ಸಿನಿಮಾ ಜೊತೆಗಿನ ನಂಟು

ಸಾಹಿತ್ಯ, ರಂಗಭೂಮಿ, ಚಲನಚಿತ್ರ- ಇವುಗಳ ನಡುವೆ ನಿಕಟ ಬಾಂಧವ್ಯ ಇದ್ದಾಗಲೇ ಹೊಸ ಹೊಸ ಪ್ರಯೋಗಗಳು ಸಾಧ್ಯವೆಂದು ತಿಳಿದವರು. ಈ ಮೂರು ಕ್ಷೇತ್ರಗಳು ಪರಸ್ಪರ ಪೂರಕವಾಗಿರುವುದರಿಂದಲೇ ಅಲ್ಲಿಯ ಚಲನಚಿತ್ರ ನವ್ಯತೆಯ ಹಾದಿ ಹಿಡಿದಿದೆಯೆಂದೂ ಭಾವಿಸಿರುವ ಕಾರ್ನಾಡರು ಈ ಮೂರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಗಣಿತಶಾಸ್ತ್ರದ ಶಿಸ್ತಿನಂತೆಯೇ ರಂಗಕರ್ಮಿ ಕೂಡ ಎಂಬುದು ಕಾರ್ನಾಡರ ನಂಬುಗೆ. ಸ್ವತಃ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿ, ವಿದೇಶಯಾತ್ರೆ ಮಾಡಿ ಅಲ್ಲಿಯ ರಂಗಭೂಮಿ, ಚಿತ್ರರಂಗವನ್ನು ವೀಕ್ಷಿಸಿರುವ ಗಿರೀಶ್ ಕಾರ್ನಾಡರು ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ  ಕ್ಷೇತ್ರದಲ್ಲೂ  ನವ್ಯ  ವಿಧಾನವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ.  ತೆರೆಯ ಮೇಲೆ ಪ್ರಸಿದ್ಧರಾದ ಮತ್ತು ಹಣ ದೊರಕಿಸುವ ಭರವಸೆ ಇರುವ ನಟನಟಿಯರನ್ನು ಬಿಟ್ಟು ತಾವು ಚಿತ್ರಿಕರಿಸಲಿರುವ ಕಥೆಗೆ ಸೂಕ್ತರಾದವರನ್ನು ಅಭಿನಯಕ್ಕೆ ಆರಿಸಿಕೊಳ್ಳುವುದೂ ವೇಷ-ಭೂಷಣಗಳಿಗಾಗಲಿ ಚಿತ್ರ ನಿರ್ಮಾಣ ಶಾಲೆಯ ಪೂರ್ವ ಸಿದ್ಧ ದೃಶ್ಯ ಸಂಯೋಜನೆಗಾಗಲಿ  ಪ್ರಾಮುಖ್ಯ  ಕೊಡದೆ  ಹೊರಾಂಗಣದ  ಸಹಜ ಪರಿಸರದಲ್ಲಿ ನೇರವಾಗಿ ಚಿತ್ರ ತೆಗೆಯುವುದು ಇವರು ಸಾಮಾನ್ಯವಾಗಿ ಅನುಸರಿಸುವ ಕ್ರಮ.

