ಎಷ್ಟೊತ್ತು ಮಲಗಿದ್ದರೇನು? ಎದ್ದಾಗ ಮಾಡುವ ಕೆಲಸವಷ್ಟೇ ಮುಖ್ಯ!

ಆರಂಭದ ಸಿಕ್ಸರ್, ನಡುವೆ ಬಂದ ಕೋಟೆ ಸಿನಿಮಾಗಳನ್ನು ಬಿಟ್ಟರೆ ಬಹುಶಃ ಪ್ರಜ್ವಲ್ ದೇವರಾಜ್ ಅವರ ಇಷ್ಟು ದಿನದ ವೃತ್ತಿ ಜೀವನದಲ್ಲಿ ಈ ಮಟ್ಟಿಗಿನ ಖಡಕ್ ಸಿನಿಮಾ ಬೇರೊಂದು ಬಂದಿರಲಿಲ್ಲ. ಜಂಟಲ್’ಮನ್ ಅನ್ನೋ ಹೆಸರಿಗೆ ನ್ಯಾಯ ದಕ್ಕಿಸಿಕೊಡುವಂತಾ ಪಾತ್ರ ಪಜ್ವಲ್ ಪಾಲಾಗಿದೆ.

ದಿನದ ಹದಿನೆಂಟು ಗಂಟೆ ನಿದ್ರಿಸುವ, ಎಷ್ಟೋ ಕೋಟಿ ಜನರಲ್ಲಿ ಒಬ್ಬರಿಗೆ ಬರುವ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎನ್ನುವ ವಿಲಕ್ಷಣ ಕಾಯಿಲೆ. ಇಂಥಾ ಬಾಧೆ ಇರುವ ಹುಡುಗನನ್ನು ಹೆತ್ತ ಮಗನಿಗಿಂತಾ ಹೆಚ್ಚಾಗಿ ಪೊರೆಯುವ ಅಣ್ಣ ಅತ್ತಿಗೆ ಮತ್ತವರ ಮಗಳು. ಬದುಕಿನಲ್ಲಿ ಸೂರ್ಯೋದಯವನ್ನೇ ನೋಡದೆ ಕಂಗಾಲಾಗಿದ್ದ ಹುಡುಗನ ಬಾಳಲ್ಲಿ ಬೆಳಕಾಗಿ ಬರುವ ಹುಡುಗಿ. ಎಲ್ಲವೂ ಒಂದು ಹಂತ ತಲುಪುತ್ತಿದೆ ಅನ್ನುವ ಹೊತ್ತಿಗೇ ಎದುರಾಗುವ ಗಂಡಾಂತರ. ಕಾಡುವ ನಿದ್ರಾ ಬೇನೆಯಿಂದ ಪಾರಾಗಿ, ಪ್ರೀತಿಯನ್ನು ಪಡೆಯುವ ಪ್ರಯತ್ನದಲ್ಲಿರುವಾಗಲೇ ಅಪಘಾತಕ್ಕೀಡಾಗಿ ಅಣ್ಣ ಅತ್ತಿಗೆ ಇಬ್ಬರೂ ಚಿರನಿದ್ರೆಗೆ ಜಾರುತ್ತಾರೆ…

ಅಷ್ಟರಲ್ಲಾಗಲೇ ನೆಚ್ಚಿದ ಹುಡುಗಿ ಕೂಡಾ ಈತನ ಸಮಸ್ಯೆಯ ಅಸಲಿಯತ್ತು ಗೊತ್ತಾಗಿ ದೂರಾಗಿರುತ್ತಾಳೆ. ಕೈಯಲ್ಲಿ ಬೇರೆ ಅಣ್ಣ ಬಿಟ್ಟುಹೋದ ಪುಟ್ಟ ಕೂಸು. ಆ ಮಗುವಿನ ಕತೆಯೇನಾಗುತ್ತದೆ? ದಿನಕ್ಕೆ ಆರು ಗಂಟೆಯಂತೆ ಎಚ್ಚರದಿಂದಿರುವ ಕಥಾನಾಯಕನ ಮುಂದಿನ ಬದುಕು ಹೇಗೆ? ಅಸಲಿಗೆ ಅಣ್ಣ ಅತ್ತಿಗೆ ಸಾಯಲು ನಿಜವಾದ ಕಾರಣವೇನು? ಬಿಟ್ಟುಹೋದ ಹುಡುಗಿ ಮತ್ತೆ ವಾಪಾಸು ಬರುತ್ತಾಳಾ? ಎಲ್ಲ ಸಮಸ್ಯೆಗೂ ಪರಿಹಾರದಂತೆ ಗೋಚರಿಸುವ ಪೊಲೀಸ್ ಅಧಿಕಾರಿಯ ಪಾತ್ರವೇನು?

