ಏನೇ ಕೆಲಸ ಆರಂಭಿಸುವ ಮುನ್ನ ರವಿಚಂದ್ರನ್ ಮತ್ತು ಶಿವಣ್ಣನ ಒಪ್ಪಿಗೆ, ಮಾರ್ಗದರ್ಶನ ಪಡೆಯುವುದು ರಘುರಾಮ್ ರೂಢಿ. ‘ಇಂಥದ್ದೊಂದು ಐಡಿಯಾ ಬಂದಿದೆ’ ಎಂದು ಹೇಳುತ್ತಿದ್ದಂತೇ ರವಿಮಾಮ ಮತ್ತು ಶಿವಣ್ಣ ‘ಒಳ್ಳೇ ಪ್ಲಾನು, ಮುಂದುವರೆಸು’ ಅಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹಾಗೆ ಶುರುವಾದ ಪ್ರಾಜೆಕ್ಟು ಈಗ ‘ಗಂಧದ ಗುಡಿಯ ಗಂಧರ್ವರು’ ಹೆಸರಿನಂತೆ ಚೆಂದದ ಕಾರ್ಯಕ್ರಮವಾಗಿ ಹೊರಬಂದಿದೆ.
ಸಿನಿಮಾ-ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ವಿಜಯರಾಘವೇಂದ್ರ, ಸುನಿಲ್ ರಾವ್, ನವೀನ್ ಕೃಷ್ಣ, ಸೃಜನ್ ಲೋಕೇಶ್, ಅನಿರುದ್ಧ್, ಮಂಡ್ಯದ ಟಾಕೀಸೊಂದರ ಪ್ರೊಜೆಕ್ಷನ್ ರೂಮಿನಲ್ಲಿ ಬದುಕು ಸವೆಸಿದವರ ಮಗ ರವಿಶಂಕರ್ ಗೌಡ – ಈ ಎಲ್ಲರೂ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಗಳೇ. ಲೋಕೇಶ್ ಮತ್ತು ಗಿರಿಜಾ ಪುತ್ರ ಸೃಜನ್ ನಟನೆಯ ಜೊತೆಗೆ ನಗಿಸುವುದನ್ನೇ ಕಾಯಕವಾಗಿಸಿಕೊಂಡಿದ್ದಾರೆ. ಸುನಿಲ್ ರಾವ್ ತಾಯಿ ಬಿ.ಕೆ. ಸುಮಿತ್ರಾ ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಮೇರು ಗಾಯಕಿ. ಹಿರಿಯ ನಟ ಶ್ರೀನಿವಾಸಮೂರ್ತಿ ಅವರ ಮಗ ನವೀನ್ ಕೃಷ್ಣ ಚಿತ್ರರಂಗದ ಯಾವುದೇ ವಿಭಾಗದಲ್ಲಿ ಕೂಡಾ ಕೆಲಸ ಮಾಡಬಲ್ಲ ದೈತ್ಯ ಪ್ರತಿಭೆ.
ಸಿನಿಮಾ ಹೀರೋ ಆಗಿ ಎಂಟ್ರಿ ಕೊಟ್ಟು ಸಾಹಸ ಸಿಂಹ ವಿಷ್ಣುವರ್ಧನ್ ಅಳಿಮಯ್ಯನಾದ ಅನಿರುದ್ಧ್ ಸದ್ಯ ಸೀರಿಯಲ್ ಸ್ಟಾರ್. ರವಿಶಂಕರ್ ಅಲಿಯಾಸ್ ಡಾ. ವಿಠಲ್ ರಾವ್ ಸೀರಿಯಲ್, ಸಿನಿಮಾಗೂ ಮುಂಚೆ ಹೆಸರು ಮಾಡಿದ್ದೇ ಸೌಂಡ್ ಆಫ್ ಮ್ಯೂಸಿಕ್ ಆರ್ಕೆಸ್ಟ್ರಾ ಮತ್ತು ಅಕ್ಷರಮಾಲೆ ಕಾರ್ಯಕ್ರಮದಲ್ಲಿ.
