ದಿವ್ಯ ಉರುಡುಗಗೆ ಸಿನಿಮಾಗಳು ಹೊಸದಲ್ಲ. ಆದರೆ, ಅವರು ಚಿತ್ರವೊಂದರಲ್ಲಿ ನಟಿಸದೇ ಒಂದು ಗ್ಯಾಪ್ ಆಗಿತ್ತು. ನಟಿಸದೇ ಎನ್ನುವುದಕ್ಕಿಂತ ಆಕೆಯ ಚಿತ್ರವೊಂದು ಬಿಡುಗಡೆಯಾದೇ ಮೂರು ವರ್ಷವಾಗಿತ್ತು. ಈಗ ‘ಗಿರ್ಕಿ’ ಎಂಬ ಹೊಸ ಚಿತ್ರದ ಮೂಲಕ ಅವರು ವಾಪಸ್ಸಾಗುತ್ತಿದ್ದಾರೆ.

‘ಗಿರ್ಕಿ’ ಕುರಿತು ಮಾತನಾಡುವ ಅವರು, ‘ಸಾಮಾನ್ಯವಾಗಿ ಎಲ್ಲರೂ ಕಥೆ ಕೇಳೋಕೆ ಹೋದಾಗ, ನನಗೆಷ್ಟು ಸ್ಕೋಪ್ ಇದೆ ಎಂದು ನೋಡುತ್ತಾರೆ. ಆದರೆ, ಈ ಚಿತ್ರದ ಬಗ್ಗೆ ಹೇಳಬೇಕೆಂದರೆ, ಬರೀ ನನ್ನ ಪಾತ್ರವಷ್ಟೇ ಅಲ್ಲ, ಇಡೀ ಕಥೆ ಇಷ್ಟ ಆಯ್ತು. ನನ್ನ ಪಾತ್ರ ಬಜಾರಿ ಪ್ಲಸ್ ಮುಗ್ಧೆಯ ಕಾಂಬಿನೇಷನ್ನ ಪಾತ್ರ. ಒಳ್ಳೆಯ ಅವಕಾಶ, ಚೆನ್ನಾಗಿ ಮಾಡಬಹುದು ಎಂಬ ಕಾರಣಕ್ಕೆ ಒಪ್ಪಿಕೊಂಡೆ. ಕಥೆ ಮತ್ತು ಪಾತ್ರ ಎರಡೂ ಕಾರಣಗಳಿಗೆ ಈ ಚಿತ್ರಕ್ಕೆ ಸೇರ್ಪಡೆಯಾದೆ’ ಎನ್ನುತ್ತಾರೆ ದಿವ್ಯ.

ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯ ಬಗ್ಗೆ ವಿವರಿಸುವ ಅವರು, ‘ಮೊದಲ ಲಾಕ್ಡೌನ್ ನಂತರ ಚಿತ್ರೀಕರಣ ನಡೆಯುತ್ತಿತ್ತು. ಯಾಕೋ ನನಗೆ ಅಂದು ಹುಷಾರಿರಲಿಲ್ಲ. ತಲೆ ಸುತ್ತಿದಂಗಾಯ್ತು. ನನ್ನನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಏನಯಿತು ಅಂತ ವೈದ್ಯರು ಕೇಳಿದರು. ವಾಸನೆ, ರುಚಿ ಗೊತ್ತಾಗುತ್ತಿಲ್ಲ ಎಂದೆ. ಅಲ್ಲಿಯವರೆಗೂ ನಿರ್ಮಾಪಕ ವಿಶ್ವ ಸಾರ್ ನನ್ನ ಕೈಹಿಡಿದುಕೊಂಡಿದ್ದರು. ನನ್ನ ಮಾತು ಕೇಳಿ ತಕ್ಷಣ ಕೈಬಿಟ್ಟರು. ಅವರಿಗೆ ಟೆನ್ಶನ್ ಆಗಿರಬಹುದು. ಮೊದಲೇ ಅದು ಕೋವಿಡ್ ಸಮಯ. ಹೀಗಿರುವಾಗ ನನಗೂ ಕೋವಿಡ್ ಇರಬಹುದು ಎಂದು ಅವರಿಗೆ ಭಯ ಆಗಿರಬಹುದು. ಆದರೆ, ಡಾಕ್ಟರ್ ಕೋವಿಡ್ ಅನ್ನಲಿಲ್ಲ. ಮಾತ್ರೆ ಕೊಟ್ಟರು. ನಂತರ ಎಲ್ಲವೂ ಸರಿ ಹೋಯ್ತು’ ಎನ್ನುತ್ತಾರೆ ದಿವ್ಯ.

