ಆರೆಂಜ್ ಪಿಕ್ಸಲ್ಸ್ ಲಾಂಛನದಲ್ಲಿ, ಕಿಶೋರ್ ಎ ಅರ್ಪಿಸಿ, ಬಿ.ಕೆ. ರಾಜಾರೆಡ್ಡಿ ಮತ್ತು ಪ್ರಸಾದ್ ರೆಡ್ಡಿ ಎಸ್ ಅವರು ನಿರ್ಮಿಸುತ್ತಿರುವ ಚಿತ್ರ ‘ಗರುಡ. ಈ ಹಿಂದೆ ‘ಸಿಪಾಯಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸಿದ್ಧಾರ್ಥ್ ಮಹೇಶ್ ಅವರ ಎರಡನೇ ಚಿತ್ರವಿದು.
ಸದ್ಯ ಈ ಚಿತ್ರದ ಖಡಕ್ ಟ್ರೇಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಪತ್ರಿಕಾಗೋಷ್ಟಿಯಲ್ಲಿ ರಘು ದೀಕ್ಷ್ಷಿತ್, ಶ್ರೀನಗರ ಕಿಟ್ಟಿ, ಐಂದ್ರಿತಾ ದಿಗಂತ್, ಆಶಿಕಾ ರಂಗನಾಥ್, ಆದಿ ಲೋಕೇಶ್, ರಂಗಾಯಣ ರಘು, ನಿರ್ದೇಶಕ ಧನಕುಮಾರ್, ಛಾಯಾಗ್ರಾಹಕ ಜೈ ಆನಂದ್, ಸಾಹಸ ನಿರ್ದೇಶಕ ರವಿವರ್ಮ, ಸಿಲ್ಲಿಲಲ್ಲಿ ಆನಂದ್, ಸುನೇತ್ರ ಪಂಡಿತ್, ರಾಜೇಶ್ ನಟರಂಗ ಮುಂತಾದವರು ಪಾಲ್ಗೊಂಡಿದ್ದರು.
‘ಕುಟುಂಬದಲ್ಲಿ ಒಂದು ಘಟನೆ ನಡೆಯುತ್ತದೆ. ಅದು ನಾಯಕನ ಹೆಗಲಿಗೆ ಸಾಮಾಜಿಕ ಜವಾಬ್ದಾರಿಯನ್ನು ವಹಿಸುತ್ತದೆ. ಅದು ಏನು ಅನ್ನೋದು ಗರುಡ ಸಿನಿಮಾದ ತಿರುಳು. ಈ ಚಿತ್ರವನ್ನು ನಮ್ಮ ತಂದೆ ನಿರ್ಮಿಸಿದ್ದಾರೆ. ಚಿತ್ರರಂಗಕ್ಕೆ ಸಾಕಷ್ಟು ಕನಸಿಟ್ಟಕೊಂಡು ಚಿತ್ರರಂಗಕ್ಕೆ ಬಂದಿದ್ದೀನಿ. ಇದು ನನ್ನ ಎರಡನೇ ಸಿನಿಮಾ. ಎಲ್ಲೂ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದೀನಿ ಎಂದು ನಾಯಕ ನಟ ಸಿದ್ಧಾರ್ಥ್ ಮಹೇಶ್ ನುಡಿದರು. ನಟ ಶ್ರೀನಗರ ಕಿಟ್ಟಿ ಮಾತನಾಡುತ್ತಾ “ನಾನು ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಮಾಡುತ್ತಾ ಬಂದಿದ್ದೀನಿ. ಆದರೆ, ಗರುಡ ನನ್ನ ವೃತ್ತಿ ಬದುಕಿಗೆ ಕಮರ್ಷಿಯಲ್ ಕಲರ್ ನೀಡಿ ನನ್ನ ಕೆರಿಯರ್ಗೆ ಬೇರೆ ದಾರಿ ನೀಡಿದೆ. ನನ್ನ ಹಾಗೂ ರಂಗಾಯಣ ರಘು ಕಾಂಬಿನೇಷನ್ ಸಾಕಷ್ಟು ಸಿನಿಮಾಗಳಲ್ಲಿ ವರ್ಕೌಟ್ ಆಗಿದೆ. ಈ ಚಿತ್ರದಲ್ಲೂ ಅದು ಮುಂದುವರೆಯುತ್ತದೆ ಎಂದರು. ತುಂಬಾ ಅಂತರದಲ್ಲಿ ಒಪ್ಪಿದ ಸಿನಿಮಾ ಗರುಡ. ಈ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದ್ದಾಗ ನನ್ನ ಮದುವೆಯನ್ನು ಅನೌನ್ಸ್ ಮಾಡಿಕೊಂಡಿದ್ದು ಯಾವತ್ತಿಗೂ ಮರೆಯಲಾರದಂಥ ಘಳಿಗೆ. ನನ್ನ ಮದುವೆ ಓಡಾಟಗಳಿಗೆ ಸ್ವಲ್ಪ ಅಡೆತಡೆಯಾದರೂ ಸಹ ಈ ಗರುಡ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ ಎಂದು ನಟಿ ಐಂದ್ರಿತಾ ರೇ ಗರುಡ ಸಿನಿಮಾಗೂ ತಮ್ಮ ಮದುವೆಗೂ ಇರುವ ನಂಟನ್ನು ಹೇಳಿಕೊಂಡರು.
ಮತ್ತೊಬ್ಬ ನಾಯಕನಟಿ ಆಶಿಕಾ ರಂಗನಾಥ್ ‘ಈ ಸಿನಿಮಾದಲ್ಲಿ ನನ್ನದು ಕಾಲೇಜ್ ಹುಡುಗಿ ಪಾತ್ರ. ಮನಸಲ್ಲಿ ಉಳಿಯೋ ಕ್ಯಾರೆಕ್ಟರ್ ಎಂದರು. ನಟ ಆದಿ ಲೋಕೇಶ್ “ಪರ್ಸನಲ್ಲಾಗಿ ಮನಸಿಗೆ ಟಚ್ ಮಾಡಿದ ಸಿನಿಮಾ ಗರುಡ. ರಿಲೀಸ್ ಆದ ಮೇಲೆ ಹೆಣ್ಮಕ್ಕಳು ನನ್ನನ್ನು ನೋಡಿದರೆ ಚಪ್ಪಲಿ ತಗೊಂಡು ಹೊಡೀತಾರೆ. ಈ ಚಿತ್ರದಲ್ಲಿ ನಿರ್ದೇಶಕ ಧನು ನನ್ನನ್ನು ರಾಕ್ಷಸನ ಥರ, ಪ್ರಾಣಿಯ ರೀಥಿ ತೋರಿಸಿದ್ದಾರೆ. ಆದರೆ ಗರುಡ ಸಿನಿಮಾ ತಂಡದವರು ಎಲ್ಲರನ್ನೂ ಮನೆಯ ಸದಸ್ಯರಂತೆ ನೋಡಿಕೊಂಡಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮಾ ನಮ್ಮನ್ನೆಲ್ಲ ರಾತ್ರಿ ಹಗಲೆನ್ನದೆ ರುಬ್ಬಿದ್ದಾರೆ. ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ‘ಗರುಡ‘ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವುದಲ್ಲದೆ, ನಟನೆಯನ್ನೂ ಮಾಡಿದ್ದಾರೆ. ಭಾರತದ ಜೇಮ್ಸ್ ಬಾಂಡ್ ಅಂತಲೇ ಖ್ಯಾತಿಗಳಿಸಿರುವ ಭಾರತದ ಬೇಹುಗಾರಿಕಾ ಅಧಿಕಾರಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ಅವರನ್ನು ಹೋಲುವ ಪಾತ್ರದಲ್ಲಿ ರಘುದೀಕ್ಷಿತ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನು ಛಾಯಾಗ್ರಾಹಕ ಜೈ ಆನಂದ್ ಮಾತಾಡುತ್ತಾ ‘ಈ ವರೆಗೂ ೨೩ಸಿನಿಮಾದಲ್ಲಿ ಕೆಲಸ ಮಾಡಿದ್ದೀನಿ. ಅದರಲ್ಲಿ ಹರ್ಷ, ಮಹೇಶ್ ರಾವ್, ಲಕ್ಕಿ ಶಂಕರ್ ಸೇರಿದಂತೆ ಐದು ಜನ ಬೆಸ್ಟ್ ಡೈರೆಕ್ಟರುಗಳಿದ್ಧಾರೆ. ಈಗ ಧನಕುಮಾರ್ ಆ ಐದು ಜನರಲ್ಲಿ ಒಬ್ಬರಾಗಿದ್ದಾರೆ. ಎಂದರು.
