ತಮಿಳರಿಗೆ ಸವಾಲೆಸೆದು ಬಂದ ಹುಡುಗನ ಕನಸಿನಂಥಾ ಚಿತ್ರ!

ಮೂವರು ಹೊಸ ಹುಡುಗರು ನಾಯಕರಾಗಿರೋ ಗಿರ್ ಗಿಟ್ಲೆ ಚಿತ್ರ ಇದೇ ಮಾರ್ಚ್ 15ರಂದು ತೆರೆಗಾಣಲು ರೆಡಿಯಾಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸಾ ಹುರುಪಿನ, ಹೊಸಾ ಆಲೋಚನೆಯ ಯುವ ನಿರ್ದೇಶಕರೋರ್ವರ ಆಗಮನವೂ ಆಗಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಅಪ್ಪಟ ಅಭಿಮಾನಿಯಾಗಿದ್ದುಕೊಂಡು ಆ ಮೂಲಕವೇ ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದ ರವಿಕಿರಣ್ ಕನ್ನಡ ಚಿತ್ರರಂಗವನ್ನು ಅವಹೇಳನ ಮಾಡಿದ್ದ ತಮಿಳರಿಗೇ ಸೆಡ್ಡು ಹೊಡೆದು ಬಂದವರು. ಆ ಕಿಚ್ಚನ್ನು ಎದೆಯೊಳಗಿಟ್ಟುಕೊಂಡೇ ಡಿಫರೆಂಟಾದೊಂದು ಕಥೆ ರೆಡಿ ಮಾಡಿಕೊಂಡ ರವಿಕಿರಣ್ ಅವರನ್ನು ಕೆಲಮಂದಿ ನಿರಾಸೆಗೊಡ್ಡಿದರೂ ಅವರೊಳಗಿನ ಸಿನಿಮಾ ಕನಸು ಮಾತ್ರ ಸದಾ ನಿಗಿನಿಗಿಸುತ್ತಲೇ ಇತ್ತು. ಅದರ ಫಲವಾಗಿಯೇ ಇಂದು ಈ ಚಿತ್ರ ಭರವಸೆಯ ಹಿಮ್ಮೇಳದೊಂದಿಗೆ ಅದ್ದೂರಿಯಾಗಿಯೇ ತೆರೆ ಕಾಣಲು ರೆಡಿಯಾಗಿದೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ರವಿಕಿರಣ್ ಅವರಿಗೆ ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸೇನೂ ಇರಲಿಲ್ಲ. ಆದರೆ ಆರಂಭದಿಂದಲೂ ಅವರ ಪಾಲಿಗೆ ರಿಯಲ್ ಸ್ಟಾರ್ ಉಪೇಂದ್ರ ಎಂದರೆ ಅದೆಂಥಾದ್ದೋ ಆಕರ್ಷಣೆ. ಬಹುಶಃ ಆರಂಭದ ದಿನಗಳಲ್ಲಿ ಉಪ್ಪಿ ಮೇಲಿನ ಈ ಅಭಿಮಾನವೇ ಕೈತುಂಬಾ ಸಂಬಳ ಕೊಡೋ ಕೆಲಸವನ್ನೂ ಧಿಕ್ಕರಿಸಿ ಬಣ್ಣದ ಜಗತ್ತನ್ನು ಖಾಯಂ ಆಗಿ ಅಪ್ಪಿಕೊಳ್ಳುವಂತೆ ಮಾಡೀತೆಂಬ ಸಣ್ಣ ಸೂಚನೆ ರವಿಕಿರಣ್ ಅವರಿಗೀ ಇರಲಿಲ್ಲವೇನೋ…
ಒಂದು ಪ್ರತಿಷ್ಠಿತ ಖಾಸಗಿ ಕಂಪೆನಿಯಲ್ಲಿ ಎಚ್‌ಆರ್ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿದ್ದವರು ರವಿಕಿರಣ್. ಆ ಹೊತ್ತಿನಲ್ಲಿಯೇ ಉಪೇಂದ್ರ ಅವರ ವೀರಾಭಿಮಾನಿಯಾಗಿದ್ದವರ ಪಾಲಿಗೆ ಸಿನಿಮಾ ಆಸಕ್ತಿ ಬೆಳೆದುಕೊಂಡಿದ್ದೂ ಕೂಡಾ ಆ ಕಾರಣದಿಂದಲೇ. ಸಿನಿಮಾವನ್ನು ವೃತ್ತಿಯಾಗಿಸಿಕೊಳ್ಳೋರು ಬೇಕಾದಷ್ಟು ಮಂದಿ ಸಿಗುತ್ತಾರೆ. ಆದರೆ ಸಿನಿಮಾವನ್ನು ಉಪ್ಪಿಯಷ್ಟು ತೀವ್ರವಾಗಿ ಪ್ರೀತಿಸೋರು ಸಿಗೋದು ವಿರಳ. ಅವರಿಂದಲೇ ಸಿನಿಮಾ ಧ್ಯಾನಕ್ಕೆ ಒಗ್ಗಿಕೊಂಡಿದ್ದ ರವಿಕಿರಣ್ ಬಣ್ಣದ ನಂಟು ಮೆತ್ತಿಕೊಂಡಿದ್ದು ಕೂಡಾ ಆಕಸ್ಮಿಕವಾಗಿಯೇ. ಅವರು ಖಾಸಗಿ ಕಂಪೆನಿಯೊಂದರಲ್ಲಿ ಎಚ್ ಆರ್ ರಿಕ್ರೂಟರ್ ಆಗಿದ್ದರಲ್ಲಾ? ಆ ಕಾಲದಲ್ಲಿ ಒಂದಷ್ಟು ಸ್ನೇಹಿತರು ಸೇರಿಕೊಂಡು ಕಿರುಚಿತ್ರವೊಂದನ್ನು ಮಾಡಲು ಮುಂದಾಗಿದ್ದರು. ಅದರಲ್ಲಿ ಸಣ್ಣದೊಂದು ಪಾತ್ರದಲ್ಲಿ ಅಭಿನಯಿಸೋ ಅವಕಾಶ ರವಿಕಿರಣ್ ಗೆ ಸಿಕ್ಕಿತ್ತು.
ಹಾಗೆ ನಟಿಸಲು ಹೋದ ರವಿಕಿರಣ್ ಪಾಲಿಗೆ ಎಲ್ಲವೂ ಆಸಕ್ತಿದಾಯಕವಾಗಿಯೇ ಕಂಡಿತ್ತು. ಇಡೀ ಚಿತ್ರದ ಮೇಕಿಂಗ್‌ನತ್ತ ಅವರ ಆಸಕ್ತಿ ಪ್ರಧಾನವಾಗಿ ಕೇಂದ್ರೀಕರಿಸಿತ್ತು. ಕ್ಯಾಮೆರಾಮನ್ ಜೊತೆಗೇ ನಿಂತುಕೊಂಡು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಾ ರವಿಕಿರಣ್ ಸಿನಿಮಾವೊಂದನ್ನು ಪ್ರತೀ ದಿಕ್ಕಿನಲ್ಲಿಯೂ ಪರಿಭಾವಿಸಿಕೊಳ್ಳಲಾರಂಭಿಸಿದ್ದರು. ಇದೊಂದು ಕಿರುಚಿತ್ರದ ಅನುಭವ ಮತ್ತು ಉಪೇಂದ್ರ ಮೇಲಿನ ಅಭಿಮಾನ ಅದೆಷ್ಟು ತೀವ್ರವಾಗಿತ್ತೆಂದರೆ, ೨೦೦೮ರಲ್ಲಿ ಕೈ ತುಂಬಾ ಸಂಬಳ ಕೊಡುತ್ತಿದ್ದ ಕೆಲಸವನ್ನೂ ಬಿಟ್ಟು ರವಿಕಿರಣ್ ಸಿನಿಮಾವೇ ತನ್ನ ಗುರಿಯೆಂಬುದನ್ನು ನಿರ್ಧರಿಸಿಕೊಂಡು ನಿಂತಿದ್ದರು!