1965ರ ಆಗಸ್ಟ 8 ರಂದು ಜಿ.ಬಿ.ಜೋಶಿಯವರಿಗೆ ಬರೆದ ಪತ್ರವೊಂದರಲ್ಲಿ  “ನಾಟಕ  ಬರೆಯಲಿಚ್ಛಿಸುವವನಿಗೆ  ರಂಗಭೂಮಿಯ ಪರಿಚಯ ಸತತ ಸಾನ್ನಿಧ್ಯ ಇರಲೇಬೇಕು”. ಎಂಬ ಮಾತನ್ನು ಕಾರ್ನಾಡರು ಒತ್ತಿ ಹೇಳಿದರು. ಅವರ  ಸಾಧನೆಯ ಹಿಂದೆ ರಂಗಭೂಮಿಯೊಂದಿಗೆ ನಿರಂತರ ತೊಡಗಿಕೊಳ್ಳುವುದಷ್ಟೆ ಅಲ್ಲದೆ ಸಿನೆಮಾ, ಟಿ.ವಿ.ಗಳಂಥ ಬೇರೆ ಬೇರೆ ದೃಶ್ಯಮಾಧ್ಯಮಗಳೊಂದಿಗೆ ಸಕ್ರಿಯ ಸಂಬಂಧವೂ ಇದೆ. ಪ್ರಸಿದ್ದ ರಂಗಕರ್ಮಿ  ಹಾಗೂ  ಕಾರ್ನಾಡರ  ವಿದ್ಯಾರ್ಥಿಯಾಗಿದ್ದ  ಶಿರಸಿಯ ಮಾರಿಕಾಂಬಾ ಹೈಸ್ಕೂಲಿನ ಅಧ್ಯಾಪಕರು ಆದ ವಿ.ತಿ. ಶೀಗೆಹಳ್ಳಿಯವರು ತಿಳಿಸುವಂತೆ ಗಿರೀಶರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಗಿನಿಂದಲೇ ವಿಶೇಷ ಆಸಕ್ತಿಯನ್ನು ತೋರಿಸುತ್ತಿದ್ದರು. ಅವರನ್ನು ಅ.ನ. ಕೃಷ್ಣರಾಯರ “ಹಿರಣ್ಯಕಶಿಪು” ನಾಟಕದಲ್ಲಿ ‘ಕಯಾದು’ವಿನ ಪಾತ್ರಕ್ಕಾಗಿ ಆಯ್ದುಕೊಂಡಿದ್ದನ್ನು ಶೀಗೆಹಳ್ಳಿಯವರು ವಿಶೇಷವಾಗಿ ನೆನೆದಿದ್ದಾರೆ ಗಿರೀಶ ಕಾರ್ನಾಡರು ಕಾಲೇಜಿನಲ್ಲಿದ್ದಾಗ ಅವರ ಆತ್ಮೀಯ ಗೆಳೆಯ ‘ಕೃಷ್ಣ ಬಸರೂರ’ ರೊಂದಿಗೆ ‘ಷಾ’ನ ನಾಟಕವೊಂದರಲ್ಲಿ ಪಾತ್ರವಹಿಸಿದ್ದಾರೆ. ಆದರೆ ಅವರ ನಾಟಕ ಆಸಕ್ತಿಯನ್ನು ಅಲ್ಲಿ ಪೂರ್ಣ ಪ್ರಮಾಣದಲ್ಲಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ‘ಮದ್ರಾಸ್ ಪ್ಲೇಯರ್ಸ್ ರಂಗಸಂಸ್ಥೆಯಿಂದ ಅವರು ಕಲಿತದ್ದೇ ಬಹಳ. 1963 ರಿಂದ 1970ರ ವರೆಗೆ ಎಂದರೆ ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್ ನಲ್ಲಿ ಮ್ಯಾನೆಜರ್ ಆಗಿದ್ದ ಅವಧಿಯಲ್ಲಿ, ಅವರು ಈ ಸಂಸ್ಥೆಯೊಡನೆ ನಟ, ದಿಗ್ದರ್ಶಕ,  ಭಾಷಾಂತರಕಾರರಾಗಿ  ತುಂಬ  ಹತ್ತಿರದ  ಸಂಬಂಧ ಹೊಂದಿದ್ದರು. ಹೆರಾಲ್ಡ್ ಪಿಂಟರ್, ಟೆನೆಸ್ಸಿ ವಿಲ್ಯಮ್ಸ್, ಷಾ, ಬೆಕೆಟ್, ಸಾತ್ರೆ, ಪಿರಾಂಡೆಲ್ಲೊ, ಶೇಕ್ಸಪಿಯರ್ ಮೊದಲಾದವರ ನಾಟಕಗಳ ಪ್ರದರ್ಶನಗಳಲ್ಲಿ ಅವರಿಗೆ ಒಂದಿಲ್ಲೊಂದು ಹೊಣೆ ಇರುತ್ತಿತ್ತು. ಮದ್ರಾಸ್ ಪ್ಲೇಯರ್ಸ್‍ದಿಂದ ತಮಗಾದ ಲಾಭ ಕುರಿತು ಬರೆಯುತ್ತ “ರಂಗಭೂಮಿಯಲ್ಲಿ ಭಾಷೆಯನ್ನು ಹೇಗೆ ಬಳಸಬಹುದು ಎನ್ನುವುದನ್ನು ನಾನಾಗ ಕಲಿತುಕೊಂಡೆ.  ಲಯ, ಗತಿಯ ನಿರ್ವಹಣೆ, ಉಸಿರಿನ ನಿಯಂತ್ರಣ, ಮೌನಗಳು ಹಾಗೂ ಏರಿಳಿತಗಳು ಇಂಥ ವಿಷಯಗಳ ಪರಿಚಯವಾಯಿತು. ಇದು ಉತ್ತಮ ತರಬೇತಿಯಾಗಿತ್ತು.   ನಮ್ಮ   ನಾಟಕಗಳನ್ನು   ಇಂಗ್ಲೀಷ್‍ಗೇಕೆ ಭಾಷಾಂತರಿಸಬಾರದೆಂಬ ವಿಚಾರ ಹೊಳೆದು ‘ಏವಂ ಇಂದ್ರಜಿತ್’, ‘ಆಷಾಡ ಕಾ ಏಕ್ ದಿನ್’, ‘ಹಯವದನ’  ಈ ನಾಟಕಗಳನ್ನು ನಾನು ಅನುವಾದ ಮಾಡಿದೆ” ಎಂದು ಒಂದು ಕಡೆ ಹೇಳಿಕೊಂಡಿದ್ದಾರೆ.

ಇದೇ ಸಮಯದಲ್ಲಿ ಸಂಸ್ಕಾರ ಕಾದಂಬರಿಯು ಇಡಿಯ ಕನ್ನಡ ಸಾಹಿತ್ಯ ಸೃಷ್ಟಿಯನ್ನು ಬಡಿದೆಬ್ಬಿಸಿತು. ಹಾಗೆಯೇ ಅದು ಕಾರ್ನಾಡರನ್ನು ಉತ್ತೇಜನ ಮಾಡಿದ್ದರಲ್ಲಿ ಆಶ್ಚರ್ಯವಿಲ್ಲ. ಕಾರ್ನಾಡರಿಗೆ ಗೊತ್ತಿದ್ದ ಕನ್ನಡ ಜೀವನ ವಿನ್ಯಾಸವನ್ನೆ ಬದಲಾಯಿಸಿಬಿಟ್ಟಿತು. “ಮೊದಲನೆಯದಾಗಿ ನನಗೆ ಅದರಲ್ಲಿ ಅನಂತಮೂರ್ತಿ ಬಣ್ಣಿಸಿದ್ದ ವಿಶ್ವವೇ ಗೊತ್ತಿರಲಿಲ್ಲ. ನಾನು ‘ಅಗ್ರಹಾರ’ಗಳ ಬಗ್ಗೆ ಕೇಳಿದ್ದೆ. ಮಲೆನಾಡಿನಲ್ಲಿ ಜಾತಿಗೆ ಮೀಸಲಾದ ಹಳ್ಳಿಗಳನ್ನು ನೋಡಿದ್ದೆ. ಯಾವುದೋ ಗತಕಾಲದ ಪಳೆಯುಳಿಕೆಗಳು ಎನ್ನುವುದರಾಚೆ ನಾನು ಅವಕ್ಕೆ ಮಹತ್ವ ಕೊಟ್ಟಿರಲಿಲ್ಲ. ಆದರೆ ಅನಂತಮೂರ್ತಿ ಅದ್ಭುತ ಧ್ವನಿಪೂರ್ಣ ಶೈಲಿಯಲ್ಲಿ ಅದನ್ನೆಲ್ಲ ಪುನಃ ಸೃಷ್ಟಿಸಿದರು”.

