ಯಾವುದೇ ಘಟನಾವಳಿಗಳು ನಡೆದರೂ ಮುಗಿಬಿದ್ದು ರೀಲು ಸುತ್ತಲು ಸಿನಿಮಾ ಮಂದಿ ಸದಾ ತಯಾರಾಗಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಇಂಥಾ ಪ್ರಕರಣಗಳು ದೃಷ್ಯಗಳಾದಾಗ ತಪ್ಪು ಸಂದೇಶ ರವಾನೆಯಾಗೋದೇ ಹೆಚ್ಚು. ಇಂಥಾದ್ದೊಂದು ಅವಘಡ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣದ ವಿಚಾರದಲ್ಲಿಯೂ ನಡೆಯುತ್ತದೆ ಎಂಬುದನ್ನು ಗೌರಿ ಸಹೋದರಿ, ನಿರ್ದೇಶಕಿ ಕವಿತಾ ಲಂಕೇಶ್ ಮುಂಚೆಯೇ ಅಂದಾಜಿಸಿದ್ದರು.
ತಮ್ಮ ಸಹೋದರಿ ಗೌರಿ ಹತ್ಯೆ ಕೇಸು ನ್ಯಾಯಾಲಯದಲ್ಲಿರೋದರಿಂದ ಯಾವ ಸಿನಿಮಾಗಳಲ್ಲಿಯೂ ಈ ಪ್ರಕರಣದ ಯಾವಬುದೇ ಎಳೆ ಬಳಸಿಕೊಳ್ಳ ಬಾರದು ಅಂತ ಕವಿತಾ ಆರಂಭದಲ್ಲಿಯೇ ಹೇಳಿದ್ದರು. ಇದೀಗ ಚಿತ್ರವೊಂದರಲ್ಲಿ ಅದು ಬಳಕೆಯಾಗಿರೋ ಸೂಚನೆ ಸಿಕ್ಕಿರೋದರಿಂದ ಅವರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಕಾರಣವಾಗಿರೋದು ಮಿಸ್ಟರ್ ನಟವರ್‌ಲಾಲ್ ಎಂಬ ಸಿನಿಮಾ. ಲವ ನಿರ್ದೇಶನದ ಈ ಚಿತ್ರದಲ್ಲಿ ಟಗರು ಸರೋಜಾ ಖ್ಯಾತಿಯ ತ್ರಿವೇಣಿ ಗೌರಿ ಲಂಕೇಶ್ ಪಾತ್ರ ನಿರ್ವಹಿಸುತ್ತಿದ್ದಾರೆಂಬ ರೂಮರುಗಳೆದ್ದಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿರೋ ಕವಿತಾ ಲಂಕೇಶ್ ತಮ್ಮ ಅಕ್ಕನ ಹತ್ಯೆಯ ಬಗ್ಗೆ, ಗೌರಿಯವರ ಬಗ್ಗೆ ಯಾವುದೇ ವಿಚಾರವನ್ನು ಬಳಸಿಕೊಳ್ಳದಂತೆ ತಡೆ ಹಿಡಿಯುವಂತೆ ವಾಣಿಜ್ಯ ಮಂಡಳಿಗೆ ದೂರು ನೀಡಿ ಕೇಳಿಕೊಂಡಿದ್ದಾರೆ.
ನಿರ್ದೇಶಕ ಲವ ಕುಮಾರ್ ತಮ್ಮ ಚಿತ್ರದಲ್ಲಿ ಗೌರಿಯವರ ಬಗೆಗಿನ ಯಾವ ವಿಚಾರಗಳೂ ಇಲ್ಲ ಅಂತ ಹೇಳಿದ್ದಾರಾದರೂ ಇದರ ಸುತ್ತ ನಾನಾ ಗುಮಾನಿಗಳೇಳುತ್ತವೆ. ಈ ಚಿತ್ರ ತಂಡ ಸುಖಾ ಸುಮ್ಮನೆ ಗೌರಿಲಂಕೇಶ್ ಅವರ ಹತ್ಯೆ ಪ್ರಕರಣವನ್ನಿಟ್ಟಿಕೊಂಡು ಪಬ್ಲಿಸಿಟಿ ಸ್ಟಂಟ್ ಮಾಡಿತಾ ಅಥವಾ ಗೌರಿ ಹತ್ಯೆ ಕುರಿತಾದ ವಿಚಾರ ನಿಜಕ್ಕೂ ಈ ಚಿತ್ರದಲ್ಲಿದೆಯಾ ಎಂಬುದು ವಾಣಿಜ್ಯ ಮಂಡಳಿಯ ವಿಚಾರಣೆಯ ನಂತರ ಹೊರಬೀಳಬೇಕಿದೆ.
#
No Comment! Be the first one.