೇಡಿಕೆಯನ್ನು ಬೆಂಬಲಿಸಿ : ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಬೆಂಗಳೂರು.
ಮಾನ್ಯರೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾದ ನಾವುಗಳು ತಮ್ಮ ಗಮನಕ್ಕೆ ತರಲಿಚ್ಛಿಸುವುದೇನೆಂದರೆ, ಕರೋನ ಮಹಾಮಾರಿಯಿಂದ ಜಗತ್ತಿನಾದ್ಯಂತ ಜನರು ತತ್ತರಿಸಿರುವುದು ಸರಿಯಷ್ಟೆ. ಪರಿಣಾಮವಾಗಿ ದೇಶ ಲಾಕ್ ಡೌನ್ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಮಂಡಳಿಯ ಸದಸ್ಯರುಗಳು ಗೃಹಬಂಧಿಗಳಾಗಿ ತಮ್ಮ ಕುಟುಂಬದೊಂದಿಗೆ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ.. ಸಮಾಜದ ಇತರ ವರ್ಗದ ಜನರಿಗೆ ಸರ್ಕಾರ, ಸರ್ಕಾರೇತರ ಹಾಗೂ ಖಾಸಗಿ ಸಂಸ್ಥೆಗಳು ಈಗಾಗಲೇ ಹಲವು ರೀತಿಯಲ್ಲಿ ನೆರವು ನೀಡುತ್ತಾ ಅವರ ಬದುಕಿಗೆ ಸ್ಪಂದಿಸುತ್ತಿವೆ. ಆದರೆ ಮಂಡಳಿಯ ಸದಸ್ಯರ ದೌರ್ಭಾಗ್ಯಕ್ಕೆ ಯಾವ ಸೌಲಭ್ಯಗಳೂ ಲಭಿಸದೇ ಅವರು ಅತ್ಯಂತ ಹತಾಶೆಯಿಂದ ಉಸಿರಾಡುತ್ತಿರುವ ಪರಿಸ್ಥಿತಿ ಬಂದೊದಗಿದೆ. ಆದುದರಿಂದ ತಾವುಗಳು ಸಂಸ್ಥೆಯ ಸದಸ್ಯರ ನೋವು ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಕೂಡಲೇ ಅವರ ಬದುಕಿಗೆ ನೆರವು ನೀಡಬೇಕೆಂದು ಕೇಳಿಕೊಳ್ಳುತ್ತೇವೆ. ಇದಕ್ಕೆ ಮುಂಚೆ ಹಲವು ಸದಸ್ಯರುಗಳು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದರೂ, ತಾವು ಹಾಗೂ ಸಂಸ್ಥೆಯ ಪದಾಧಿಕಾರಿಗಳು ಅದನ್ನು ಗಂಭಿರವಾಗಿ ಪರಿಗಣಿಸದೇ ನಿರ್ಲಿಪ್ತರಾಗಿರುತ್ತೀರಿ. ಈ ನಿಮ್ಮ ನಡೆ ಎಲ್ಲರಿಗೂ ನೋವನ್ನುಂಟುಮಾಡಿದ್ದು, ಎಲ್ಲರನ್ನೂ ಸಾಂಘಿಕವಾಗಿ ನೆರವಿಗೆ ಆಗ್ರಹಿಸಲು ಪ್ರೇರೇಪಿಸಿದೆ. ಮಂಡಳಿಯ ಸದಸ್ಯರು ಮರಣ ಹೊಂದಿದ ಮೇಲೆ ನೀಡುವ ನೆರವು, ಅವನು ಬದುಕಿರುವಾಗಲೇ ನೀಡುವುದು ಔಚಿತ್ಯಪೂರ್ಣವಾಗಿದೆ. ಹಾಗೂ ಅದು ಮಂಡಳಿಯ ಘನತೆಯನ್ನು ಹೆಚ್ಚಿಸುತ್ತದೆ. ವಾಣಿಜ್ಯ ಮಂಡಳಿಯು ಆರ್ಥಿಕವಾಗಿ ಸದೃಢವಾಗಿದ್ದು, ಕಟ್ಟಡದ ಬಾಡಿಗೆ, ಸದಸ್ಯತ್ವ ಶುಲ್ಕ ಮುಂತಾದ ಮೂಲಗಳಿಂದ ಒಳ್ಳೆಯ ಆದಾಯಾವನ್ನು ಹೊಂದಿರುತ್ತದೆ. ಜೊತೆಗೆ ಸದಸ್ಯರ ತುರ್ತು ಪರಿಸ್ಥಿತಿಯಲ್ಲಿ ನೆರವಿಗೆಂದೇ ಇರುವ “ಕಲ್ಯಾಣ ನಿಧಿ” ಯಲ್ಲೂ ಕೂಡ ಸಾಕಷ್ಟು ಹಣವಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ಆ ಹಣವನ್ನು ಬಳಸಿಕೊಳ್ಳಬಹುದಾಗಿದೆ. ೭೫ ವರ್ಷಗಳ ಹಿಂದೆ ಸದಸ್ಯರಿಂದ ಸೃಷ್ಟಿಯಾಗಿ, ಸದಸ್ಯರಿಂದಲೇ ಬೆಳೆದುಬಂದ ಸಂಸ್ಥೆಯಾಗಿದೆ. ಇಷ್ಟು ವರ್ಷ ಸದಸ್ಯರಿಂದಲೇ ಬೆಳೆದುಬಂದ ಸಂಸ್ಥೆಯಿಂದ ಇಂದು ಸದಸ್ಯರಿಗಾಗಿ ಸಂಸ್ಥೆಯೇ ನೆರವಿಗೆ ಬರಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಎರಡು ತಿಂಗಳ ಕಾಲ ಸಂಸ್ಥೆಯೇ ಅವರ ಕುಟುಂಬಕ್ಕೆ ಸಂಜೀವಿನಿಯಾಗಬೇಕಿದೆ. ಅದುದರಿಂದ ತಾವುಗಳು ಈ ಕೂಡಲೇ ಕಾರ್ಯ ಪ್ರವೃತ್ತರಾಗಿ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೂಕ್ತ ಹಾಗೂ ಮಾನವೀಯ ನಿರ್ಧಾರವನ್ನು ತೆಗೆದುಕೊಂಡು, ಬದುಕಲು ಕಷ್ಟ ಪಡುತ್ತಿರುವ ಮಂಡಳಿಯ ಸದಸ್ಯರಿಗೆ ಸೂಕ್ತ ನೆರವನ್ನು ನೀಡುವ ಮೂಲಕ ಅವರ ಜೀವನವನ್ನು ಪುನಃ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮ ನಿಬಂಧನೆಗಳಿಗೆ ಗೌರವ ನೀಡಿ, ತಮ್ಮ ಸಂಸ್ಥೆಗಳನ್ನು ನವೀಕರಿಸಿಕೊಂಡು ಚಾಲ್ತಿಯಲ್ಲಿರುವ ಸದಸ್ಯರುಗಳಿಗೆ ಈ ಕೂಡಲೇ ಅಗತ್ಯ ನೆರವನ್ನು ನೀಡುವಿರೆಂಬ ಭರವಸೆಯಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಮಸ್ತ ಸದಸ್ಯರುಗಳ ಪರವಾಗಿ…
ದಿನೇಶ್ ಗಾಂಧಿಯಂತೂ ಲಾಕ್ ಡೌನ್ ಆಗೋದನ್ನೇ ಕಾದು ಕುಳಿತವನಂತೆ, ವಿಡಿಯೋ ಮಾಡಿ ಬಂದ್ ಶುರುವಾದ ಮಾರನೇ ದಿನದಿಂದಲೇ ಎಲ್ಲ ಕಡೆ ಶೇರ್ ಮಾಡುತ್ತಿದ್ದಾನೆ. ವಿಚಿತ್ರವೆಂದರೆ, ಈಗ ಕಲ್ಯಾಣ ನಿಧಿಯ ದುಡ್ಡಿನ ಮೇಲೆ ಕಣ್ಣಿಟ್ಟಿರುವವರಲ್ಲಿ ಸಾಕಷ್ಟು ಮಂದಿ ಸಿನಿಮಾ ನಿರ್ಮಾಣ ಮಾಡಿ ಎಷ್ಟೋ ವರ್ಷಗಳೇ ಕಳೆದಿವೆ!
ಇವತ್ತು ಸೃಷ್ಟಿಯಾಗಿರುವ ವೈರಸ್ ಸಮಸ್ಯೆ ಕೆಲವು ನಿರ್ಮಾಪಕರಿಗೆ ಹೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿದೆ ನಿಜ. ಆದರೆ ಎಲ್ಲ ನಿರ್ಮಾಪಕರಿಗೂ ಸಮಸ್ಯೆಗಳಿಲ್ಲವಲ್ಲಾ? ಯಾವೆಲ್ಲಾ ನಿರ್ಮಾಪಕರು ಬದುಕು ಸಾಗಿಸಲೂ ಸಾಧ್ಯವಾಗದೆ ಕೈಚೆಲ್ಲಿ ಕೂತಿದ್ದಾರೋ ಅಂಥವರನ್ನು ಗುರುತಿಸಿ ಕಲ್ಯಾಣ ನಿಧಿಯಿಂದ ಇಂತಿಷ್ಟು ಅಂತಾ ಸಹಾಯ ಮಾಡಲಿ. ಸರ್ಕಾರಕ್ಕೆ ಮನವಿ ಸಲ್ಲಿಸಿ ವಿಶೇಷ ಪ್ಯಾಕೇಜನ್ನು ರಿಲೀಸು ಮಾಡಿಸಿಕೊಳ್ಳಲಿ. ಸ್ಥತಿವಂತ ನಿರ್ಮಾಪಕರ ಬಳಿ ದೇಣಿಗೆ ರೂಪದಲ್ಲಿ ಹಣ ಪಡೆದು ಸಹಕರಿಸಲಿ. ಅದು ಬಿಟ್ಟು, ಕಲ್ಯಾಣನಿಧಿಯಿಂದ ತೆಗೆದು ಸಾರಾಸಗಟಾಗಿ ಎಲ್ಲ ನಿರ್ಮಾಪಕರಿಗೂ ಐವತ್ತು ಸಾವಿರ ಕೊಟ್ಟುಬಿಡಿ ಅಂದರೆ ಯಾವ ನ್ಯಾಯ? ಹಾಗೊಂದು ವೇಳೆ ಎಲ್ಲ ಸದಸ್ಯರೂ ಎರಡು ತಿಂಗಳು ಕಾಸು ಪಡೆದುಕೊಂಡು ಅಕೌಂಟು ಖಾಲಿ ಮಾಡಿದರೆ ಮುಂದೆ ಸಂಕಷಕ್ಕೆ ಸಿಲುಕಿ ಹಾಸಿಗೆ ಹಿಡಿದವರ ಖರ್ಚಿಗೆ ಯಾರು ಹಣ ಕೊಡುತ್ತಾರೆ? ನಿರ್ಗತಿಕರಾಗಿ ಸತ್ತವರ ಹೆಣ ಎತ್ತಲೂ ಕಾಸಿಲ್ಲದಂತಾಗುತ್ತದಲ್ಲಾ? ಅದಕ್ಕೆ ಯಾರು ಹೊಣೆ?
ಇನ್ನಾದರೂ ಪ್ರವೀಣ್, ಗಣೇಶ್ ರಂಥವರು ಭವಿಷ್ಯದ ನಿಧಿಯನ್ನು ಬಗೆಯುವ ಆಸೆ ಬಿಡಲಿ. ಮೊಬೈಲು ಆನ್ ಮಾಡಿಕೊಂಡು ಓತಪ್ರೋತವಾಗಿ ಮಾತಾಡುವ ದಿನೇಶ್ ಗಾಂಧಿಯ ಬಾಯಿಗೆ ಬೀಗ ಜಡಿಸಲಿ. ಆ ಮೂಲಕ ನಿಜಕ್ಕೂ ಆಗಬೇಕಿರುವ ಕೆಲಸಗಳತ್ತ ಗಮನ ನೀಡಲಿ…
ನಾವಷ್ಟೇ ಅಲ್ಲ ಇವತ್ತು ಇಡೀ ಜಗತ್ತೇ ಸಮಸ್ಯೆಯಲ್ಲಿದೆ. ಹಣ ಕೊಡಿ ಅಂತಾ ಕೇಳೋದಕ್ಕೆ ಮುಂಚೆ ವಾಣಿಜ್ಯ ಮಂಡಳಿ ಕಲ್ಯಾಣ ನಿಧಿಯ ಉದ್ದೇಶವೇನು? ಬೈಲಾದಲ್ಲಿ ಏನಿದೆ ಅನ್ನೋದನ್ನೂ ತಿಳಿದುಕೊಳ್ಳಬೇಕು. ಮೂಲ ಉದ್ದೇಶವನ್ನು ಬಿಟ್ಟು ಬೇರೆ ಕಾರಣಗಳಿಗೆ ಹಣ ವ್ಯಯ ಮಾಡಲು ಸಾಧ್ಯವಿಲ್ಲ. ಲಾಕ್ ಡೌನ್ ಮುಗಿದ ನಂತರ ಎಲ್ಲರೂ ಸೇರಿ ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಲು ಪರ್ಯಾಯ ಮಾರ್ಗದ ಚಿಂತನೆ ನಡೆಸಬೇಕು. ಅದನ್ನು ಬಿಟ್ಟು ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.