“ಅನಂತಮೂರ್ತಿಯವರು  ಹೇಳಿದ  ಕರ್ನಾಟಕ  ಗೊತ್ತೇ ಇಲ್ಲವಲ್ಲ!” ಎಂದು ತಿಳಿದು ಅದನ್ನು ಸಿನಿಮಾ ಮಾಡಲೇ ಬೇಕು ಅಂತ ನಿಶ್ಚಯ ಮಾಡಿ, ಆ ಯೋಜನೆಯನ್ನು ವೈ.ಎನ್.ಕೆ ಹತ್ತಿರ ಕಾರ್ನಾಡರು ಚರ್ಚಿಸುತ್ತಾರೆ. ಅನಂತರ 1969ರಲ್ಲಿ ಪಟ್ಟಾಭಿರಾಮ ಶೆಟ್ಟಿ, ಸ್ನೇಹಲತಾ ರೆಡ್ಡಿ ಮುಂತಾದವರನ್ನೊಳಗೊಂಡಂತೆ ‘ಮದ್ರಾಸ್ ಪ್ಲೇಯರ್ಸ್ ತಂಡದವರೇ ಈ ಚಲನಚಿತ್ರವÀನ್ನು ತಯಾರಿಸಲು ತೊಡಗಿದರು. ಹೀಗೆ ಗಿರೀಶ್  ಕಾರ್ನಾಡರು  ಸಂಸ್ಕಾರಕ್ಕಾಗಿ  ಸ್ಕ್ರಿಪ್ಟ್  ಬರೆದು  ಅದರಲ್ಲಿ ಪ್ರಾಣೇಶಾಚಾರ್ಯನ ಪಾತ್ರ ನಿರ್ವಹಿಸುವುದರೊಂದಿಗೆ 1969ರಲ್ಲಿ ಅವರು ಚಿತ್ರರಂಗವನ್ನು ಪ್ರವೇಶಿಸಿದರು. ಈ ಹೊಸ ಮಾಧ್ಯಮ ಅವರಲ್ಲಿ ಉತ್ಸಾಹವನ್ನು ಮೂಡಿಸಿತು.

‘ಸಂಸ್ಕಾರ’ ಚಿತ್ರ ಕಲಾತ್ಮಕವಾಗಿ ಹೆಚ್ಚಿನ ಯಶಸ್ಸು ಸಂಪಾದಿಸಿದ್ದೇ ಅಲ್ಲದೇ, ತನ್ನ ಹೊಸತನದಿಂದಾಗಿ ಸಮಾಜವನ್ನು ಎಚ್ಚರಿಸಿತು. ತೀವ್ರ ಪ್ರತಿಕ್ರಿಯೆಗಳನ್ನು ಗಳಿಸಿತು. ಅತ್ಯುತ್ತಮ ಭಾರತೀಯ ಚಲನಚಿತ್ರಕ್ಕಾಗಿ ನೀಡುವ ರಾಷ್ಟ್ರಪತಿಗಳ ಸ್ವರ್ಣಪದಕ (1970)’ಸಂಸ್ಕಾರ’ ಚಿತ್ರಕ್ಕೆ ಲಭಿಸಿತು.

