ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಧ್ಯಾನ್ ಹಾಗೂ ಸದಾ ನಾಯಕ, ನಾಯಕಿಯಾಗಿ ನಟಿಸಿದ್ದ ಸೂಪರ್ ಹಿಟ್ “ಮೊನಾಲಿಸ” ಚಿತ್ರ ತೆರೆಕಂಡು ಇಪ್ಪತ್ತು ವರ್ಷಗಳಾಗಿದೆ. ಚಿತ್ರತಂಡದ ಸದಸ್ಯರೊಡನೆ ಕೇಕ್ ಕಟ್ ಮಾಡುವ ಮೂಲಕ “ಮೊನಾಲಿಸ” ಚಿತ್ರದ ಇಪ್ಪತ್ತರ ಸಂಭ್ರಮವನ್ನು ಆಚರಿಸಲಾಯಿತು. ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾಯಕ ಧ್ಯಾನ್, ನಾಯಕಿ ಸದಾ, ನಟ ಶರಣ್, ಸಂಭಾಷಣೆ ಬರೆದಿದ್ದ ಬಿ.ಎ.ಮಧು, ಸ್ಥಿರ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಡಿಸೈನರ್ ಮಣಿ ಸೇರಿದಂತೆ “ಮೊನಾಲಿಸ” ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಂಭ್ರಮದ ಸಂಧರ್ಭದಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಅವರ ಮಗ ಸಮರ್ಜಿತ್ ಲಂಕೇಶ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ “ಗೌರಿ” ಚಿತ್ರದ “ಮುದ್ದಾದ” ಹಾಡು ಸೇರಿದಂತೆ ಎರಡು ಹಾಡುಗಳು ಬಿಡುಗಡೆಯಾಯಿತು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ “ಗೌರಿ” ಹಾಡನ್ನು ಬಿಡುಗಡೆ ಮಾಡಿದರು. ಇಂದಿರಾ ಲಂಕೇಶ್ ಅವರು ಉಪಸ್ಥಿತರಿದ್ದರು. ಈ ಹಾಡನ್ನು ಇಂದ್ರಜಿತ್ ಅವರ ಸಹೋದರಿ ಗೌರಿ ಲಂಕೇಶ್ ಅವರಿಗೆ ಅರ್ಪಿಸಲಾಗಿದೆ. “ಮದ್ದಾದ” ಹಾಡನ್ನು “ಮೊನಾಲಿಸ” ಚಿತ್ರದ ನಾಯಕ ಧ್ಯಾನ್, ನಾಯಕಿ ಸದಾ ಹಾಗೂ”ಗೌರಿ” ಚಿತ್ರದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯ ಅಯ್ಯರ್ ಸೇರಿ ಬಿಡುಗಡೆ ಮಾಡಿದರು. “ಗೌರಿ” ಹಾಡನ್ನು ಕೆ.ಕಲ್ಯಾಣ್ ಹಾಗೂ “ಮುದ್ದಾದ” ಹಾಡನ್ನು ಕವಿರಾಜ್ ಬರೆದಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡುಗಳು ಬಿಡುಗಡೆಯಾಗಿದೆ.
