ಎಷ್ಟೇ ಬಲಶಾಲಿಯಾದರೂ ಆರೋಗ್ಯದ ಕಡೆ ಗಮನ ಕೊಡಬೇಕು ಅನ್ನೋದು ಇತ್ತೀಚೆಗೆ ಎಲ್ಲರಿಗೂ ಮನವರಿಕೆಯಾಗಿದೆ. ʻಬೆನ್ನು ನೋವು ತಾನೆʼ ಅಂತಾ ರೋರಿಂಗ್ ಸ್ಟಾರ್ ಉದಾಸೀನ ಮಾಡುವುದು ಬೇಡ.
ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಈ ಹೊತ್ತಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಚಿತ್ರ ಚಿತ್ರೀಕರಣ ಆರಂಭಿಸಬೇಕಿತ್ತು. ಕಳೆದ ಡಿಸೆಂಬರ್ ತಿಂಗಳಲ್ಲಿ ಶ್ರೀಮುರಳಿ ಬರ್ತಡೇ ಸಮಯದಲ್ಲಿ ʻಬಘೀರʼ ಟೈಟಲ್ ಅನಾವರಣಗೊಂಡಿತ್ತು. ಚಿತ್ರದ ನಿರ್ದೇಶಕ ಡಾ. ಸೂರಿ ಶೂಟಿಂಗಿಗಾಗಿ ಸಕಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದರು. ಕಲಾವಿದ, ತಂತ್ರಜ್ಞರ ಡೇಟ್ಸ್ ಕೂಡಾ ಫಿಕ್ಸ್ ಆಗಿತ್ತು. ಅಷ್ಟರಲ್ಲೇ ಶುರುವಾಯ್ತು ನೋಡಿ ಬಘೀರನಿಗೆ ಬೆನ್ನು ನೋವಿನ ಬಾಧೆ….
ಸಿನಿಮಾವೊಂದನ್ನು ಒಪ್ಪಿದ ನಂತರ ಪಾತ್ರಕ್ಕೆ ಬೇಕಿರುವ ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿಯೋ ಹೀರೋ ಶ್ರೀಮುರಳಿ. ಹೀಗಾಗಿ ಬಘೀರನಿಗಾಗಿ ದೇಹವನ್ನು ದಂಡಿಸಿ ಅಣಿಗೊಳಿಸಿಕೊಳ್ಳುತ್ತಿದ್ದರು. ಅದೊಂದು ದಿನ ಜಿಮ್ ನಲ್ಲಿ ವರ್ಕೌಟ್ ಮಾಡಬೇಕಾದರೆ ಬೆನ್ನಿನಲ್ಲಿ ಚಳುಕು ಕಾಣಿಸಿಕೊಂಡಿತು. ಸ್ನಾಯುಸೆಳೆತವಾಗಿರಬೇಕು ಅಂತಾ ಕಸರತ್ತು ಮುಂದುವರೆಸಿದ್ದರು. ನೋಡನೋಡುತ್ತಿದ್ದಂತೇ ಅಲುಗಾಡಲೂ ಆಗದಷ್ಟು ನೋವು ಆರಂಭವಾಯ್ತು. ಒಂದೆರಡು ದಿನಗಳ ವಿಶ್ರಾಂತಿ ನಂತರವೂ ಅದು ಶಮನವಾಗಲಿಲ್ಲ.
ಮೊನ್ನೆ ದಿನ ಪ್ರಥಮ್ ನಟಿಸಿ, ನಿರ್ದೇಶಿಸಿರುವ ʻನಟಭಯಂಕರʼ ಸಿನಿಮಾದ ಆಡಿಯೋ ರಿಲೀಸಿಗೆ ಅತಿಥಿಯಾಗಿ ಆಗಮಿಸಿದ ಶ್ರೀಮುರಳಿ ನಿಜಕ್ಕೂ ಹೈರಾಣಾಗಿದ್ದರು. ಬೆನ್ನುವ ನೋವು ಅವರನ್ನು ವಿಪರೀತ ಹಿಂಡುತ್ತಿರುವುದು ಎಲ್ಲರ ಗಮನಕ್ಕೂ ಬಂದಿತ್ತು. ಮೊದಲ ಬಾರಿಗೆ ಶ್ರೀಮುರಳಿಯವರ ದೇಹ ನಿತ್ರಾಣಗೊಂಡಿತ್ತು. ಮುಖ ಬಾಡಿತ್ತು. ಯಾಕೆಂದರೆ, ಶ್ರೀಮುರಳಿ ನಿಂತಲ್ಲಿ ನಿಲ್ಲದ, ಕುಂತಲ್ಲಿ ಕೂರದ ಪಾದರಸದಂತಾ ವ್ಯಕ್ತಿ. ಅವರಿದ್ದಲ್ಲಿ ಲವಲವಿಕೆ ಆವರಿಸಿಕೊಂಡಿರುತ್ತದೆ.
ಇದಾದ ನಂತರ ವೈದ್ಯರನ್ನು ಭೇಟಿಮಾಡಲಾಗಿ, ಅವರು ಕನಿಷ್ಟ ಒಂದೆರಡು ವಾರಗಳ ವಿಶ್ರಾಂತಿ ಸೂಚಿಸಿದ್ದಾರಂತೆ. ತೀರಾ ಶಸ್ತ್ರಚಿಕಿತ್ಸೆಯ ಅನಿವಾರ್ಯವಿಲ್ಲ. ದೇಹಕ್ಕೆ ರೆಸ್ಟ್ ನೀಡಿದರೆ ಎಲ್ಲವೂ ಸರಿಹೋಗುವುದಾಗಿ ಡಾಕ್ಟರ್ ಸಲಹೆ ನೀಡಿದ್ದಾರೆ.
ಎಷ್ಟೇ ಬಲಶಾಲಿಯಾದರೂ ಆರೋಗ್ಯದ ಕಡೆ ಗಮನ ಕೊಡಬೇಕು ಅನ್ನೋದು ಇತ್ತೀಚೆಗೆ ಎಲ್ಲರಿಗೂ ಮನವರಿಕೆಯಾಗಿದೆ. ʻಬೆನ್ನು ನೋವು ತಾನೆʼ ಅಂತಾ ರೋರಿಂಗ್ ಸ್ಟಾರ್ ಉದಾಸೀನ ಮಾಡುವುದು ಬೇಡ. ಆತುರದಿಂದ ಎದ್ದು ಬಂದು ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಉಸಾಬರಿಗೆ ಹೋಗದೆ, ಒಂದೆರಡು ದಿನಗಳ ಕಾಲ ಹೆಚ್ಚೇ ವಿರಾಮ ತೆಗೆದುಕೊಂಡು, ವಿಶ್ರಾಂತಿ ಪಡೆದು ಮತ್ತೆ ಬಘೀರನ ಜೊತೆಯಾಗಲಿ.
Comments