ಕನ್ನಡದ ಸಿನಿಮಾ ಮತ್ತು ಟಿವಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮತ್ತೊಬ್ಬ ಟ್ಯಾಲೆಂಟೆಡ್ ವ್ಯಕ್ತಿ, ನಟ, ನಿರ್ದೇಶಕ ರಘುರಾಮ್ ಈ ಎಲ್ಲಾ ಬಹುಮುಖ ಅಪ್ಪಟ ಪ್ರತಿಭೆಗಳನ್ನು ಒಂದು ಕಡೆ ಸೇರಿಸಿದ್ದಾರೆ. ರಾಘು, ಸುನಿಲ್, ನವೀನ್, ರವಿ ಮತ್ತು ಅನಿರುದ್ಧ್ ಅಭಿನಯದ ಜೊತೆಗೆ ಗಾಯಕರಾಗಿಯೂ ಹೆಸರು ಮಾಡಿದ್ದಾರೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಇದ್ದಲ್ಲಿಂದಲೇ ಏನಾದರೊಂದು ಪ್ರಯೋಗ ಮಾಡಬೇಕು ಅಂತಾ ರಘುರಾಮ್ ಥಿಂಕ್ ಮಾಡುತ್ತಿದ್ದರು. ಏನೇ ಕೆಲಸ ಆರಂಭಿಸುವ ಮುನ್ನ ರವಿಚಂದ್ರನ್ ಮತ್ತು ಶಿವಣ್ಣನ ಒಪ್ಪಿಗೆ, ಮಾರ್ಗದರ್ಶನ ಪಡೆಯುವುದು ರಘುರಾಮ್ ರೂಢಿ. ‘ಇಂಥದ್ದೊಂದು ಐಡಿಯಾ ಬಂದಿದೆ’ ಎಂದು ಹೇಳುತ್ತಿದ್ದಂತೇ ರವಿಮಾಮ ಮತ್ತು ಶಿವಣ್ಣ ‘ಒಳ್ಳೇ ಪ್ಲಾನು, ಮುಂದುವರೆಸು’ ಅಂತಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹಾಗೆ ಶುರುವಾದ ಪ್ರಾಜೆಕ್ಟು ಈಗ ‘ಗಂಧದ ಗುಡಿಯ ಗಂಧರ್ವರು’ ಹೆಸರಿನಂತೆ ಚೆಂದದ ಕಾರ್ಯಕ್ರಮವಾಗಿ ಹೊರಬಂದಿದೆ.
ತಂತಮ್ಮ ಮನೆಯಲ್ಲೇ ಇದ್ದು, ಕಾನ್ಫರೆನ್ಸ್ ಕಾಲ್ ಮೂಲಕ ಕನೆಕ್ಟ್ ಆಗಿ ಹಳೆಯ ಮಧುರ ಗೀತೆಗಳನ್ನು ಹಾಡುವ ಕಾರ್ಯಕ್ರಮವಿದು. ಈ ಕಾರ್ಯಕ್ರಮವನ್ನು ಸೃಜನ್ ಲೋಕೇಶ್ ನಿರೂಪಿಸಿದ್ದಾರೆ. ಗಿರಿಜಾ ಲೋಕೇಶ್ ಮತ್ತು ಹರಿಕೃಷ್ಣ ಅವರ ಪತ್ನಿ ವಾಣಿ ಕೂಡಾ ಕಾರ್ಯಕ್ರಮದ ಭಾಗವಾಗಿರೋದು ವಿಶೇಷ. ಬಾಲಿವುಡ್ ಸೇರಿದಂತೆ ಎಲ್ಲ ಭಾಷೆಯಲ್ಲೂ ಕೊರೋನಾ ಸಮಯದಲ್ಲಿ ವಿಶೇಷ ಪ್ರಯತ್ನಗಳಾಗಿವೆ. ಆದರೆ ಗಂಧದ ಗುಡಿಯ ಗಂಧರ್ವರು ಬೇರೆಲ್ಲದಕ್ಕಿಂತಾ ಭಿನ್ನವಾಗಿಯೂ, ಮನರಂಜನಾತ್ಮಕ ವಾಗಿಯೂ ಮೂಡಿಬಂದಿದೆ. ಇಂಥದ್ದೊಂದು ಕನಸು ಕಂಡ ರಘುರಾಮ್ ಅವರಿಗೂ, ಅದನ್ನು ಯಶಸ್ವಿಯಾಗಿ ನಿಭಾಯಿಸಿದ ನಟರಿಗೂ ಅಭಿನಂದನೆ ಹೇಳೋಣ..