ಒಂದು ರೊಮ್ಯಾಂಟಿಕ್ ಹಾಡಿಗಿಂತ ಇನ್ನೊಂದು ಉತ್ತಮ ಉಡುಗೊರೆ ಏನಿದೆ ಎಂದು ಭಟ್ಟರು ನಿರ್ಧರಿಸಿದರು. ಅವರ ನಿರ್ಧಾರಕ್ಕೆ ಚಿತ್ರತಂಡದವರು ಸಹ ಹೂಂಗುಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಗಣೇಶ್‌ ಅವರಿಗೆ ಈ ಹುಟ್ಟುಹಬ್ಬಕ್ಕೆ (ಜುಲೈ 02) ಸಿಕ್ಕಿದ್ದೇ ಒಂದು ರೊಮ್ಯಾಂಟಿಕ್ ಹಾಡು.

ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಹಾಡುಗಳು ಕನ್ನಡ ಚಿತ್ರರಂಗದಲ್ಲಿ ಬಹಳ ಜನಪ್ರಿಯ. ಅವರಿಬ್ಬರ ಜೊತೆಗೆ ಸಾಹಿತಿ ಜಯಂತ್ ಕಾಯ್ಕಿಣಿ ಮತ್ತು ಗಾಯಕ ಸೋನು ನಿಗಮ್ ಸಹ ಸೇರಿಕೊಂಡರೆ, ಕನ್ನಡಿಗರಿಗೆ ದೊಡ್ಡ ಹಬ್ಬ. ಅದಕ್ಕೆ ಉದಾಹರಣೆಯಾಗಿ ಮುಂಗಾರು ಮಳೆ ಚಿತ್ರದಿಂದ ಇಲ್ಲಿಯವರೆಗೂ ಹಲವು ಹಾಡುಗಳು ಸಿಗುತ್ತವೆ. ಅದಕ್ಕೆ ಹೊಸ ಸೇರ್ಪಡೆ ಎಂದರೆ ‘ಗಾಳಿಪಟ 2’ ಚಿತ್ರದ ನಾನಾಡದ ಮಾತೆಲ್ಲವ ಕದ್ದಾಲಿಸು ಎಂಬ ಹೊಸ ಹಾಡು. ಈ ಹಾಡನ್ನು ಎರಡು ವರ್ಷಗಳ ಹಿಂದೆಯೇ ಯೋಗರಾಭ್ ಭಟ್ ಚಿತ್ರೀಕರಣ ಮಾಡಿದ್ದಾರೆ. ಈಗ ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಇತ್ತೀಚೆಗೆ ಆ ಹಾಡು ಬಿಡುಗಡೆಯಾಗಿದೆ.

ಯೂಟ್ಯೂಬ್‌ ನ ಆನಂದ್ ಆಡಿಯೋ ಚಾನಲ್ಲಿನಲ್ಲಿ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಡಿನಲ್ಲಿ ಕಾಯ್ಕಿಣಿ ಅವರು ಎಂದಿನಂತೆ ಅಪರೂಪದ ಸಾಲುಗಳನ್ನು ಬರೆದಿದ್ದಾರೆ. ‘ಮಧುರ ಕನಸಿನ ಕದಾ, ತೆರೆದೆ ಇಡುವೆನು ಸದಾ, ಒಂಟಿ ನಾನಾದರೂ ಸಂಭಾವಿತಾ, ಸರಳ ಸಂಗತಿಯಲಿ, ಸಲಿಗೆ ಸಂಭವಿಸಲಿ, ಜಂಟಿ ಅಭ್ಯಾಸಕ್ಕೆ ಸುಸ್ವಾಗತಾ, ತೆರೆಯಾ ಮರೆಯಾ ವಿಷಯಾ ತುಂಬಾ ಇದೆ, ಕೃಪಯಾ ಹಿಂಬಾಲಿಸು …’ ಎಂಬ ಸಾಲುಗಳು ಕೇಳುಗರಿಗೆ ಈಗಾಗಲೇ ಖುಷಿ ನೀಡಿದೆ.

