ಟೈಟಲ್ ಮೂಲಕವೇ ಭಾರಿ ಸಂಚಲನವನ್ನುಂಟು ಮಾಡಿರುವ ಗೀತಾ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿರುವ ಚಿತ್ರ. ರೊಮ್ಯಾಂಟಿಕ್ ಲವ್ ಸ್ಟೋರಿಯ ಜತೆಗೆ ಗೋಕಾಕ್ ಚಳವಳಿಯ ಮೇಲೂ ಬೆಳಕು ಚೆಲ್ಲಿರುವ ಗೀತಾ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ.
ಈ ಹಾಡು ಕೂಡ ಸಂಪೂರ್ಣ ಕನ್ನಡ ಮಯವಾಗಿದ್ದು, ಯಥೇಚ್ಚವಾಗಿ ಕನ್ನಡ ಸಾಹಿತ್ಯವನ್ನು ಬಳಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಕನ್ನಡ ಕನ್ನಡ ಕನ್ನಡವೇ ಸತ್ಯ ಎಂಬ ಸಾಲಿನಿಂದ ಈ ಹಾಡು ಆರಂಭವಾಗಿದ್ದು, ಕನ್ನಡಿಗರಿಗೆ ಹೇಳಿ ಮಾಡಿಸಿದಂತಿದೆ. ಈ ಹಾಡಿನ ಸಾಹಿತ್ಯವನ್ನು ರಾಜಕುಮಾರ ಖ್ಯಾತಿಯ ಸಂತೋಷ್ ಆನಂದ್ ರಾಮ್ ಬರೆದಿದ್ದು, ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೀತಾ ಚಿತ್ರವನ್ನು ವಿಜಯ್ ನಾಗೇಂದ್ರ ರಚಿಸಿ ನಿರ್ದೇಶನ ಮಾಡುತ್ತಿದ್ದು, ಸೈಯದ್ ಸಲಾಮ್ ಮತ್ತು ಶಿಲ್ಪಾ ಗಣೇಶ್ ಸಹ ನಿರ್ಮಾಣದಲ್ಲಿ ಗೀತಾ ಮೂಡಿಬರಲಿದೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಗೆ ಶಾನ್ವಿ ಶ್ರೀವಾತ್ಸವ್, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ್ ನಾಯಕಿಯರಾಗಿ ಜತೆಯಾಗಿದ್ದಾರೆ. ವಿಶೇಷ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೇವರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ.