ಸ್ಟೈಲಿಷ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾಗಳೆಂದರೆ ಸಹಜವಾಗೇ ಎಲ್ಲರಲ್ಲಿಯೂ ಕುತೂಹಲ ಇದ್ದೇ ಇರುತ್ತದೆ. ಅವರ ಹಿಂದಿನ ಎಲ್ಲ ಸಿನಿಮಾಗಳಲ್ಲೂ ಹೊಸ ಸ್ಟಾರ್ಗಳು ಹುಟ್ಟಿಕೊಂಡಿದ್ದಾರೆ. ಭಾರತೀಯ ಸಿನಿಮಾ ರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಇಂದ್ರಜಿತ್ ಸ್ವತಃ ತಮ್ಮ ಮಗನನ್ನೇ ಕಣಕ್ಕಿಳಿಸಿದ್ದಾರೆ. ಹೀರೋ ಆಗಲು ಬೇಕಿರುವ ಎಲ್ಲ ಅರ್ಹತೆ ಹೊಂದಿರುವ ಸಮರ್ಜಿತ್ ಲಂಕೇಶ್ ಅನ್ನು ಬೆಳ್ಳಿ ತೆರೆಗೆ ಪರಿಚಯಿಸಿದ್ದಾರೆ. ಈ ವಾರ ತೆರೆಗೆ ಬಂದಿರುವ ಗೌರಿ ಸಿನಿಮಾದೊಂದಿಗೆ ಸಾಕಷ್ಟು ಕುತೂಹಲಗಳಿಗೆ ಉತ್ತರ ಸಿಕ್ಕಂತಾಗಿದೆ.
ಇದು ಕಥಾಹಂದರ!
ತಾಯಿಯ ಬಳುವಳಿ ಎನ್ನುವಂತೆ ಹುಟ್ಟಿನಿಂದಲೇ ನಾಯಕ ʻಗೌರಿʼಗೆ ಸಮಸ್ಯೆಯೊಂದು ಕಾಡುತ್ತಿರುತ್ತದೆ. ಈ ಕಾರಣಕ್ಕೇ ಆತ ಎಲ್ಲೋ ಓದಿ ಬೆಳೆಯುವಂತಾಗುತ್ತದೆ. ಓದು ಮುಗಿಸಿಬಂದ ಮಗನನ್ನು ತಂದೆ ತನ್ನಂತೆಯೇ ಜೋಗಿಯಾಗಿ ಊರೂರು ಅಲೆಯುವ ಕಾಯಕ ಮಾಡು ಎಂದು ಹಠ ಹಿಡಿಯುತ್ತಾನೆ. ಈ ನಡುವೆ ಜನಪದ ಹಾಡುಗಾರನಾದ ತಂದೆಯನ್ನು ತನ್ನೊಟ್ಟಿಗೆ ಸನ್ಮಾನಕ್ಕೆ ಆಯ್ಕೆ ಮಾಡಿದರು ಅನ್ನೋ ಕಾರಣಕ್ಕೆ ಊರಿನ ಶ್ರೀಮಂತ ಅವಮಾನಿಸಿ, ಹಲ್ಲೆ ಮಾಡಿರುತ್ತಾನೆ. ಇದಕ್ಕೆ ಗೌರಿ ತಕ್ಕ ಉತ್ತರವನ್ನೂ ಕೊಡುತ್ತಾನೆ. ಕಡೆಗೆ ಊರುಬಿಟ್ಟು ಬಂದ ಗೌರಿ ಹಾಡುಗಾರನಾಗಿ ಬೆಳೆಯುತ್ತಾನಾ? ಅವನ ಕನಸು ನನಸಾಗುವಲ್ಲಿ ಜೊತೆಗಾತಿಯ ಪಾತ್ರವೇನು? ಚಿತ್ರದಲ್ಲಿ ವಿಶೇಷ ಚೇತನರ ಪಾತ್ರ ಎಷ್ಟು ವಿಶೇಷವಾಗಿದೆ? ಅಸಲಿಗೆ ಗೌರಿ ಅಲ್ಲದೇ ಮತ್ತೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ… ಅದನ್ನು ನಿಭಾಯಿಸಿರುವ ಹೀರೋ ಯಾರು? ಎಂಬಿತ್ಯಾದಿ ಕೌತುಕಮಯ ವಿಚಾರಗಳನ್ನು ತಿಳಿದುಕೊಳ್ಳಲು ಗೌರಿಯನ್ನು ನೋಡಬೇಕು!
