ಕಳೆದ ವರ್ಷದ ಆರಂಭದ ಹೊತ್ತಿಗೆಲ್ಲ ಕನ್ನಡ ಚಿತ್ರರಂಗ ಹೊಸಾ ಆಲೋಚನೆ, ವಿಭಿನ್ನ ಪ್ರಯೋಗಗಳಿಂದ ಸಂಪನ್ನವಾಗಿತ್ತು. ಅದು ಯಥಾಪ್ರಕಾರ ಹಂತ ಹಂತವಾಗಿ ಮುಂದುವರೆದುಕೊಂಡು ಬಂದಿದೆ. ಇದೀಗ ಅದೇ ಸಾಲಿನಲ್ಲಿರೋ ಗಿಣಿ ಹೇಳಿದ ಕಥೆ ಎಂಬ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿ ಜೋರಾಗಿಯೇ ಚಾಲ್ತಿಯಲ್ಲಿದೆ.
ಇನ್ನೇನು ಬಿಡುಗಡೆಗೆ ದಿನಗಣನೆ ಎಣಿಸುತ್ತಿರೋ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ನಾಗರಾಜ್ ಉಪ್ಪುಂದ. ಗಿಣಿ ಹೇಳಿದ ಕಥೆಗೆ ಕಥೆ ಬರೆದು, ಚಿತ್ರಕಥೆ ಸಂಭಾಷಣೆಯನ್ನೂ ಸೃಷ್ಟಿಸಿ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿರುವವರು ದೇವ್ ರಂಗಭೂಮಿ. ಈ ಚಿತ್ರಕ್ಕೆ ನಾಯಕನೂ ಅವರೇ. ಒಂದರ್ಥದಲ್ಲಿ ಒಟ್ಟಾರೆ ಚಿತ್ರದ ಬಹು ದೊಡ್ಡ ಜವಾಬ್ದಾರಿಯನ್ನು ದೇವ್ ಮೈಮೇಲೆಳೆದುಕೊಂಡಿದ್ದಾರೆ.
ದೇವ್ ಪಾಲಿಗೆ ರಂಗಭೂಮಿಯದ್ದು ಅಖಂಡ ಹನ್ನೆರಡು ವರ್ಷಗಳ ನಂಟು. ಅಲ್ಲಿ ನಟನಾಗಿ ರೂಪುಗೊಂಡಿದ್ದ ಅವರು ಒಂದಷ್ಟು ಧಾರಾವಾಹಿಗಳಿಗೆ ಸಂಭಾಷಣೆ ಬರೆದ ಅನುಭವವನ್ನೂ ಹೊಂದಿದ್ದಾರೆ. ಸಿದ್ಧ ಸೂತ್ರಗಳನ್ನು ಮೀರಿದ, ಬದುಕಿಗೆ ಹತ್ತಿರಾದ ಕಥೆಯೊಂದನ್ನು ಸಿನಿಮಾ ಮಾಡಬೇಕೆಂಬ ಅವರ ಕನಸಿನ ಫಲವಾಗಿಯೇ ಗಿಣಿ ಹೇಳಿದ ಕಥೆ ರೂಪುಗೊಂಡು ಬಿಡುಗಡೆಗೆ ಸಿದ್ಧವಾಗಿದೆ.
ಇದು ಮನೋರಂಜನೆಯ ಮೂಲಕವೇ ಮಹತ್ತರವಾದೊಂದು ಕಥೆ ಹೇಳ ಹೊರಟಿರೋ ಗಿಣಿ. ಈ ಚಿತ್ರದ ಹಾಡು, ಟೀಸರ್ ಸೇರಿದಂತೆ ಎಲ್ಲವೂ ಪ್ರೇಕ್ಷಕರನ್ನು ಸೆಳೆದಿವೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಒಟ್ಟು ಎಂಬತ್ತೇಳು ಪಾತ್ರಗಳಿದ್ದಾವೆ. ಅದರಲ್ಲಿ ಎಂಬತ್ನಾಲಕ್ಕು ಪಾತ್ರಗಳನ್ನು ರಂಗಭೂಮಿ ಕಲಾವಿದರಢೇ ನಿರ್ವಹಿಸಿದ್ದಾರೆ.ಇದು ರಂಗಭೂಮಿಯ ಬಗ್ಗೆ ದೇವ್ ಅವರಿಗಿರೋ ಪ್ರೀತಿಯ ಸಂಕೇತ. ಈ ಕಾರಣದಿಂದಲೇ ಈವತ್ತಿಗೆ ಹೊಸಾ ಅಲೆಯ ಚಿತ್ರವಾಗಿ ಗಿಣಿ ಹೇಳಿದ ಕಥೆ ಜನರ ನಡುವೆ ಓಡಾಡಲಾರಂಭಿಸಿದೆ. ಗಿಣಿ ಹೇಳೋ ಕಥೆ ಯಾವುದು? ಅದರ ಮಜಾ ಏನೆಂಬ ಸತ್ಯ ಇಷ್ಟರಲ್ಲಿಯೇ ಅನಾವರಣಗೊಳ್ಳಲಿದೆ.
#