ಕಳೆದ ಹನ್ನೆರಡು ವರ್ಷಗಳಿಂದ ಸ್ವತಂತ್ರ ನೃತ್ಯನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಧನಕುಮಾರ್ ಗರುಡ ಸಿನಿಮಾವನ್ನು ನಿರ್ದೇಶಿಸಿಸುತ್ತಿದ್ದಾರೆ. ಸಿನಿಮಾದ ಕಂಟೆಂಟ್ ದೊಡ್ಡದು. ಹೆಚ್ಚು ಲೊಕೇಶನ್ಗಳು, ಕಲಾವಿದರು ಎಲ್ಲಾ ಇರುವುದರಿಂದ ಸತತ ಮೂರು ವರ್ಷಗಳ ಕಾಲ ಗರುಡ ಚಿತ್ರಕ್ಕಾಗಿ ಸಮಯ ತೆಗೆದುಕೊಂಡಿದ್ದೇವೆ ಎನ್ನುವ ನಿರ್ದೇಶಕ ಧನಕುಮಾರ್ ಅವರಿಗೆ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಸಿದ್ಧಾರ್ಥ್ ಮಹೇಶ್ ಯಾವ ಸಮಸ್ಯೆಯೂ ಆಗದಂತೆ ನೋಡಿಕೊಂಡು ಸಲೀಸಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟರಂತೆ.
ಗರುಡ ಚಿತ್ರದ ಟ್ರೇಲರ್ ಅನ್ನು ರಘು ದೀಕ್ಷಿತ್ ಅವರ ಯೂಟ್ಯೂಬ್ ಚಾನೆಲ್ಲಿನಲ್ಲೇ ಬಿಡುಗಡೆ ಮಾಡಲಾಗಿದ್ದು, ಸದ್ಯದಲ್ಲೇ ಗರುಡ ತೆರೆಗೆ ಬರುವ ತಯಾರಿ ನಡೆಸುತ್ತಿದೆ.
ಧನಕುಮಾರ್ ನಿರ್ದೇಶನದ ಗರುಡ ಚಿತ್ರಕ್ಕೆ ರಘುದೀಕ್ಷಿತ್ ಸಂಗೀತ, ಜೈ ಆನಂದ್ ಛಾಯಾಗ್ರಹಣ, ದೀಪು ಎಸ್ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನದ ಈ ಚಿತ್ರದ ತಾರಾಬಳಗದಲ್ಲಿ ಸಿದ್ಧಾರ್ಥ್ ಮಹೇಶ್, ಶ್ರೀನಗರ ಕಿಟ್ಟಿ, ಐಂದ್ರಿತಾ ರೇ, ಆಶಿಕಾ ರಂಗನಾಥ್, ಕಾಮ್ನಾ ಜೇಟ್ಮಲಾನಿ, ರಂಗಾಯಣ ರಘು, ಆದಿಲೋಕೇಶ್, ರಾಜೇಶ್ನಟರಂಗ, ರವಿಶಂಕರ್ ಗೌಡ, ರಘುದೀಕ್ಷಿತ್ ಮುಂತಾದವರಿದ್ದಾರೆ.