ವರ್ಷಕ್ಕೆ ಮುಂಚೆ ಮಂತ್ರಂ ಎನ್ನುವ ಸಿನಿಮಾವೊಂದು ಬಂದಿತ್ತು ನೆನಪಿದೆಯಾ? ಯಾರದ್ದೋ ಬೇಜವಾಬ್ದಾರಿಯಿಂದ ಪುಟ್ಟ ಹೆಣ್ಣು ಮಗುವೊಂದು ಶಾಲೆಯಲ್ಲೇ ಸಿಲುಕಿ, ಯಾತನೆ ಅನುಭವಿಸಿ, ಕಡೆಗೆ ಕಿರಾತಕನೊಬ್ಬನ ನೀಚ ಕೃತ್ಯಕ್ಕೆ ಬಲಿಯಾದ ಕಥೆಗೆ ಹಾರರ್ ಅಂಶವನ್ನು ಬೆರೆಸಿ, ಎಂಥವರನ್ನೂ ಕಾಡುವ ಸಿನಿಮಾವನ್ನು ನಿರ್ದೇಶನ ಮಾಡಿದ್ದವರು ಎಸ್.ಎಸ್. ಸಜ್ಜನ್. ಈ ಸಿನಿಮಾ ಬಿಡುಗಡೆಯ ನಂತರ ವಾಹಿನಿಯೊಂದರಲ್ಲಿ ನೌಕರಿಗೆ ಸೇರಿದ್ದ ಸಜ್ಜನ್ ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿರುವ ಸಜ್ಜನ್ ರಂಗಭೂಮಿ ಹಿನ್ನೆಲೆಯ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದುಬಂದ ಪ್ರತಿಭೆ. ಸದ್ಯ ಸಜ್ಜನ್ ಫೋರ್ ವಾಲ್ಸ್ ಎನ್ನುವ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಈ ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರೂ ಮೂರು ವಿಭಿನ್ನ ಗೆಟಪ್ಪುಗಳಲ್ಲಿ ಅಚ್ಯುತ್ ಅವತಾರವೆತ್ತಿದ್ದಾರೆ. ಇವರೊಂದಿಗೆ ದತ್ತಣ್ಣ, ಗುಬ್ಬಿ ಸುಜಯ್ ಶಾಸ್ತ್ರಿ, ಡಾ. ಪವಿತ್ರಾ, ಭಾಸ್ಕರ್ ನೀನಾಸಂ, ರಘು ರಾಮಕೊಪ್ಪ, ಡಾ. ಜಾನ್ಹವಿ ಜ್ಯೋತಿ, ಕಿರಿಕ್ ಪಾರ್ಟಿ ಶಂಕರ್ ಮೂರ್ತಿ, ವಿಕಾಸ್, ಶ್ರೇಯಾ ಶೆಟ್ಟಿ, ಅಂಚಲ್ ಮುಂತಾದವರ ತಾರಾಗಣವಿದೆ.
ಫೋರ್ ವಾಲ್ಸ್ ಸಿನಿಮಾ ತಂದೆ ಮಕ್ಕಳ ಬದುಕಿನ ಹಾದಿ, ಜಂಜಾಟಗಳ ಸುತ್ತ ತೆರೆದುಕೊಳ್ಳಲಿದೆ. ಕುಟುಂಬ ಸಮೇತ ನೋಡಬಹುದಾದ ಪಕ್ಕಾ ಫ್ಯಾಮಿಲಿ ಸಿನಿಮಾ ಇದಾಗಲಿದೆಯಂತೆ. ಈ ಚಿತ್ರದ ಶೀರ್ಷಿಕೆಯ ಜೊತೆ ಟೂ ನೈಟೀಸ್ ಅಂತಾ ಇರೋದನ್ನು ನೋಡಿದರೆ, ಬಹುಶಃ ಅಪ್ಪ ಮಕ್ಕಳ ಜೊತೆ ಅತ್ತೆ ಸೊಸೆ ಕೂಡಾ ಸೇರಿಕೊಂಡಿರುವ ಸಾಧ್ಯತೆಯೂ ಇದೆ ಅನ್ನೋದು ಸದ್ಯದ ಊಹೆ. ಅದನ್ನು ಮೀರಿ ಬೇರೆ ಏನು ಬೇಕಾದರೂ ಆಗಿರಬಹುದು. ಆದರೆ ಅದೇನೆನ್ನುವುದರ ಕುರಿತು ನಿರ್ದೇಶಕ ಸಜ್ಜನ್ ಸದ್ಯಕ್ಕೆ ಗುಟ್ಟು ಬಿಟ್ಟುಕೊಟ್ಟಿಲ್ಲ.
ಸಜ್ಜನ್ ನಿರ್ದೇಶನದ ಫೋರ್ ವಾಲ್ಸ್ ಅನ್ನು ಚಿತ್ರದುರ್ಗದವರಾದ ಟಿ. ವಿಶ್ವನಾಥ್ ನಿರ್ಮಿಸುತ್ತಿದ್ದಾರೆ. ಸ್ವಂತ ಉದ್ಯಮ ನಡೆಸಿಕೊಂಡು, ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ವಿಶ್ವನಾಥ್ ಕೆಲವು ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ. ಈಗ ಸಜ್ಜನ್ ಸಾಹಚರ್ಯದಿಂದ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ.