ಕನ್ನಡ ಸಿನಿಮಾಗಳು ಹೊರ ರಾಷ್ಟ್ರಗಳಿಗೆ ಹೋಗಿ ಪ್ರದರ್ಶನ ಕಂಡು ಅಲ್ಲಿನ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕೆಲಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ದೇಶ ವಿದೇಶಗಳಲ್ಲಿ ನಡೆಯುವ ಫಿಲ್ಮ್ ಫೆಸ್ಟ್ ವಲ್, ವೆಬ್ ಫೆಸ್ಟ್, ಅಂತರಾಷ್ಟ್ರೀಯ ಸಿನಿಮೋತ್ಸವ ಇತ್ಯಾದಿ ಗಳಲ್ಲಿ ಪರಭಾಷೆಗಳ ಜತೆಗೆ ಕನ್ನಡ ಭಾಷೆಯೂ ತನ್ನ ಕಂಪನ್ನು ಸೂಸುವ ಪ್ರಯತ್ನವನ್ನು ಮಾಡುತ್ತಲೇ ಇದೆ.
ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಭರವಸೆಯನ್ನು ಮೂಡಿಸಿರುವ ಗಂಟು ಮೂಟೆ ಸಿನಿಮಾ ಇಂತಹುದೇ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಹೌದು ಗಂಟು ಮೂಟೆ ಸಿನಿಮಾ ನ್ಯೂಯಾರ್ಕ್ ಚಲನಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಇಲ್ಲಿಯವರೆಗೂ ಎರಡು ಕನ್ನಡ ಸಿನಿಮಾಗಳಷ್ಟೇ ಈ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದ್ದು, ಗಂಟು ಮೂಟೆ ಮೂರನೆಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶಾಲೆಯ ವಿದ್ಯಾರ್ಥಿನಿಯರ ಬದುಕನ್ನು ಹೇಳುವ ಈ ಸಿನಿಮಾ ಬಹಳ ವಿಶೇಷವಾಗಿ ಮೂಡಿಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿರುವ ರೂಪಾ ರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 2016ರಲ್ಲಿ ನಡೆದ ನ್ಯೂಯಾರ್ಕ್ ವೆಬ್ ಫೆಸ್ಟ್ ನಲ್ಲಿ ‘ದಿ ಅದರ್ ಲವ್ ಸ್ಟೋರಿ’ ಎಂಬ ವೆಬ್ ಸೀರಿಸ್ ಚಿತ್ರಕ್ಕಾಗಿ ರೂಪಾ ರಾವ್ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದುಕೊಂಡಿದ್ದರು. ಐಟಿ ಉದ್ಯಮದಲ್ಲಿದ್ದ ರೂಪಾ ಆ ಕೆಲಸವನ್ನು ಕ್ವಿಟ್ ಮಾಡಿ, ಸಿನಿಮಾರಂಗದಲ್ಲಿ ತೊಡಗಿಕೊಂಡರು. ಅನೇಕ ಕಿರುಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ನಿರ್ದೇಶಕಿ ಹಾಗೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.
ಉಳಿದಂತೆ ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ಮಗಳು ತೇಜು ಬೆಳವಾಡಿ ಗಂಟುಮೂಟೆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ನಿಶ್ಚಿತಾ ಕರೋಡಿ, ಮೈನ್ಲಿ, ಭಾರ್ಗವ್ ರಾಜು, ಸೂರ್ಯ ವಸಿಷ್ಠ, ಶರತ್ ಗೌಡ, ಶ್ರೀರಂಗ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಪ್ರದರ್ಶನ ಕಂಡು ಗಂಟುಮೂಟೆ ಸಿನಿಮಾ ಯಶಸ್ವಿಯಾಗಲೆಂದು ಸಿನಿಬಜ್ ಹಾರೈಸುತ್ತದೆ.