ಇಲ್ಲಿ ಹೆಸರುವಾಸಿ ಹೀರೋ ಇಲ್ಲ. ತೀರಾ ದೊಡ್ಡ ಮಟ್ಟದ ತಾಂತ್ರಿಕತೆಯಿಲ್ಲ. ಆದರೆ, ನೋಡಿದ ಯಾರೇ ಅದರೂ ಸಖತ್ತಾಗಿದೆ ಎನ್ನುವಷ್ಟರ ಮಟ್ಟಿಗೆ ಸಿನಿಮಾ ರೂಪಿಸಿದ್ದಾರೆ. ಅದು ನಮ್ ಗಣಿ ಬಿಕಾಂ ಪಾಸ್. ಅನವಶ್ಯಕವಾಗಿ, ಅಪಾರವಾಗಿ ದುಡ್ಡು ಸುರಿದು ಸಿನಿಮಾ ಮಾಡುವುದಕ್ಕಿಂತ ಒಂದು ಚೆಂದದ ಕತೆ, ಎಲ್ಲರಿಗೂ ಆಪ್ತವೆನಿಸುರವ ನಿರೂಪಣೆ, ಕಾಮಿಡಿ, ಸೆಂಟಿಮೆಂಟು, ಸಣ್ಣದೊಂದು ಫೈಟು ಎಲ್ಲವನ್ನೂ ಸೇರಿಸಿ ರೂಪಿಸಿರುವ ಸಿನಿಮಾ ನಮ್ ಗಣಿ ಬಿಕಾಂ ಪಾಸ್!
ಹಾಳಾದರೆ ಬಾಯಿ ಬಡೆದುಕೊಳ್ಳುತ್ತಾರೆ. ಗೆದ್ದರೆ ಅಂಡು ಬಡೆದುಕೊಳ್ಳುತ್ತಾರೆ ಅಂಥದ್ದೇನೋ ಮಾತಿದೆಯಲ್ಲಾ? ಅದಕ್ಕೆ ಅನ್ವರ್ಥವಾಗುವಂತೆ ಗಣಿ ಚಿತ್ರಿತಗೊಂಡಿದೆ. ಓದು ಮುಗಿಸಿದ ತಕ್ಷಣ ಸಂಬಳಕ್ಕಗಿ ಪ್ರತಿಷ್ಟೆಯ ಕೆಲಸ ಹಿಡಿಯಬೇಕು ಅನ್ನೋದು ಜಗದ ನಿಯಮ. ಡಿಗ್ರಿ ಮುಗಿಸಿದ ಯುವಕರು ಕೆಲಸವಿಲ್ಲದೆ ಕುಂತರೆ ಮೊದಲು ಮನೆಯವರೇ ನಾಯಿಯಂತೆ ಕಾಣಲು ಶುರು ಮಾಡುತ್ತಾರೆ. ಆಳಿಗೊಂದು ಕಲ್ಲು ಅನ್ನುವಂತೆ ಸಿಕ್ಕ ಸಿಕ್ಕವರೆಲ್ಲಾ ಬೀಸಲು ಆರಂಭಿಸುತ್ತಾರೆ. ಒಟ್ಟಿಗೇ ಓದಿದವರು ತಮಗೊಪ್ಪುವ ಕೆಲಸ ಹಿಡಿದು ಬದುಕು ಕಂಡುಕೊಳ್ಳುತ್ತಾರೆ. ಆದರೆ ವರ್ಷಗಳು ಉರುಳಿದರೂ ಗಣಿಗೆ ಒಂದೊಳ್ಳೆ ಕೆಲಸ ಸಿಗೋದಿಲ್ಲ. ಇಂಟರ್ವ್ಯೂ ಅಟೆಂಡ್ ಮಾಡೋದು, ಸ್ನೇಹಿತರೊಂದಿಗೆ ಕೂತು ಕಾಲ ಕಳೆಯೋದೇ ಫುಲ್ ಟೈಂ ಕಸುಬಾಗಿರುತ್ತದೆ. ಇದೆಲ್ಲದರ ಪರಿಣಾಮವಾಗಿ ಮನೆಯವರ ಕಣ್ಣಿಗೆ ಮಾತ್ರವಲ್ಲದೆ ಸಮಾಜದ ದೃಷ್ಟಿಯಲ್ಲಿ ನಿಕೃಷ್ಟನಂತೆ ಕಾಣುವ ಗಣಿ ಬದುಕಿನ ಜರ್ನಿಯನ್ನು ನಿರ್ದೇಶಕ ಅಭಿಷೇಕ್ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಸ್ವತಃ ಅಭಿ ಇಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಎಲ್ಲೂ ಇವರು ಹೊಸಬರು ಅನ್ನೋದು ಗೊತ್ತಾಗದಂತೆ ಮೂರು ಜನ ಹುಡುಗರು ಪಳಗಿದವರಂತೆ ನಟಿಸಿದ್ದಾರೆ. ಮನಸಿಗೆ ತಾಕುವ ಸಂಭಾಷಣೆ, ಇರುವ ಸಲಕರಣೆಗಳನ್ನೇ ಬಳಸಿಕೊಂಡು ಕಣ್ಣಿಗೆ ಕಟ್ಟುವಂತಾ ಛಾಯಾಗ್ರಹಣ, ಉತ್ಕೃಷ್ಟವಾದ ಸಂಗೀತ ಮತ್ತು ಹಿನ್ನೆಲೆ ಸಂಗೀತಗಳೆಲ್ಲವೂ ನಮ್ ಗಣಿ ಬಿಕಾಂ ಪಾಸ್ ನೋಡುಗರ ಮೆಚ್ಚುಗೆಗೆ ಕಾರಣವಾಗಿದೆ.