ಗೌರಿಯ ಮ್ಯೂಸಿಕಲ್ ಮ್ಯಾಜಿಕ್!
ಬಹುಶಃ ರವಿ ಚಂದ್ರನ್ ಅವರ ಪ್ರೇಮಲೋಕ ನಂತರ ಹಾಡುಗಳ ಮೂಲಕವೇ ಕಥೆ ಹೇಳುವ ತಂತ್ರವನ್ನು ʻಗೌರಿʼಯಲ್ಲಿ ಬಳಸಲಾಗಿದೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಬರೆದಿರುವ ಹಾಡುಗಳನ್ನು ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ ಹಾಡಿದ್ದಾರೆ. ಪ್ರತಿಯೊಂದು ಹಾಡುಗಳೂ ಸಂದರ್ಭಕ್ಕೆ ತಕ್ಕಂತೆ ಮೂಡಿಬಂದಿವೆ. ಟೈಮ್ ಬರತ್ತೆ ಒಳ್ಳೆ ಟೈಂ ಬರತ್ತೆ ಮತ್ತು ತಾಯಿ ಸೆಂಟಿಮೆಂಟ್ ಹಾಡಂತೂ ಹೆಚ್ಚು ಗಮನ ಸೆಳೆಯುತ್ತವೆ. ಮಾಸ್ತಿ, ರಾಬರ್ಟ್ ಖ್ಯಾತಿಯ ರಾಜಶೇಖರ್, ಬಿ.ಎ.ಮಧು, ಗುಬ್ಬಿ ಸೇರಿ ಬರೆದಿರುವ ಸಂಭಾಷಣೆ ಸಿನಿಮಾದ ಶಕ್ತಿಯನ್ನು ಹೆಚ್ಚಿದೆ.
ಸಮರ್ಜಿತ್-ಸಾನ್ಯಾ ಜೋಡಿ ಮಾಡಿದ ಮೋಡಿ!
ಸಮರ್ ಸಿನಿಮಾರಂಗದ ಸಾಕಷ್ಟು ವಿಭಾಗಗಳಲ್ಲಿ, ಜಾಹೀರಾತುಗಳಲ್ಲಿ ಅಭಿನಯಿಸಿದ್ದರೂ ನಾಯಕನಟನಾಗಿ ಇಂದು ಚೊಚ್ಚಲ ಸಿನಿಮಾ ಹಾಗೆಯೇ ಕಿರುತೆರೆ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಸಾನಿಯಾ ಅಯ್ಯರ್ ಕೂಡಾ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಮೊದಲ ಚಿತ್ರಕ್ಕೆ ಎಂತಾ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳಬೇಕೋ ಅದನ್ನೇ ಇಂದ್ರಜಿತ್ ಕೈಗೆತ್ತಿಕೊಂಡಿದ್ದಾರೆ. ಸಾಧಿಸಬೇಕೆನ್ನುವ ಛಲ, ಅಡ್ಡ ಬರುವ ಸವಾಲುಗಳು, ಕುಟುಂಬದ ಹಿನ್ನೆಲೆ, ಅಪ್ಪನ ಸಾವು, ತಾಯಿಯ ಅನಾರೋಗ್ಯ, ಇವೆಲ್ಲದರ ಜೊತೆಗೆ ಹುಟ್ಟಿನಿಂದಲೇ ಹಿಂಡುತ್ತಾ ಬಂದ ಸಮಸ್ಯೆಯ ನಡುವೆ ಹೀರೋ ಗುರಿ ಮುಟ್ಟುತ್ತಾನಾ ಅನ್ನೋದೇ ಚಿತ್ರದ ಅಂತಿಮ ರಹಸ್ಯ.
