ಇಂಥದ್ದೊಂದು ಪ್ರಕರಣ ನಡೆದು ಬಹಳ ದಿನಗಳಾಗಿದ್ದವು. ಬಿಡುಗಡೆಗೂ ಮುಂಚೆ ಸಿನಿಮಾದ ಫುಟೇಜ್ ಲೀಕ್ ಆಗೋದು ಈಗ ತುಂಬಾನೇ ವಿರಳ. ಸ್ಟೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಅವರು ತಮ್ಮ ಮಗ ಸಮರ್ಜಿತ್ ಗಾಗಿ ರೂಪಿಸಿರುವ ಗೌರಿ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಅದೇನು ಯಡವಟ್ಟಾಯ್ತೋ ಏನೋ ಈ ಹೊತ್ತಲ್ಲಿ ಗೌರಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ತುಣುಕೊಂದು ಟೊರೆಂಟ್‌ನಲ್ಲಿ ಅಪ್‌ಲೋಡ್ ಆಗಿದೆ. ಕಾಕತಾಳೀಯ ಎನ್ನುವಂತೆ ಇತ್ತೀಚೆಗೆ ಭಯಾನಕ ಸುದ್ದಿಯಲ್ಲಿರುವ ದರ್ಶನ್ ಪ್ರಕರಣದ ಶೆಡ್ ಸೀನ್ ಇಲ್ಲೂ ಅನಾವರಣಗೊಂಡಿದೆ.
ಈ ದೃಶ್ಯದಲ್ಲಿ ʻನಿನ್ನ ಅಪ್ಪನಿಗೆ ಈಗಾಗಲೇ ಬುದ್ದಿ ಕಲಿಸಿದ್ದೀನಿʼ ಅಂಥಾ ವಿಲನ್ ಹೇಳುತ್ತಾನೆ. ಅದಕ್ಕೆ ಹೀರೋ ಸಮರ್ ʻಪ್ರತಿಯೊಬ್ಬರೂ ತಮ್ಮ ತಂದೆಯನ್ನು ಹೀರೋ ಅಂದುಕೊಂಡಿರುತ್ತಾರೆ. ಅವರಿಗೆ ನೋವು ಮಾಡಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ತಾರೆʼ ಎನ್ನುವ ರೀತಿಯಲ್ಲಿ ಮಾತಾಡುತ್ತಾನೆ.
ಒಂದು ಕಾಲದಲ್ಲಿ ಇಂದ್ರಜಿತ್ ಲಂಕೇಶ್ ದರ್ಶನ್‌ಗಾಗಿ ಸಿನಿಮಾವೊಂದನ್ನು ನಿರ್ದೇಶಿಸಿದ್ದರು. ಅದು ಲಂಕೇಶ್ ಪತ್ರಿಕೆ. ದರ್ಶನ್ ಯಾರೊಟ್ಟಿಗೆ ತಾನೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದರು ಹೇಳಿ. ಯಾರು ತನ್ನನ್ನು ತಿದ್ದುತ್ತಾರೋ, ತಾನು ಮಾಡಿದ ತಪ್ಪನ್ನು ಬೊಟ್ಟು ಮಾಡಿ ತೋರಿಸುತ್ತಾರೋ ಅವರ ಮೇಲೆಲ್ಲಾ ಜಿದ್ದು ಸಾಧಿಸುವುದು, ದ್ವೇಷ ಕಾರುವುದು ಈತನ ಹುಟ್ಟುಗುಣದಂತಿದೆ. ಇಂದ್ರಜಿತ್ ಲಂಕೇಶ್ ಅವರ ಮೇಲೆ ದರ್ಶನ್ ಬುಸ್ ಅಂದಿದ್ದೂ ಅದೇ ಕಾರಣಕ್ಕೆ. ಯಾವುದೇ ಕೆಲಸಗಾರರು, ಕಾರ್ಮಿಕರನ್ನು ಗೌರವಿಸಬೇಕಾದ್ದು ಮನುಷ್ಯ ಅನ್ನಿಸಿಕೊಂಡವನ ಮುಖ್ಯ ಜವಾಬ್ದಾರಿ. ಅದರಲ್ಲೂ ಹೊಟೇಲ್ ಸಪ್ಲೇಯರ್ ಗಳನ್ನು ಯಾರೇ ಆಗಲಿ, ಕೈಮುಗಿದು ಗೌರವಿಸಬೇಕು. ಕೂತಿದ್ದ ಜಾಗಕ್ಕೆ ಅನ್ನ-ಆಹಾರಗಳನ್ನು ತಂದುಕೊಡುವ ಶ್ರೇಷ್ಠ ಕೆಲಸ ಅವರದ್ದು. ಆದರೆ ದರ್ಶನ್ ದುರಹಂಕಾರ ಯಾವ ಮಟ್ಟದ್ದು ಅಂದರೆ, ಅದೊಂದು ದಿನ ಹೊಟೇಲಿನ ವೇಯ್ಟರ್ ಮೇಲೆ ರಾಕ್ಷಸನಂತೆ ಎರಗಿದ್ದರು. ಆ ಹುಡುಗನ ನಸೀಬು ಚನ್ನಾಗಿತ್ತು. ಜೀವ ಉಳಿಸಿಕೊಂಡಿದ್ದ. ಇಲ್ಲದಿದ್ದಲ್ಲಿ, ದರ್ಶನ್ ಅವತ್ತೇ ಜೈಲುಪಾಲಾಗಬೇಕಿತ್ತು. ಇಂಥದ್ದೊಂದು ಪ್ರಕರಣವನ್ನು ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಯಲಿಗೆಳೆದಿದ್ದರು. ಯಥಾ ಪ್ರಕಾರ ಇದರಿಂದ ನಖಶಿಖಾಂತ ಉರಿದುಕೊಂಡಿದ್ದ ದರ್ಶನ್ ಇಂದ್ರಜಿತ್ ಅವರ ವಿರುದ್ಧ ಮಾಡಿಷ ಷಡ್ಯಂತ್ರ ಒಂದಾ ಎರಡಾ? ಕಡೆಗೆ ದರ್ಶನ್ ಮಾತಾಡಿದ್ದ ಹೊಲಸು ಸಂಭಾಷಣೆಯ ಆಡಿಯೋವೊಂದು ಮಾಧ್ಯಮಗಳ ಕೈಗೆ ಸಿಕ್ಕಿತು. ಮೀಡಿಯಾದವರ ಬಗ್ಗೆ ಕೆಟ್ಟಾ ಕೊಳಕಾಗಿ ಮಾತಾಡಿದ್ದ ಆ ವಿಡಿಯೋದಿಂದ ದರ್ಶನ್ ವೃತ್ತಿ ಬದುಕಿಗೆ ಬಹುದೊಡ್ಡ ಡ್ಯಾಮೇಜ್ ಆಗಿತ್ತು. ಕಡೆಗೊಂದು ದಿನ ಮೀಡಿಯಾ ಇಲ್ಲದಿದ್ದರೆ ತನ್ನ ಸಿನಿಮಾ ಮಕಾಡೆ ಮಲಗುತ್ತದೆ ಎನ್ನುವ ಸತ್ಯದ ದರ್ಶನವಾಗಿತ್ತು. ಮಾಧ್ಯಮದ ಕೆಲವರ ಮುಂದೆ ನಿಂತು ದರ್ಶನ್ ಕ್ಷಮೆ ಯಾಚಿಸಿದ್ದರು. ಆ ನಂತರವೇ ಕಾಟೇರ ಎನ್ನುವ ಚಿತ್ರ ಗೆಲ್ಲಲು ಸಾಧ್ಯವಾಗಿತ್ತು. ಸದ್ಯ ರಿಲೀಸಾಗಿರುವ ಕ್ಲಿಪ್ ನೋಡಿದರೆ, ದರ್ಶನ್ ಮಾಡಿದ್ದ ಕುಚೇಷ್ಟೆಗಳಿಗೆ ಇಂದ್ರಜಿತ್ ಉತ್ತರ ಕೊಟ್ಟಂತಿದೆ.
ಸದ್ಯ ದರ್ಶನ್ ಅಭಿಮಾನಿಗಳು ಅನ್ನಿಸಿಕೊಂಡ ಕೆಲವರು ʻನಮ್ಮ ಬಾಸು ಜೈಲು ಪ್ರವಾಸ ಮುಗಿಸಿಕೊಂಡುಬರೋ ತನಕ ಬೇರೆ ಯಾವ ಸಿನಿಮಾನೂ ನೋಡಲ್ಲʼ ಅಂತಾ ತಲೆ ಬುಡ ಇಲ್ಲದ ಮಾತಾಡಿ ಎಲ್ಲರ ನಗೆಪಾಟಲಿಗೀಟಾಗಿದ್ದಾರೆ. ʻದರ್ಶನ್ ಮಾಡಬಾರದ್ದು ಮಾಡಿ ಜೈಲಿಗೆ ಹೋಗೋದಕ್ಕೂ, ಜನ ಸಿನಿಮಾ ನೋಡೋದಕ್ಕೂ ಏನು ಸಂಬಂಧ?ʼ ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ನಡುವೆಯೇ ರಿಲೀಸಾಗಿರುವ ದುನಿಯಾ ವಿಜಯ್ ಅವರ ಭೀಮ ಅಮೋಘವಾಗಿ ಗೆದ್ದಿದೆ. ಜಯ ಯಾವುದೋ ಕಾರಣಕ್ಕೆ ಥೇಟರಿಗೆ ಬರದೇ ಇದ್ದ ಸಂದರ್ಭವನ್ನು ʻದರ್ಶನ್ ಅವರ ಅಭಿಮಾನಿಗಳ ಹೆಸರಿನ ಕೆಲವು ಮಂದಿʼ ತಮಗೆ ಬೇಕಾದಂತೆ ಬಳಸಿಕೊಂಡಿದ್ದರು. ಸದ್ಯ ಭೀಮ ಅಂಥವರಿಗೆ ಬಗಿನಿ ಗೂಟ ಮಡಿದ್ದಾನೆ. ಈ ವಾರ ತೆರೆಗೆ ಬರಲಿರುವ ಗೌರಿ-ಗಣೇಶ್ ಕೂಡಾ ಈ ಗೆಲುವಿನ ಹಾದಿನಯನ್ನು ಮುಂದುವರೆಸುವಂತಾಗಲಿ…!
Leave a Reply
You must be logged in to post a comment.