ಪನ್ನಗಭರಣ ನಿರ್ದೇಶನದಲ್ಲಿ, ದಾನಿಶ್ ಸೇಠ್ ನಟನೆಯ ಫ್ರೆಂಚ್ ಬಿರಿಯಾನಿಯಾದರೂ ಘಮ್ಮೆನ್ನಬಹುದು ಅನ್ನೋ ನಿರೀಕ್ಷೆ ಇತ್ತು. ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕಾಗಿ ಕನ್ನಡಿಗರು ಮಾತ್ರವಲ್ಲದೆ, ದಾನಿಶ್ ಬಗ್ಗೆ ಗೊತ್ತಿರುವ ಅನ್ಯ ಭಾಷಿಕರೂ ಕಾದಿದ್ದರು. ಈದೀಗ ಅಮೆಜ಼ಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ನೋಡಿದ ಎಲ್ಲರಿಂದ ಒಂದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ; ಬಿರಿಯಾನಿ ರುಚಿ ಇಲ್ಲ!
ಶಿವಾಜಿನಗರ, ಅಲ್ಲೊಬ್ಬ ಆಟೋ ಡ್ರೈವರ್. ದಿಕ್ಕು ತಪ್ಪಿ ಬರುವ ಫ್ರಾನ್ಸ್ ಪ್ರಜೆ. ಅವನ ಕೈಲೊಂದು ಸೂಟ್ ಕೇಸು… ಚಾರ್ಲ್ಸ್ ಎನ್ನುವ ಡಾನು. ಜೀವ ಬಿಡೋ ಮುನ್ನ ಅವನ ಬಾಯಲ್ಲಿ ಬರುವ ಒಂದೇ ಮಾತು ಸಾಮಾನು. ಅದನ್ನು ಕಿವಿಗೆ ಹಾಕಿಕೊಂಡು ಹುಡುಕಾಟಕ್ಕೆ ನಿಲ್ಲುವ ಅವನ ಮಗ ಮರಿ ಡಾನು. ಕುಂತಲ್ಲೇ ಬುಸು ಬುಸು ಹೊಗೆ ಬಿಡುವ ಮದರ್, ಮಗುವಿಗಾಗಿ ಪರಿತಪಿಸುವ ಸಿಸ್ಟರ್, ಟೀವಿ ರಿಪೋರ್ಟರ್, ಮೊಬೈಲು ನುಂಗುವ ಹಸು, ಸೂಟ್ ಕೇಸ್ ಎಗರಿಸುವ ಕಳ್ಳ, ಮೆಕ್ಯಾನಿಕ್ಕು ಹೀಗೆ ಸಿನಿಮಾ ಪೂರ್ತಿ ಥೇಟು ಶಿವಾಜಿನಗರದ ಟ್ರಾಫಿಕ್ಕು…
ಆ ಏರಿಯಾದ ಜನಜಂಗುಳಿಯಂತೆ ಇಲ್ಲಿ ಪಾತ್ರಗಳೂ ಗಿಜಿಗುಡುತ್ತವೆ. ಅರ್ಥವಾದರೆ ಉಂಟು ಇಲ್ಲದಿದ್ದರೆ ಇಲ್ಲ ಎನ್ನುವಂಥಾ ಘಟನೆಗಳು ಸುತ್ತಲೂ ನಡೆಯುತ್ತಿರುತ್ತವೆ. ದಂಡಿ ದಂಡಿ ಜನ ಬಂದು ಹೋಗುತ್ತಾರೆ. ರಂಗಾಯಣ ರಘು, ಮೈಕಲ್ ಮಧು, ಸಂಪತ್ ಕುಮಾರ್ ಥರದ ಕೆಲವೇ ಗೊತ್ತಿರುವ ಮುಖಗಳು ಬಿಟ್ಟರೆ ಮಿಕ್ಕವರೆಲ್ಲಾ ಹೊಸಬರೇ. ಡಾನ್ ಚಾರ್ಲ್ಸ್ ಆಗಿ ಮೈಕಲ್ ಮಧು ಕಾಣಿಸಿಕೊಂಡಿದ್ದಾರೆ. ಸತ್ತ ಹೆಣದ ಪಾತ್ರ ನಿಭಾಯಿಸಿರುವ ಮೈಕಲ್ ಈ ಚಿತ್ರ ರಿಲೀಸಿಗೆ ಮುಂಚೆಯೇ ನಿಜಜೀವನದಲ್ಲೂ ಜೀವ ತೊರೆದು ಹೋಗಿದ್ದು ವಿಷಾದವೆನಿಸುತ್ತದೆ. ಬಾಯ್ಬಿಟ್ಟರೆ ಹೇಲು ಹೇಲು ಅನ್ನುವ ಮರಿ ಡಾನ್ ಪಾತ್ರದಲ್ಲಿ ನಟಿಸಿರುವ ಮಹಂತೇಶ್ ಹಿರೇಮಠ್ ಥೇಟು ಕೊಂಗನ ಅವತಾರವೆತ್ತಿದ್ದಾರೆ ಮತ್ತು ಗಮನ ಸೆಳೆಯುತ್ತಾರೆ. ಹೀರೋ ದಾನಿಶ್ ಸೇಠ್ಗೆ ಕಡಿಮೆ ಜಾಗವಿದ್ದರೂ ನಿಜಕ್ಕೂ ನಗಿಸುತ್ತಾರೆ. ಪಾತ್ರ ಯಾವುದಾದರೇನು ನಟಿಸುವುದು ನನ್ನ ಧರ್ಮ ಅಂತಾ ತೀರ್ಮಾನಿಸಿರುವ ಸಂಪತ್ ಕುಮಾರ್ ಇಷ್ಟವಾಗುತ್ತಾರೆ. ರಂಗಾಯಣ ರಘು ಅವರದ್ದು ಅದೇ ಓವರ್ ಆಕ್ಟಿಂಗು, ಕಾಮಿಡಿ ಚಿಕ್ಕಣ್ಣ ಹೀಗೆ ಬಂದು ಹಾಗೆ ಹೋಗುತ್ತಾನೆ. ಭಾಷೆ ಬರದೆ ಪರದಾಡುವ ಪಾತ್ರದಲ್ಲಿ ನಟ ಯೂಸುಫ್ ಅಕ್ಷರಶಃ ದಿಕ್ಕೆಟ್ಟಿದ್ದಾರೆ.
ʻಹೋಗ್ಬುಟ್ಟ ಚಾರ್ಲ್ಸ್ ಹೋಗ್ಬುಟ್ಟʼ ಹಾಡು ಮಜಾ ಕೊಡುತ್ತದೆ. ಇವೆಲ್ಲದರ ಜೊತೆಗೆ ತಿಕ, ಹೇಲು, ಸಾಮಾನು, ಲೌಡ ಇತ್ಯಾದಿ ಪದಗಳು ತುಂಬಿಕೊಂಡು ಸಂಭಾಷಣೆ ಕೊಂಪೆಯಂತಾಗಿದೆ. ಒಟ್ಟಾರೆ ಧಮ್ಮಿಲ್ಲದ ಕತೆ ಬಿರಿಯಾನಿಯನ್ನು ಕೆಡಿಸಿದೆ. ತೀರಾ ಹೊಸಾ ಶೈಲಿಯಲ್ಲಿ ನಿರೂಪಿಸಲು ಹೋಗಿ ಕಥೆಯನ್ನು ಮರೆತ ಪನ್ನಗಭರಣ ಸೋತಿದ್ದಾರೆ. ಇಂಥ ಹದಗೆಟ್ಟ ಬಿರಿಯಾನಿಯನ್ನು ಅಮೆಜಾನಿಗೆ ಮಾರಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆದ್ದಿದ್ದಾರೆ!