ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗಿರುವ ಸಿನಿಮಾ ಗಮನಂ. ನಾಲ್ಕು ಭಾಷೆಗಳಲ್ಲಿ ರೂಪುಗೊಂಡಿರುವ ಈ ಚಿತ್ರ ಜಗತ್ತಿನ ಯಾವುದೇ ಭಾಗದ ಜನ ನೋಡುವಂತಾ ಕಥಾಹಂದರವನ್ನು ಹೊಂದಿದೆ. ಅದರಲ್ಲೂ ಭಾರತದ ಪ್ರತಿಯೊಬ್ಬ ಪ್ರೇಕ್ಷಕ ಕೂಡಾ ಒಂದಲ್ಲಾ ಒಂದು ರೀತಿಯಲ್ಲಿ ಈ ಚಿತ್ರದ ಕಥೆ, ಪಾತ್ರಗಳೊಂದಿಗೆ ಕನೆಕ್ಟ್ ಆಗುವಂತಾ ಕಂಟೆಂಟ್ ಇದರಲ್ಲಿದೆ.
ಬದುಕಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಹಂಬಲಿಕೆ, ಹುಡುಕಾಟ, ಪರದಾಟಗಳಿರುತ್ತವೆ. ಅದರ ನಡುವೆ ವಿಷಾಧ, ನೋವು, ನಲಿವು ಎಲ್ಲವೂ ಸೇರಿಕೊಂಡಿರುತ್ತದೆ. ಮುರಿದುಬಿದ್ದ ಕನಸುಗಳನ್ನೆಲ್ಲಾ ಹರವಿಕೊಂಡು, ಮತ್ತೆ ಜೋಡಿಸಲು ಆದೀತಾ ಅಂತಾ ಆಸೆ ಪಡುವವರು, ಅವರೆದುರು ಕೂತು ʻಇನ್ನೆಲ್ಲಿ ಸಾಧ್ಯʼ ಎಂದು ಅಣಕಿಸಿ ಹೈರಾಣಾಗಿಸುವ ವಾಸ್ತವ. ಯಾರೆಂದರೆ ಯಾರಿಗೂ ಕೇಡು ಬಯಸದ ನಿರ್ಗತಿಕ ಜೀವಗಳು – ಹೀಗೆ ನಗರ ಜೀವನದಲ್ಲಿ ಕಾಣಸಿಗುವ ಒಂದಷ್ಟು ವಿಚಾರಗಳು ʻಗಮನಂʼ ಚಿತ್ರದ ಕಥಾವಸ್ತು.
ತಾನೊಬ್ಬ ಕ್ರಿಕೆಟ್ ಆಟಗಾರನಾಗಬೇಕು ಎಂದು ಬಯಸುವ ಯುವಕ. ಇದೊಂದು ಮೂರ್ಖರ ಆಟ. ಅದನ್ನು ನಂಬುದಕ್ಕಿಂತಾ ತಾವು ನಂಬಿಕೊಂಡು ಬಂದ ಸಾಂಪ್ರದಾಯಿಕ ಕೆಲಸವನ್ನೇ ಮುಂದುವರೆಸಿಕೊಂಡು ಸುರಕ್ಷಿತ ಬದುಕನ್ನು ರೂಪಿಸಿಕೊಳ್ಳಲಿ ಎಂದು ಬಯಸುವ ಆತನ ಅಜ್ಜ ಮತ್ತು ಕುಟುಂಬವರ್ಗ. ಮತ್ತೊಂದು ಕಡೆ ಕೊಳಗೇರಿಯಲ್ಲಿ ವಾಸಿಸುವ ಕಿವಿ ಕೇಳದ ಮಹಿಳೆ. ಆಕೆಗೆ ತನ್ನ ಮುದ್ದು ಕಂದಮ್ಮನ ದನಿಯನ್ನು ಕೇಳಲೇಬೇಕು ಎನ್ನುವ ಬಯಕೆ. ದುಬೈನಲ್ಲಿ ಚಾಲಕ ವೃತ್ತಿ ಮಾಡುವ ಗಂಡ ಹಣ ಹೊಂದಿಸಿಕೊಂಡು ಬಂದರಷ್ಟೇ ಈಕೆಯ ಕನಸು ಈಡೇರೋದು. ಇದರ ಜೊತೆಗೆ ಇಬ್ಬರು ಅನಾಥ ಮಕ್ಕಳು. ಯಾವ ಒತ್ತಡವೂ ಇಲ್ಲದೆ, ಬದುಕು ಬೀದಿಯಲ್ಲಿದ್ದರೂ ಪ್ರಾಪಂಚಿಕ ಸುಖವನ್ನು ಅನುಭವಿಸುತ್ತಾ ಸ್ವಚ್ಛಂದ ಜೀವನ ನಡೆಸುವ ಹುಡುಗರ ಮುಂದೆ ಎದುರಾಗುವ ಸವಾಲು. ನಾಲ್ಕಾರು ಪಾತ್ರಗಳ ಮೂಲಕ ಅನಾವರಣಗೊಳ್ಳುವ ಕಥೆ ಕ್ರಮೇಣ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಲಿದೆ. ಈ ಚಿತ್ರದಲ್ಲಿ ಬರುವ ಪಾತ್ರಗಳ ಬಯಕೆ, ಕನಸುಗಳು ಈಡೇರುತ್ತವಾ? ಏನೇನು