ಯೋಗರಾಜ್ ಭಟ್ಟರ ಬಗ್ಗೆ ಸಿನಿಮಾ ವಲಯದಲ್ಲಿ ಒಂದಿಷ್ಟು ಒಳ್ಳೆ ಅಭಿಪ್ರಾಯಗಳಿವೆ. ಇತರೆ ಕೆಲವು ನಿರ್ದೇಶಕರಂತೆ  ಕಂಡಕಂಡ ಕಡೆಯಲ್ಲೆಲ್ಲಾ ಕಮಿಷನ್ನು ತಗೊಳ್ಳಲ್ಲ. ಹಿಡಿದ ಸಿನಿಮಾ ರಿಲೀಸಾಗುವ ತನಕ ಬೇರೆ ಸಿನಿಮಾದ ಕುರಿತಾಗಿ ಪಬ್ಲಿಸಿಟಿ ಮಾಡುವುದಿಲ್ಲ. ಪಡೆದ ಸಂಭಾವನೆಗೆ ತಕ್ಕಂತೆ ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿಕೊಡ್ತಾರೆ. ನಿರ್ಮಾಪಕರನ್ನು ಗೋಳು ಹೊಯ್ದುಕೊಳ್ಳೋದಿಲ್ಲ… ಎಂಬಿತ್ಯಾದಿಯಾದವು.

ಆದರೆ, ಭಟ್ಟರೂ ಈಗ ಹಾದಿ ಬಿಟ್ಟರಾ? ಅನ್ನುವಂತಿದೆ ಸದ್ಯದ ಸನ್ನಿವೇಶ. ನಿರ್ದೇಶಕ ಮನ್ಸೋರೆ, ರಮೇಶ್ ಅರವಿಂದ್ ಥರದವರನ್ನು ಹೊರತುಪಡಿಸಿ ನಿರ್ಮಾಪಕ ರಮೇಶ್ ರೆಡ್ಡಿಯವರನ್ನು ಹರಿದು ಮುಕ್ಕಿದವರೇ ಹೆಚ್ಚು. ಉಪ್ಪು ಹುಳಿ ಖಾರ ಸಿನಿಮಾದ ಮೂಲಕ ಅದ್ಯಾವ ಘಳಿಗೆಯಲ್ಲಿ ರೆಡ್ಡಿಗಾರು ಗಾಂಧಿನಗರಕ್ಕೆ ಕಾಲಿಟ್ಟರೋ? ಒಬ್ಬರ ನಂತರ ಒಬ್ಬರು ಸರತಿಯಲ್ಲಿ ನಿಂತು ಇವರಿಗೆ ವಂಚಿಸಿದ್ದಾರೆ. ಇಮ್ರಾನ್ ಸರ್ದಾರಿಯಾ ಎನ್ನುವ ಐನಾತಿ ಮನುಷ್ಯ ರಮೇಶ್ ರೆಡ್ಡಿ ಜೇಬಿಗೆ ಮನಸೋ ಇಚ್ಚೆ ಬ್ಲೇಡು ಹಾಕಿಸಿದ್ದ. ಆ ನಂತರ ಕೋಕನಟ್ ಮಂಜು ಸೇರಿದಂತೆ ಹಲವರು ಸಮಾ ರುಬ್ಬಿಕೊಂಡರು. ಮೂಲತಃ ಕಟ್ಟಡ ಗುತ್ತಿಗೆದಾರರಾಗಿರುವ ರಮೇಶ್ ನಂಗಲಿಯವರು ಇನ್ಫೋಸಿಸ್, ಸುಧಾಮೂರ್ತಿಯಂಥವರ ವಿಶ್ವಾಸ ಗಳಿಸಿ ಸರಿದಾರಿಯಲ್ಲಿ ದುಡಿದಿದ್ದಾರೆ. ಗಳಿಸಿದ ಒಂದು ಪಾಲು ಹಣದಲ್ಲಿ ಒಂದಿಷ್ಟು ಒಳ್ಳೇ ಸಿನಿಮಾಗಳನ್ನು ಕೊಡಬೇಕು ಅಂತಾ ಕನಸಿಟ್ಟುಕೊಂಡು ಬಂದವರು ರಮೇಶ್ ರೆಡ್ಡಿ. ಇಂಥಾ ರಮೇಶ್ ರೆಡ್ಡಿಯವರನ್ನು ನಿಜಕ್ಕೂ ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದೇ ಆದಲ್ಲಿ ಕನ್ನಡ ಚಿತ್ರರಂಗಕ್ಕಿವರು ಅಸೆಟ್ಟಾಗಿ ಉಳಿಯಬಲ್ಲರು‌. ಆದರೆ ಇಲ್ಲಿ ಅವರಿಗಾಗುತ್ತಿರುವ ಅನುಭವಗಳು ಅವರ ಹೆಜ್ಜೆಯನ್ನು ಹಿಂದಿಂದಕ್ಕೇ ಎಳೆಯುತ್ತಿವೆ.