ಹೀಗೆ ಸಿನಿಮಾ ಶುರುವಾದಾಗಿಂದಲೂ ಕೊನೇ ತನಕ ಒಂದು ಕ್ಷಣ ಕೂಡಾ ಅತ್ತಿತ್ತ ಕದಲದಂತೆ ಕೂರಿಸಿಕೊಂಡು ನೋಡಿಸಿಕೊಳ್ಳುವ ಚಿತ್ರ ಜಂಟಲ್’ಮನ್!

ಈ ಸಿನಿಮಾದಲ್ಲೂ ಈವರೆಗೂ ಯಾರೂ ಮುಟ್ಟಿರದ ಭಯಾನಕ ಮಾಫಿಯಾವೊಂದನ್ನು ಪರಿಚಯಿಸಿಲಾಗಿದೆ. ಹೆಣ್ಣುಮಕ್ಕಳನ್ನು ಅಪಹರಿಸಿ ಅಂಡಾಣುಗಳನ್ನು ಕಸಿಯುವ ಕ್ರೂರ ಜಾಲ, ವೈದ್ಯಕೀಯ ಜಗತ್ತಿನ ಕರಾಳ ಮುಖ ಇಲ್ಲಿ ಅನಾವರಣಗೊಂಡಿದೆ.

ನಿರ್ದೇಶಕ ಜಡೇಶ್ ಅವರಿಗೆ ಇದು ಎರಡನೇ ಸಿನಿಮಾ. ಆದರೆ ನಿರ್ಮಾಪಕರೂ ಸ್ವತಃ ನಿರ್ದೇಶಕರೂ ಆಗಿರುವ ಗುರು ದೇಶಪಾಂಡೆ ಅವರ ಕ್ರಿಯೇಟೀವ್ ಗೈಡ್ ಲೈನ್ಸ್ ಪಡೆದು ಅದ್ಭುತವಾಗಿ ಸಿನಿಮಾ ರೂಪಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅಂತೂ ಪಾತ್ರವೇ ತಾವಾಗಿ ಜೀವಿಸಿದ್ದಾರೆ. ಪ್ರಜ್ವಲ್’ರಂಥ ಕಮರ್ಷಿಯಲ್ ಇಮೇಜ್ ಇರೋ ಹೀರೋಗಳು ತಕ್ಷಣಕ್ಕೇ ಇಂಥಾ ಪಾತ್ರಗಳನ್ನು ಒಪ್ಪಿ ನಟಿಸುವುದು ಕಷ್ಟ. ನಡುರಸ್ತೆ, ಡಂಪಿಂಗ್ ಯಾರ್ಡು, ರಾಜಕಾಲುವೆಗಳಲ್ಲೆಲ್ಲಾ ಇಳಿದು, ಮಲಗಿ ನಟಿಸೋದು ಅಂದರೆ ಸುಮ್ಮನೇನಾ? ಸಿನಿಮಾದ ಬಹುತೇಕ ಭಾಗ ನಿದ್ರಾ ಮಂಪರಿನಲ್ಲಿದ್ದಂತೆ ನಟಿಸುವುದು ಸುಲಭವೂ ಅಲ್ಲ. ಆದರೆ ಪ್ರಜ್ವಲ್ ತಮ್ಮ ಪಾತ್ರಕ್ಕೆ ಹಂಡ್ರೆಡ್ ಪರ್ಸೆಂಟ್ ನ್ಯಾಯ ಸಲ್ಲಿಸಿದ್ದಾರೆ. ಬೇಬಿ ಆರಾಧ್ಯ ಅನ್ನೋ ಪುಟ್ಟ ಹುಡುಗಿಗೆ ಈ ಮಟ್ಟಿಗೆ ಪಾತ್ರ ಪೋಷಣೆ ಮಾಡುವ ಶಕ್ತಿ ಅದೆಲ್ಲಿಂದಾ ಬಂತೋ? ಎಂಥವರ ಕಣ್ಣಲ್ಲೂ ನೀರುಕ್ಕುವಂತೆ ಈ ಪುಟಾಣಿ ನಟಿಸಿದ್ದಾಳೆ. ನಿಶ್ವಿಕಾ ನಾಯ್ಡು ಕೂಡಾ ಪ್ರಜ್ಜುಗೆ ಹೇಳಿಮಾಡಿಸಿದಂತಾ ಜೋಡಿ ಮತ್ತು ಅತ್ಯುತ್ತಮ ಕಲಾವಿದೆ ಎನಿಸಿಕೊಂಡಿದ್ದಾರೆ. ಕಡಿಮೆ ದೃಶ್ಯಗಳಲ್ಲಿ ಬಂದರೂ ಒಂದೇ ಏಟಿಗೆ ಗಮನ ಸೆಳೆಯುವ ಪಾತ್ರ ನಿರೂಪಕ ಅನಿಲ್ ಯಾದವ್ ಅವರದ್ದು. ವಿಶಿಷ್ಟ ಮ್ಯಾನರಿಸಂ ಹೊಂದಿರುವ ಅನಿಲ್ ನಿಜಕ್ಕೂ ನಟನಾಗಿಯೇ ನೆಲೆನಿಲ್ಲುವ ಸೂಚನೆ ಕೊಟ್ಟಿದ್ದಾರೆ. ದೃಶ್ಯಗಳು ಕಡಿಮೆಯಾದರೂ ತಬಲಾ ನಾಣಿ ಮಜಾ ಕೊಟ್ಟು ಹೋಗುತ್ತಾರೆ. ಇಷ್ಟು ದಿನ ನಗಿಸುತ್ತಿದ್ದ ನಟ ಪ್ರಶಾಂತ್ ಸಿದ್ದಿ ಇಲ್ಲಿ ನೋಡುಗರನ್ನು ಬಿಚ್ಚಿಬೀಳಿಸುತ್ತಾನೆ. ಸಂಚಾರಿ ವಿಜಯ್ ಅವರನ್ನು ರಾಷ್ಟ್ರ ಪ್ರಶಸ್ತಿ ಪಡೆದ ನಟ ಅಂತಾ ಅರೋಪಿಸಿ ಯಾವ್ಯಾವುದೋ ಪಾತ್ರಗಳನ್ನು ನೀಡುತ್ತಿದ್ದರಲ್ಲಾ? ಜಂಟಲ್ ಮನ್ ಅದರಿಂದ ವಿಜಯ್ ಅವರಿಗೆ ಮುಕ್ತಿ ನೀಡಿದ್ದಾನೆ. ಸಂಚಾರಿ ವಿಜಯ್ ಅವರೊಳಿಗಿರುವ ಔಟ್ ಅಂಡ್ ಔಟ್ ಕಮರ್ಷಿಯಲ್ ನಟ ಇಲ್ಲಿ ಹೊರಬಂದು ಕೇಕೆ ಹಾಕಿದ್ದಾನೆ. ನಾತಿಚರಾಮಿಯ ನಂತರ ಸಂಚಾರಿ ವಿಜಯ್ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ.

ಸುಧಾಕರ್ ಶೆಟ್ಟಿಯವರ ಕ್ಯಾಮೆರಾ ಕೆಲಸ ಕೂಡಾ ಅಷ್ಟೇ ಪೂರಕವಾಗಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಜಂಟಲ್ ಮನ್ ಸಿನಿಮಾದ ಕ್ವಾಲಿಟಿ ಹೆಚ್ಚಿಸಿದೆ. ಸಂಭಾಷಣೆ, ಸಿನಿಮಾದ ಬಣ್ಣ, ಪ್ರಚಾರ ಕಲೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇವತ್ತಿನ ಕಾಲಘಟ್ಟಕ್ಕೆ ಸೂಕ್ತವಾಗಿರುವ, ಪ್ರತಿಯೊಬ್ಬರೂ ನೋಡಲೇಬೇಕಿರುವ ಪಕ್ಕಾ ಕಮರ್ಷಿಯಲ್ ಚಿತ್ರ ಜಂಟಲ್ ಮನ್.

 

CG ARUN

ಗೋಲ್ ಮಾಲ್ ಗಣೇಶನ ವಂಚನೆ ಪುರಾಣವು!

Previous article

ಚಿಕ್ಕಣ್ಣನ ಕಾಮಿಡಿಗೆ ಪ್ರೇಕ್ಷಕರು ಫಿದಾ!

Next article

You may also like

Comments

Leave a reply

Your email address will not be published. Required fields are marked *