“ಗೌರಿ” ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಲ್ಲಿ ನಟ ಉಪೇಂದ್ರ .

ಇಂದ್ರಜಿತ್ ಲಂಕೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ “ಗೌರಿ” ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನೆರವೇರಿದೆ. ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿ “ಗೌರಿ” ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಪ್ರೀ ರಿಲೀಸ್ ಇವೆಂಟ್ ನಲ್ಲಿ ಫ್ಯಾಷನ್ ಶೋ ಸಹ ಆಯೋಜಿಸಲಾಗಿತ್ತು. ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಭಾಗಿಯಾಗಿದ್ದರು. ನಂತರ ಉಪೇಂದ್ರ ಅವರು ಹಾಗು ಚಿತ್ರತಂಡದ ಸದಸ್ಯರು ಮಾತನಾಡಿದರು.

ಇಂದ್ರಜಿತ್‍ ಅವರದ್ದು ಗೋಲ್ಡನ್‍ ಹ್ಯಾಂಡ್‍ ಎಂದು ಮಾತನಾಡಿದ ಉಪೇಂದ್ರ ಅವರು, ಇಂದ್ರಜಿತ್, ದೀಪಿಕಾ ಪಡುಕೋಣೆ ಅವರನ್ನು ಇಲ್ಲಿ ಕರೆದುಕೊಂಡು ಬಂದು ಬ್ರೇಕ್‍ ಕೊಟ್ಟರು. ಈಗ ಅವರು ಇಂಟರ್‌ನ್ಯಾಷನಲ್‌ ಸ್ಟಾರ್ ಆಗಿದ್ದಾರೆ. ಇವರ ಮಗ ಯಾವುದಾದರೂ ದೃಷ್ಟೀಲಿ ಇಲ್ಲಿ ಇರ್ತಾನೆ ಅನಿಸುತ್ತಾ? ಬಾಲಿವುಡ್ ಗೊ, ಹಾಲಿವುಡ್ ಗೊ ಹೋಗೋ ತರಹ ಇದ್ದಾನೆ. ಅವನನ್ನು ಇಲ್ಲೇ ಇರಿಸಿಕೊಳ್ಳೋಕೆ ನಿಮ್ಮ ಕೈಲಿ ಸಾಧ್ಯ ಇದೆ. ಈ ತರಹ ಹೊಸ ತಲೆಮಾರಿನವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಉಳಿದುಕೊಳ್ಳಬೇಕು ಅಂದರೆ ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯ. ಅದಕ್ಕೆ ನೀವೆಲ್ಲಾ ಚಿತ್ರ ನೋಡಬೇಕು. ಈ ಬ್ಯೂಟಿ ಮತ್ತು ಬುದ್ಧಿವಂತಿಕೆ ಮುಗ್ಧತೆಯಿಂದ ಬರುತ್ತದೆ. ಮುಗ್ಧತೆ ಇದೆಯಲ್ಲಾ ಅದೇ ಬ್ಯೂಟಿ. ಇವರ ಮುಖವನ್ನು ನೋಡಿ. ಇವರಿಗೆ ನಾನು ಹಾರೈಸುವುದು ಮುಖ್ಯವಲ್ಲ. ನೀವು ಹಾರೈಸಬೇಕು. ಫಸ್ಟ್ ಡೇ, ಫಸ್ಟ್ ಶೋ ಎಲ್ಲರೂ “ಗೌರಿ” ಸಿನಿಮಾ ನೋಡಿ. ಇವರ ಸಿನಿಮಾ ನೋಡಿದರೆ ನಮಗೂ ಖುಷಿ ಆಗುತ್ತೆ. ಇಂದ್ರಜಿತ್‍ ಅವರು ಶೋಮ್ಯಾನ್. ಈ ತರಹ ಕಾರ್ಯಕ್ರಮ ಮಾಡೋದಕ್ಕೆ ಅವರಿಂದಲೇ ಸಾಧ್ಯ. ಸಿನಿಮಾ ಸಹ ಅದೇ ರೀತಿ ಮಾಡಿರುತ್ತಾರೆ. ಕಾರ್ಯಕ್ರಮವನ್ನೇ ಹೀಗೆ ಮಾಡಿದ್ದಾರೆ, ಇನ್ನೂ ಸಿನಿಮಾ ಹೇಗೆ ಮಾಡಿರಬಹುದು ಯೋಚಿಸಿ ಎಂದರು.

