ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಎಂಬೆರೆಡು ಮೆಗಾ ಹಿಟ್ ಮೂವಿಗಳನ್ನು ನೀಡಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ಈಗ ‘ಗೀತಾ’ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವ ವಿಜಯ್ ನಾಗೇಂದ್ರ ಇಬ್ಬರೂ ಚೆಡ್ಡಿದೋಸ್ತ್’ಗಳು. ಶೇಶಾದ್ರಿಪುರಂ ಸ್ಕೂಲ್ ಮತ್ತು ಕಾಲೇಜಿನಲ್ಲಿ ಒಟ್ಟಿಗೇ ಓದಿದ ಸ್ನೇಹಿತರು.
ಕಾಲೇಜು ದಿನಗಳಲ್ಲೇ ಸಂತೋಷ್ ಸಿನಿಮಾಗಳತ್ತ ವಾಲಿದ್ದರು. ತೀರಾ ಚಿಕ್ಕ ವಯಸ್ಸಿಗೇ ‘ಚಿಂಗಾರಿ’ ಸಿನಿಮಾಗೆ ಸಂಭಾಷಣೆ ಬರೆದಿದ್ದರು. ಅದೇ ಹೊತ್ತಿಗೇ ವಿಜಯ್ ನಾಗೇಂದ್ರ ತಾನೊಬ್ಬ ನಟನಾಗಬೇಕೆನ್ನುವ ತವಕದಲ್ಲಿದ್ದರು. ಈ ಕಾರಣಕ್ಕಾಗಿ ಬಿ.ಕಾಂ. ಅನ್ನು ಅರ್ಧಕ್ಕೇ ನಿಲ್ಲಿಸಿ ಸಿಕ್ಕಸಿಕ್ಕಲ್ಲೆಲ್ಲಾ ಆಡಿಷನ್ ಕೊಡುತ್ತಾ, ಯಾರಾದರೂ ಒಂದೊಳ್ಳೆ ಪಾತ್ರ ಕೊಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದರಂತೆ.
ಅವಕಾಶಗಳಿಗಾಗಿ ಹಂಬಲಿಸುವ ಎಲ್ಲರಂತೆ ವಿಜಯ್ ನಾಗೇಂದ್ರ ಅವರಿಗೆ ಎದುರಾಗುತ್ತಿದ್ದದ್ದು ಕೂಡಾ ಅದೇ ಅವಮಾನ, ನಿರಾಶೆಗಳೇ. ಈ ಹೊತ್ತಿನಲ್ಲೇ ಗೆಳೆಯ ಸಂತೋಷ್ ಆನಂದ್ರಾಮ್ ‘ನೀನು ಬರೆಯೋಕೆ ಶುರು ಮಾಡು. ನಟನೆ ಯಾವಾಗ ಬೇಕಾದರೂ ಮಾಡಬಹುದು, ಮೊದಲು ತೆರೆಯ ಹಿಂದಿನ ಕೆಲಸಗಳತ್ತ ಗಮನ ಕೊಡು’ ಅಂತಾ ಉತ್ತೇಜಿಸುತ್ತಿದ್ದರಂತೆ. ಅಷ್ಟೊತ್ತಿಗಾಗಲೇ ಸಂತೋಷ್ ‘ರಾಮಾಚಾರಿ’ಯ ಕೆಲಸ ಶುರು ಮಾಡಿದ್ದರಲ್ಲಾ? ಅವರೊಟ್ಟಿಗೆ ನಾಗೇಂದ್ರ ಸಹಾ ಕೆಲಸ ಮಾಡಲು ಮುಂದಾದರು. ಸಿನಿಮಾದ ವರಸೆಗಳನ್ನು ಅರಿತುಕೊಳ್ಳಲು ಆರಂಭಿಸಿದ್ದರು. ರಾಮಾಚಾರಿಯ ದೊಡ್ಡ ಗೆಲುವಿನ ನಂತರ ಸಂತೋಷ್ ನಿರ್ದೇಶಿಸಿದ ‘ರಾಜಕುಮಾರ’ ಚಿತ್ರಕ್ಕೆ ವಿಜಯ್ ನಾಗೇಂದ್ರ ಕೋ ಡೈರೆಕ್ಟರ್ ಮತ್ತು ಕೋ ರೈಟರ್ ಕೂಡಾ ಆದರು.
ಸಂತೋಷ್ ಆನಂದ್ರಾಮ್ ಕುಟುಂಬದಲ್ಲಿ ವಿಜಯ್ ನಾಗೇಂದ್ರರನ್ನು ಮನೆ ಮಗನಂತೆ ನೋಡಿಕೊಳ್ಳುತ್ತಾರೆ. ವಿಜಯ್ ಅವರ ತಂದೆ ನಾಗೇಂದ್ರ ಬಿ.ಇ.ಎಂ.ಎಲ್ ನಲ್ಲಿ ಅಸಿಸ್ಟೆಂಡ್ ಇಂಜಿನಿಯರ್ ಆಗಿದ್ದವರು. ಆರೋಗ್ಯದ ಸಮಸ್ಯೆಯಿಂದ ಸುಮಾರು ಹದಿನೈದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ತಾಯಿ ಯಶೋಧ ಕೂಡಾ ೨೦೧೪ರಲ್ಲಿ ಕ್ಯಾನ್ಸರ್’ಗೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ. ಒಡಹುಟ್ಟಿದ ಅಣ್ಣ ಮದುವೆಯಾಗಿ ಕೆಲಸದ ನಿಮಿತ್ತ ದುಬೈನಲ್ಲಿ ನೆಲೆಸಿದ್ದಾರೆ. ಇನ್ನೂ ಗೃಹಸ್ಥಾಶ್ರಮಕ್ಕೆ ಕಾಲಿಡದ ಒಬ್ಬಂಟಿ ವಿಜಯ್ಗೆ ಸಂತೋಷ್ ಆನಂದರಾಮ್ ಫ್ಯಾಮಿಲಿಯೇ ಆಸರೆ.
