ಕಿಟ್ಟಿಗೆ ಮಾರ್ಕೆಟ್ ಇಲ್ಲ ಅಂತೇಳಿ ಬಹುತೇಕರು ಮೂಲೆಗೆ ತಿಳ್ಳಿಬಿಟ್ಟಿದ್ದರು. ಇದರ ನಡುವೆ ನನಗೆ ಕಿಟ್ಟೀನೇ ಬೇಕು ಅಂತಾ ಹಠ ಹಿಡಿದು, ಅವರನ್ನು ಕರೆತಂದು, ಅವರಿಗೊಪ್ಪುವ ಪಾತ್ರ ಮಾಡಿಸಿ, ಈಗ ವ್ಯಾಪಾರದಲ್ಲೂ ಗೆಲ್ಲುತ್ತಿರುವ ನಿರ್ದೇಶಕನ ಹೆಸರು ಸೂರಾ
ಶ್ರೀನಗರ ಕಿಟ್ಟಿ ಅಂದರೆ ಯಾರು ಅನ್ನೋದನ್ನೇ ಹೆಚ್ಚೂಕಮ್ಮಿ ಕನ್ನಡ ಚಿತ್ರರಂಗ ಮತ್ತು ಪ್ರೇಕ್ಷಕರು ಮರೆತುಬಿಟ್ಟಿದ್ದರು. ಇಂತಿ ನಿನ್ನ ಪ್ರೀತಿಯ, ಸವಾರಿ, ಸಂಜು ವೆಡ್ಸ್ ಗೀತಾ ಎನ್ನುವ ಮೂರು ಸಿನಿಮಾಗಳನ್ನು ಹೊರತುಪಡಿಸಿ ಕಿಟ್ಟಿ ಹೀರೋ ಆಗಿ ನಟಿಸಿದ ಯಾವ ಸಿನಿಮಾಗಳೂ ತಲೆಯೆತ್ತಲಿಲ್ಲ. ಮೂರು ಸಿನಿಮಾಗಳ ಗೆಲುವಿನ ನೆರಳಲ್ಲಿ ಕಿಟ್ಟಿ ತಾನೆ ಎಷ್ಟು ಅಂತಾ ದಿನ ಸವೆಸಲು ಸಾಧ್ಯ? ಬಂದ ಸಿನಿಮಾಗಳೆಲ್ಲಾ ದಬದಬನೆ ಬಿದ್ದು ಹೋದವು. ಮಾರ್ಕೆಟ್ಟು ಕಳೆದುಕೊಂಡ ಹೀರೋಗಳ ಕಡೆ ನಮ್ಮ ಚಿತ್ರರಂಗದವರು ತಿರುಗಿಯೂ ನೋಡೋದಿಲ್ಲ. ಕ್ರಮೇಣ ಕಿಟ್ಟಿ ವಿಚಾರದಲ್ಲೂ ಹೀಗೇ ಆಗಿಬಿಡ್ತು. ಒಂದು ಕಡೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಡಿಮೆಯಾಯ್ತು. ಕುಡಿತ ಕೂಡಾ ಜಾಸ್ತಿ ಮಾಡಿಕೊಂಡರು ಕಿಟ್ಟಿ. ಇದನ್ನೆಲ್ಲಾ ನೋಡಿದವರು ಇನ್ನು ಕಿಟ್ಟಿ ಕತೆ ಮುಗೀತು ಅಂದುಕೊಂಡಿದ್ದು ನಿಜಾ. ಕಡೇಪಕ್ಷ ಮೊದಲಿನಂತೆ ವಿಲನ್ ಪಾತ್ರದಲ್ಲಾದರೂ ಮುಂದುವೆಯಬಾರದಾ ಅಂದುಕೊಳ್ಳುವ ಹೊತ್ತಿಗೇ ಅವತಾರ ಪುರುಷದಲ್ಲಿ ಮಂತ್ರವಾದಿಯ ಗೆಟಪ್ಪಲ್ಲಿ ಕಾಣಿಸಿಕೊಂಡರು. ಇನ್ನು ಕಿಟ್ಟಪ್ಪ ಇದೇ ರೀತಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮುಂದುವರಿಯಬಹುದು ಅಂದುಕೊಳ್ಳುವ ಹೊತ್ತಿಗೇ ಅನೌನ್ಸ್ ಆಯಿತು ನೋಡಿ ಆ ಚಿತ್ರ….
