ಹೈಸ್ಕೂಲು ದಿನಗಳೇ ಹಾಗೆ. ಆ ಹೊತ್ತಿನಲ್ಲಿ ಯಾವ ಹೀರೋ ಚೆಂದಗೆ ಕಾಣಿಸುತ್ತಾನೋ ಆತನ ಮೇಲೆ ಹುಡುಗಿಯರಿಗೆ ಲವ್ವು. ಮುಂಗಾರು ಮಳೆ ಬಂದ ಟೈಮಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನ ಕರ್ನಾಟಕದ ಅಗಣಿತ ಹೆಣ್ಮಕ್ಕಳು ಗುಪ್ತವಾಗಿ ಪ್ರೀತಿ ಮಾಡುತ್ತಿದ್ದರಲ್ಲಾ? ಚೆಲುವಿನ ಚಿತ್ತಾರ ಬಂದಾಗ ಎಳೇ ಹುಡುಗರೂ ಅಮೂಲ್ಯಾಳನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರಲ್ಲಾ? ಹಾಗೆ… ತೊಂಭತ್ತರ ದಶಕದಲ್ಲಿ ಹೈಸ್ಕೂಲು ಓದಿದ ಹುಡುಗಿಯರಿಗೆ ಹಿಂದಿಯ ಸಲ್ಮಾನ್ ಖಾನ್ ಅಚ್ಚುಮೆಚ್ಚಾಗಿದ್ದ. ಗಂಟು ಮೂಟೆಯ ಹುಡಿಗಯ ಮನಸ್ಸಿನಲ್ಲೂ ಅದೇ ಸಲ್ಲುವಿನ ಸೆಳೆತ. ಅದೇನು ಮಾಯೆಯೋ ಬಹುತೇಕರ ಬದುಕಿನಲ್ಲಿ ಸಿನಿಮಾ ಒಂದು ಪಾತ್ರವಾಗಿ, ಜೀವನದ ಒಂದು ಭಾಗವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ತನ್ನನ್ನು ಇಷ್ಟಪಡುವ ಹುಡುಗ ಆ ಹೀರೋ ಥರಾ ಇರಬೇಕು ಈ ಹೀರೋ ಥರ ಇರಬೇಕು ಅನ್ನೋದು ಸಾಕಷ್ಟು ಹೆಣ್ಣುಮಕ್ಕಳ ಆಂತರ್ಯದ ಬಯಕೆಯಾಗಿರುತ್ತದೆ. ಗಂಟು ಮೂಟೆಯ ಪ್ರಧಾನ ಪಾತ್ರವಾದ ಮೀರಾಳಿಗೂ ತನ್ನ ಹುಡುಗ ಸಲ್ಮಾನ್ ಖಾನನಂತಿರಬೇಕು ಅನ್ನೋ ಆಸೆ!

ಅಮೇಯುಕ್ತಿ ಸ್ಟೂಡಿಯೋಸ್ ಲಾಂಛನದಲ್ಲಿ ಸಹದೇವ್ ಕೆಲವಡಿ ಅವರು ನಿರ್ಮಿಸಿರುವ ‘ಗಂಟುಮೂಟೆ‘ ಚಿತ್ರ ಈ ವಾರ ರಾಜ್ಯಂದ್ಯಂತ ಬಿಡುಗಡೆಯಾಗಿದೆ. ಸಾಮಾನ್ಯವಾಗಿ, ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಪುರುಷ ಕೇಂದ್ರಿತ, ಗಂಡಸರ ದೃಷ್ಟಿಯಲ್ಲಿ ನಡೆಯುವ ಕಥೆಯನ್ನು ಹೊಂದಿರುತ್ತವೆ. ತೀರಾ ಅಪರೂಪಕ್ಕೆನ್ನುವಂತೆ ಕನ್ನಡದಲ್ಲಿ, ಹೆಣ್ಮಕ್ಕಳ ದೃಷ್ಟಿಕೋನದಿಂದ ರೂಪುಗೊಂಡಿರುವ ಸಿನಿಮಾ ಗಂಟುಮೂಟೆ. ಇಲ್ಲಿ ಅಬ್ಬರದ ಮ್ಯೂಸಿಕ್ಕಿಲ್ಲ, ಗದ್ದಲವೆಬ್ಬಿಸುವ ಡೈಲಾಗುಗಳಿಲ್ಲ. ಬದಲಿಗೆ, ಮನಸ್ಸಿಗೆ ಮುತ್ತಿಕ್ಕುವ ಕತೆ, ತೀರಾ ಫ್ರೆಶ್ ಎನಿಸುವ ಕಣ್ಣೆದುರೇ ನಡೆಯುತ್ತಿದೆ ಎನ್ನುವಷ್ಟರಮಟ್ಟಿಗೆ ಆಪ್ತವಾಗುವ ಚಿತ್ರಕತೆ, ಅದಕ್ಕೆ ಪೂರಕವಾದ ಮಾತುಗಳು, ಪಾತ್ರಗಳ ಸಹಜಾಭಿನಯವಿದೆ.