ಹಾಗೆ ಇದ್ದ ಕೆಲಸವನ್ನೂ ಬಿಟ್ಟ ನಂತರ ಅವರ ಮುಂದಿದ್ದದ್ದು ಸಿನಿಮಾವನ್ನು ಇಂಚಿಂಚು ಅರಗಿಸಿಕೊಳ್ಳಬೇಕೆಂಬ ಪ್ರಧಾನವಾದ ಗುರಿ. ಆ ಕ್ಷಣದಲ್ಲಿ ಹೇಗಾದರೂ ಮಾಡಿ ಉಪೇಂದ್ರ ಅವರೊಂದಿಗೆ ಸೇರಿಕೊಂಡು ಅವರೊಂದಿಗೆ ಕೆಲಸ ಮಾಡಬೇಕೆಂಬ ಆಸೆಯೊಂದು ಅವರೊಳಗೆ ಚಿಗುರಿಕೊಂಡಿತ್ತು. ತನ್ನ ಎಲ್ಲ ಬೆಳವಣಿಗೆಯ ಹಿಂದೆ ಉಪೇಂದ್ರ ಅವರ ಹೆಸರು ಮಾತ್ರವೇ ಉಇರಬೇಕೆಂಬ ಅಚಲ ಹಂಬಲವೂ ಅವರೊಳಗಿತ್ತು. ಅದು ಹೇಗೋ ಅವರ ಸಂಪರ್ಕವನ್ನೂ ಸಾಧಿಸಿದ್ದರು. ಇದೇ ಅವಧಿಯಲ್ಲಿ ಒಂದೆರಡು ಸಣ್ಣ ಬಜೆಟ್ಟಿನ ತಮಿಳು ಚಿತ್ರಗಳಲ್ಲಿಯೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದರು. ಬಹುಶಃ ಅದು2010 ಅವಧಿ. ಆಗ ಒಂದು ತಮಿಳು ಚಿತ್ರದಲ್ಲಿ ರವಿಕಿರಣ್ ಕಾರ್ಯ ನಿರ್ವಹಿಸುತ್ತಿದ್ದರು. ಅದೇ ಸಮಯದಲ್ಲಿ ಒಂದ್ಯಾವುದೋ ತಮಿಳು ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡೋ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿ ಪ್ರಕಟವಾಗಿತ್ತು. ಅದನ್ನು ಕಂಡ ತಮಿಳರೊಂದಷ್ಟು ಮಂದಿ ನಿಮ್ಮದು ಬರೀ ತಮಿಳು ಚಿತ್ರಗಳನ್ನ ರೀಮೇಕ್ ಮಾಡೋದೇ ಆಯ್ತು, ಸ್ವಂತ ಕಥೆಯ ಚಿತ್ರ ಮಾಡೋ ಯೋಗ್ಯತೆ ನಿಮಗಿಲ್ಲವಾ ಅಂತ ರವಿಕಿರಣ್ ಅವರನ್ನು ಕಿಚಾಯಿಸಿದ್ದರು. ಇದರಿಂದ ರವಿಕಿರಣ್ ಅದೆಷ್ಟು ಕೆರಳಿದ್ದರೆಂದರೆ, ನಾನೂ ಒಂದು ಕನ್ನಡ ಸಿನಿಮಾ ಮಾಡ್ತೀನಿ. ಅದು ತಮಿಳಿನಲ್ಲಿ ಬಂದಿದ್ರೆ ಚೆನ್ನಾಗಿರ‍್ತಿತ್ತು ಅಂತ ನೀವುಗಳೇ ಹೊಟ್ಟೆ ಉರಿಸಿಕೊಳ್ಳುವಂತಿರುತ್ತೆ ಅಂದವರೇ ಬಟ್ಟೆ ಬರೆ ಪ್ಯಾಕ್ ಮಾಡಿಕೊಂಡು ಬೆಂಗಳೂರಿನತ್ತ ಹೊರಟು ಬಿಟ್ಟಿದ್ದರಂತೆ!