ಹಾಡು ಬಿಡುಗಡೆ ಮಾಡಿ ಮಾತನಾಡಿದ ಹಂಸಲೇಖ ಅವರು, ಸಂಗೀತ ಎಂದರೆ ಸಿನಿಮಾ. ಸಿನಿಮಾ ಎಂದರೆ ಸಂಗೀತ. ಸಂಗೀತವಿಲ್ಲದ ಸಿನಿಮಾವನ್ನು ಊಹಿಸಿಕೊಳ್ಳಲು ಅಸಾಧ್ಯ. ಸ್ಟೈಲಿಶ್ ಚಿತ್ರಗಳಿಗೆ ಹೆಸರಾದ ಇಂದ್ರಜಿತ್ ಅವರು ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ತಮ್ಮ ನಿರ್ದೇಶನದಲ್ಲೇ ಮಗನನ್ನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸುತ್ತಿದ್ದಾರೆ. ಇಂದು ನನ್ನಿಂದ ಬಿಡುಗಡೆಯಾದ ಹಾಡನ್ನು ಗೌರಿ ಲಂಕೇಶ್ ಅವರಿಗೆ ಅರ್ಪಿಸಿದ್ದಾರೆ. “ಗೌರಿ” ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ನಿರ್ದೇಶಕ ಹಾಗೂ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮಾತನಾಡಿ, “ಗೌರಿ” ಚಿತ್ರದಲ್ಲಿ ಏಳು ಹಾಡುಗಳಿದೆ. ಇದೊಂದು ಸಂಗೀತ ಪ್ರಧಾನ ಚಿತ್ರವಾಗಿರುವುದರಿಂದ ಹಂಸಲೇಖ ಅವರಿಂದಲೇ ಹಾಡು ಬಿಡುಗಡೆ ಮಾಡಿಸಬೇಕೆಂಬ ಹಂಬಲ ನನ್ನಗಿತ್ತು. ಹಾಡು ಬಿಡುಗಡೆ ಮಾಡಿಕೊಟ್ಟ ಅವರಿಗೆ ವಂದನೆ. ಇಂದು ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, “ಮುದ್ದಾದ” ಹಾಡನ್ನು ಕವಿರಾಜ್ ಅವರು ಬರೆದಿದ್ದು, ನಿಹಾಲ್ ತವ್ರು ಹಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ಮತ್ತೊಂದು ಹಾಡನ್ನು ಕೆ.ಕಲ್ಯಾಣ್ ಅವರು ಬರೆದಿದ್ದು, ಆ ಹಾಡನ್ನು ನನ್ನ ಅಕ್ಕ ಗೌರಿ ಲಂಕೇಶ್ ಅವರಿಗೆ ಅರ್ಪಣೆ ಮಾಡಲಾಗಿದೆ. ಇನ್ನು ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಯು” ಪ್ರಮಾಣ ಪತ್ರ ನೀಡಿದೆ. ಆಗಸ್ಟ್ ಹದಿನೈದು ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಗಂಗಾಧರ್ ಮೈಸೂರು ಭಾಗದ ವಿತರಕರು. ಮೈಸೂರು ಒಂದನ್ನು ಬಿಟ್ಟು ವಿಶಾಲ ಕರ್ನಾಟಕಕ್ಕೆ ಜಯಣ್ಣ ಫಿಲಂಸ್ ಅವರು ವಿತರಣೆ ಮಾಡುತ್ತಿದ್ದಾರೆ. ಡಬ್ಬಿಂಗ್ ರೈಟ್ಸ್ ಕೂಡ ಮಾರಾಟವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಮೂಲಕ ನಮ್ಮ ಚಿತ್ರ ಗೆದ್ದಿದೆ. ಇನ್ನೇನಿದ್ದರೂ ನಿರ್ದೇಶಕನಾಗಿ ನಾನ ಗೆಲ್ಲಬೇಕು ಎಂದರು.
ನನ್ನ ಬಹು ದಿನಗಳ ಕನಸು ನನಸ್ಸಾಗುವ ಸಮಯ ಸಮೀಪಿಸಿದೆ. ಮೊದಲು ನಾನು ನನ್ನ ಅಪ್ಪನಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಎಂದರು ನಾಯಕ ಸಮರ್ಜಿತ್ ಲಂಕೇಶ್.
ಇಷ್ಟು ದಿಗ್ಗಜ್ಜರ ನಡುವೆ ನಮ್ಮ ಚಿತ್ರದ ಹಾಡು ಬಿಡುಗಡೆಯಾಗಿದು ಖುಷಿಯಾಗಿದೆ ಎಂದರು ನಾಯಕಿ ಸಾನ್ಯಾ ಅಯ್ಯರ್. “ಗೌರಿ” ಚಿತ್ರದ ಛಾಯಾಗ್ರಾಹಕ ಕೆ.ಕೆ, ಗೀತರಚನೆ ಮಾಡಿರುವ ಕೆ.ಕಲ್ಯಾಣ್, ಕವಿರಾಜ್ ಚಿತ್ರದ ಕುರಿತು ಮಾತನಾಡಿದರು.
“ಮೊನಲಿಸ” ಚಿತ್ರದ ಬಗ್ಗೆ ನಾಯಕ ಧ್ಯಾನ್, ನಾಯಕಿ ಸದಾ, ಸಂಭಾಷಣೆ ಬರೆದಿರುವ ಬಿ.ಎ.ಮಧು ಮುಂತಾದವರು ಅನುಭವಗಳನ್ನು ಹಂಚಿಕೊಂಡರು.
No Comment! Be the first one.