ರಂಗಭೂಮಿಯಿಂದ ಬಂದ ಗಟ್ಟಿ ಪ್ರತಿಭೆಗಳೇ ಸೇರಿ ರೂಪಿಸಿರೋ ಚಿತ್ರ ಗಿಣಿ ಹೇಳಿದ ಕಥೆ. ಈ ಸಿನಿಮಾವನ್ನು ನಿರ್ಮಾಣ ಮಾಡಿರುವವರು ದೇವ್ ರಂಗಭೂಮಿ. ಇದಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದ್ದೇ. ಮುಖ್ಯ ಪಾತ್ರವನ್ನೂ ಕೂಡಾ ದೇವ್ ಅವರೇ ನಿರ್ವಹಿಸಿದ್ದಾರೆ. ಹೀಗೆ ಒಂದು ಚಿತ್ರದ ಎಲ್ಲಾ ಜವಾಬ್ದಾರಿಗಳನ್ನೂ ಹೆಗಲ ಮೇಲೆ ಹಾಕಿಕೊಂಡು ಸಂಭಾಳಿಸಿರುವ ದೇವ್ ಹೈರಾಣಾಗಿಲ್ಲ. ಬದಲಾಗಿ ಭಿನ್ನ ಪಥದ, ಎಲ್ಲರಿಗೂ ಇಷ್ಟವಾಗುವ ಚಿತ್ರವೊಂದನ್ನು ಮಾಡಿರುವ ಖುಷಿಯಿಂದಿದ್ದಾರೆ.
ದೇವ್ ರಂಗಭೂಮಿಯಿಂದಲೇ ನಟನಾಗಿ ರೂಪುಗೊಂಡವರು. ಹಲವಾರು ನಾಟಕ ತಂಡಗಳ ಜೊತೆ ಗುರುತಿಸಿಕೊಂಡಿರೋ ಅವರು ಪ್ರಖ್ಯಾತ ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ. ಲೆಕ್ಕವಿರದಷ್ಟು ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಹೆಸರ ಮುಂದೆಯೂ ರಂಗಭೂಮಿ ಎಂಬುದನ್ನು ಸೇರಿಸಿಕೊಂಡಿರೋದೇ ದೇವ್ಗೆ ರಂಗಭೂಮಿಯ ಬಗ್ಗೆ ಅದೆಂಥಾ ಅಕ್ಕರಾಸ್ಥೆ ಇದೆ ಎಂಬುದಕ್ಕೊಂದು ಉದಾಹರಣೆ.
ಹೀಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದುಕೊಂಡೇ ಸಿನಿಮಾ ಬಗ್ಗೆ ವ್ಯಾಮೋಹ ಹೊಂದಿದ್ದವರು ದೇವ್. ಈ ನಡುವೆ ಒಂದಷ್ಟು ಧಾರಾವಾಹಿಗಳಿಗೆ ಸಂಭಾಷಣೆಯನ್ನೂ ಬರೆದಿದ್ದ ಅವರು ತುಂಬಾ ವರ್ಷಗಳ ಹಿಂದೆಯೇ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದರು. ಆದರೆ ಅದನ್ನು ಸಿನಿಮಾ ಆಗಿ ಕಟ್ಟಿ ಕೊಡುವ ಸ್ಕ್ರಿಫ್ಟ್ ರೆಡಿ ಮಾಡಲು ಹಿಡಿದದ್ದು ಬರೋಬ್ಬರಿ ನಾಲಕ್ಕು ವರ್ಷ.
ಹಾಗೆ ಸಿದ್ಧಗೊಂಡ ಕಥೆಯನ್ನು ಚಿತ್ರವಾಗಿಸಲು ಮುಂದಾದ ದೇವ್ ರಂಗಭೂಮಿ ಕಲಾವಿದರಿಗೇ ಮೊದಲ ಆಧ್ಯತೆ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಎಂಭತ್ತೇಳು ಪಾತ್ರಗಳಿದ್ದಾವೆ. ಅದರಲ್ಲಿ ಎಂಬತ್ನಾಲಕ್ಕು ಪಾತ್ರಗಳಿಗೆ ರಂಗಭೂಮಿ ಕಲಾವಿದರೇ ಜೀವ ತುಂಬಿದ್ದಾರೆಂಬುದು ನಿಜವಾದ ವಿಶೇಷ. ಈ ಚಿತ್ರದ ಕಥೆಯೂ ವಿಶಿಷ್ಟ ಬಗೆಯದ್ದು. ಅದನ್ನು ರೂಪಿಸಿರೋ ಬಗೆಯೂ ಕೂಡಾ ಅಷ್ಟೇ ವಿಶೇಷವಾಗಿದೆ.
#