ಜೊತೆಗಿದ್ದ ಗೆಳೆಯ ಸ್ವತಂತ್ರವಾಗಿ ಸಿನಿಮಾ ನಿರ್ದೇಶನಕ್ಕೆ ಕೈಯಿಟ್ಟಾಗ ಸಂತೋಷ್ ತಮ್ಮಿಂದಾದ ಎಲ್ಲ ಸಹಕಾರವನ್ನೂ ನೀಡಿದ್ದಾರೆ. ಬಹುಮುಖ್ಯವಾದ ದೃಶ್ಯಗಳ ಸಂಭಾಷಣೆ ಸೇರಿದಂತೆ ಮೂರು ಹಾಡುಗಳನ್ನೂ ಬರೆದುಕೊಟ್ಟಿದ್ದಾರೆ. ಸಂತೋಷ್ ಆನಂದರಾಮ್ ಬರೆದುಕೊಟ್ಟ ಹಾಡುಗಳೀಗ ಕೇಳುಗರ ಕಿವಿಯ ಮೂಲಕ ಎದೆಗೂ ನಾಟಿವೆ!
ಕೆಲವೇ ವರ್ಷಗಳ ಹಿಂದೆ ಸಿನಿಮಾ ನಟನಾಗಬೇಕು ಎಂದು ಬಯಸುತ್ತಿದ್ದ ವಿಜಯ್ ನಾಗೇಂದ್ರ ತಾನೊಬ್ಬ ನಿರ್ದೇಶಕನಾಗುತ್ತೀನಿ ಅಂತಾ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ತಮ್ಮ ತಂದೆಗಿದ್ದ ಸಿನಿಮಾ ಕಲೆಯ ವ್ಯಾಮೋಹ, ಗೆಳೆಯ ಸಂತೋಷ್ ಆನಂದರಾಮ್ ಸಾಹಚರ್ಯ, ನಟನೆಯ ಮೇಲಿದ್ದ ಗೀಳು- ಇವೆಲ್ಲಾ ಒಟ್ಟಿಗೇ ಸೇರಿ ಇವತ್ತು ವಿಜಯ್ ಡೈರೆಕ್ಟರ್ ಸೀಟಿನಲ್ಲಿ ಕೂರುವಂತಾಗಿದೆ. “ಅದೂ ಮೊದಲ ಸಿನಿಮಾವನ್ನೇ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗಾಗಿ ನಿರ್ದೇಶಿಸಿದ್ದೇನೆ, ನಾನು ಡೈರೆಕ್ಟರ್ ಆಗಿದ್ದೀನಿ ಅಂತಾ ಡೈಜೆಸ್ಟ್ ಮಾಡಿಕೊಳ್ಳಲೂ ಆಗುತ್ತಿಲ್ಲ. ಬಹುಶಃ ಗೀತಾ ಬಿಡುಗಡೆಯಾದ ನಂತರ ನನಗದು ಮನವರಿಕೆಯಾಗಬಹುದು” ಎನ್ನುವ ವಿಜಯ್ ನಾಗೇಂದ್ರ ಬೇರೆ ಯಾವ ವಿಚಾರದತ್ತಲೂ ಗಮನ ಕೊಡದೆ ತಮ್ಮನ್ನು ತಾವು ಸಂಪೂರ್ಣವಾಗಿ ‘ಗೀತಾ’ಗಾಗಿ ಅರ್ಪಿಸಿಕೊಂಡಿದ್ದಾರೆ.
ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್, ಟ್ರೇಲರ್, ಹಾಡುಗಳನ್ನು ನೋಡಿದರೆ ಇದು ಬೇರೆ ಬಗೆಯ ಸಿನಿಮಾ ಅನ್ನೋದರ ಸೂಚನೆ ನೀಡುವಂತಿದೆ. ಅದು ನಿಜವಾಗಲಿ. ವಿಜಯ್ ನಾಗೇಂದ್ರ ಕೂಡಾ ತನ್ನ ಬಹುಕಾಲದ ಗೆಳೆಯ ಸಂತೋಷ್ ಆನಂದ್ರಾಮ್ ಅವರಂತೆ ಬೆಳೆಯಲಿ, ಗಣೇಶ್ ಅವರಂತಾ ಹತ್ತು ಹಲವು ಪಳಗಿದ ನಟರ ಸಿನಿಮಾಗಳನ್ನು ನಿರ್ದೇಶಿಸುವಂತಾಗಲಿ…