ನಗೆನಟ ತರಂಗ ವಿಶ್ವ ನಿರ್ಮಾಪಕರಾಗುತ್ತಿರುವುದು ಗೊತ್ತಿರುವ ವಿಷಯವೇ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅವರ ನಿರ್ಮಾಣದ ಮೊದಲ ಚಿತ್ರ ‘ಗಿರ್ಕಿ’ ಇಷ್ಟರಲ್ಲಾಗಲೇ ಬಿಡುಗಡೆಯಾಗಬೇಕಿತ್ತು. ಕರೊನಾಗೂ ಮುಂಚೆಯೇ ಮುಹೂರ್ತವಾಗಿತ್ತು. ಇನ್ನೇನು ಚಿತ್ರೀಕರಣ ಶುರು ಎನ್ನುವಷ್ಟರಲ್ಲಿ ಲಾಕ್ಡೌನ್ ಆಯಿತು. ಆ ನಂತರ ಚಿತ್ರೀಕರಣ ಮುಗಿಸಿ, ಇದೀಗ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ಜುಲೈ 08ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸುದೀಪ್ ಟ್ರೇಲರ್ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸುದೀಪ್ರಂತಹ ಸ್ಟಾರ್ ನಟ ತಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದರ ಬಗ್ಗೆ ಹೆಮ್ಮೆ ಮತ್ತು ಖುಷಿ ಎರಡೂ ಇದೆ. ಇದರ ಮಧ್ಯೆ ಒಂದು ಸಣ್ಣ ಬೇಸರವೂ ಇದೆ. ಅದೇನೆಂದರೆ, ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣ ಪತ್ರ ಕೊಟ್ಟಿದೆ. ಹೇಳಿಕೇಳಿ ಇದು ಎಲ್ಲರೂ ನೋಡುವಂತಹ ಚಿತ್ರ. ಹೀಗಿರುವಾಗ ‘ಎ’ ಪ್ರಮಾಣಪತ್ರ ಕೊಟ್ಟರೆ ಫ್ಯಾಮಿಲಿ ಆಡಿಯನ್ಸ್ ಚಿತ್ರ ನೋಡುವುದಕ್ಕೆ ಬರುತ್ತದಾ ಎಂಬ ಟೆನ್ಶನ್ ಸಹಜವಾಗಿಯೇ ಚಿತ್ರತಂಡಕ್ಕಿದೆ.
ಈ ಕುರಿತು ಮಾತನಾಡುವ ನಟ ಮತ್ತು ನಿರ್ಮಾಪಕ ತರಂಗ ವಿಶ್ವ, ‘ಒಂದು ಸಿನಿಮಾ ಮಾಡೋದು ಬಹಳ ಕಷ್ಟ ಇದೆ. ಅದರಲ್ಲೂ ಇವತ್ತಿನ ಸಿನಿಮಾ ಮಟ್ಟ ಬಹಳ ದೊಡ್ಡದಿದೆ. ಇಂಥದ್ದೊಂದು ಸಂದರ್ಭದಲ್ಲಿ ನಮ್ಮ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿರುವುದು ಬಹಳ ನೋವು ತಂದಿದೆ. ನನ್ನ ಪ್ರಕಾರ, ಚಿತ್ರಕ್ಕೆ ‘ಎ’ ಕೊಡುವಂತದ್ದು ಏನೂ ಇಲ್ಲ. ನಾಳೆ ಪ್ರೇಕ್ಷಕರರು ಈ ಚಿತ್ರವನ್ನು ನೋಡುತ್ತಾರೆ. ಮಾಧ್ಯಮದವರೂ ನೋಡುತ್ತೀರಾ. ಹೌದು, ಈ ಚಿತ್ರಕ್ಕೆ ‘ಎ’ ಕೊಡಬೇಕಿತ್ತು ಅಂತ ನಿಮಗೆಲ್ಲರಿಗೂ ಅನಿಸಿದರೆ ಆಗ ಖಂಡಿತಾ ತಲೆ ಬಾಗುತ್ತೇನೆ. ಆದರೆ, ‘ಎ’ ಕೊಡುವಂತದ್ದೇನೂ ಇಲ್ಲ’ ಎನ್ನುತ್ತಾರೆ.
ಚಿತ್ರಕ್ಕೆ ‘ಗಿರ್ಕಿ’ ಎಂಬ ಹೆಸರಿಟ್ಟಿದ್ದರ ಕುರಿತು ಮಾತನಾಡುವ ನಿರ್ದೇಶಕ ವೀರೇಶ್, ‘ಸಾಮಾನ್ಯವಾಗಿ ಎಲ್ಲರೂ ತಮ್ಮ ಚಿತ್ರದಲ್ಲಿ ಲವ್, ಕಾಮಿಡಿ, ಆಕ್ಷನ್, ಸೆಂಟಿಮೆಂಟ್, ಥ್ರಿಲ್ ಎಲ್ಲವೂ ಇದೆ ಎನ್ನುತ್ತಾರೆ. ಈ ಎಲ್ಲ ಅಂಶಗಳು ಒಂದೊಂದ ದೃಶ್ಯದಲ್ಲಿ ಬಂದು ಹೋಗುತ್ತದೆ. ಆದರೆ, ನಮ್ಮ ಚಿತ್ರದಲ್ಲಿ ಹಾಗಿಲ್ಲ. ಪ್ರಾರಂಭದಿಂದ ಕೊನೆಯವರೆಗೂ ಪ್ರತಿಯೊಂದೂ ಇರುತ್ತದೆ’ ಎನ್ನುತ್ತಾರೆ.
‘ಗಿರ್ಕಿ’ ಚಿತ್ರವು ಮಾಫಿಯಾವೊಂದರ ಕುರಿತಾಗಿದ್ದು, ಚಿತ್ರದಲ್ಲಿ ವಿಲೋಕ್ ರಾಜ್, ದಿವ್ಯಾ ಉರುಡುಗ, ತರಂಗ ವಿಶ್ವ, ರಾಶಿ ಮಹದೇವ್ ಮುಂತಾದವರು ನಟಿಸಿದ್ದಾರೆ. ವೀರೇಶ್ ನಿರ್ದೇಶನ ಮಾಡುವುದರ ಜೊತೆಗೆ ಕಥೆ-ಚಿತ್ರಕಥೆಯನ್ನೂ ರಚಿಸಿದ್ದಾರೆ. ವೀರ್ ಸಮರ್ಥ್ ಸಂಗೀತ ಈ ಚಿತ್ರಕ್ಕಿದೆ.
Comments