ಅಂಥಾದ್ದೊಂದು ಬಿಸಿಯಲ್ಲಿಯೇ ಅವರೊಳಗೆ ಹದವಾದ ಕಥೆ ಗಿರ್ ಗಿಟ್ಲೆ. ತಮಿಳರು ಕೊಟ್ಟ ಕ್ವಾಟಲೆ ಮತ್ತು ಉಪೇಂದ್ರ ಅವರು ಹೇಳಿದ್ದೊಂದು ಅಮೂಲ್ಯವಾದ ಮಾತಿನಾಧಾರದಲ್ಲಿಯೇ ಈ ಇಡೀ ಕಥೆಯನ್ನ ರವಿಕಿರಣ್ ಸಿದ್ಧಗೊಳಿಸಿಕೊಂಡಿದ್ದರು. ಉಪೇಂದ್ರ ಸಿನಿಮಾ ಬಗ್ಗೆ ಮಾತಾಡುತ್ತಾ ‘ಕಾಮನ್ ಆಡಿಯನ್ಸ್ ಏನೇ ತೆಗೆದುಕೊಂಡ್ರೂ ಮುಟ್ಟಿ ನೋಡಿ, ಅಳೆದೂ ತೂಗಿ ಆ ಮೇಲೆ ತಗೋತಾರೆ. ಆದರೆ ಸಿನಿಮಾನ ಮಾತ್ರ ಮೊದಲು ಕಾಸು ಕೊಟ್ಟು ಆಮೇಲೆ ನೋಡ್ತಾರೆ. ಇಲ್ಲಿ ಕ್ಯಾಶ್ ಬ್ಯಾಕ್ ವ್ಯವಸ್ಥೆ ಇಲ್ಲ. ಆದ್ರಿಂದ ಎಲ್ಲ ಪ್ರೇಕ್ಷಕರನ್ನೂ ಗಮನದಲ್ಲಿಟ್ಟಿಕೊಂಡು ನ್ಯಾಯವಾಗಿ ಸಿನಿಮಾ ಮಾಡ್ಬೇಕು’ ಎಂಬರ್ಥದಲ್ಲಿ ಹೇಳಿದ್ದರಂತೆ. ಅದಕ್ಕನುಗುಣವಾಗಿಯೇ ಗಿರ್‌ಗಿಟ್ಲೆ ಚಿತ್ರವನ್ನು ರವಿಕಿರಣ್ ಭರ್ಜರಿ ತಯಾರಿಯೊಂದಿಗೇ ರೂಪಿಸಿದ್ದಾರೆ.

