ಗುರು ದೇಶಪಾಂಡೆ ನಿರ್ಮಾಣದಲ್ಲಿ ಜಡೇಶ್ ಕುಮಾರ್ ನಿರ್ದೇಶಿಸಿರುವ, ಪ್ರಜ್ವಲ್ ದೇವರಾಜ್ ಹೀರೋ ಆಗಿ ನಟಿಸಿರುವ ಸಿನಿಮಾ ಜಂಟಲ್ಮನ್. ೨೦೨೦ರ ಆರಂಭದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಇದು. ಇದೇ ತಿಂಗಳು ತೆರೆಗೆ ಬರಲು ತಯಾರಾಗಿರುವ ಜಂಟಲ್ಮನ್ ಚಿತ್ರದ ಟ್ರೇಲರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಧ್ರುವಾ ಸರ್ಜಾ ಸೇರಿ ರಿಲೀಸ್ ಮಾಡಿದ್ದಾರೆ.
ಪುನೀತ್, ಪ್ರಜ್ವಲ್ ಮತ್ತು ಧ್ರುವ ಮೂರೂ ಜನ ಕನ್ನಡ ಚಿತ್ರರಂಗದ ಮಟ್ಟಿಗೆ ಜಂಟಲ್ಮನ್ಗಳೇ. ಯಾವುದೇ ನಖರಾ ಮಾಡಿಕೊಳ್ಳದೆ, ತಾವಾಯಿತು ತಮ್ಮ ಪಾಡಾಯಿತು ಅಂತಾ ಸಿನಿಮಾಗಳನ್ನು ಮಾಡಿಕೊಂಡು ನಿರ್ಮಾಪಕ, ನಿರ್ದೇಶಕರ ಬಳಿ ಜಂಟಲ್ಮನ್ಸ್ ಅನ್ನಿಸಿಕೊಂಡವರು. ಈ ಮೂವರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿದ್ದು ಗುರು ದೇಶಪಾಂಡೆ ಅವರ ಸಾಧನೆ ಅನ್ನಬಹುದು.
ಈ ಸಂದರ್ಭದಲ್ಲಿ ಯಾರ್ಯಾರು ಏನೇನು ಮಾತಾಡಿದರು ಅನ್ನೋದರ ಮಾಹಿತಿ ಇಲ್ಲಿದೆ..
ಪ್ರಜ್ವಲ್ ದೇವರಾಜ್ :
ಅಪ್ಪು ಸರ್ ಪ್ರತಿಯೊಬ್ಬ ಯುವಕರಿಗೂ. ಪ್ರತಿಯೊಬ್ಬ ನಾಯಕನಟರಿಗೂ ಸ್ಫೂರ್ತಿಯಾಗುವ ವ್ಯಕ್ತಿತ್ವ ಹೊಂದಿರುವವರು. ಇನ್ಸ್ಪಿರೇಷನ್ ತೆಗೆದೊಕೊಳ್ಳಲು ನಮಗಿಂತ ದೊಡ್ಡೋರು ಮಾತ್ರ ಅಲ್ಲ, ಚಿಕ್ಕೋರಿಂದಲೂ ಪಡೆಯಬಹುದು ಅನ್ನೋದಕ್ಕೆ ಧೃವಾ ಸಾಕ್ಷಿಯಾಗಿದ್ದಾನೆ. ಧೃವ ನನ್ನ ತಮ್ಮನ ಥರಾ. ಪ್ರಣಾಮ್ ಹೇಗೋ ಧ್ರುವಾ ಕೂಡಾ ನನಗೆ ಹಾಗೆ. ನಮ್ಮ ಮನೆ ತುಂಬಾ ಹತ್ತಿರ. ಚಿಕ್ಕವಯಸ್ಸಿಂದಲೂ ಜೊತೆಜೊತೆಯಾಗಿ ಬೆಳೆದಿದ್ದೀವಿ. ಗೋಲ್ಡ್ ಜಿಮ್ ಅಂತಾ ಇದೆ. ಅಲ್ಲೇ ನಾವೆಲ್ಲಾ ವರ್ಕೌಟ್ ಮಾಡ್ತಿದ್ವಿ. ನಾನು ಜಿಮ್ ಮುಗಿಸಿ ಬಂದರೂ ಇನ್ನೂ ಅವನು ವಾರ್ಮ್ ಅಪ್ ಅಂತಿದ್ದ. ಗಂಟೆಗಟ್ಟಲೆ ಜಿಮ್ ಮಾಡುತ್ತಿದ್ದ. ಅವನು ಪಡುವ ಶ್ರಮದಿಂದ ಇಷ್ಟು ದೊಡ್ಡ ಎತ್ತರಕ್ಕೆ ಏರಿದ್ದಾನೆ.