ಇಂದ್ರಜಿತ್ ಪ್ರತೀ ದೃಶ್ಯದಲ್ಲೂ ತಮ್ಮ ಮಗನನ್ನೇ ಹೆಚ್ಚು ಮಿಂಚುವಂತೆ ಮಾಡಬಹುದಿತ್ತು. ಹಾಗೆ ನೋಡಿದರೆ, ಹೀರೋ ಲಾಂಚಿಂಗ್ ಸಿನಿಮಾಗಳಲ್ಲಿ ನಾಯಕಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇರೋದೇ ಇಲ್ಲ. ಆದರೆ, ಇಂದ್ರಜಿತ್ ಲಂಕೇಶ್ ಹಾಗೆ ಮಾಡಿಲ್ಲ. ತಮ್ಮ ಮಗನಿಗೆ ಎಷ್ಟು ಮುತುವರ್ಜಿ ಕೊಟ್ಟಿದ್ದಾರೋ ಹಾಗೇ ನಾಯಕಿ ಸಾನಿಯಾ ಕಡೆಗೂ ಗಮನ ನೀಡಿದ್ದಾರೆ. ಸಾನಿಯಾ ಕೂಡಾ ಅಷ್ಟೇ ತನ್ಮಯತೆಯಿಂದ ನಟಿಸಿದ್ದಾಳೆ. ಸಮರ್ ಮೊದಲ ಚಿತ್ರದಲ್ಲೇ ಸಾಕಷ್ಟು ಶೇಡ್ ಗಳನ್ನು ನೀಡಿದ್ದಾರೆ. ಹುಡುಗರನ್ನು ಮಾತ್ರವಲ್ಲ, ಹೆಣ್ಣುಮಕ್ಕಳನ್ನು ಆಕರ್ಷಿಸುವ ಮೈಕಟ್ಟು ಸಮರ್ಜಿತ್ ಅವರದ್ದು. ಸಮರ್ ಫೈಟು, ಡ್ಯಾನ್ಸು ಮಾಡೋದನ್ನು ನೋಡಿದರೆ, ಈ ಹುಡುಗ ಕನ್ನಡ ಮಾತ್ರವಲ್ಲ, ಭಾರತದ ಯಾವುದೇ ಭಾಷೆಗೂ ಹೊಂದುವ ಮೈಕಟ್ಟು, ಮುಖಭಾವ ಹೊಂದಿದ್ದಾರೆ ಅನ್ನಿಸುತ್ತದೆ.
ಸಿನಿಮಾದಲ್ಲಿ ನಾಯಕ ನಾಯಕಿಯನ್ನು ಹೊರತುಪಡಿಸಿ, ನಟ ಸಂಪತ್ ಮೈತ್ರೇಯ ಅತಿ ಹೆಚ್ಚು ಇಷ್ಟವಾಗುತ್ತಾರೆ. ಕಥೆಗೆ ಪೂರಕವಾದ ಅವರ ಸಹಜಾಭಿನಯ ಕಾಡುತ್ತದೆ. ಮಾನಸಿ ಸುಧೀರ್ ಕೂಡಾ ಅಷ್ಟೇ ಚೆಂದಗೆ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಹೆಸರು ಮಾಡಿರುವ ನವಾಜ್ ಗೆ ಒಪ್ಪುವಂತಾ ಕ್ಯಾರೆಕ್ಟರು ಇಲ್ಲಿ ಸಿಕ್ಕಿದೆ. ಒಟ್ಟಾರೆ, ಯುವ ಸಮೂಹದ ಜೊತೆಗೆ ಹಿರಿಯರನ್ನೂ ಆಕರ್ಷಿಸುವ ಕಥೆ ಮತ್ತು ಚಿತ್ರಕತೆ ʻಗೌರಿʼಯ ಗೌರವ ಹೆಚ್ಚಿಸಿದೆ…
ಇನ್ನು ನಿರ್ದೇಶಕನಾಗಿ ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ಗೆದ್ದಿದ್ದಾರೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ!
No Comment! Be the first one.