ಗಿರ್‌ಗಿಟ್ಲೆ ಚಿತ್ರ ಆರಂಭಿಕವಾಗಿ ಟೇಕಾಫ್ ಆಗಿದ್ದು 2012ರಲ್ಲಿ. ಮಹಾನುಭಾವರೊಬ್ಬರು ಮುಂದೆ ಬಂದು ಉತ್ಸಾಹದಿಂದಲೇ ಸಿನಿಮಾ ಮಾಡೋದಾಗಿ ಹೇಳಿದ್ದರು. ಭರ್ಜರಿಯಾಗಿ ಮುಹೂರ್ತ ನಡೆಸಿ ಅದರ ಮೂಲಕ ಒಂದಷ್ಟು ಪ್ರಚಾರವನ್ನೂ ಪಡೆದುಕೊಂಡಿದ್ದ ಅವರು ಊರ ಕಡೆ ಹೋಗಿ ಕಾಸು ತೆಗೆದುಕೊಂಡು ಬರೋದಾಗಿ ಹೇಳಿ ಹೋದವರು ಆ ಮೇಲೆ ಮುಖ ತೋರಿಸಿರಲಿಲ್ಲ. ತಮ್ಮದೇ ಕಾಸಲ್ಲಿ ಮುಹೂರ್ತ ಮಾಡಿ ನಾಲಕ್ಕು ದಿನದ ಚಿತ್ರೀಕರಣವನ್ನೂ ಮುಗಿಸಿದ್ದ ರವಿಕಿರಣ್ ಬೇರೆ ನಿರ್ವಾಹವಿಲ್ಲದೆ ಚಿತ್ರವನ್ನ ನಿಲ್ಲಿಸಿದ್ದರು. ಆದರೆ ಆ ಬಳಿಕ ಸತತವಾಗಿ ಮೂರೂವರೆ ವರ್ಷ ಕಂಡ ಕಂಡ ನಿರ್ಮಾಪಕರ ಮನೆಗಳಿಗೆ ಚಪ್ಪಲಿ ಸವೆಸಿದ್ದರು. ಆದರೆ ಅವರ ಕಡೆಯಿಂದ ಕಥೆ ಅದ್ಭುತವಾಗಿದೆ ಎಂಬ ಮೆಚ್ಚುಗೆ, ತಮ್ಮ ಮಕ್ಕಳು ಮರಿಯನ್ನೇ ಹೀರೋಗಳನ್ನಾಗಿ ಮಾಡಿ ಎಂಬ ಬೇಡಿಕೆ, ಫೇಮಸ್ ಹೀರೋಗಳನ್ನು ಹಾಕಿಕೊಳ್ಳುವಂತೆ ಬಿಟ್ಟಿ ಸಲಹೆಗಳ ಹೊರತಾಗಿ ಬೇರೇನೂ ಸಿಕ್ಕಿಲ್ಲ!