– ಸಾ.ರಾ. ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರು
ಕರೋನಾದಂಥ ಸಮಸ್ಯೆಯಿಂದ ಚಿತ್ರರಂಗದಲ್ಲಿ ಅತಿಹೆಚ್ಚು ಸಮಸ್ಯೆ ಅನುಭವಿಸುತ್ತಿರುವುದು ನಿರ್ಮಾಪಕರ ವಲಯ. ಈ ಸಂದರ್ಭದಲ್ಲಿ ವಾಣಿಜ್ಯ ಮಂಡಳಿ ಖಂಡಿತವಾಗಿಯೂ ಕಷ್ಟದಲ್ಲಿರುವ ನಿರ್ಮಾಪಕರ ಸಂಕಷ್ಟಕ್ಕೆ ಸ್ಪಂದಿಸಬೇಕು. ಎಲ್ಲ ನಿರ್ಮಾಪಕರೂ ಆರ್ಥಿಕ ಸಮಸ್ಯೆ ಎದುರಿಸುತ್ತಿಲ್ಲ. ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ಸಹಾಯ ದಕ್ಕಬೇಕು. ನನ್ನ ಪ್ರಕಾರ ಐನೂರು ರುಪಾಯಿ ಕೊಟ್ಟು ಸದಸ್ಯರಾದವರಿಗಿಂತಾ, ಐವತ್ತು ಸಾವಿರ ಕೊಟ್ಟು ಮೆಂಬರುಗಳಾದವರು ಹೆಚ್ಚು ಕಷ್ಟದಲ್ಲಿದ್ದಾರೆ. ಅವರು ಮಾತೃಸಂಸ್ಥೆಯ ಮುಂದೆ ಅನ್ನಕ್ಕಾಗಿ ಅಂಗಲಾಚುವಂತೆ ಆಗಿರುವುದು ದುರಂತ.
ಕೃಷ್ಣೇಗೌಡ, ಅಧ್ಯಕ್ಷರು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ
ಸಾಕಷ್ಟು ಜನ ಸದಸ್ಯರು ಧನ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಸಂಸ್ಥೆಯ ನಿಯಮದ ಅನುಸಾರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ವಾಣಿಜ್ಯ ಮಂಡಳಿಯ ಈ ಹಿಂದಿನ ಅಧ್ಯಕ್ಷರುಗಳು, ಹಾಲಿ ಅಧ್ಯಕ್ಷರುಗಳು, ಹಿರಿಯರೆಲ್ಲಾ ಕೂತು ಮುಂದೇನು ಮಾಡಬಹುದು ಅಂತಾ ತೀರ್ಮಾನಿಸಿ, ಸದಸ್ಯರುಗಳ ಸಮಸ್ಯೆಗೆ ಸ್ಪಂದಿಸಲು ಪರ್ಯಾಯವಾಗಿ ಏನು ವ್ಯವಸ್ಥೆ ಮಾಡಬಹುದು ಎನ್ನುವುದರ ಕುರಿತಾಗಿ ವಿಚಾರಮಾಡಬೇಕಾಗಿದೆ. ಇದಕ್ಕೆ ಏಪ್ರಿಲ್ ೧೪ರ ತನಕ ಸಮಯಾವಕಾಶ ಬೇಕು.
ಎನ್.ಎಂ. ಸುರೇಶ್, ಪದಾಧಿಕಾರಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ದೇಶ ಲಾಕ್ ಡೌನ್ ಆದ ನಂತರ ದಿನದಿನಕ್ಕೂ ಮಂಡಳಿಯ ಸದಸ್ಯರ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಅವರಿಗೆ ಸರ್ಕಾರ ಸೇರಿದಂತೆ ಸಮಾಜದ ಯಾವುದೇ ಸಂಸ್ಥೆಗಳಿಂದಲೂ ನೆರವು ಲಭಿಸುತ್ತಿಲ್ಲ. ಆದ ಕಾರಣ ಹಲವಾರು ಸದಸ್ಯರುಗಳು ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೆರವಿಗಾಗಿ ಆಗ್ರಹಿಸುತ್ತಿದ್ದಾರೆ. ಈ ತುರ್ತು ಪರಿಸ್ಥಿತಿಯ ವಿಷಯವನ್ನು ಚರ್ಚಿಸಿ, ಸಮಂಜಸ ಹಾಗೂ ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ, ಸಂಕಷ್ಠದಲ್ಲಿರುವ ಮಂಡಳಿಯ ಸದಸ್ಯರಿಗೆ ನೆರವು ನೀಡಿ, ಅವರ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕು
ಭಾ.ಮ ಹರೀಶ್, ಮಾಜಿ ಕಾರ್ಯದರ್ಶಿಗಳು, ಕ.ಚ.ಚಿ.ವಾಣಿಜ್ಯ ಮಂಡಳಿ
No Comment! Be the first one.