ಪವರ್ ಸ್ಟಾರ್
ಟ್ರೇಲರ್ ನೋಡಿ ತುಂಬಾ ಖುಷಿ ಆಯ್ತು. ಈ ಚಿತ್ರದ ಮೂಲಕ ತೀರಾ ಹೊಸದೇನನ್ನೋ ಹೇಳಲು ಹೊರಟಿದ್ದಾರೆ. ಹದಿನೆಂಟು ಗಂಟೆಗಳ ಕಾಲ ನಿದ್ರೆ ಮಾಡಿ, ಆರು ಗಂಟೆ ಮಾತ್ರ ಎದ್ದಿರುವ ಹೀರೋ ಇತ್ಯಾದಿ ವಿಶೇಷಗಳಿರುವ ಜಂಟಲ್ಮನ್ ಟ್ರೇಲರ್ ವೈಕುಂಠ ಏಕಾದಶಿ ದಿನ ರಿಲೀಸಾಗಿದೆ. ತುಂಬಾ ಒಳ್ಳೇ ದಿನ. ಗುರುದೇಶಪಾಂಡೆ ತುಂಬಾ ಒಳ್ಳೇ ಟೀಮ್ ಸೆಲೆಕ್ಟ್ ಮಾಡಿದ್ದಾರೆ. ಟೀಸರಿನಲ್ಲಿ ಹೊಸತನ ಕಾಣುತ್ತಿದೆ. ಅಜನೀಶ್ ಈಗಿನ ಟ್ರೆಂಡ್ಗೆ ತಕ್ಕಂತೆ ಮ್ಯೂಸಿಕ್ ಮಾಡೋರು. ಈಗ ಓಡುತ್ತಿರುವ ಅವನೇ ಶ್ರೀಮನ್ನಾರಾಯಣಗೆ ಕೂಡಾ ಇವರೇ ಮ್ಯೂಸಿಕ್ ಮಾಡಿರುವವರು ಕೂಡಾ ಇವರೇ. ನನ್ನ ಗೆಳೆಯ ಪ್ರಜ್ವಲ್ ಇಂಡಸ್ಟ್ರಿಗೆ ಬಂದು ೧೩ ವರ್ಷ ಆಯ್ತು. ತುಂಬಾ ಚನ್ನಾಗಿ ಕಾಣ್ತಿದಾರೆ. ಅವರ ಜೊತೆ ಕೋ ಸ್ಟಾರ್ ಆಗಿ ನಿಶ್ವಿಕಾ ಕೂಡಾ ನಟಿಸಿದ್ದಾರೆ. ಬಹಳ ಮುಖ್ಯವಾಗಿ ನ್ಯಾಷನಲ್ ಅವಾರ್ಡ್ ವಿನ್ನರ್ ಸಂಚಾರಿ ವಿಜಯ್ ಕೂಡಾ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ನಟನಾಗಿ, ಕನ್ನಡ ಚಿತ್ರ ಪ್ರೇಕ್ಷಕನಾಗಿ ನಾನು ಕೂಡಾ ಎಷ್ಟು ಸಾಧ್ಯವಾಗುತ್ತೋ ಅಷ್ಟು ಪ್ರಮೋಟ್ ಮಾಡ್ತೀನಿ. ಎಲ್ಲರೂ ಪ್ರಯತ್ನಿಸಿದಾಗ ಅಭಿಮಾನಿ ದೇವರುಗಳು ಕೈ ಹಿಡಿಯದೇ ಬಿಡೋದಿಲ್ಲ..
ಧೃವಾ ಸರ್ಜಾ
ಪ್ರಜ್ವು ನನ್ನ ಸೀನಿಯರ್, ನನ್ನ ಗೆಳೆಯ. ಅದ್ಭುತವಾದ ನಟ. ಗುರುದೇಶಪಾಂಡೆ ಅವರು ಇದುವರೆಗೂ ಉತ್ತಮವಾದ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಈಗ ನಿರ್ಮಾಪಕರಾಗಿ ಮತ್ತೊಬ್ಬ ನಿರ್ದೇಶಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಕನ್ನಡದ ಜನತೆ ಇಷ್ಟಪಡಲೇಬೇಕಾದ ಅಂಶಗಳು ಈ ಸಿನಿಮಾದಲ್ಲಿದೆ. ನನಗಂತೂ ಟ್ರೇಲರ್ ತುಂಬಾನೇ ಇಷ್ಟವಾಗಿದೆ. ಇದು ಕನ್ನಡ ಚಿತ್ರರಂಗದಲ್ಲಿ ಟ್ರೆಂಟ್ ಸೆಟ್ ಮಾಡುತ್ತೆ ಅನ್ನೋ ನಂಬಿಕೆ ಕೂಡಾ ಇದೆ.