ನೂರೆಂಟು ಸಮಸ್ಯೆಗಳು, ಕೆಲಸದ ಒತ್ತಡಗಳಿಂದ ಹೊರಬರಲು ಪ್ರವಾಸ, ಟ್ರಕ್ಕಿಂಗುಗಳು ಮನರಂಜನೆ ನೀಡುತ್ತವೆ. ಆದರೆ, ಮೋಜು-ಮಸ್ತಿಯ ಗುಂಗಿನಲ್ಲಿ ಎಷ್ಟೋ ಜನ ಮಿತಿಮೀರಿ ವರ್ತಿಸಿ ಪ್ರಾಣಕ್ಕೇ ಆಪತ್ತು ತಂದುಕೊಳ್ಳುತ್ತಾರೆ. ಇತ್ತೀಚೆಗಂತೂ ಕೈಗೆ ಮೊಬೈಲು ಬಂದಮೇಲೆ ಸಿಕ್ಕಸಿಕ್ಕಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟ ಬೇರೆ ಈ ಜನಕ್ಕೆ. ಹರಿಯೋ ನೀರು ಕಂಡರೆ ಕೆಲವರಂತೂ ಹುಚ್ಚರಂತಾಡಿಬಿಡುತ್ತಾರೆ. ಧುಮ್ಮಿಕ್ಕುವ ಜಲಪಾತಗಳ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಂಡವರೂ ಇದ್ದಾರೆ. ಒಬ್ಬರು ಕಾಲುಜಾರಿ ಬಿದ್ದು, ಉಳಿದವರನ್ನೂ ಅಪೋಷನ ತೆಗೆದುಕೊಂಡ ಸಾಕಷ್ಟು ನಿದರ್ಶನಗಳಿವೆ.
-ಇಂಥದ್ದೇ ಕತೆಯನ್ನು ಹೇಳುವ, ಅಕ್ಷರಶಃ ʼಆತ್ಮಾವಲೋಕನʼಕ್ಕೆ ಅವಕಾಶ ಕಲ್ಪಿಸಿರುವ ಚಿತ್ರ ಗ್ರೂಫಿ. ʻಗ್ರೂಫಿʼ ಅಂದರೇನು ಅಂತಾ ಯಾರಾದ್ರೂ ಗೂಗಲ್ಲಲ್ಲಿ ಹುಡುಕಿರಬಹುದು. ಗೊತ್ತಿಲ್ಲದವರು ತಿಳಿದುಕೊಳ್ಳಬಹುದಾದ್ದು; ಸಿಂಗಲ್ಲಾಗಿ ತೆಗೆದುಕೊಂಡರೆ ಸೆಲ್ಫಿ, ಗುಂಪು ಸೇರಿ ತೆಗೆದುಕೊಳ್ಳುವ ಫೋಟೋಗೆ ಗ್ರೂಫಿ ಅನ್ನುತ್ತಾರಂತೆ!
ಈ ಸಿನಿಮಾಗೆ ಗ್ರೂಫಿ ಅಂತ್ಯಾಕೆ ಹೆಸರಿಟ್ಟಿದ್ದಾರೆ? ಅಂತಾ ಕಾದರೆ ಸಿನಿಮಾದ ಕೊನೆಯ ಭಾಗದಲ್ಲಿ ಸ್ಪಷ್ಟ ಉತ್ತರ ಕೂಡಾ ಸಿಗುತ್ತದೆ. ಈ ಸಿನಿಮಾದ ಹೀರೋ ಪತ್ರಿಕಾ ಛಾಯಾಗ್ರಾಹಕ. ಅಸೈನ್ʼಮೆಂಟಿನ ಕಾರಣಕ್ಕೆ ಮಲೆನಾಡಿಗೆ ತೆರಳುತ್ತಾನೆ. ಅಲ್ಲಿ ಒಂಟಿ ಹುಡುಗನ ಜೊತೆಯಾಗೋರು ಯಾರು? ಯಾವೆಲ್ಲಾ ಘಟನೆಗಳು ನಡೆಯುತ್ತವೆ? ಎನ್ನುವುದು ಗ್ರೂಫಿ ಸಿನಿಮಾದ ಕಂಟೆಂಟು!
ಇದು ಸಸ್ಪೆನ್ಸ್, ಥ್ರಿಲ್ಲರ್ & ಹಾರರ್ ಕಥಾಹಂದರ ಹೊಂದಿರುವ ಸಿನಿಮಾ. ಆದರೆ ಎಲ್ಲೂ ಪ್ರೇಕ್ಷಕರು ಬೆಚ್ಚಿಬೀಳುವ ದೃಶ್ಯಗಳಿಲ್ಲ. ದೆವ್ವಗಳ ಕಥೆಯನ್ನು ಇಷ್ಟು ತಣ್ಣಗೆ ಹೇಳಬಹುದು ಅನ್ನೋದನ್ನು ನಿರ್ದೇಶಕರು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೂ ಮುಟ್ಟಲೇಬೇಕಾದ ಮೆಸೇಜು ಈ ಚಿತ್ರದಲ್ಲಿದೆ. ಅದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಷ್ಟೇ ʻಎಡವಿರೋದುʼ. ಮೊದಲ ಭಾಗ ಹೆಚ್ಚೂ ಜೀಪಿನಲ್ಲಿ ಸುತ್ತಾಡಿಸಿ ಟೈಂ ಪಾಸ್ ಮಾಡಿಸುತ್ತಾರೆ. ಎರಡನೇ ಭಾಗದಲ್ಲಿ ಅಸಲೀ ಕಥೆ ತೆರೆದುಕೊಳ್ಳುತ್ತದೆ.
ಚಿತ್ರದ ಹೀರೋ ಆರ್ಯನ್ ನೋಡಲು ಮುದ್ದಾಗಿದ್ದಾನೆ. ನಟನೆಯಲ್ಲಿ ಇನ್ನೂ ಸಾಕಷ್ಟು ಪಳಗಬೇಕು. ಉಮಾಮಯೂರಿ ನಟನೆ ಸುಮಾರು. ಇರೋದರಲ್ಲಿ ಪದ್ಮಶ್ರೀ ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡುತ್ತಾಳೆ. ಹಾಸ್ಯ ನಟ ರಜನಿಕಾಂತ್ ಅಗತ್ಯವೇ ಇರಲಿಲ್ಲ. ಛಾಯಾಗ್ರಾಹಕರ ಕ್ರಿಯಾಶೀಲತೆ ಡ್ರೋನ್ ಶಾಟ್ʼಗಳಿಗೆ ಮಾತ್ರ ಸೀಮಿತವಾಗಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ರವಿ ಅರ್ಜುನ್ ನಿರ್ದೇಶನದಲ್ಲಿ ನಿಶ್ಯಕ್ತಿ ಎದ್ದುಕಾಣುತ್ತದೆ.
ಹಾರರ್ ಸಿನಿಮಾಗಳ ಹೆಸರಿನಲ್ಲಿ ಕೆಟ್ಟಾಕೊಳಕು ಕಥೆ ಇಟ್ಟು, ಭಯಾನಕ ಹಿಂಸೆ ಕೊಡುವವರ ನಡುವೆ ಒಂದೊಳ್ಳೆ ಸಂದೇಶವಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅನ್ನೋದೊಂದೇ ʻಗ್ರೂಫಿʼಯ ಹೆಚ್ಚುಗಾರಿಕೆ!
No Comment! Be the first one.