ಆದರೆ ರವಿಕಿರಣ್ ಅವರಿಗೆ ತಮ್ಮ ಕಥೆ, ಸ್ಕ್ರಿಫ್ಟ್ ಮೇಲೆ ನಂಬಿಕೆಯಿತ್ತು. ಇದರ ಮೂರು ಮುಖ್ಯ ಪಾತ್ರಗಳಿಗೆ ಪ್ರದೀಪ್, ಚಂದ್ರು ಮತ್ತು ಗುರು ಫಿಕ್ಸಾಗಿ ಹೋಗಿದ್ದರು. ಅವರೂ ಕೂಡಾ ವರ್ಷಗಟ್ಟಲೆ ಸಂಯಮದಿಂದಲೇ ಕಾದಿದ್ದರು. ಕಡೆಗೂ ಅವರೇ ಗಿರ್ ಗಿಟ್ಲೆ ಮೂಲಕ ಹೀರೋಗಳಾಗಿ ಪರಿಚಯವಾಗುತ್ತಿದ್ದಾರೆ. ಇದೀಗ ಸ್ಕ್ರೀನ್ ಪ್ಲೇಯಲ್ಲಿ ಬೇರೆಯದ್ದೇ ಲೋಕ ತೋರಿಸಲಿರೋ ಪಕ್ಕಾ ಆಕ್ಷನ್ ಮೆಥೆಡ್ಡಿನಲ್ಲಿ ಈ ಸಿನಿಮಾ ತಯಾರಾಗಿ ನಿಂತಿದೆ. ಈ ಏಳು ಬೀಳಿನ ಹಾದಿಯಲ್ಲಿ ರವಿಕಿರಣ್ ಸಾವಧಾನದಿಂದ ಮುಂದುವರೆಯುವಂತೆ ಮಾಡಿದ್ದ ಉಪೇಂದ್ರ ಅವರ ಸಾಹಚರ್ಯ. ಉಪ್ಪಿ ಅಭಿನಯದ ಸೂಪರ್ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಷರ್ ಆಗಿ ಕೆಲಸ ಮಾಡಿದ್ದ ರವಿಕಿvರಣ್ ಎ ಆರ್ ಬಾಬು ಮುಂತಾದ ನಿರ್ದೇಶಕರ ಜೊತೆಗೂ ಒಂದಷ್ಟು ಕಾಲ ಕೆಲಸ ಮಾಡಿದ್ದಾರೆ. ದುನಿಯಾ ವಿಜಿ ನಟಿಸಿದ್ದ ಜಾಕ್ಸನ್ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ಬದುಕು ಏನೆಲ್ಲ ಸತ್ವ ಪರೀಕ್ಷೆಗಳನ್ನ ತಂದೊಡ್ಡಿದರೂ ತಮ್ಮ ಕನಸಿಗೆ ಬದ್ಧರಾಗಿದ್ದ ರವಿಕಿರಣ್, ಗಿರ್‌ಗಿಟ್ಲೆ ಮೂಲಕ ಕಮಾಲ್ ಮಾಡಲು ಮುಂಣದಾಗಿದ್ದಾರೆ. ಈಗಾಗಲೇ ಈ ಸಿನಿಮಾ ನಾನಾ ರೀತಿಯಲ್ಲಿ ಪ್ರೇಕ್ಷಕರನ್ನು ಆವರಿಸಿಕೊಂಡಿರೋದರಿಂದ ಈ ಶ್ರಮಕ್ಕೆಲ್ಲ ಭರ್ಜರಿ ಪ್ರತಿಫಲ ಸಿಗೋ ಲಕ್ಷಣಗಳೇ ದಟ್ಟವಾಗಿವೆ.


Posted

in

by

Tags:

Comments

Leave a Reply