ನಮ್ಮ ನಡುವಿನ, ನಮ್ಮೊಳಗಿನ ಪಾತ್ರಗಳನ್ನೇ ತೆರೆ ಮೇಲೆ ಅಭಿನಯಿಸೋ ಮೂಲಕ ಎಲ್ಲ ವಿಧದ ಪ್ರೇಕ್ಷಕರನ್ನೂ ಸೆಳೆದುಕೊಂಡಿರುವವರು ಗೋಲ್ಡನ್ ಸ್ಟಾರ್ ಗಣೇಶ್. ಸಾಮಾನ್ಯವಾಗಿ ಜಾಲಿ ಮೂಡಿನ ಹುಡುಗನಾಗಿ, ಲವರ್ ಬಾಯ್ ಆಗಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಬಂದಿರೋ ಅವರು ‘ಗೀತಾ’ ಚಿತ್ರದ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಲಿದ್ದಾರಾ? ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಈ ಚಿತ್ರದ ಬಗ್ಗೆ ಇಡೀ ಚಿತ್ರರಂಗ ಮಾತ್ರವಲ್ಲದೆ, ಪ್ರೇಕ್ಷಕ ವಲಯದಲ್ಲೂ ವ್ಯಾಪಕ ನಿರೀಕ್ಷೆಗಳಿವೆ.
ಸಯದ್ ಸಲಾಂ ಮತ್ತು ಶಿಲ್ಪ ಗಣೇಶ್ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಹಲವಾರು ಬಗೆಯ ವಿಶೇಷತೆಗಳಿವೆ. ನಿರ್ದೇಶಕ ವಿಜಯ್ ನಾಗೇಂದ್ರ ಈ ಹಿಂದೆ ಸಂತೋಷ್ ಆನಂದ್ರಾಮ್ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನೈಜ ಘಟನೆಗಳ ಪ್ರೇರಣೆ ಪಡೆದು, ಪ್ರೀತಿ, ಪ್ರೇಮ, ಸೆಂಟಿಮೆಂಟು, ಭಾಷಾಭಿಮಾನ ಹೀಗೆ ಒಂದು ಸಿನಿಮಾದಲ್ಲಿ ಸಾಕಷ್ಟು ಅಂಶಗಳನ್ನು ಸೇರಿಸಿ ‘ಗೀತಾ’ ಚಿತ್ರವನ್ನು ಕಟ್ಟಿದ್ದಾರೆ.
ಗೀತಾ ಬಹುಶಃ ಗಣೇಶ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಶ್ರಮ ವಹಿಸಿ ಮಾಡಿರುವ ಸಿನಿಮಾ. ಈ ಚಿತ್ರಕ್ಕಾಗಿ ಗೋಕಾಕ್ ಚಳವಳಿ, ಗೋಲಿಬಾರ್’ನಂಥ ದೃಶ್ಯಗಳನ್ನು ಮರುಸೃಷ್ಟಿಸಲಾಗಿದೆ. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿರುವ ಸಿನಿಮಾ ಎದುರು ಪರಭಾಷೆಯ ಸಿನಿಮಾ ಅಡ್ಡಗಾಲಾದರೆ ಉಗ್ರ ಹೋರಾಟ ಮಾಡುವುದಾಗಿ ಗಣೇಶ್ ಎಚ್ಚರಿಕೆ ನೀಡಿದ್ದಾರೆ. ಗೀತಾ ಚಿತ್ರದಲ್ಲಿ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ’ ಎಂದಿದ್ದಾರೆ. ಇದಕ್ಕೆ ಪೂರಕವಾಗಿ ನಮ್ಮ ಸಿನಿಮಾ ತಂಟೆಗೆ ಬಂದರೆ ಸುಮ್ಮನಿರೋದಿಲ್ಲ ಎಂದು ಪರಭಾಷೆ ಸಿನಿಮಾಗಳನ್ನು ಎಚ್ಚಿರಿಸಿದ್ದಾರೆ. ಸೈರಾ ಸೇರಿದಂತೆ ಸಾಕಷ್ಟು ಬೇರೆ ಭಾಷೆ ಸಿನಿಮಾಗಳು ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಗಣೇಶ್ ಈ ವಾರ್ನಿಂಗ್ ಮಾಡಿದ್ದಾರೆ. ಯಾಕೆಂದರೆ ತೆಲುಗು, ತಮಿಳು ಚಿತ್ರಗಳು ಬರುತ್ತಿದ್ದಂತೇ ಕನ್ನಡದ ಸಿನಿಮಾಗಳ ಇರುವ ಥಿಯೇಟರುಗಳನ್ನು ಕಸಿದುಕೊಳ್ಳುತ್ತವೆ. ಆದರೆ ಸದ್ ಗೀತಾ ಸುತ್ತ ಇರುವ ಹವಾ ನೋಡಿದರೆ ಅದು ಸಾಧ್ಯವಾಗದ ಮಾತು.
Comments