ನಿರ್ದೇಶಕ ಗುರುದೇಶಪಾಂಡೆಯವರ ಬಹುದಿನದ ಆಶಯವಾದ ಸಿನೆಮಾ ಅಧ್ಯಯನ ಸಂಸ್ಥೆ ಜಿ-ಅಕಾಡೆಮಿಗೆ ಆರಂಭಗೊಂಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಐಪಿಎಸ್ ಅಧಿಕಾರಿ ಟಿ ಸುನಿಲ್ ಕುಮಾರ್ ಆಫೀಸರ್ ಹಾಗು ತಾರಾ ಅನುರಾಧ ಅವರು ಅಕಾಡೆಮಿಗೆ ಚಾಲನೆ ನೀಡಿದರು.

ಸ್ಟಾರ್‌ಗಳನ್ನು ಹಾಕಿಕೊಂಡು ಸಿನಿಮಾ ಮಾಡೋ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಆರಂಭ ಕಾಲದಿಂದಲೂ ಹೊಸಬರಿಗೆ ಅವಕಾಶ ಕೊಡುತ್ತಾ, ಹೊಸಾ ಅಲೆಯ ಚಿತ್ರಗಳನ್ನೇ ತಮ್ಮ ಮಾದರಿಯಾಗಿಸಿಕೊಂಡು ಬಂದವರು ಗುರು ದೇಶಪಾಂಡೆ. ರಾಜಾಹುಲಿ ಚಿತ್ರದ ದೊಡ್ಡ ಮಟ್ಟದಲ್ಲಿ ಗೆದ್ದ ನಂತರವೂ ಅಂಥಾದ್ದೇ ರೂಢಿಯನ್ನು ಯಥಾ ರೀತಿಯಲ್ಲಿ ಪರಿಪಾಲಿಸಿಕೊಂಡು ಬಂದಿರೋ ಅವರು ಪಡ್ಡೆಹುಲಿ ಚಿತ್ರದಲ್ಲಿಯೂ ಅದನ್ನೇ ಮುಂದುವರೆಸಿದ್ದಾರೆ. ಗುರು ದೇಶಪಾಂಡೆಯವರ ಸಿನಿಮಾ ಯಾನ ಶುರುವಾಗಿದ್ದು ೧೯೯೯ರ ಸಾಲಿನಲ್ಲಿ. ಹೀಗೆ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋದಕ್ಕೂ ಮುಂಚೆ ಸಿನಿಮಾ ಕಥೆಯೇ ಅನ್ನಿಸುವಂಥಾದ್ದೊಂದು ರಿಯಲ್ ಸ್ಟೋರಿಯಿದೆ. ಈ ಹಾದಿಯ ತುಂಬಾ ಕಷ್ಟಗಳೇ ತುಂಬಿದ್ದರೂ ಅದನ್ನು ಸಹ್ಯವಾಗಿಸಿದ್ದು ಸಿನಿಮಾ ಕನಸು!

ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳೀಕೋಟೆ ಹತ್ತಿರದ ನಾಗೂರು ಗುರು ದೇಶಪಾಂಡೆಯವರ ಊರು. ಈವತ್ತಿಗೂ ಸರಿಯಾದೊಂದು ಸಂಪರ್ಕ ವ್ಯವಸ್ಥೆ, ಸಾರಿಗೆ ಸೌಕರ್ಯದಿಂದ ದೂರವೇ ಉಳಿದುಕೊಂಡಿರೋ ನಾಗೂರು ನಡುಗಡ್ಡೆ ಪ್ರದೇಶ. ನದಿಯೊಂದರ ಮಧ್ಯದಲ್ಲಿರೋ ಈ ನಡುಗಡ್ಡೆ ಮಳೆಗಾಲದಲ್ಲಿ ಪ್ರವಾಹ ಬಂದೇಟಿಗೆ ಇಡೀ ಜಗತ್ತಿನೊಂದಿಗಿನ ಸಕಲ ಸಂಪರ್ಕವನ್ನು ಕಳೆದುಕೊಂಡು ದ್ವೀಪವಾಗುತ್ತೆ. ಈಗಲೂ ಈ ಪ್ರದೇಶ ಸಮಸ್ಯೆಗಳ ಆಗರವಾಗಿದೆ ಎಂದರೆ, ದಶಕಗಳ ಹಿಂದೆ ಅದರ ಪರಿಸ್ಥಿತಿ ಹೇಗಿದ್ದಿರಬಹುದೆಂಬ ಅಂದಾಜು ಯಾರಿಗಾದರೂ ಸಿಕ್ಕು ಬಿಡುತ್ತೆ. ನಾಗೂರಿನಿಂದ ತಾಳಿಕೋಟೆಗೆ ಎಂಟು ಕಿಲೋಮೀಟರ್ ದೂರ. ಅಷ್ಟೂ ದೂರವನ್ನು ನಡೆದುಕೊಂಡೇ ಸಾಗಬೇಕು. ಅಂಥಾ ಸರ್ಕಸ್ಸಿನಲ್ಲಿಯೇ ಗುರು ದೇಶಪಾಂಡೆಯವರ ಬಾಲ್ಯ ವಿದ್ಯಾಭ್ಯಾಸವೆಲ್ಲ ಕಳೆದಿತ್ತು. ಕೆಲವೊಂದು ಸಲ ಶಾಲೆಗೆ ಹೋದ ಮೇಲೆ ಪ್ರವಾಹ ಬಂದರೆ ಅನ್ನ ನೀರಿಲ್ಲದೆ ವಾರಗಟ್ಟಲೆ ಕಳೆಯಬೇಕಾಗಿ ಬರುತ್ತಿತ್ತು. ಅಪ್ಪ ಕೊಂಚ ನೀರಿಳಿದ ಮೇಲೆ ಅರ್ಧದಾರಿಗೆ ಹರಸಾಹಸ ಪಟ್ಟು ಬಂದು ಬುತ್ತಿ ಕೊಟ್ಟರೇನೇ ಹೊಟ್ಟೆ ಸಂಕಟ ನೀಗುತ್ತಿತ್ತು. ಹಳ್ಳಿಗಾಡಿನ ಮಕ್ಕಳು ಏನೇನು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬಹುದೋ ಅದೆಲ್ಲವನ್ನೂ ಅನುಭವಿಸಿದವರು ಗುರು ದೇಶಪಾಂಡೆ.

ಇಂಥಾ ಕಷ್ಟದ ಹಾದಿಯನ್ನು ಹಾದು ಬಂದ ಗುರುದೇಶಪಾಂಡೆ ೧೯೯೮ರಲ್ಲಿ ವಿಲ್ಸನ್ ಗಾರ್ಡನ್ನಿನ ಕರ್ನಾಟಕ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯಲು ಸೇರಿಕೊಂಡಿದ್ದರು. ಅಲ್ಲಿ ಅವರಿಗೆ ಗುರುವಾಗಿ ಸಿಕ್ಕವರು ಅಬ್ದುಲ್ ರೆಹಮಾನ್ ಬಾಷಾ. ಸ್ವತಃ ನಿರ್ದೇಶಕರಾಗಿದ್ದ ಬಾಷಾ ನಂತರದಲ್ಲಿ ಚಿಗುರು ಎಂಬ ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಸುಧಾರಾಣಿ ಮತ್ತು ಕುಮಾರ್ ಗೋವಿಂದ್ ನಟಿಸಿದ್ದ ಈ ಚಿತ್ರದಲ್ಲಿ ಗುರುದೇಶಪಾಂಡೆಯವರನ್ನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನೇಮಿಸಿಕೊಂಡಿದ್ದರು. ಆ ಮೂಲಕವೇ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿತ್ತು. ಹಾಗೆ ಅಸಿಸ್ಟೆಂಟ್ ಡೈರೆಕ್ಷರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಕಲಾ ನಿರ್ದೇಶಕರಾದ ಜಿ ಮೂರ್ತಿಯವರ ಪರಿಚಯವೂ ಆಗಿತ್ತು. ಸದಾ ಒಂದಲ್ಲ ಒಂದು ಚಿತ್ರದಲ್ಲಿ ಬ್ಯುಸಿಯಾಗಿರುತ್ತಿದ್ದ ಅವರ ಜೊತೆ ಸೇರಿಕೊಂಡರೆ ಹೊಸದೇನನ್ನೋ ಕಲಿತಂತಾಗುತ್ತೆ, ಹೊಟ್ಟೆ ಬಟ್ಟೆಗೇನೂ ತೊಂದರೆ ಇಲ್ಲ ಎಂಬ ಕಾರಣದಿಂದಲೇ ಗುರು ಅವರ ಜೊತೆ ಅಸಿಸ್ಟೆಂಟಾಗಿ ಸೇರಿಕೊಂಡಿದ್ದರು. ಆ ಮೂಲಕವೇ ಮಹೇಶ್ ಸುಖಧರೆ ಅವರ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.