ಕಮರ್ಷಿಯಲ್ ಫಾರ್ಮುಲಾಗಳನ್ನು ಹೊಂದಿದ ಮಾಮೂಲಿ ಸಿನಿಮಾಗಳನ್ನು ರೂಪಿಸುವುದಕ್ಕಿಂತಾ ಯಾವುದೇ ಗಿಮಿಕ್ಕುಗಳಿಲ್ಲದ ಗಂಟುಮೂಟೆಯಂಥಾ ರಿಯಲಿಸ್ಟಿಕ್ ಸಿನಿಮಾವನ್ನು ಕಟ್ಟುವುದು ಯಾವುದೇ ನಿರ್ದೇಶಕರಿಗೆ ಸವಾಲಿನ ಕೆಲಸ. ಮಹಿಳಾ ನಿರ್ದೇಶಕಿ ಎನಿಸಿಕೊಂಡಿರುವ ರೂಪಾ ರಾವ್ ಅದನ್ನಿಲ್ಲಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಮೂಲಕ ನೈಜ ಕಥೆಯಾಧಾರಿದ ಸಿನಿಮಾಗಳನ್ನು ಜೀವಂತವಾಗಿ ರೂಪಿಸಬಲ್ಲೆ ಅನ್ನೋದನ್ನು ಗಂಟುಮೂಟೆಯ ಮೂಲಕ ಸಾಬೀತು ಮಾಡಿದ್ದಾರೆ.
ಹೈಸ್ಕೂಲು ಹುಡುಗಿಯೊಬ್ಬಳ ಒಳತುಡಿತಗಳನ್ನು ಅಷ್ಟೇ ನೈಜವಾಗಿ, ಎಲ್ಲೂ ನಟನೆ ಅನ್ನಿಸಿಕೊಳ್ಳದಂತೆ ಪಾತ್ರ ಪೋಷಣೆ ಮಾಡಿರುವ ತೇಜು ಬೆಳವಾಡಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಬೇಕು. ಯಾಕೆಂದರೆ, ಆಕೆ ಒಂದಿಷ್ಟು ಮುಜುಗರ ತೋರಿದ್ದರೂ ಸಿನಿಮಾ ಈ ಮಟ್ಟಿಗೆ ಶಕ್ತಿ ಪಡೆಯುತ್ತಿರಲಿಲ್ಲ.

ಸಹದೇವ್ ಕೆಲವಡಿ ಅವರ ಛಾಯಾಗ್ರಹಣ ಕಣ್ಣಿಗೆ ಕಟ್ಟುವಂತಿದೆ. ಅಪರಜಿತ್ ಸ್ರಿಸ್ ಸಂಗೀತ ನಿರ್ದೇಶನ ಹಿತವಾಗಿದೆ. ಈ ಚಿತ್ರಕ್ಕೆ ಪ್ರದೀಪ್ ನಾಯಕ್ ಅಚ್ಚುಕಟ್ಟಾದ ಸಂಕಲನ ಮಾಡಿದ್ದಾರೆ. ತೇಜು ಬೆಳವಾಡಿ, ನಿಶ್ಚಿತ್ ಕರೋಡಿ, ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ಮುಂತಾದವರ ನಟನೆ ಗಮನ ಸೆಳೆಯುವಂತಿದೆ.
ಒಟ್ಟಾರೆಯಾಗಿ ಎಲ್ಲ ವಯೋಮಾನದವರೂ ನೋಡಬಹುದಾದ ಮತ್ತು ನೋಡಲೇಬೇಕಾದ ಚಿತ್ರ ಗಂಟುಮೂಟೆ!

CG ARUN

ಪ್ರೀತಿ – ದ್ವೇಷಗಳ ಭರಾಟೆ!

Previous article

ಅಗ್ನಿಯಿಂದ ಎಗರಿ ಹಳ್ಳಕ್ಕೆ ಬಿದ್ದ ವಿಜಯ್ ಸೂರ್ಯ

Next article

You may also like

Comments

Leave a reply

Your email address will not be published. Required fields are marked *