ಅದೇನು ದುರಂತವೋ ಗೊತ್ತಿಲ್ಲ. ಎಲ್ಲ ದುಷ್ಟರ ಕಣ್ಣು, ಕೇಡುಗರ ಟಾರ್ಗೆಟ್ಟು ಹೆತ್ತವರಿಲ್ಲದೆ ನರಳುವ ಅನಾಥರ ಮೇಲೇ ಇರುತ್ತೆ. ಇವರಿಗೇನಾದರೂ ಆದರೆ ಯಾರೂ ಕೇಳೋರು ಗತಿ ಇರೋದಿಲ್ಲ ಅನ್ನೋದೇ ಬಹುಶಃ ಅವರ ನಿರ್ಧಾರವೇನೋ…

ತಂದೆ ಜೊತೆಗಿಲ್ಲದೆ ಬೆಳೆದು, ತೀರಾ ಸಣ್ಣ ವಯಸ್ಸಲ್ಲಿ ತಾಯಿಯನ್ನೂ ಕಳೆದುಕೊಂಡು, ಯಾರದ್ದೋ ಮೂಲಕ ಅನಾಥಾಶ್ರಮ ಸೇರಿದ ಹುಡುಗಿ. ಬೆಳೆದಮೇಲೆ ಸ್ವತಂತ್ರವಾಗುವ ಬಯಕೆಯಿಂದ ಆಶ್ರಮದಿಂದ ಹೊರಬಂದು, ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ ಗರ್ಲ್‌ ಆಗಿ ಕೆಲಸಕ್ಕೆ ಸೇರಿರುತ್ತಾಳೆ. ಇವನಾದರೂ ಆಷ್ಟೇ. ವಿದ್ಯೆ ನೆಟ್ಟಗೆ ತಲೆಗಂಟಿರುವುದಿಲ್ಲ. ತನ್ನ ಪೊಲೀಸ್‌ ಪೇದೆ ಮಾವನ ಮೂಲಕ ಬೆಂಗಳೂರಿಗೆ ಬಂದು ಬಾರ್‌ ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿರುತ್ತಾನೆ. ಬೇಜಾರು ತೀರಿಸಿಕೊಳ್ಳಲು ಬಾರಿಗೆ ಬಂದವರನ್ನು ಕೂರಿಸಿ, ಟೇಬಲ್‌ ಮೇಲಿಟ್ಟ ಗ್ಲಾಸು ಕೂಡಾ ತಕತಕ ಕುಣಿಯುವಂತೆ ಮಜವಾಗಿ ಎಣ್ಣೆ ಹಾಕಿಕೊಡುತ್ತಾನೆ. ಅವರು ಕೊಟ್ಟ ಟಿಪ್ಸು ಜೇಬಿಗಿಳಿಸಿಕೊಳ್ಳುತ್ತಾನೆ.  ಸಂಜೆಯಾಗುತ್ತಿದ್ದಂತೇ ಬಟ್ಟೆ ಅಂಗಡಿ ಹುಡುಗಿಯ ಹಿಂದಿಂದೆ ನಡೆದುಕೊಂಡು ಹೋಗಿ ನಾಲ್ಕು ಮಾತಾಡಿ ಬರುತ್ತಾನೆ.

ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಮದುವೆ ಸಿದ್ದತೆ ಕೂಡಾ ಮಾಡಿಕೊಳ್ಳುತ್ತಾರೆ. ಅಲ್ಲಿಗೆ ದುಷ್ಟರ ಕಣ್ಣು ಹುಡುಗಿಯ ಮೇಲೆ ಬೀಳುತ್ತದೆ. ಏಕಾಏಕಿ ಕಿಡ್ನ್ಯಾಪ್‌ ಕೂಡಾ ಮಾಡಿಬಿಡುತ್ತಾರೆ. ಇವೆಲ್ಲ ಮೊದಲ ಭಾಗದಲ್ಲಿ ನಡೆಯುವ ವಿಚಾರ. ದ್ವಿತೀಯಾರ್ಧದಲ್ಲಿ ಕ್ಷಣಕ್ಷಣಕ್ಕೂ ಟ್ವಿಸ್ಟುಗಳು ಎದುರಾಗುತ್ತವೆ. ಕಿಡ್ನ್ಯಾಪ್‌ ಆದ ಹುಡುಗಿಯ ತಲಾಶ್‌ ಆರಂಭವಾಗುತ್ತದೆ. ಊಹೆ, ಸುಳಿವುಗಳೂ ಸುಳ್ಳಾಗುತ್ತಾ ಸಾಗುವ ದಾರಿಯಲ್ಲಿ ನಿಜವೆನ್ನುವುದು ಗೊಂದಲದ ಗುಂಡಿಗೆ ಬೀಳುತ್ತದೆ. ಮತ್ತೆ ಮತ್ತೆ ಎದ್ದು ಸತ್ಯದ ಬೆನ್ನತ್ತಲಾಗುತ್ತದೆ. ನಿಜಕ್ಕೂ ರೋಚಕ ಎನಿಸುವ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಕಟ್ಟಕಡೆಯದಾಗಿ ಹುಡುಗಿ ಬದುಕಿದಳಾ? ಅಥವಾ ಕ್ರೂರಿಗಳ ದಾಹಕ್ಕೆ  ಬಲಿಯಾದಳಾ ಅನ್ನೋ ಪ್ರಶ್ನೆ ಮೂಡುತ್ತದೆ. ಕೊನೆಯಲ್ಲಿ ಉತ್ತರವೂ ದೊರಕುತ್ತದೆ.

