ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸಿ ಉಳಿದ ಆರು ಗಂಟೆ ಮಾತ್ರ ಎಚ್ಚರದಲ್ಲಿರುವ ಸ್ಪೆಷಲ್ ಕ್ಯಾರೆಕ್ಟರಿನ ಜಂಟಲ್ಮನ್ ಆಗಿ ಪ್ರಜ್ವಲ್ ದೇವರಾಜ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೇ ತಿಂಗಳು ತೆರೆಗೆ ಬರಲು ಅಣಿಯಾಗುತ್ತಿರುವ ಜಂಟಲ್ಮನ್ ಚಿತ್ರದ ವಿನೂತನ ಪಬ್ಲಿಸಿಟಿ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡಿ, ಕೇವಲ ನಾಲ್ಕು ಗಂಟೆ ನಿದ್ರಿಸುವ ರಾಜಕಾರಣಿಗಳ ಫೋಟೋಗಳ ನಡುವೆ ಕುಂಭಕರ್ಣನ ಫೋಟೋ ಹಾಕಿ ಸೃಷ್ಟಿಸಿರುವ ಪೋಸ್ಟರಂತೂ ಈಗ ವೈರಲ್ ಆಗಿದೆ.
ರಾಜಾಹುಲಿ, ಸಂಹಾರ, ಪಡ್ಡೆಹುಲಿಯಂಥಾ ಕಮರ್ಷಿಯಲ್ ಸಿನಿಮಾಗಳನ್ನು ಕೊಟ್ಟವರು ನಿರ್ದೇಶಕ ಗುರು ದೇಶಪಾಂಡೆ. ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅನಿಸಿಕೊಂಡರೂ, ತಮ್ಮ ಜೊತೆಗೆ ಕೆಲಸ ಮಾಡಿದ್ದ ನಿರ್ದೇಶಕರೊಬ್ಬರ ಸಿನಿಮಾವನ್ನು ಖುದ್ದು ಗುರುದೇಶಪಾಂಡೆ ನಿರ್ಮಿಸಿದ್ದಾರೆ. ಗುರು ದೇಶಪಾಂಡೆ ಅವರ ಬಳಿ ಪ್ರಜ್ವಲ್ ದೇವರಾಜ್ ಕಾಲ್ ಶೀಟ್ ಇತ್ತಂತೆ. ಅದನ್ನು ತಮ್ಮೊಂದಿಗೆ ದುಡಿದ ಜಡೇಶ್ ಅವರಿಗೆ ನೀಡಿ, ತಾವೇ ನಿರ್ಮಾಣವನ್ನೂ ಮಾಡಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ರಾಜಹಂಸ ಚಿತ್ರವನ್ನು ಜಡೇಶ್ ಡೈರೆಕ್ಟ್ ಮಾಡಿದ್ದರು. ಈ ಬಾರಿ ಜಡೇಶ್ ಯಾರೂ ಮುಟ್ಟಿರದ ಸಬ್ಜೆಕ್ಟ್ ಒಂದನ್ನು ಕೈಗೆತ್ತಿಕೊಂಡಿದ್ದಾರೆ. ದಿನವೊಂದಕ್ಕೆ ಹದಿನೆಂಟು ಗಂಟೆಗಳ ಕಾಲ ನಿದ್ರಿಸುವ ಫೋಬಿಯಾ ಇರುವ ಹುಡುಗನ ಸುತ್ತ ಕಥೆಯೊಂದನ್ನು ಹೆಣೆದಿದ್ದಾರೆ. ಪ್ರಜ್ವಲ್ ಕೂಡಾ ಈ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ರಿಲೀಸಾಗಿರುವ ಹಾಡು, ಟೀಸರ್ ನೋಡಿದರೇನೆ ಅದು ಗೊತ್ತಾಗುತ್ತದೆ.
ಈ ಚಿತ್ರಕ್ಕಾಗಿ ಸುಮಾರು ಇಪ್ಪತ್ತೈದು ದಿನಗಳ ಕಾಲ ಡಬಲ್ ಕಾಲ್ ಶೀಟ್ನಲ್ಲಿ ಶೂಟ್ ಮಾಡಲಾಗಿದೆ. ಅಂದರೆ, ಇಂದು ಬೆಳಿಗ್ಗೆ ಆರು ಗಂಟೆಗೆ ಚಿತ್ರೀಕರಣ ಆರಂಭವಾದರೆ ಮಾರನೆಯ ದಿನದ ಬೆಳಿಗ್ಗೆ ತನಕ ಕೆಲಸ ಚಾಲನೆಯಲ್ಲಿರುತ್ತಿತ್ತಂತೆ. ದೃಶ್ಯವೊಂದಕ್ಕೆ ಡಂಪಿಂಗ್ ಯಾರ್ಡ್ನಲ್ಲಿ ಒಂದಿನ ಪೂರ್ತಿ ಶೂಟ್ ಮಾಡಲಾಯಿತಂತೆ. ಬರೋಬ್ಬರಿ ಏಳು ವರ್ಷದಿಂದ ಶೇಖರಣೆಗೊಂಡಿದ್ದ ಕಸದ ರಾಶಿ ಮತ್ತದರಿಂದ ಉದ್ಪತ್ತಿಯಾದ ಕೆಟ್ಟ ವಾಸನೆಯ ನಡುವೆ ಪ್ರಜ್ವಲ್ ಚಿತ್ರೀಕರಣದಲ್ಲಿ ಭಾಗಿಯಾದರಂತೆ. ಹೀರೋ ಒಬ್ಬರು ಈ ಮಟ್ಟಿಗೆ ಡೆಡಿಕೇಟೆಡ್ ಆಗಿ ನಡಿಸೋದು ಅಪರೂಪ. ಪ್ರಜ್ವಲ್ ಅದನ್ನು ಪೂರೈಸಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಡಿಫರೆಂಟ್ ಡ್ಯಾನಿ ಮತ್ತು ವಿನೋದ್ ತಲಾ ಎರಡೂವರೆ ಫೈಟ್ಗಳನ್ನು ಕಂಪೋಸ್ ಮಾಡಿದ್ದಾರೆ. ಪಡ್ಡೆಹುಲಿ ಚಿತ್ರದಲ್ಲಿ ನಾಯಕಿಯಾಗಿದ್ದ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿ. ಶಂಕರ್, ಕಾರ್ತಿಕ್, ಕಿರಣ್, ಕಿರಣ ಮತ್ತು ಪುನೀತ್ ಡೈರೆಕ್ಷನ್ ಟೀಮಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸುಧಾಕರ್ ಈ ಚಿತ್ರದಲ್ಲಿ ಛಾಯಾಗ್ರಹಣದ ಕೆಲಸವನ್ನು ನಿಭಾಯಿಸಿದ್ದಾರೆ.
ಬಿಡುಗಡೆಯ ತಯಾರಿಯಲ್ಲಿರುವ ಚಿತ್ರ ಸದ್ಯ ಥರಹೇವಾಗಿ ಪೋಸ್ಟರುಗಳಿಂದ ಮತ್ತಷ್ಟು ಕುತೂಹಲ ಮೂಡಿಸಿದೆ…