ಅಡ್ಡಿ ಆತಂಕಗಳು ಎದುರಾಗುತ್ತವೆ? ಎಂಬಿತ್ಯಾದಿ ವಿವರಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದೇವೆ ಎಂದು ನಿರ್ದೇಶಕಿ ಸುಜನಾ ರಾವ್ ಹೇಳಿದ್ದಾರೆ. ಫ್ಯಾಷನ್ ಡಿಸೈನಿಂಗ್ ಕಲಿತು, ಎಡಿಟಿಂಗ್ ಕೋರ್ಸ್ ಮುಗಿಸಿ, ದೆಹಲಿಯ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸಿ, ಜೊತೆಜೊತೆಗೇ ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶಿಸಿದ್ದವರು ಸುಜನಾ ರಾವ್. ಈಗ ಗಮನಂ ಮೂಲಕ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದರು, ತಂತ್ರಜ್ಞರ ಜೊತೆ ಮಾತ್ರವಲ್ಲದೆ, ಐದು ಭಾಷೆಗಳಲ್ಲಿ ಸಿನಿಮಾ ರೂಪಿಸಿರುವುದು ಲೇಡಿ ಡೈರೆಕ್ಟರ್ ಸುಜನಾ ಅವರ ಹೆಚ್ಚುಗಾರಿಕೆಯಾಗಿದೆ.
ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರಿದ್ದಾರೆ. ಹಿರಿಯ ನಟ ಚಾರು ಹಾಸನ್, ಶ್ರಿಯಾ ಶರಣ್, ಪ್ರಿಯಾಂಕಾ ಜವಾಲ್ಕರ್, ಶಿವ ಕಂದುಕುರಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದು, ಸಂಜಯ್ ಸ್ವರೂಪ್, ಇಂದೂ ಆನಂದ್, ಪ್ರಿಯಾ, ಸುಹಾಸ್, ಮಾಸ್ಟರ್ ನೇಹಾಂತ್, ಬಿತಿರಿ ಸತ್ತಿ, ರವಿಪ್ರಕಾಶ್ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ. ಭಾರತದ ಹೆಮ್ಮೆಯ ಸಂಗೀತ ನಿರ್ದೇಶಕ, ಸಂಗೀತ ಜ್ಞಾನಿ ಇಳಯರಾಜಾ ʻಗಮನಂʼಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಹಿಂದಿಯ ಮಣಿಕರ್ಣಿಕಾ, ತೆಲುಗಿನ ಗೌತಮೀಪುತ್ರ ಶಾತಕರ್ಣಿ, ವೇದಂ ಮೊದಲಾದ ಸಿನಿಮಾಗಳಿಗೆ ಕ್ಯಾಮೆರಾ ಕೆಲಸ ನಿರ್ವಹಿಸಿದ್ದ ಜ್ಞಾನಶೇಖರ್ ವಿ.ಎಸ್. ಛಾಯಾಗ್ರಹಣ, ಸಾಯಿ ಮಾಧವ ಬುರಾ ಸಂಭಾಷಣೆ ಬರೆದಿರುವ ʻಗಮನಂʼ ಚಿತ್ರವನ್ನು ರಮೇಶ್ ಕರುತೂರಿ ಮತ್ತು ವೆಂಕಿ ಪುಶದಾಪು ಮತ್ತು ಜ್ಞಾನಶೇಖರ್ ವಿ.ಎಸ್. ಸೇರಿ ಕ್ರಿಯಾ ಫಿಲ್ಮ್ಸ್ ಕಾರ್ಪ್ ಮೂಲಕ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಈಗಾಗಲೇ ಸಂಪೂರ್ಣ ತಯಾರಾಗಿದ್ದು, ಚಿತ್ರಮಂದಿರಗಳು ತೆರೆಯುತ್ತಿದ್ದಂತೇ ಐದೂ ಭಾಷೆಗಳಲ್ಲಿ ತೆರೆಗೆ ಬರಲಿದೆ.
No Comment! Be the first one.