ಸಂಸ್ಕಾರದಿಂದ ಪ್ರಾರಂಭವಾದ ಗಿರೀಶ್ ಕಾರ್ನಾಡರ ಚಿತ್ರ ಜಗತ್ತಿನ ಸಂಬಂಧ  ಒಂದು  ರೀತಿಯಲ್ಲಿ  ಇಂದಿಗೂ  ಮುಂದುವರಿಯುತ್ತಿದೆ. ಸಂಸ್ಕಾರದ ನಂತರ ಗಿರೀಶ್ ಕಾರ್ನಾಡರು ಬಿ.ವಿ. ಕಾರಂತರ ಜತೆಗೂಡಿ ಎಸ್. ಎಲ್. ಭೈರಪ್ಪನವರ ವಂಶವೃಕ್ಷ (1971) ಮತ್ತು ತಬ್ಬಲಿಯು ನೀನಾದೆ ಮಗನೆ(1977), (ಹಿಂದಿಯಲ್ಲಿ ಗೋಧೊಳಿ) ಹಾಗೂ ಒಂದಾನೊಂದು ಕಾಲದಲ್ಲಿ (1978) ಮತ್ತು ಸ್ವತಂತ್ರವಾಗಿ  ಕುವೆಂಪು ಅವರ ಕಾನೂರು ಹೆಗ್ಗಡತಿ (1999) ಇತ್ಯಾದಿ ಹತ್ತು ಚಿತ್ರಗಳನ್ನು ನಿರ್ದೆಶಿಸಿದರು. ದ.ರಾ ಬೇಂದ್ರೆ, ಕನಕ ಪುರಂದರ ಇತ್ಯಾದಿ ನಾಲ್ಕು ಸಾಕ್ಷ್ಯಚಿತ್ರಗಳನ್ನು  ನಿರ್ದೇಶಿಸಿದರು.  ಕಾರ್ನಾಡರೇ  ಚಿತ್ರಕಥೆ  ಬರೆದು ನಿರ್ದೇಶಿಸಿದ ಅಲನಹಳ್ಳಿ ಕೃಷ್ಣ ಅವರ ಕಾದಂಬರಿಯನ್ನು ಆಧರಿಸಿದ ‘ಕಾಡು’ ಚಲನಚಿತ್ರಕ್ಕೆ ದ್ವಿತೀಯ ಅತ್ಯುತ್ತಮ ಭಾರತೀಯ ಚಲನಚಿತ್ರಕ್ಕೆ ನಿಗದಿಯಾದ ರಾಷ್ಟ್ರಪತಿಗಳ ರಜತ ಪದಕ ಸಂದಿತು. ‘ಒಂದಾನೊಂದು ಕಾಲದಲ್ಲಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ದೊರಕಿತು. ‘ಸಂತಶಿಶುನಾಳ ಶರೀಫ’ ಚಿತ್ರದ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕಾರ್ನಾಡರಿಗೆ ದೊರೆತಿದೆ.

ರಂಗಭೂಮಿ-ಚಲನಚಿತ್ರ   ಕ್ಷೇತ್ರಗಳಲ್ಲಿ   ಇಷ್ಟು   ಗಣನೀಯ ಪ್ರಮಾಣದಲ್ಲಿ  ಕಾರ್ಯಶೀಲರಾದ  ಕಾರ್ನಾಡರನ್ನು  ಕಿರುತರೆಯಲ್ಲಿ ಸೆಳೆದುಕೊಳ್ಳಲು ಪ್ರಯತ್ನಿಸಿದೆ. ‘ವೋಘರ್’ ಎನ್ನುವ ಹಿಂದಿ ಚಲನಚಿತ್ರವನ್ನು ಕಿರುತೆರೆಗಾಗಿ ಕಾರ್ನಾಡರು ನಿರ್ದೇಶಿಸಿದ್ದಾರೆ. ಅವರು ನಿರ್ಮಿಸಿದ ಪೂರ್ಣ ಪ್ರಮಾಣದ ಚಿತ್ರಗಳು, ಸಾಕ್ಷ್ಯ ಚಿತ್ರಗಳು, ದೂರದರ್ಶನಕ್ಕಾಗಿ ನಿರ್ಮಿಸಿದ ವೈಜ್ಞಾನಿಕ ವಿಷಯಗಳನ್ನಾದರಿಸಿದ ಸರಣಿ (ಟರ್ನಿಂಗ್ ಪಾಯಿಂಟ್) ಇತ್ಯಾದಿ   ರಾಷ್ಟ್ರೀಯ-ಅಂತಾರಾಷ್ಟ್ರೀಯ   ಗೌರವ   ಪುರಸ್ಕಾರಗಳಿಗೆ ಭಾಜನವಾಗಿವೆ.

