ರೂಪಾ ರಾವ್ ನಿರ್ದೇಶಿಸಿರುವ ಚೊಚ್ಚಲ ಸಿನಿಮಾ ನ್ಯೂಯಾರ್ಕ್ನಲ್ಲಿ ನಡೆಯುವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನ ವರ್ಲ್ಡ್ ಪ್ರೀಮಿಯರ್ ಸೇರಿದಂತೆ ಜಗತ್ತಿನ ಆರೇಳು ದೇಶಗಳಲ್ಲಿ ಪ್ರದರ್ಶನಗೊಂಡಿದೆ. ಸಾಮಾನ್ಯವಾಗಿ ಸಿನಿಮಾ ಕತೆಗಳು ಗಂಡಸರ ದೃಷ್ಟಿಯಲ್ಲೇ ಸಾಗುತ್ತವೆ. ಆದರೆ ಇದು ಹೆಣ್ಣುಮಕ್ಕಳ ದೃಷ್ಟಿಕೋನದಲ್ಲಿ ನಡೆಯುವಂತಾ ಕತೆ ಹೊಂದಿದೆ.

ಯೂ ಟರ್ನ್ ಮತ್ತು ಒಂದು ಮೊಟ್ಟೆಯ ಕತೆ ಚಿತ್ರ ಬಿಟ್ಟರೆ ನ್ಯೂಯಾರ್ಕ್ ವರ್ಲ್ಡ್ ಪ್ರೀಮಿಯರ್ನಲ್ಲಿ ಪ್ರದರ್ಶನಗೊಂಡ ಮೂರನೇ ಚಿತ್ರ ಗಂಟುಮೂಟೆ. ಈ ಚಿತ್ರ ಅಲ್ಲಿ ಪ್ರದರ್ಶನಗೊಂಡಿದ್ದು ಮಾತ್ರವಲ್ಲದೆ, ದೊಡ್ಡ ಸಿನಿಮಾಗಳ ನಡುವೆಯೂ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಯನ್ನೂ ಪಡೆದಿದೆ. ಹೀಗೆ ಚಿತ್ರಕತೆಗೆ ಅವಾರ್ಡು ಪಡೆದ ಮೊಟ್ಟ ಮೊದಲ ಕನ್ನಡ ಸಿನಿಮಾ ಕೂಡಾ ಆಗಿದೆ. ಕೆನಡಾ, ಮೆಲ್ಬರ್ನ್, ರೋಮ್ ಸೇರಿದಂತೆ ಹಲವಾರು ಕಡೆ ಗಂಟುಮೂಟೆಯ ಸ್ಕ್ರೀನಿಂಗ್ ಆಗಿದೆ. ಇದೇ ಅಕ್ಟೋಬರ್ ೧೮ರಂದು ಗಂಟುಮೂಟೆ ಕರ್ನಾಟಕದಲ್ಲೂ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ‘ಗಂಟುಮೂಟೆ’ ಒಳಗೇನಿದೆ ಅಂತಾ ನಿರ್ದೇಶಕಿ ರೂಪಾ ರಾವ್ ಇಲ್ಲಿ ವಿವರಿಸಿದ್ದಾರೆ…

“ಗಂಟುಮೂಟೆ ಚಿತ್ರಕ್ಕೆ ನಾವು ತೊಂಬತ್ತರ ಕಾಲಘಟ್ಟದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಯಾಕೆಂದರೆ, ಅತೀ ರೊಮ್ಯಾಂಟಿಕ್ ಆಗಿದ್ದ ದಿನಗಳವು. ಆಗ ಇಂಟರ್ನೆಟ್ ಹಾವಳಿ ಇರಲಿಲ್ಲ, ವಾಟ್ಸಾಪ್ ತಲೆ ಕಾಟ ಕೊಡುತ್ತಿರಲಿಲ್ಲ. ಪ್ರೀತಿ ಹುಟ್ಟಿಕೊಂಡಿದೆ ಅಂತಾ ತಿಳಿದುಕೊಳ್ಳಲು ಸಾಕಷ್ಟು ದಿನ ತೆಗೆದುಕೊಳ್ಳುತ್ತಿತ್ತು. ಆ ಕಾಲವನ್ನು ನಾವು ಯಾಕೆ ಆಯ್ಕೆ ಮಾಡಿಕೊಂಡಿದ್ದು ಅಂದರೆ, ಲೆಟರ್ ಕೊಟ್ಟುಕೊಳ್ಳೋದು. ಪಕ್ಕದ ಮನೆಯ ಯಾವುದೋ ಲ್ಯಾಂಡ್ ಲೈನ್’ಗೆ ಹುಡುಗ ಫೋನ್ ಮಾಡುವುದು, ಅದನ್ನು ಮರೆಮಾಚಲು ಹುಡುಗಿ ಹೇಳುತ್ತಿದ್ದ ಸುಂದರವಾದ ಸುಳ್ಳುಗಳು, ಆ ಪ್ರೀತಿಯಲ್ಲಿನ ಮುಗ್ದತೆ ಇವೆಲ್ಲವನ್ನೂ ನೆನಪಿಸಿಕೊಂಡರೇನೇ ಹಿತವೆನಿಸುತ್ತದೆ. ಅಂಥವನ್ನೆಲ್ಲಾ ನಾನು ಸಿನಿಮಾದಲ್ಲಿ ತರಲು ಬಯಸಿದ್ದೆ. ಆಗಿನ ಎಜುಕೇಷನ್ ಸಿಸ್ಟಂ ಕೂಡಾ ಗಂಟುಮೂಟೆಯ ಒಂದು ಎಲಿಮೆಂಟ್ ಆಗಿದೆ. ಅದು ಸಿನಿಮಾದ ಮುಖ್ಯ ಅಂಶ. ಈ ಚಿತ್ರದ ಕತೆ ನಡೆಯುವುದು ಕೂಡಾ ಸರ್ಕಾರಿ ಮತ್ತು ಅರೆ ಸರ್ಕಾರಿ ಶಾಲೆಯಲ್ಲಿ. ಸೆಲ್ ಫೋನ್ ಕೂಡಾ ಇಲ್ಲದ ದಿನಗಳನ್ನು ಸೃಷ್ಟಿಸೋದು ಒಂದು ರೀತಿಯಲ್ಲಿ ಸವಾಲಾಗಿತ್ತು. ಈಗಾಗಲೇ ಪ್ರದರ್ಶನಗೊಂಡಿರುವ ಜಾಗಗಳಲ್ಲಿ ನೋಡಿರುವ ಎಲ್ಲರೂ ಇಂಥದ್ದೊಂದು ಸಿನಿಮಾ ರೂಪಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇದು ಹೈಸ್ಕೂಲ್ ಕತೆ. ಆದರೆ ಇದರ ಜೀವಾಳ ಒಂದು ಪ್ರೇಮಕತೆ, ಎಲ್ಲರ ಜೀವನದಲ್ಲೂ ಒಮ್ಮೆಯಾದರೂ ಪ್ರೀತಿಯಾಗಿರುತ್ತದಲ್ಲಾ? ಅದರ ಅನುಭವ ಹೇಗಿರುತ್ತದೆ? ಮೊದಲ ಕಿಸ್ ಹುಡುಗಿಯ ಮನಸ್ಸಿನಲ್ಲಿ ಎಂಥಾ ಭಾವ ಮೂಡಿಸಿರುತ್ತದೆ? ಅನ್ನೋ ಸೂಕ್ಷ್ಮ ಅಂಶಗಳೆಲ್ಲಾ ಈ ಚಿತ್ರದಲ್ಲಿ ತೆರೆದುಕೊಂಡಿದೆ. ಪ್ರೀತಿಯಾದಾಗ ಅಲ್ಲಿ ಇಬ್ಬರಿರುತ್ತಾರೆ. ನಾವು ಇದುವರೆಗೂ ಅವನ ನೋಟದಲ್ಲಿ ಮಾತ್ರ ನೋಡುತ್ತಾ ಬಂದಿದ್ದೀವಿ. ಆದರೆ ಇಲ್ಲಿ ಅವಳ ನೋಟವನ್ನು ನಾವಿಲ್ಲಿ ಅನಾವರಣಗೊಳಿಸಿದ್ದೀವಿ.. ಈ ಕತೆ ಈಗಾಗಲೇ ನಾವು ಅನುಭವಿಸಿರೋದನ್ನು ಮತ್ತೆ ಅನುಭವಿಸುವಂತೆ ಮಾಡುತ್ತದೆ. ನಗಿಸುತ್ತದೆ, ಕಚಗುಳಿ ಇಡುತ್ತದೆ ಜೊತೆ ಜೊತೆಗೆ ಅಳಿಸುತ್ತೆ. ಆ ಮೂಲಕ ಪ್ರೀತಿಯ ನವಿರು ಭಾವಗಳನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ಇದೆನ್ನೆಲ್ಲಾ ಫೀಲ್ ಮಾಡಬೇಕೆಂದರೆ, ಈಗ ತೆರೆಗೆ ಬರುತ್ತಿರುವ ಗಂಟುಮೂಟೆ ಸಿನಿಮಾವನ್ನು ನೋಡಲೇಬೇಕು..
ಇದು ನಿರ್ದೇಶಕಿ ರೂಪಾರಾವ್ ಅವರ ಮಾತುಗಳು…