ವಾರಸ್ದಾರ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ನಂತರ ರಾಜಾಹುಲಿ, ರುದ್ರತಾಂಡವ, ಸಂಹಾರ, ಪಡ್ಡೆಹುಲಿ ಸಿನಿಮಾಗಳನ್ನು ನಿರ್ದೇಶಿಸಿದರು. ಸದ್ಯ ಜಂಟಲ್ ಮನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಹೀಗೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದುಕೊಂಡು, ಹಲವಾರು ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿದವರು ಈಗ ಸ್ವಂತ ಜಿ ಅಕಾಡೆಮಿ ತರಬೇತಿ ಶಾಲೆಯಲ್ಲಿ ೩ ತಿಂಗಳ ಕೋರ್ಸ್ ಪ್ರಾರಂಭ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ೬ ತಿಂಗಳು ಹಾಗೂ ಒಂದು ವರ್ಷದ ತರಬೇತಿ ಶಾಲೆ ಸಹ ಇವರ ಆಲೋಚನೆಯಲ್ಲಿದೆ. ಈ ಜಿ ಅಕಾಡೆಮಿಯಲ್ಲಿ ತರಬೇತಿ ಜೊತೆಗೆ ನಿರ್ದೇಶಕ ಸ್ಥಾನ ಅಲಂಕರಿಸಬೇಕಾದವರು ಒಂದು ಕಿರು ಚಿತ್ರವನ್ನೂ ನಿರ್ದೇಶಿಸಬೇಕು. ಈಗಾಗಲೇ ೨೫ ವಿಧ್ಯಾರ್ಥಿಗಳು ನಟನೆಗೆ, ೧೫ ವ್ಯಕ್ತಿಗಳು ನಿರ್ದೇಶನಕ್ಕೆ ಹಾಗೂ ೫ ವ್ಯಕ್ತಿಗಳು ಸಂಕಲನ ವಿಭಾಗಕ್ಕೆ ನೋಂದಾಯಿಸಿಕೊಂಡಿದ್ದಾರೆ. ಮೊನ್ನೆ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಕನ್ನಡದ ಖ್ಯಾತ ನಿರ್ದೇಶಕರಾದ ಸುನಿಲ್ ಕುಮಾರ್ ದೇಸಾಯಿ, ವಿ ನಾಗೇಂದ್ರ ಪ್ರಸಾದ್, ಉಮೇಶ್ ಬಣಕಾರ್ ನಿರ್ಮಾಪಕರು, ಶಿವರಾಮೇಗೌಡರು ಲೋಕಸಭಾ ಸದಸ್ಯರು, ಎಮಿಲ್ ಸಂಗೀತ ನಿರ್ದೇಶಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿ.ಆರ್ ಜೈರಾಜ್, ನಿರ್ಮಾಪಕ ರಮೇಶ್ ರೆಡ್ಡಿ , ಕರ್ನಾಟಕ ಬ್ಯಾಂಕ್‌ನ ಡಿ.ಜಿ.ಎಂ. ಆಗಿರುವ ಬಿ.ಎಸ್.ರಾಜಾ ಸೇರಿದಂತೆ ಇನ್ನು ಮುಂತಾದ ಗಣ್ಯರುಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

“ಸಿನಿಮಾದಲ್ಲಿ ಏನಾದರೂ ಸಾಧಿಸಬೆಂದವರಿಗೆ ಸರಿಯಾದ ಮಾರ್ಗದರ್ಶನ , ನುರಿತ ತರಬೇತಿ, ಸಿನಿಮಾ ಕುರಿತಾದ ತಂತ್ರಗಾರಿಕೆ ನೀಡಲು ಅಕಾಡೆಮಿ ಸದಾ ಸಿದ್ದವಾಗಿರುತ್ತದೆ” ಎಂದು ಅಕಾಡೆಮಿಯ ಸಂಸ್ಥಾಪಕರಾದ ಗುರುದೇಶಪಾಂಡೆಯವರು ಹೇಳಿದರು.

 

CG ARUN

ಸಿನಿಮಾ ಶೈಲಿಯಲ್ಲಿ ’ಕ್ರಾಂತಿಪುರ’ ಟ್ರೈಲರ್ ಬಿಡುಗಡೆ

Previous article

ಇಲ್ಲಿದೆ ನೋಡಿ ಚಂದ್ರಚೂಡ್ ಚರಿತ್ರೆ!

Next article

You may also like

Comments

Leave a reply

Your email address will not be published. Required fields are marked *