ಹುಡುಗ ತನ್ನಿಷ್ಟದ ಹುಡುಗಿಗೆ ಗುಲಾಬಿ ಕೊಡಬಹುದು, ಪ್ರಪೋಸ್ ಮಾಡಬಹುದು, ಬೇಕುಬೇಕಂತಲೇ ಡಿಕ್ಕಿ ಹೊಡೀಬೋದು, ಕೈ ಸವರಬಹುದು, ತೊಡೆ ಮುಟ್ಟ ಬಹುದು.. ಅದೇ ಹುಡುಗಿ ಅಸಹ್ಯವಾಗಿ ನಡೆದುಕೊಳ್ಳುವ ಹುಡುಗನ ವಿರುದ್ಧ ಮುಖ ಕಿವುಚಬಾರದು, ಅವನ ಪ್ರೀತಿಯನ್ನು ಒಲ್ಲೆ ಅನ್ನಬಾರದು. ಮತ್ತೊಬ್ಬ ಹುಡುಗನೊಟ್ಟಿಗಂತೂ ಸ್ನೇಹ ಬೆಳೆಸಲೇಬಾರದು… ಒಂದು ವೇಳೆ ತನ್ನ ಆಶಯದಂತೆ ಆಕೆ ನಡೆದುಕೊಳ್ಳಲಿಲ್ಲ ಅಂದಾಗ ಅದೇ ಹುಡುಗ ಈ ಹುಡುಗಿಗೆ ಕೊಡುವ ಬಿರುದು ‘ಡಗಾರ್. ತಾನು ಇಷ್ಟಪಟ್ಟವಳನ್ನು ಹುಡುಗನೊಬ್ಬ ಡಾರ್ಲಿಂಗ್ ಎಂದರೆ, ತನ್ನನ್ನು ಒಪ್ಪಲಿಲ್ಲ ಅನ್ನೋ ಕಾರಣಕ್ಕೆ ಮತ್ತೊಬ್ಬ ಹಾದಿ ಬೀದಿಯಲ್ಲಿ ನಿಂತು ಡಗಾರ್ ಡಗಾರ್ ಅನ್ನುತ್ತಾನೆ. ಸಾಮಾನ್ಯವಾಗಿ ಹುಡುಗರು ಹೆಣ್ಮಕ್ಕಳ ಬಗ್ಗೆ ಸಲೀಸಾಗಿ ಬಳಸುವ ಹೇಸಿಗೆ ಪದವಿದು!
ಹಾಗಾದರೆ ಹೆಣ್ಮಕ್ಕಳು ತಾವಿಷ್ಟ ಪಟ್ಟ ಹುಡುಗರ ಜೊತೆ ಮಾತಾಡೋದು, ಕೈ ಕೈ ಹಿಡಿದು ಓಡಾಡೋದು, ರಮಿಸೋದು ತಪ್ಪಾ? ಅಷ್ಟು ಮಾಡಿದ ಕೂಡಲೇ ಹುಡುಗಿ ವೇಶ್ಯೆಯಂತೆ ಕಂಡುಬಿಡುತ್ತಾಳಾ? ಇಷ್ಟಕ್ಕೂ ಬದುಕಿನ ಅನಿವಾರ್ಯತೆಗಳಿಗಾಗಿ ಕಸುಬಿಗಿಳಿದ ಹೆಣ್ಣಿಗೆ ಸೂಳೆ ಅಂತಾ ಹೆಸರಿಟ್ಟವರ್ಯಾರು?