ಗಂಭೀರ ವಿಚಾರವನ್ನಿಟ್ಟುಕೊಂಡು, ಅದಕ್ಕೆ ಒಂದಿಷ್ಟು ಹಾಸ್ಯವನ್ನು ಬೆರೆಸಿ ʻಗಿರ್ಕಿʼ ಸಿನಿಮಾವನ್ನು ರೂಪಿಸಿದ್ದಾರೆ. ಕಾಮಿಡಿ ನಟನಾಗಿ ಖ್ಯಾತಿ ಹೊಂದಿರುವ ತರಂಗ ವಿಶ್ವ ಈ ಚಿತ್ರವನ್ನು ನಿರ್ಮಿಸಿರುವುದರ ಜೊತೆಗೆ ಬಹುಮುಖ್ಯ ಪಾತ್ರವಾದ ಪೊಲೀಸ್‌ ಪೇದೆಯಾಗಿಯೂ ಕಾಣಿಸಿಕೊಂಡಿದ್ದಾರೆ. ದಿವ್ಯ ಉರುಡುಗ ನಟನೆಯ ಬಗ್ಗೆ ಮಾತಾಡುವಂತಿಲ್ಲ. ನಿಜಕ್ಕೂ ಬಟ್ಟೆ ಅಂಗಡಿಯ ಸೇಲ್ಸ್‌ ಗರ್ಲೇ ಅನ್ನಿಸಿಬಿಡುತ್ತಾಳೆ. ಪಾತ್ರಕ್ಕೆ ಬೇಕಿರುವ ಮುಗ್ಧತೆ ಮತ್ತು ರಗಡ್‌ ಲುಕ್‌ ಎರಡೂ ಹೊಂದಿರುವ ವಿಲೋಕ್‌ ರಾಜ್‌ ಕೂಡಾ ಮೊದಲ ಚಿತ್ರದಲ್ಲೇ ಗಮನ ಸೆಳೆಯುವಂತೆ ನಟಿಸಿದ್ದಾರೆ. ಪ್ರಶಾಂತ್‌ ಸಿದ್ದಿ, ರಮೇಶ್‌ ಭಟ್‌ ಮತ್ತು ನಂದಗೋಪಾಲ್‌ ಗೆ ಹೇಳಿಮಾಡಿಸಿದಂತಾ ಪಾತ್ರಗಳು ಸಿಕ್ಕಿವೆ.  ಲೇಡಿ ಪಿ.ಸಿ ರಾಶಿ ಮಹದೇವ್‌ ಆಕರ್ಷಿಸುವ ಗುಣ ಹೊಂದಿದ್ದಾರೆ!

ಎಲ್ಲವೂ ಇರುವ ಗಿರ್ಕಿ ಸಿನಿಮಾದಲ್ಲಿ ಅನವಶ್ಯಕ ದೃಶ್ಯಗಳು ಸ್ವಲ್ಪ ಡಿಸ್ಟರ್ಬ್‌ ಮಾಡುತ್ತವೆ. ಚಿತ್ರದ ಫಸ್ಟ್‌ ಹಾಫ್‌ ನಲ್ಲಿ ಒಂದಷ್ಟು ಸೀನ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿದ್ದರೆ ಚಿತ್ರದ ವೇಗ, ಓಘಗಳೆಲ್ಲಾ ಬೇರೆಯದ್ದೇ ಲೆವೆಲ್ಲಿನಲ್ಲಿರುತ್ತಿತ್ತು. ಸಂಕಲನದಲ್ಲಿ ಒಂದಷ್ಟು ಹೊಸತನಗಳನ್ನು ಟ್ರೈ ಮಾಡಬಹುದಿತ್ತು. ಇದನ್ನು ಹೊರತುಪಡಿಸಿದರೆ ಗಿರ್ಕಿ ತುಂಬಾ ಗಟ್ಟಿಯಾದ ಕಂಟೆಂಟ್‌ ಹೊಂದಿರುವ ಸಿನಿಮಾ. ಅನಾಥ ಮಕ್ಕಳೇ ಯಾಕೆ ಅನಾಥ ಶವವಾಗುತ್ತಾರೆ ಅನ್ನೋದರ ಬಗ್ಗೆ ಸೀರಿಯಸ್‌ ಆಗಿ ಥಿಂಕ್‌ ಮಾಡಿಸುವ ಚಿತ್ರ. ನವೀನ್‌ ಕುಮಾರ್‌ ಚೆಲ್ಲ ರಾತ್ರಿ ದೃಶ್ಯಗಳನ್ನು ಬ್ಯೂಟಿಫುಲ್‌ ಆಗಿ ಸೆರೆ ಹಿಡಿದಿದ್ದಾರೆ. ವೀರ್‌ ಸಮರ್ಥರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಶಕ್ತಿ.  ನಿರ್ದೇಶಕ ವೀರೇಶ್‌ ಪಿ.ಎಂ. ಅವರಿಗೆ ತಳಸಮುದಾಯದ ಬವಣೆಯನ್ನು ಕಟ್ಟಿಕೊಡುವ ಕಲೆ ಗೊತ್ತು. ಗಿರ್ಕಿಯನ್ನು ಒಮ್ಮೆ ನೋಡಿ. ಖಂಡಿತಾ ನಿಮಗೆ ಇಷ್ಟವಾಗಬಹುದು!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶುಗರ್‌ ಲೆಸ್ಸಲ್ಲಿ ಎಲ್ಲವೂ ಪ್ಲಸ್!

Previous article

ತೂತುಮಡಿಕೆಯಲ್ಲಿ ತೂಕದ ಕತೆ ಇದೆ!

Next article

You may also like

Comments

Comments are closed.