ಇಡೀ ಚಿತ್ರ ಬಹಳ ಚೆನ್ನಾಗಿ ಬಂದಿದೆ ಎನ್ನುವ ದಿವ್ಯ, ‘ಒಬ್ಬೊಬ್ಬರಿಗೆ ಒಂದೊಂದು ಇಷ್ಟ. ಒಬ್ಬರಿಗೆ ಉಪ್ಪಿಟ್ಟು ಇಷ್ಟ. ಒಬ್ಬರಿಗೆ ಬಿಸಿಬೇಳೆ ಬಾತ್ ಇಷ್ಟ. ಇನ್ನೊಬ್ಬರಿಗೆ ಇನ್ನೊಂದು ಇಷ್ಟ. ನಮ್ಮ ಚಿತ್ರವೂ ಹಾಗೆಯೇ. ಎಲ್ಲರಿಗೂ ಎಲ್ಲ ಇಷ್ಟವಾಗುವಂತಹ ವಿಷಯಗಳು ಈ ಚಿತ್ರದಲ್ಲಿವೆ. ತುಂಬಾ ಪ್ರೀತಿಯಿಂದ ಚಿತ್ರ ಮಾಡಿದ್ದೀವಿ. ಇಡೀ ತಂಡ ಒಗ್ಗಟ್ಟಾಗಿ ಚಿತ್ರ ಮಾಡಿದ್ದೇವೆ’ ಎಂದು ಖುಷಿಪಡುತ್ತಾರೆ ಅವರು.

ಈ ಹಿಂದೆ ಯೋಗರಾಜ್ ಭಟ್ ಮತ್ತು ಮಹೇಶ್ ಬಾಬು ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವೀರೇಶ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಕುರಿತು ಮಾತನಾಡುವ ಅವರು, ‘ನಿರ್ದೇಶಕ ಆಗಬೇಕೆಂಬ ಆಸೆ ಇತ್ತು. 10 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಬಹಳಷ್ಟು ನಿರ್ಮಾಪಕರನ್ನು ಕೇಳಿದೆ. ಕೆಲವರು ಕಥೆ ಸಹ ಕೇಳಲ್ಲ. ಅಂತಹ ಸಮಯದಲ್ಲಿ ವಿಶ್ವ ಕರೆದು, ನಾನು ಸಿನಿಮಾ ಮಾಡುತ್ತಿದ್ದೇನೆ. ನೀನೇ ನಿರ್ದೇಶಕ ಎಂದರು. ಖುಷಿ ಮತ್ತು ಭಯ ಎರಡೂ ಒಟ್ಟಿಗೆ ಆಯಿತು. ಆ ನಂಬಿಕೆ ಉಳಿಸಿಕೊಳ್ಳುತ್ತೇನಾ? ಇಬ್ಬರಿಗೂ ಸೂಟ್ ಆಗುವ ಕಥೆ ಇದ್ರೆ ಹೇಳಿ ಎಂದರು. ಒಂದು ಕಥೆ ಹೇಳಿದೆ. ಅವರಿಗೆ ಇಷ್ಟ ಆಯ್ತು. ಬಜೆಟ್ ಜಾಸ್ತಿ ಆಯ್ತು. ಆದರೂ ಪ್ರತಿ ಹಂತದಲ್ಲೂ ನನ್ನನ್ನು ಸಪೋರ್ಟ್ ಮಾಡಿಕೊಂಡೇ ಬಂದಿದ್ದಾರೆ’ ಎನ್ನುತ್ತಾರೆ.

‘ಗಿರ್ಕಿ’ ಚಿತ್ರದಲ್ಲಿ ವಿಲೋಕ್ ರಾಜ್, ದಿವ್ಯಾ ಉರುಡುಗ, ತರಂಗ ವಿಶ್ವ, ರಾಶಿ ಮಹದೇವ್ ಮುಂತಾದವರು ನಟಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಒಳ್ಳೇ ಹಾಡಿಗೆ ಇರುವ ಪವರ್‌ ಇದು!

Previous article

ಪ್ರತಿ ಮನೆಗೂ ಸಿನಿಮಾ ತಲುಪಿಸುವುದು ದೊಡ್ಡ ಜವಾಬ್ದಾರಿ!

Next article

You may also like

Comments

Comments are closed.