ಈ ಹಾಡಿನ ಕುರಿತು ಮಾತನಾಡಿರುವ ಯೋಗರಾಜ್ ಭಟ್, ‘ಈ ಹಾಡನ್ನು ಕುದುರೆಮುಖದಲ್ಲಿ ಚಿತ್ರೀಕರಿಸಲಾಗಿದೆ. ವಿಭಿನ್ನವಾದ ಪ್ರಾಪರ್ಟಿಗಳನ್ನು ಬಳಸಲಾಗಿದೆ. ಕಾಯ್ಕಿಣಿ ಅವರು ಅದ್ಭುತವಾಗಿ ಈ ಹಾಡನ್ನು ರಚಿಸಿದ್ದಾರೆ’ ಎಂದು ಹೊಗಳಿದ್ದಾರೆ.

ಈ ಹಾಡು ಕೇಳಿ ಗಣೇಶ್ 15 ವರ್ಷ ಹಿಂದೆ ಹೋದರಂತೆ. ‘ಅದೇ ಕಾಂಬಿನೇಶನ್ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ. ಈ ಹಾಡು ಸಹ ಅದರಂತೆ ಜನಪ್ರಿಯವಾಗಲಿದೆ ಎಂಬ  ಭರವಸೆಯಿದೆ. ಇದು ‘ಮಿಂಚಾಗಿ ನೀನು ಬರಲು …’ ಹಾಡಿಗೆ ಬದಲಿ ಅಲ್ಲ. ಆದರೆ, ಅದೇ ತರಹದ ಅದ್ಭುತವಾದ ಮೆಲೋಡಿ ಹಾಡು. ಕಾಯ್ಕಿಣಿ ಮತ್ತು ಭಟ್ಟರ ಒಳಗೆ ಒಬ್ಬ ಪ್ರೇಮಿ ಇದ್ದಾನೆ. ಅವನಲ್ಲೊಂದು ಪೋಲಿತನವಿದೆ. ಅವರಾಸೆ ತೀರಿಸಿಕೊಳ್ಳೋಕೆ ನನ್ನನ್ನು ಬಳಸಿಕೊಳ್ಳುತ್ತಾರೆ. ಈ ಹಾಡನ್ನು ಕುದುರೆಮುಖದ ಸುಂದರ ಪರಿಸರದಲ್ಲಿ ಇಸ್ತ್ರಿ ಪೆಟ್ಟಿಗೆ, ಕೊಡ ಸೇರಿದಂತೆ ಕೆಲವು ಪ್ರಾಪಟಿರ್ಗಳನ್ನು ಬಳಸಿಕೊಂಡು  ಈ ಹಾಡನ್ನು ಪರಿಸರದ ಮಧ್ಯೆ ಚಿತ್ರೀಕರಣ ಮಾಡಲಾಗಿದೆ’ ಎನ್ನುತ್ತಾರೆ.

‘ಗಾಳಿಪಟ 2’ ಚಿತ್ರವನ್ನು ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಗಣೇಶ್ ಜೊತೆಗೆ ದಿಗಂತ್, ಪವನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್ ಮುಂತಾದವರು ನಟಿಸಿದ್ದಾರೆ. ಚಿತ್ರ ಈಗಾಗಲೇ ಸೆನ್ಸಾರ್ ಆಗಿದ್ದು, ಆಗಸ್ಟ್ 12ರಂದು ಬಿಡುಗಡೆಯಾಗಲಿದೆ.

ಪರೋಪಕಾರಿ ಬೈರಾಗಿ!

Previous article

ಪವಿತ್ರಾ ಲೋಕೇಶ್ ಕೂಡಾ ಇದ್ದಾರೆ!

Next article

You may also like

Comments

Comments are closed.