ಕಳೆದ ವಾರ ಪ್ರಪಂಚದಾದ್ಯಂತ ಜಂಟಲ್ ಮನ್ ಚಿತ್ರ ತೆರೆಗೆ ಬಂದಿದೆ. ಎಲ್ಲರಿಗೂ ಗೊತ್ತಿರುವಂತೆ ಇದು ಗುರು ದೇಶಪಾಂಡೆ ನಿರ್ಮಾಣದಲ್ಲಿ ಜಡೇಶ್ ಕುಮಾರ್ ನಿರ್ದೇಶನದ ಸಿನಿಮಾ. ಬಿಡುಗಡೆಯಾಗಿರುವ ಈ ಚಿತ್ರ ನಟ ಪ್ರಜ್ವಲ್ ದೇವರಾಜ್ ಅವರ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಡಲಿದೆ ಅನ್ನೋದು ಪಕ್ಕ ಆಗಿದೆ. ಸ್ವತಃ ಪ್ರಜ್ಜು ಜಂಟಲ್ ಮನ್ ಬಗ್ಗೆ ಏನಂತಾರೆ?
ಒಬ್ಬ ನಟನಾಗಿ ನನಗೆ ಜಂಟಲ್ಮನ್ ಸಿನಿಮಾ ಒಂದು ಒಳ್ಳೆ ಬ್ಯೂಟಿಫುಲ್ ಎಕ್ಸ್ಪೀರಿಯನ್ಸ್ ಅಂತಲೇ ಹೇಳಬಹುದು. ಸಿನಿಮಾ ಬಿಡುಗಡೆಯ ನಂತರ ಜನ ಕೊಡುತ್ತಿರುವ ಪ್ರತಿಕ್ರಿಯೆ ನಿಜಕ್ಕೂ ನನಗೆ ಹೊಸ ಹುರುಪು ನೀಡಿದೆ. ಈ ಚಿತ್ರದಲ್ಲಿ ನನ್ನ ಜೀವನದಲ್ಲಿ ಎಂ ದೂ ಮರೆಯಲಾಗದ ಒಂದು ಪಾತ್ರ ಸಿಕ್ಕಿದೆ. ನನಗೆ ಗುರು ಅವರು ಒಂದು ದಿನ ಕಾಲ್ ಮಾಡಿ ತುಂಬಾ ಒಳ್ಳೆ ಕಥೆ ಸಿಕ್ಕಿದೆ. ನಾನು ನಿರ್ಮಾಣ ಮಾಡುತ್ತಿದ್ದೇನೆ. ಆದರೆ ಜಡೇಶ್ ಎಂಬುವವರು ಈ ಚಿತ್ರದ ನಿರ್ದೇಶನ ಮಾಡುತ್ತಾರೆ ಎಂದರು. ನಾನು ಇನ್ಸ್ಪೆಕ್ಟರ್ ವಿಕ್ರಂ ಚಿತ್ರಕ್ಕಾಗಿ ಗೋಕರ್ಣದಲ್ಲಿ ಶೂಟಿಂಗ್ನಲ್ಲಿದ್ದೆ. ಜಡೇಶ್ ಅವರು ಅಲ್ಲಿಗೇ ಬಂದ್ರು. ಶೂಟಿಂಗ್ ಮುಗಿಸಿ ಹೋಟೆಲ್ನಲ್ಲಿ ಊಟ ಮಾಡ್ತಾ ನನಗೆ ಕಥೆ ಹೇಳಿದ್ರು. ನನಗೆ ಕಥೆ ಕೇಳಿದಾಕ್ಷಣ ಬಹಳ ಇಂಪ್ರೆಸ್ ಆದೆ. ಎಲ್ಲಾ ಚಿತ್ರಗಳನ್ನೂ ನಾವು ಬಹಳ ಪ್ರೀತಿ ಮಾಡ್ತೀವಿ, ಆದರೆ ಕೆಲವು ಪಾತ್ರಗಳು ನಮ್ಮನ್ನ ಕಾಡೋದಕ್ಕೆ ಶುರುವಾಗುತ್ತೆ. ಅಂತ ಒಂದು ಪಾತ್ರ ಈ ಭರತ್ ಪಾತ್ರ ಅಂತ ಹೇಳಬಹುದು. ಈ ಕಾನ್ಸೆಪ್ಟ್ ಬಹಳ ಹೊಸದಾಗಿದೆ. ಇತ್ತೀಚೆಗೆ ನಮ್ಮ ರಿಪೋರ್ಟರ್ ಒಬ್ಬರು ಹೇಳ್ತಿದ್ರು ’ಯಾವ ಭಾಷೆಯಲ್ಲೂ ಈ ರೀತಿಯ ಕಥೆ ಬಂದಿಲ್ಲ’ ಅಂತ. ನಿಜ ಜೀವನಕ್ಕೆ ಬಹಳ ಹತ್ತಿರವಾಗಿದೆ. ಪ್ರಜ್ವಲ್ ಅಭಿಮಾನಿಗಳಿಗೆ ಹೇಗೆ ಕಾಣಿಸಬೇಕು ಪ್ರಜ್ವಲ್ ಅನ್ನೋದನ್ನ ಜಡೇಶ್ ಅವರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಕಮರ್ಷಿಯಲ್ ಎಲಿಮೆಂಟ್ಸ್ ಅನ್ನು ಬಹಳ ಚೆನ್ನಾಗಿ ಮಿಕ್ಸ್ ಮಾಡಿದ್ದಾರೆ.