ಇಂಥ ನೂರೆಂಟು ಪ್ರಶ್ನೆಗಳಿಗೆಲ್ಲಾ ಉತ್ತರದಂತೆ ನಿಂತಿರುವ ಸಿನಿಮಾ ‘ಗಂಟುಮೂಟೆ. ಅದರಲ್ಲೂ ತೊಂಬತ್ತರ ದಶಕದಲ್ಲಿ ಹೈಸ್ಕೂಲು ಓದಿದ ಮಕ್ಕಳ ತಲ್ಲಣಗಳೇ ಬೇರೆ. ಆಗಿನ್ನೂ ಮೊಬೈಲು ಬಂದಿರಲಿಲ್ಲ. ಮೆಸೇಜುಗಳಲ್ಲಿ ಮರ್ದಿಸಿ, ವಾಟ್ಸಾಪಲ್ಲಿ ಚುಂಬಿಸುವ ಕಲ್ಪನೆಯೂ ಇರಲಿಲ್ಲ. ಕಣ್ಸನ್ನೆಗೇ ಜನ ಸಂಬಂಧ ಕಲ್ಪಿಸಿಬಿಡುತ್ತಿದ್ದ ಕಾಲವದು. ಇನ್ನು ಜೊತೆಯಾಗಿ ಸುತ್ತಿದವರ ಕತೆ ಮುಗಿದಂತೇ… ಈ ಎಲ್ಲಾ ಸೂಕ್ಷ್ಮಗಳು, ಹುಡುಗಿಯೊಬ್ಬಳ ದೃಷ್ಟಿಕೋನದಲ್ಲಿ ತೆರೆದುಕೊಳ್ಳುವ ಕತೆ ಗಂಟುಮೂಟೆಯದ್ದು. ನೋಡಿದ ಯಾರಿಗೇ ಆದರೂ ತಮ್ಮ ಹಳೇ ನೆನಪುಗಳೆಲ್ಲಾ ಅತ್ತಿಂದಿತ್ತ ಸರಿದು, ಆ ಕಾಲದ ಸೆಳೆತ, ರೋಮಾಂಚನ, ಖುಷಿ, ದುಃಖಗಳನ್ನೆಲ್ಲಾ ನೆನಪಿಸೋ ಅವರವರ ಕತೆ ಗಂಟುಮೂಟೆಯಲ್ಲಿ ಬೆಚ್ಚಗೆ ಅಡಗಿದೆ. ಈಗಾಗಲೇ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ಗಂಟು ಮೂಟೆಯ ಬಗ್ಗೆ ಪ್ರೇಕ್ಷಕರಲ್ಲಿ ಮಾತ್ರವಲ್ಲದೆ, ಸಿನಿಮಾ ತಂತ್ರಜ್ಞರು, ಕಲಾವಿದರ ವಲಯದಲ್ಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಟ ರಕ್ಷಿತ್ ಶೆಟ್ಟಿ ಕೂಡಾ ಇದು ಬರಿಯ ಸಿನಿಮಾವಲ್ಲ ಸುಂದರ ಕಾವ್ಯ. ಅದ್ಭುತ ನಟನೆಯ ಈ ಚಿತ್ರವನ್ನು ಪ್ರತಿಯೊಬ್ಬರೂ ನೋಡಲೇಬೇಕು ಎಂಬಿತ್ಯಾದಿಯಾಗಿ ಪ್ರತಿಕ್ರಿಯಿಸಿದ್ದಾರೆ. ನಾಯಕನಟಿ ಪಾವನ ಸೇರಿದಂತೆ ಅನೇಕರು ಗಂಟುಮೂಟೆಯನ್ನು ಅಪಾರವಾಗಿ ಮೆಚ್ಚಿದ್ದಾರೆ.
ನಿಜ. ಗಂಟುಮೂಟೆಯಂತಾ ಸಿನಿಮಾಗೆ ಚಿತ್ರರಂಗದವರ ಸಹಕಾರ ಕೂಡಾ ಅಗತ್ಯ. ತೀರಾ ಅಪರೂಪಕ್ಕೆ ಬರುವ ಇಂಥ ನೈಜತೆಯ ಸಿನಿಮಾಗಳು ಗೆದ್ದರೆ, ಇಂಥಾ ಹತ್ತು ಹಲವು ಪ್ರಯತ್ನಗಳಾಗುತ್ತವೆ. ಇಂಥದ್ದೊಂದು ಕಥೆಯನ್ನು ಹೇಳಲು ಧೈರ್ಯ ಮಾಡಿದ ನಿರ್ದೇಶಕಿ ರೂಪಾ ರಾವ್, ಪಾತ್ರಗಳನ್ನು ಎದೆಗಿಳಿಸಿಕೊಂಡು ನಟಿಸಿದ ತೇಜು ಬೆಳವಾಡಿ ಮತ್ತು ನಿಶ್ಚಿತ್ ಕೊರೊಡಿ ಜೋಡಿ, ದೃಶ್ಯಗಳನ್ನು ಕಣ್ಣಮುಂದೆ ತಂದಿಟ್ಟ ಛಾಯಾಗ್ರಾಹಕ ಸಹದೇವ್ ಅವರನ್ನು ಅಭಿನಂದಿಸಸಲೇಬೇಕು. ಗಂಟುಮೂಟೆಗೆ ಇನ್ನಷ್ಟು ಜಯವಾಗಲಿ…