ಒಬ್ಬ ವ್ಯಕ್ತಿ ಪರಿಚಯವಾಗುವುದಕ್ಕೆ ಮುನ್ನವೇ ಅವರ ಸಾಧನೆ ಪರಿಚಯವಾಗುತ್ತಲ್ಲ ಅದು ನನಗೆ ಮುಖ್ಯ ಅನಿಸುತ್ತೆ ಯಾವಾಗಲೂ.. ಹಾಗೆ ಸಾಧನೆ ಪರಿಚಯವಾದ ನಂತರ ನನಗೆ ಪರಿಚಯವಾದವರು ಎಸ್ ಪಿ ರಘು ಅಥವಾ ‘ಪಲ್ಲಟ’ ರಘು.
ನಾನು ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಜ್ಯೂರಿಯಾಗಿದ್ದಾಗ ನಮ್ಮ ತಂಡದ ಮುಂದೆ ಬಂದ ಸಿನೆಮಾ- ಪಲ್ಲಟ.
ಹೊಸ ನಿರ್ದೇಶಕನ ಸಿನೆಮಾ ಎನ್ನುವ ಕಾರಣಕ್ಕೆ ನಿರ್ಣಾಯಕರ ತಂಡದಲ್ಲಿ ಕುತೂಹಲವೂ, ಆದರೆ ಆ ದಿನದವರೆಗೆ ಅದೇ ಕಾರಣಕ್ಕಾಗಿ ನೋಡಿದ ಸಾಕಷ್ಟು ಸಿನೆಮಾಗಳು ಕೊಟ್ಟ ನಿರಾಸೆಯಿಂದಾಗಿ ನಿರುತ್ಸಾಹವೂ ನಮ್ಮಲ್ಲಿ ತುಂಬಿತ್ತು. ಆದರೆ ‘ಪಲ್ಲಟ’ ತೆರೆಯ ಮೇಲೆ ಬಿಚ್ಚಿಕೊಳ್ಳುತ್ತ್ತಿದ್ದಂತೆ ಮೊದಲ ಫ್ರೇಮ್ ನಿಂದಲೇ ನಮ್ಮನ್ನು ಸೀಟಿಗೆ ಹಿಡಿದೆಳೆದು ಕೂರಿಸಿತ್ತು. ಒಂದು ಹಳ್ಳಿಯ ಒಬ್ಬ ತಮಟೆ ಬಡಿಯುವವನ ಸುತ್ತಾ ಬಿಚ್ಚಿಕೊಳ್ಳುತ್ತಾ ಹೋಗುವ ಕಥೆ ಒಂದು ಹಳ್ಳಿಯ ಕಥೆಯಾಗಿಯೂ, ಒಂದು ದೇಶದ ಕಥೆಯಾಗಿಯೂ, ಒಂದು ಜಾಗತೀಕರಣದ ಕಥೆಯಾಗಿಯೂ ತನ್ನ ಪಟ್ಟುಗಳನ್ನು ಬಿಟ್ಟುಕೊಟ್ಟಿತ್ತು.
ಹೀಗೆ ಸಿನೆಮಾದ ಮೂಲಕ ನಾನು ಕೈಕುಲುಕಿದ ಕೆಲವೇ ವ್ಯಕ್ತಿಗಳಲ್ಲಿ ರಘು ಒಬ್ಬರು.
ಆ ಚಿತ್ರೋತ್ಸವದ ಪ್ರಶಸ್ತಿ ಪ್ರದಾನ ನಡೆದದ್ದು ಮೈಸೂರಿನ ಅರಮನೆಯ ಮುಂಬಾಗದಲ್ಲಿ. ಆ ದಿನ ಸಿನೆಮಾದ ಬಗ್ಗೆ ಯಾವ ನಿರೀಕ್ಷೆಯೂ ಇಟ್ಟುಕೊಳ್ಳದೆ, ಚಿತ್ರಕರ್ಮಿಗಳ ಗ್ಯಾಲರಿ ಯಲ್ಲೂ ಕೂರದೆ ಎಲ್ಲೋ ದೂರದಲ್ಲಿ ಪಡ್ಡೆಗಳಂತೆ ಹರಟುತ್ತಾ ನಿಂತಿದ್ದದ್ದು ಇದೇ ‘ಪಲ್ಲಟ’ದ ಚಿತ್ರತಂಡ. ಪ್ರಶಸ್ತಿ ಘೋಷಣೆಯಾದಾಗ ನಂಬಲೇ ಆಗದವರಂತೆ ಅಷ್ಟು ದೂರದಿಂದ ಓಡೋಡುತ್ತ ಬಂದು ಏದುಸಿರು ಬಿಡುತ್ತಾ ಪ್ರಶಸ್ತಿ ಸ್ವೀಕರಿಸಿತ್ತು ಈ ತಂಡ.
