ತುಂಬಿದ ಕೊಡ ತುಳುಕಲ್ಲ ಎನ್ನುವ ಪುರಾತನ ಗಾದೆಯೊಂದಿದೆ. ಕೆಲವೊಮ್ಮೆ ಅದು ನಿಜವೆನಿಸುವ ಪ್ರಕರಣಗಳು ಚಿತ್ರರಂಗದಲ್ಲಂತೂ ನಡೆಯುತ್ತಿರುತ್ತವೆ. ಹತ್ತಾರು ಸಿನಿಮಾ ಮಾಡಿದರೂ ದೊಡ್ಡ ಮಟ್ಟಕ್ಕೇರದ, ನಿಂತಲ್ಲೇ ನಿಂದು ಒದ್ದಾಡುವ ಹೀರೋಗಳಿದ್ದಾರೆ. ‘ಯಾಕೆ ಇವರ ನಸೀಬು ಹೀಗಾಗುತ್ತಿದೆ? ಎಲ್ಲಿ ಎಡವುತ್ತಿದ್ದಾರೆ? ಅಂತಾ ಹುಡುಕ ಹೋದರೆ ಸಮಸ್ಯೆಯೆನ್ನೋದು ಅವರ ವ್ಯಕ್ತಿತ್ವದಲ್ಲೇ ಮೊಕ್ಕಾಂ ಹೂಡಿರುತ್ತದೆ. ತಮಗೆ ತಾವೇ ದೊಡ್ಡ ಸ್ಟಾರ್ ಎಂದು ಭ್ರಮಿಸಿಕೊಂಡು, ಜಗತ್ತನ್ನೂ ನಂಬಿಸಲು ಹೋಗಿ ಯಾಮಾರಿಬಿಟ್ಟಿರುತ್ತಾರೆ!
ತೀರಾ ಹೊಸಬನೂ ಅಲ್ಲದ, ಹಳಬರ ಲಿಸ್ಟಿಗೂ ಸೇರದ ಹೀರೋ ಒಬ್ಬರ ಸಿನಿಮಾಗೆ ಜಾಗತಿಕ ನಟರೊಬ್ಬರಿಂದ ಹಾಡು ಹೇಳಿಸಲು ತಯಾರಿ ನಡೆದಿತ್ತು. ಪ್ಲಾನಿನಂತೆ ಆ ದೊಡ್ಡ ನಟ ಸಾಂಗ್ ರೆಕಾರ್ಡ್ ಮಾಡಲು ಸ್ಟುಡಿಯೋಗೂ ಬಂದಿದ್ದರು. ಸಂಗೀತ ನಿರ್ದೇಶಕರಿಗೆ ಎಲ್ಲಿಲ್ಲದ ಸಂಭ್ರಮ. ಆ ಸ್ಟಾರ್ ಎಂಟ್ರಿ ಕೊಡುತ್ತಿದ್ದಂತೇ ಈ ಬಾರಿ ವಿಜಯ ಸಾಧಿಸಲೇ ಬೇಕು ಅಂತಾ ಡಿಸೈಡು ಮಾಡಿಕೊಂಡಿರುವ ಡೈರೆಕ್ಟರ್ ಕಣ್ಣಲಿ ಆನಂದ ಬಾಷ್ಪ ತುಂಬಿ ಹೋಗಿತ್ತು. ಆದರೆ ಹೀರೋ ತೂತು ಬಾಯಿ ಎಲ್ಲವನ್ನೂ ಕೆಡಿಸಿಬಬಿಟ್ಟಿದೆ. ಹಾಡಿನ ಧ್ವನಿ ಮುದ್ರಣಕ್ಕೆ ಆ ಮೇರು ನಟ ಎಂಟ್ರಿ ಕೊಡುತ್ತಿದ್ದಂತೇ, ಸದಾ ಅವರೊಂದಿಗೇ ಇರುವ ಆಪ್ತನ ಬಳಿ ‘ಯಾರು.. ಯಾರು… ಎನ್ನ ಸಿನಿಮಾದೊಳ್ ಹಾಡಲು ಬಂದಿರುವವರು? ನನ್ನ ಸಿನಿಮಾಗೆ ಇನ್ನೊಬ್ಬ ಸ್ಟಾರ್ ಅಗತ್ಯವಿದೆಯಾ? ಅಂದುಬಿಟ್ಟನಂತೆ. ಇನ್ನೇನು ಹಾಡಲು ತಯಾರಾಗುತ್ತಿದ್ದ ಸೂಪರ್ ಸ್ಟಾರ್ ಕಿವಿಗೆ ಅವರ ಆಪ್ತ ಮಿಳ್ಳೆಯಂತೆ ಹೀರೋ ಮಾತನ್ನು ನಿಯತ್ತಾಗಿ ತಲುಪಿಸಿದ್ದ. ಒಂದು ಕ್ಷಣ ಕೂಡಾ ಅಲ್ಲಿರದೆ, ಆ ದೊಡ್ಡ ನಟ ಸೀದಾ ಕಾರು ಏರಿ ಹೊರಟುಬಿಟ್ಟಿದ್ದಾರೆ. ಚಿತ್ರತಂಡದವರು ಏನೇ ತಿಪ್ಪರಲಾಗ ಹಾಕಿದರೂ, ಮತ್ತೆ ಮತ್ತೆ ಟ್ರೈ ಮಾಡಿದರೂ ಈ ಕ್ಷಣಕ್ಕೆ ತಲುಪಲು ಸಾಧ್ಯವೇ ಆಗುತ್ತಿಲ್ಲ!
ಸಿನಿಮಾ ಟೀಮಿನವರೆಲ್ಲಾ ‘ಹಿಂಗಾಗೋಯ್ತಲ್ಲಾ? ಅಂತಾ ತಲೆ ಕೆಡಿಸಿಕೊಂಡು ಕೂತಿದ್ದಾರಂತೆ. ‘ನಾನೇ ಗ್ರೇಟ್ ಅನ್ನಲು ಹೋದ ಹೀರೋ ಮಾತ್ರ ಏನೂ ಆಗೇ ಇಲ್ಲ ಅನ್ನುವಂತೆ ಮಳ್ಳಿನಾಟಕ ಮಾಡುತ್ತಿದ್ದಾನಂತೆ.
ಪಾಪ! ಆ ಸ್ಟಾರ್ನಿಂದ ಒಳ್ಳೇದು ಮಾಡಿಸಿಕೊಂಡವರಲ್ಲಿ ಅನೇಕರು ಗೂಟಾ ಇಕ್ಕಿದ್ದಾರೆ. ಚಿಳ್ಳೆ ಪಿಳ್ಳೆಗಳೆಲ್ಲಾ ಕಮೆಂಟ್ ಮಾಡಿ ತಗುಲಿಕೊಂಡಿದ್ದಾರೆ. ಈಗ ನೋಡಿದರೆ, ಒಂದು ಕಾಲಕ್ಕೆ ತಮ್ಮ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾರ್ಟು ಮಾಡಿಕೊಂಡಿದ್ದ ಹುಡುಗ ಛೇಡಿಸಿದ್ದಾನೆ. ಇನ್ನು ಹೊಸಬರು ಯಾರೇ ಹೋಗಿ ಹಾಡು ಹೇಳಿ, ಹಿನ್ನೆಲೆ ಧ್ವನಿ ಕೊಡಿ, ಅತಿಥಿಗಳಾಗಿ ಬನ್ನಿ ಅಂತಾ ಹೋದರೆ ಆ ಬಿಗ್ ಸ್ಟಾರು ಯಾವ ರೀತಿ ಟ್ರೀಟ್ಮೆಂಟು ಕೊಟ್ಟು ಕಳಿಸಬಹುದು? ಊಹೆ ನಿಮಗೆ ಬಿಟ್ಟಿದ್ದು…