ಈಗಾಗಲೇ ಟ್ರೇಲರ್ ರಿಲೀಸ್ ಆಗಿದೆ. ಒಳ್ಳೆಯ ರೆಸ್ಪಾನ್ಸ್ ಕೂಡ ಬಂದಿದೆ. ಬೇರೆ ಭಾಷೆಯ ನಟರು, ಟೆಕ್ನೀಷಿಯನ್ಸ್ ಸಹ ಫೋನ್ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಸಿನಿಮಾ ನೋಡೋಕೆ ಕಾತರರಾಗಿದ್ದೇವೆ ಎಂದು ಹೇಳಿದ್ದಾರೆ. ಬೇರೆ ಭಾಷೆಯವರೂ ಸಹ ನಮ್ಮನ್ನ ಗುರುತಿಸಿ ನಮಗೆ ಕಾಲ್ ಮಾಡಿ ವಿಶ್ ಮಾಡೋದು ಬಹಳ ಖುಷಿ ತಂದಿದೆ.
ನಾನು ಇವರೊಂದಿಗೆ ಕೆಲಸ ಮಾಡಿದ್ದೇನೆ ಅಂತ ಹೇಳ್ತಿಲ್ಲ, ಜಡೇಶ್ ಒಬ್ಬ ಅದ್ಭುತ ನಿರ್ದೇಶಕ, ತುಂಬಾ ಬುದ್ಧಿವಂತ. ಸಿನಿಮಾ ನೋಡಿದ್ರೆ ಎಲ್ಲರಿಗೂ ತಿಳಿಯುತ್ತೆ. ಒಬ್ಬ ನಿರ್ದೇಶಕ ಒಂದು ಚಿತ್ರ ನಿರ್ಮಾಣ ಮಾಡಿದರೆ ಎಷ್ಟು ಅದ್ಭುತವಾಗಿ ಮೂಡಿಬರುತ್ತೆ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸ್ಯಾಂಪಲ್. ಗುರು ದೇಶಪಾಂಡೆ ಅವರ ನಿರ್ದೇಶನದ ಚಿತ್ರಗಳನ್ನ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ನಿರ್ಮಾಪಕನಾಗಿಯೂ ಸಹ ನೀವೆಲ್ಲ ಈ ಚಿತ್ರವನ್ನ ನೋಡಿ ಮೆಚ್ಕೊಳ್ತೀರ ಅನ್ನೋ ನಂಬಿಕೆ ಇದೆ.
ಕ್ಯಾಮೆರಾಮೆನ್ ಸುಧಾಕರ್ ಅವರು ಹೆಚ್ಚು ಮಾತಾಡೋದಿಲ್ಲ. ಆದರೆ ಅವರ ಮಾತೆಲ್ಲವನ್ನು ಸಿನಿಮಾ ಮೂಲಕ ಮಾತನಾಡಿದ್ದಾರೆ. ಸುಧಾಕರ್ ಹಾಗೂ ಜಡೇಶ್ ಅವರದ್ದು ಅದ್ಭುತ ಕಾಂಬಿನೇಷನ್. ಅದು ಸಿನಿಮಾದಲ್ಲಿ ನಿಮಗೆ ಗೊತ್ತಾಗುತ್ತೆ. ನಿಶ್ವಿಕಾ ಅವರೊಂದಿಗೆ ಮೊದಲನೇ ಬಾರಿ ನಟಿಸುತ್ತಿದ್ದೇನೆ. ಹೊಸ ಕಾಂಬಿನೇಷನ್. ಬಹಳ ಅದ್ಭುತ ನಟಿ. ತುಂಬಾ ಒಳ್ಳೆಯ ಮನಸ್ಸಿನವರು.
ನಮ್ಮ ದೇಶ ಮೆಚ್ಚಿದಂತಹ ನಟ ಸಂಚಾರಿ ವಿಜಯ್ ಈ ಚಿತ್ರದಲ್ಲಿ ಸ್ಪೆಷಲ್ ಕ್ಯಾರೆಕ್ಟರ್ ಒಂದರಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಬೆನ್ನೆಲುಬಿದ್ದಂತೆ ಈ ಪಾತ್ರ. ಈ ಪಾತ್ರದಲ್ಲಿ ನಟಿಸಲು ಅವರು ಒಪ್ಪಿದ್ದು ಬಹಳ ಖುಷಿ ತಂದಿದೆ. ನ್ಯಾಷನಲ್ ಅವಾರ್ಡ್ ಪಡೆದಂತಹ ಒಬ್ಬ ವ್ಯಕ್ತಿ ನಮ್ಮೊಂದಿಗೆ ಈ ಚಿತ್ರದಲ್ಲಿ ನಟಿಸಿರೋದು ನಮಗೆ ಹೆಮ್ಮೆಯ ವಿಷಯ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಅದ್ಭುತವಾದ ಸಂಗೀತ ನೀಡಿದ್ದಾರೆ. ಸುಂದರವಾದ ಹಾಗೂ ಸೊಗಸಾದ ಸಂಗೀತವನ್ನು ನಮ್ಮೆಲ್ಲರ ಕಿವಿಗೆ ತಲುಪಿಸಿದ್ದಾರೆ. ಈಗಾಗಲೇ ಸಿನಿಮಾ ಎಲ್ಲರ ಮನಸ್ಸು ಗೆದ್ದಿದೆ. ಪ್ರತಿಯೊಬ್ಬರೂ ಈ ಚಿತ್ರ ನೋಡಿ ನಮ್ಮನ್ನ ಆಶೀರ್ವಾದ ಮಾಡಿ, ಕನ್ನಡವನ್ನು ಕನ್ನಡದ ಚಿತ್ರಗಳನ್ನು ಪ್ರೋತ್ಸಾಹಿಸಿ.
No Comment! Be the first one.