ಇಷ್ಟಲ್ಲದೆ ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನಗಲ್ ಮುಂತಾದ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಿರ್ದೇಶಕರ ನಿರ್ದೇಶನದಲ್ಲಿ ಹಲವಾರು ಚಲನಚಿತ್ರಗಳಲ್ಲಿ, ಕಿರುತೆರೆಯ ಸಿನಿಮಾಗಳಲ್ಲಿ, ಧಾರವಾಹಿಗಳಲ್ಲಿ ಕಾರ್ನಾಡರು ಅಭಿನಯಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ   ಚಲನ   ಚಿತ್ರೋತ್ಸವದ   (1977)   ಮೌಲ್ಯ ನಿರ್ಣಾಯಕರಲ್ಲಿ ಒಬ್ಬರಾಗಿ ಕಾರ್ನಾಡರು ಸೇವೆ ಸಲ್ಲಿಸಿದರು. ಲಂಡನ್ನಿನಲ್ಲಿ ನಡೆದ ಭಾರತ ಉತ್ಸವ (ಫೆಸ್ಟಿವಲ್ ಆಫ್ ಇಂಡಿಯಾ 1982) ಹಾಗೂ ಮಾಂಟ್ರಿಯಲ್ ಚಲನಚಿತ್ರೋತ್ಸವಗಳಲ್ಲಿ ಭಾರತದ ಅಧಿಕೃತ ಪ್ರತಿನಿಧಿಗಳಲ್ಲಿ ಕಾರ್ನಾಡರು ಒಬ್ಬರಾಗಿದ್ದರು.

ಇವರು 1984 ರಿಂದ 1993 ರವರೆಗೆ ಇಂಡೋ-ಯು.ಎಸ್.ಸಬ್ ಕಮೀಶನ್‍ನ ‘ಪಿಲ್ಮ್ ಬ್ರಾಡ್ ಕಾಸ್ಟಿಂಗ್ ಮತ್ತು ಪ್ರೆಸ್ ಜಾಯಿಂಟ್ ಮೀಡಿಯಾ ಕಮಿಟಿ’ ಯ ಸಹ ಅಧ್ಯಕ್ಷರಾಗಿ ಭಾರತವನ್ನು ಪ್ರತಿನಿಧಿಸಿದ್ದರು.

ಅಮೇರಿಕದ ಪ್ರಸಿದ್ಧ ಗತ್ರಿ ಥಿಯೇಟರ್ ಜುಲೈ 1993ರಲ್ಲಿ ರಂಗದ ಮೇಲೆ ತಂದ ಕಾರ್ನಾಡರ ‘ನಾಗಮಂಡಲ’ ಅಮೇರಿಕದ ವೃತ್ತಿಪರ ತಂಡವೊಂದು ಮೊಟ್ಟ ಮೊದಲು ಭಾರತದ ಭಾಷೆಯಲ್ಲಿ ಬರೆದ ನಾಟಕದ ಪ್ರದರ್ಶನವಾಗಿತ್ತು. ಹೀಗೆ ಸಾಧನೆಯ ಶಿಖರದೆತ್ತರಕ್ಕೆ ಏರುತ್ತಿರುವ ಗಿರೀಶ್ ಕಾರ್ನಾಡರಿಗೆ 1994 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ‘ಗೌರವ ಡಾಕ್ಟರೇಟ್’ ಪದವಿಯನ್ನು ನೀಡಿ ಸನ್ಮಾಸಿತು.

ಸಿನಿಬಜ್ ಮುಖ್ಯಸ್ಥರ ಅನುಮತಿ ಇಲ್ಲದೇ ಯಾವುದೇ ಜಾಲಾತಾಣಗಳು ಗಿರೀಶ್ ಕಾರ್ನಾಡರ ಲೇಖನಗಳನ್ನು ಬಳಸಿಕೊಳ್ಳುವಂತಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

– ಸಂ


Posted

in

by

Tags:

Comments

Leave a Reply