ಅದು ʻಗೌಳಿʼ… ಈ ಚಿತ್ರದ ಪೋಸ್ಟರ್ ಅನಾವರಣಗೊಂಡಾಗಲೇ ಕಿಟ್ಟಿಗೆ ಶುಕ್ರದೆಸೆ ಶುರುವಾಯ್ತು ಅನ್ನೋ ಸೂಚನೆ ಸಿಕ್ಕಿತ್ತು. ಆ ನಂತರ ಬಂದ ಟೀಸರ್, ಹಾಡುಗಳು ಕೂಡಾ ಅದನ್ನು ಪುಷ್ಟೀಕರಿಸುವಂತಿವೆ. ಕಿಟ್ಟಿ ಮಾರ್ಕೆಟ್ಟು ಮತ್ತೆ ಕುದುರಲಿದೆ ಅನ್ನೋದು ಖಚಿತಗೊಳ್ಳಲೂ ಕಾರಣವಿದೆ. ಅದೇನೆಂದರೆ, ʻಗೌಳಿʼ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸು ಬರೋಬ್ಬರಿ ಒಂದೂಮುಕ್ಕಾಲು ಕೋಟಿಗೆ ಸೇಲ್ ಆಗಿದೆ. ಇನ್ನು, ಇತರೆ ಭಾಷೆಗಳ ಡಬ್ಬಿಂಗು, ಸ್ಯಾಟಲೈಟು, ಡಿಜಿಟಲ್ಲು ಅಂತೆಲ್ಲಾ ವ್ಯವಹಾರ ಮುಗಿದರೆ ಬಹುಶಃ, ಚಿತ್ರ ಬಿಡುಗಡೆಗೆ ಮುಂಚೆಯೇ ನಿರ್ಮಾಪಕರು ಲಾಭದಲ್ಲಿರುತ್ತಾರೆ.
ಕಿಟ್ಟಿಗೆ ಮಾರ್ಕೆಟ್ ಇಲ್ಲ ಅಂತೇಳಿ ಬಹುತೇಕರು ಮೂಲೆಗೆ ತಿಳ್ಳಿಬಿಟ್ಟಿದ್ದರು. ಇದರ ನಡುವೆ ನನಗೆ ಕಿಟ್ಟೀನೇ ಬೇಕು ಅಂತಾ ಹಠ ಹಿಡಿದು, ಅವರನ್ನು ಕರೆತಂದು, ಅವರಿಗೊಪ್ಪುವ ಪಾತ್ರ ಮಾಡಿಸಿ, ಈಗ ವ್ಯಾಪಾರದಲ್ಲೂ ಗೆಲ್ಲುತ್ತಿರುವ ನಿರ್ದೇಶಕನ ಹೆಸರು ಸೂರಾ. ಕಳೆದ ಹದಿನೈದಕ್ಕೂ ಹೆಚ್ಚು ವರ್ಷಗಳಿಂದ ಫೋಟೋಗ್ರಫಿ ಸೇರಿದಂತೆ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿರುವ ಸೂರಾ ಮೊದಲ ಸಿನಿಮಾದಲ್ಲೇ ಎದ್ದುನಿಲ್ಲುವಂತೆ ಕಾಣುತ್ತಿದ್ದಾರೆ.
ಹಾಕಿದ ಬಂಡವಾಳವನ್ನು ವಾಪಾಸು ತಂದುಕೊಡುವ ನಿರ್ದೇಶಕ ಚಿತ್ರರಂಗದ ನಿಜವಾದ ಹೀರೋ. ಸದ್ಯ ಅಂಥವರ ಪೈಕಿ ಸೂರಾ ಮುಂದೆ ನಿಂತಿದ್ದಾರೆ. ಅದೂ ನಿರ್ದೇಶನದ ಮೊದಲ ಸಿನಿಮಾದಲ್ಲೇ ಅನ್ನೋದು ವಿಶೇಷ. ಮಾರ್ಕೆಟ್ಟು ಕಳೆದುಕೊಂಡಿದ್ದ ಹೀರೋ, ಹೊಚ್ಚಹೊಸ ನಿರ್ದೇಶಕನನ್ನು ನಂಬಿ ಹಣ ಹೂಡಿಕೆ ಮಾಡಿದ ನಿರ್ಮಾಪಕ ರಘು ಸಿಂಗಂ ಅವರ ಧೈರ್ಯ ದೊಡ್ಡದು. ಇವರ ಸಿನಿಮಾ ಆಸಕ್ತಿ ನೋಡಿದರೆ ಇವರ ಸೋಹನ್ ಫಿಲಂ ಫ್ಯಾಕ್ಟರಿ ಕನ್ನಡದ ಮಟ್ಟಿಗೆ ಮತ್ತೊಂದು ಹೊಂಬಾಳೆಯಾಗುತ್ತದಾ ಅನ್ನಿಸುವಂತಿದೆ.
No Comment! Be the first one.