ಕೆಲಸವಿಲ್ಲದ ಹುಡುಗರು ಕಸಕ್ಕೆ ಸಮ ಎನ್ನುವ ಪ್ರಧಾನ ಅಂಶ ಇಲ್ಲಿ ಚರ್ಚೆಯಾಗಿದೆ. ದುಡಿಮೆಯಿಲ್ಲದವವನನ್ನು ಮದುವೆಯಾಗಲು ಹಿಂದೇಟು ಹಾಕುವ ಹುಡುಗಿ, ಮದುವೆಯ ಹೆಸರಲ್ಲಿ ವಂಚಿಸಿ ಅನಾಚಾರ ಮಾಡಿಸುವ ಕೇಡಿ ಲೇಡಿ ಮತ್ತು ತಾನು ಮೊದಲು ಪ್ರೀತಿಸಿದವನೊಂದಿಗೇ ಮದುವೆಯಾಗಬೇಕು ಅಂತಾ ಬೆನ್ನು ಬೀಳುವ ಮತ್ತು ಬದುಕು ಬದಲಿಸುವ ಮತ್ತೊಬ್ಬಳು ಹುಡುಗಿ. ನೀನು ಉದ್ದಾರ ಆಗೋದಿಲ್ಲ ಅಂತಾ ಪದೇ ಪದೇ ಮೂದಲಿಸುವ ನೆಂಟರು, ಲೇವಡಿ ಮಾಡುವ ಅಕ್ಕಪಕ್ಕದವರು. ಇವರೆಲ್ಲರ ನಡುವೆ ಗಣಿ ಮತ್ತಾತನ ಗೆಳೆಯರ ಒದ್ದಾಟ, ಅವಮಾನ, ಯಾತನೆಗಳು – ಈ ಎಲ್ಲಾ ಎಲಿಮೆಂಟುಗಳನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ರೂಪಿಸಿರುವ ಸಿನಿಮಾ ನಮ್ ಗಣಿ ಬಿಕಾಂ ಪಾಸ್.
ಮೂರು ಜನ ಹುಡುಗರು ಮತ್ತು ಮೂವರು ನಾಯಕಿಯರು ಈ ಚಿತ್ರದಲ್ಲಿದ್ದಾರೆ. ಐಶಾನಿ ಶೆಟ್ಟಿ ಸ್ಕೂಲ್ ಹುಡುಗಿಯಾಗಿ ಮತ್ತು ಬೆಳೆದ ಹೆಣ್ಣುಮಗಳಾಗಿ ಚೆಂದದ ಅಭಿನಯ ನೀಡಿದ್ದಾರೆ. ಪ್ರತಿಯೊಬ್ಬರೂ ನೋಡಬಹುದಾದ ಚಿತ್ರ ನಮ್ ಗಣಿ ಬಿಕಾಂ ಪಾಸ್. ನೋಡುಗರು ಕೈ ಹಿಡಿದು ಪಾಸು ಮಾಡಿಸಿದರೆ ನಿರ್ದೇಶಕ ಕಂ ಹೀರೋ ಅಭಿಷೇಕ್ ಶೆಟ್ಟಿ ಮತ್ತು ನಿರ್ಮಾಪಕ ನಾಗೇಶ್ ಕುಮಾರ್ ಫಸ್ಟ್ ಕ್ಲಾಸ್ ಸಿನಿಮಾ ಕೊಡೋ ಶಕ್ತಿ ಹೊಂದುತ್ತಾರೆ. ಇಷ್ಟು ಚೆಂದದ ಸಿನಿಮಾವನ್ನು ನೋಡಿ ಪಾಸ್ ಮಾಡದಿದ್ದರೆ ನಿಜಕ್ಕೂ ಅದು ಪ್ರೇಕ್ಷಕರ ಪಾಲಿಗೇ ಲಾಸ್ ಆಗುತ್ತದೆ!