ನಾತಿಚರಾಮಿ ಒಳ್ಳೆ ಹೆಸರು ತಂದುಕೊಟ್ಟಿತು, ಹಾಕಿದ ಬಂಡವಾಳಕ್ಕೂ ಮೋಸ ಮಾಡಲಿಲ್ಲ. ಈಗಷ್ಟೇ ರಿಲೀಸಾಗಿರುವ ಹಂಡ್ರೆಡ್ ಸಿನಿಮಾ ಉತ್ತಮ ವ್ಯಾಪಾರ ಮಾಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ-2ವನ್ನೂ ಇದೇ ರಮೇಶ್ ರೆಡ್ಡಿ ನಿರ್ಮಿಸಿರೋದು. ಗಣೇಶ್ ಅವರಿಗೆ ಅದ್ಬುತ ವಾದ ಮಾರ್ಕೆಟ್ಟಿದೆ. ಸಿನಿಮಾ ರೈಟ್ಸುಗಳೆಲ್ಲವೂ ಒಳ್ಳೇ ಬೆಲೆಗೆ ಮಾರಾಟವಾಗುತ್ತವೆ, ಮುಂಗಾರುಮಳೆ, ಗಾಳಿಪಟ, ಮುಗುಳುನಗೆಯ ಗೆಲುವಿನ ಪ್ರಭೆಗಳೆಲ್ಲಾ ಸೇರಿ ಥೇಟರಲ್ಲಿ ಚನ್ನಾಗೇ ಓಪನಿಂಗ್ ಪಡೆಯುತ್ತದೆ ಅನ್ನೋದೇನೋ ನಿಜ.

ಆದರೆ, ಭಟ್ಟರು ಯಾಕೋ ಗಾಳಿಪಟ-೨ ಬಗ್ಗೆ ಅಸಹಕಾರ ತೋರುತ್ತಿದ್ದಾರೆ. ಬೇರೆ ಸಿನಿಮಾಗಳಿಗೆ ಕೊಡುವಷ್ಟು ಮುತುವರ್ಜಿ ನೀಡುತ್ತಿಲ್ಲ. ಗಾಳಿಪಟ-೨ ಕುರಿತಾಗಿ ಯಾವುದೇ ಅಪ್ ಡೇಟ್ಸ್ ನೀಡುವ ಗೋಜಿಗೇ ಹೋಗುತ್ತಿಲ್ಲ. ಈಗ ಶುರು ಮಾಡಿಕೊಂಡಿರುವ ʻಗರಡಿʼ ಬಗ್ಗೆ ಹೆಚ್ಚು ವಾಲಿದ್ದಾರೆ… ಎಂಬಿತ್ಯಾದಿ ಅರೋಪಗಳು ಕೇಳಿಬರುತ್ತಿವೆ. ಅಸಲಿಗೆ ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಭಟ್ಟರ ನಡುವಿನ ಸಂಬಂಧದಲ್ಲೇ ಹಳಸಿದ ಸ್ಮೆಲ್ಲು ಬರುತ್ತಿದೆ. ಒಮ್ಮೆ ಮಾತು ಕೊಟ್ಟರೆ ಅದಕ್ಕೆ ಬದ್ಧವಾಗಿ ನಡೆದುಕೊಳ್ಳುವ, ನಿರ್ದೇಶಕ ಕೇಳಿದ್ದೆಲ್ಲವನ್ನೂ ಧಾರೆಯೆರೆಯುವ ರಮೇಶ್ ರೆಡ್ಡಿ ಅವರೇನಾದರೂ ಭಟ್ಟರ ಮೇಲೆ ಅಸಮಧಾನ ಗೊಂಡಿದ್ದಾರಾ? ಅದು ನಿಜವೇ ಆಗಿದ್ದರೆ, ಅದಕ್ಕೆ ಕಾರಣ ಏನಿರಬಹುದು? ಅನ್ನೋದೆಲ್ಲಾ ಸದ್ಯದ ಪ್ರಶ್ನೆಗಳು.

ಯೂರೋಪ್ ಶೂಟಿಂಗ್ ವಿಚಾರದಲ್ಲೇನೋ ಪರಸ್ಪರರ ನಡುವೆ ಅಪನಂಬಿಕೆಗಳು ಏರ್ಪಟ್ಟವು ಅನ್ನೋದು ಕೇಳಿಬರುತ್ತಿರುವ ನ್ಯೂಸು. ಈ ವಿಚಾರ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ, ಸಿನಿಮಾರಂಗದಲ್ಲಿ ಯಾವುದನ್ನೂ ಹೆಚ್ಚು ದಿನ ಮುಚ್ಚೂಮರೆ ಮಾಡಲು ಸಾಧ್ಯವಿಲ್ಲ. ಬುಟ್ಟಿಯಲ್ಲಿನ ಹಾವಿನಂತೆ ಭಟ್ಟರ ವಿಚಾರ ಕೂಡಾ ಯಾವತ್ತಿದ್ದರೂ ಹೊರಬರಲೇಬೇಕು!!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹೊಸತರ ಜೊತೆ ಹಳೆಯ ನಂಟು!

Previous article

‘ಅರ್ಜುನ ಸನ್ಯಾಸಿ’ ಸಿನಿಮಾದ ಮೊದಲ ಹಾಡು ಬಿಡುಗಡೆ….

Next article

You may also like

Comments

Leave a reply