ಸಮರ್ಜಿತ್‍ ಲವ್‍ಸ್ಟೋರಿಗಳಿಗೂ ಸೂಟ್ ಆಗುತ್ತಾನೆ, ಆ್ಯಕ್ಷನ್‍ ಚಿತ್ರಗಳಿಗೂ ಹೊಂದುತ್ತಾನೆ. ದೇಹವನ್ನೂ ಚೆನ್ನಾಗಿ ಬೆಳೆಸಿದ್ದಾನೆ. ಡ್ಯಾನ್ಸ್ ಸಹ ಮಾಡ್ತಾನೆ. ಜನ ಈಗಾಗಲೇ ಹೃತಿಕ್‍ ರೋಶನ್‍ ಅಂತ ಹೇಳೋಕೆ ಶುರು ಮಾಡಿದ್ದಾರೆ. ನೀನು ನಿನ್ನ ಮುಗ್ಧತೆಯನ್ನ ಉಳಿಸಿಕೋ ಸಾಕು. ಎಷ್ಟು ಮುಗ್ಧನಪ್ಪಾ ನೀನು. ಇಲ್ಲಿ ಮುಗ್ಧತೆ ಉಳಿಸಿಕೊಳ್ಳೋದು ಬಹಳ ಕಷ್ಟ. ಸ್ವಲ್ಪ ದಿನ ಚಿತ್ರರಂಗದಲ್ಲಿ ಇದ್ದರೆ ಸಾಕು, ನಾವೆಲ್ಲಾ ಬಹಳ ಕಿಲಾಡಿಗಳಾಗಿ ಬಿಡ್ತೀವಿ. ಚಿಕ್ಕವರಾಗಿದ್ದಾಗ ಬಹಳ ಮುಗ್ಧರಾಗಿರುತ್ತೇವೆ. ಕೆಲವರು ವಯಸ್ಸಾದ ಮೇಲೂ ಹಾಗೇ ಇರುತ್ತಾರೆ. ಕೆಲವರು ಮಾತ್ರ ತಮಗೆ ಎಲ್ಲಾ ಗೊತ್ತು ಎಂದು ಕಳೆದುಕೊಂಡುಬಿಡುತ್ತಾರೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಸಮರ್ಜಿತ್ ಲಂಕೇಶ್ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದರು.

ಸಿನಿಮಾ ಒಂದು ಕ್ರಿಯಾಶೀಲ ಮಾಧ್ಯಮ. ಪ್ರತಿ ಕ್ಷಣ ಯೋಚನೆ ಮಾಡಿ, ಏನಾದರೂ ಹೊಸತನ ತರುತ್ತಾರೆ ಎಂದರೆ ಅದು ಉಪೇಂದ್ರ. ಅವರು ಕನ್ನಡ ಚಿತ್ರರಂಗದಲ್ಲಿರುವುದು ನಮ್ಮ ಅದೃಷ್ಟ. ಉಪ್ಪಿ ಸಾರ್ ಅವರು ತಮ್ಮ ಬುದ್ಧಿವಂತಿಕೆಯಿಂದ ಮತ್ತು ಕ್ರಿಯಾಶೀಲತೆಯಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಹೆಸರು ತಂದಿದ್ದಾರೆ. ಇವತ್ತು ಕನ್ನಡ ಚಿತ್ರರಂಗವನ್ನು ಜಗತ್ತಿಗೆ ತೆಗೆದುಕೊಂಡು ಹೋಗಿದ್ದಾರೆ. ‘ಎ’, ‘ಉಪೇಂದ್ರ’ ಮತ್ತು ‘ಸೂಪರ್’ ಚಿತ್ರಗಳನ್ನು ನಾವು ಯೋಚನೆ ಮಾಡೋಕೂ ಸಾಧ್ಯವಿಲ್ಲ. ನನ್ನ ಮಗ ‘ಉಪೇಂದ್ರ’ ಸಿನಿಮಾ ಕ್ಲೈಮ್ಯಾಕ್ಸ್ ನೋಡಿದೆ, ಅವರು ಆಗಿನ ಕಾಲಕ್ಕೆ ಟೊರೋಂಟಿನೋ ಶೈಲಿಯ ಸಿನಿಮಾ ಮಾಡಿದ್ದರು ಎಂದು ಹೇಳುತ್ತಿದ್ದ. ಆ ರೀತಿಯ ಯೋಚನೆ ಮಾಡೋದು ಅಸಾಧ್ಯ. ಅವರು ನಮ್ಮ ನಡುವೆ ಇದ್ದಾರೆ ಅನ್ನೋದು ನಮ್ಮ ಹೆಮ್ಮೆ ಎಂದು ಹೇಳಿ, ಉಪೇಂದ್ರ ಅವರಿಗೆ ಧನ್ಯವಾದ ತಿಳಿಸಿದ ಇಂದ್ರಜಿತ್ ಲಂಕೇಶ್, ಆಗಸ್ಟ್‌ 15 ರಂದು ಬಿಡುಗಡೆಯಾಗುತ್ತಿರುವ “ಗೌರಿ” ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲೇ ನೋಡಿ ಎಂದರು.

ನಾಯಕ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ತಮ್ಮ ಮೊದಲ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿದರು.

Comments

Leave a Reply