ಅಂದು ನೇರಾನೇರ ನಮ್ಮ ಪರಿಚಯ
ಅಲ್ಲಿಂದ ಇಲ್ಲಿಯವರೆಗೂ ರಘು ಆತ್ಮೀಯರು. ಅವರ ಜೊತೆಗಿದ್ದಾಗ ನನಗೆ ಸಜ್ಜನರ ಸಂಗದಲ್ಲಿದ್ದೇನೆ ಎನ್ನುವ ಖಾತರಿ. ಅವರ ಬಳಗದ ಹೆಸರೇ ‘ಹಳ್ಳಿಚಿತ್ರ’. ತಿಪಟೂರಿನ ಒಂದು ಹಳ್ಳಿಯಿಂದ ನಡೆದು ಬಂಡ ಈ ಹುಡುಗ ಗಾಂಧಿ ನಗರವನ್ನು ಕೈಗೆಟುಕಿಸಿಕೊಳ್ಳುವವರೆಗೆ ತನ್ನ ಕನಸನ್ನು ಜೀವಂತ ಇಟ್ಟುಕೊಂಡನಲ್ಲಾ ಅದು ನನಗೆ ಮುಖ್ಯ. ಅಥವಾ ‘ಡಾಲಿ’ ಧನಂಜಯ್ ಹೇಳಿದಂತೆ ಮೈಸೂರಿನಲ್ಲೂ ಗಾಂಧಿನಗರವಿದೆ. ಗಾಂಧಿನಗರಕ್ಕಾಗುವಷ್ಟು ಚಿತ್ರಕರ್ಮಿಗಳು ಮೈಸೂರಿನಲ್ಲಿಯೇ ಅರಳಿ ನಿಂತಿದ್ದಾರೆ. ಈಗ ಪ್ರತೀ ಊರಲ್ಲೂ ಅಂತಹ ಗಾಂಧಿನಗರವಿದೆ. ತಿಪಟೂರಿನಲ್ಲಿ ಅಂತಹ ಗಾಂಧಿ ನಗರದ ಕನಸಿಗೆ ನೆಲ ಹಸನು ಮಾಡಿದ್ದು ಇದೇ ಎಸ್ ಪಿ ರಘು
ಪ್ರತಿಯೊಂದೂ ದೃಶ್ಯವಾಗಿಸಿಯೇ ಮುಂದಿಡಬೇಕಾದ ಒತ್ತಡದ ಕಾಲದಲ್ಲಿ ನಾವಿದ್ದೇವೆ. ಹಾಡು, ಊಟ, ಹರಟೆ ಎಲ್ಲವೂ ದೃಶ್ಯವಾಗಿ ನಮ್ಮೆದುರು ಬಂದರೆ ಮಾತ್ರ ಅದು ಬದುಕಲು ಸಾಧ್ಯ. ಅಷ್ಟರಮಟ್ಟಿಗೆ ಮೊಬೈಲ್ ನಮ್ಮನ್ನು ಬದಲಿಸಿಹಾಕಿದೆ. ಇಂತಹ ಹಂತದಲ್ಲಿ ರೇಸಿಗೆ ಬಿದ್ದವರಂತೆ ನೋಡುಗರನ್ನು ಸೆಳೆದುಕೊಳ್ಳಲು ಹೋಗಿ ದೃಶ್ಯ ಮಾಲಿನ್ಯ ಸೃಷ್ಟಿಸಿದವರೇ ಹೆಚ್ಚು. ಹಾಗೆಂದು ಹತಾಶೆಗೊಳ್ಳುವಾಗಲೇ ಎಸ್ ಪಿ ರಘು ಅಂತಹವರು ಪುಟಿದು ನಿಲ್ಲುತ್ತಾರೆ. ಈಗ ‘ಗಿಫ್ಟ್ ಬಾಕ್ಸ್’ ನಲ್ಲಿ ರಘು ಕೈಗೆತ್ತಿಕೊಂಡಿರುವುದು ಸಾಮಾನ್ಯವಾದ ಕಥಾ ಹಂದರವನ್ನೇನಲ್ಲ. ಮೈಸೂರಿನ ‘ಒಡನಾಡಿ’ಯ ಗೆಳೆಯರು ಹೇಳಿದ ಮಾನವ ಕಳ್ಳ ಸಾಗಾಣಿಕೆಯ ಘೋರ ಕಥೆಗಳನ್ನು ರಘು ಹಿರಿ ತೆರೆಗೆ ತರುತ್ತಿದ್ದಾರೆ.
ರಘು ಸಂಕೋಚದ ಹುಡುಗ. ಪಲ್ಲಟ ಸಿನೆಮಾ ಮಾಡಿದಾಗಲೂ ತನ್ನ ಬಣ್ಣಿಸಿಕೊಳ್ಳಲಿಲ್ಲ. ಈಗಲೂ ಹೊಸ ಸಿನೆಮಾ ಇನ್ನೇನು ತೆರೆಗೆ ಹೆಜ್ಜೆ ಹಾಕಲು ಸಜ್ಜಾಗುತ್ತಿರುವಾಗಲೂ ಸದ್ದುಗದ್ದಲದಿಂದ ದೂರ.ಇಂತಹ ರಘುವಿಗೆ ಇನ್ನಷ್ಟು ಸಿನೆಮಾ ಮಾಡುವ ಶಕ್ತಿಯನ್ನು ನೋಡುಗರು ತುಂಬಲಿ ಆ ಮೂಲಕ ಚಿತ್ರರಂಗವೂ ಫ್ಯಾಂಟಸಿಗಳಲ್ಲಿ ಕಳೆದುಹೋಗದಂತೆ ನೋಡಿಕೊಳ್ಳಲಿ