ಸಾಮಾನ್ಯವಾಗಿ ಥಿಯೇಟರ್ ನಲ್ಲಿ ಫೈಟಿಂಗ್, ರೊಮ್ಯಾನ್ಸು, ಪ್ರಪೋಸು, ಸೆಂಟಿಮೆಂಟು, ಡ್ಯಾನ್ಸು, ಫಸ್ಟ್ ನೈಟು ಇತ್ಯಾದಿ ಸಿಚುವೇಷನ್ನುಗಳ ಸೀನುಗಳಲ್ಲಿ ಪ್ರೇಕ್ಷಕರಾದವರು ತಾನೇ ಎನ್ನುವಂತೆ ಫೀಲ್ ಮಾಡಿಕೊಳ್ಳುವುದುಂಟು. ಒಳಗೊಳಗೆ ಏನೋ ಸಿಕ್ಕಂತೆ ಕಿಸ ಕಿಸನೇ ನಕ್ಕ ಉದಾಹರಣೆಗಳಿಗೂ ಬರವಿಲ್ಲ. ಇಂತಹ ಡ್ರೀಮನ್ನು ಇಟ್ಟುಕೊಂಡೇ ಹಾಡೊಂದನ್ನು ಮಾಡಿದ್ದು, ಪ್ರೇಕ್ಷಕರ ಕನಸಿಗೆ ಜೋಶ್ ತುಂಬುವ ಕೆಲಸವೂ ಆಗಿದೆ. ಹೌದು.. ನಾಳೆ ಬಿಡುಗಡೆಯಾಗಲಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಸ್ವಾಗತಂ ಕೃಷ್ಣ ಎಂಬ ಹಾಡು ಪ್ರತಿಯೊಬ್ಬ ಪ್ರೇಕ್ಷಕರಿಗೂ ಲಿಂಕ್ ಆಗುವ ಸಾಂಗು. ಸಿನಿಮಾದಲ್ಲಿ ನಾಯಕ ತಾನು ಹಿರೋಯಿನ್ ಗಳ ಜತೆ ಕುಣಿದರೆ ಹೇಗೆಂಬ ಡ್ರೀಮಿನಲ್ಲಿರುವಾಗ ಬರುವ ಹಾಡು ಅದಾಗಿದ್ದು, ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಕೆಲ ನಾಯಕಿಯರ ಆಗಮನವೂ ಆ ಹಾಡಿನಲ್ಲಾಗುತ್ತದೆ.
ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಕಾಮಿಡಿ ಜಾನರ್ ನ ಹೊಸ ಸಿನಿಮಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಅವರಿಗೆ ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ಕವಿತಾ ಗೌಡ ಬಾಣ ಹೂಡಲು ರೆಡಿಯಾಗಿದ್ದಾರೆ. ಇಲ್ಲಿಯವರೆಗೂ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಜಯ್ ಶಾಸ್ತ್ರಿ ಗುಬ್ಬಿಯ ಕಥೆಯ ಹೇಳುವ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಅಯೋಗ್ಯ, ಚಮಕ್’ರಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ಟಿ. ಆರ್. ಚಂದ್ರಶೇಖರ್ ಬ್ರಹ್ಮಾಸ್ತ್ರಕ್ಕೆ ಬಂಡವಾಳ ಹೂಡಿದ್ದಾರೆ. ಉಳಿದಂತೆ ಮಣಿಕಾಂತ್ ಕದ್ರಿ ಸಂಗೀತ, ಪ್ರಸನ್ನ ಸಂಭಾಷಣೆ, ಶ್ರೀಕಾಂತ್ ಸಂಕಲನ, ಭೂಷಣ್ ಛಾಯಾಗ್ರಹಣ ಚಿತ್ರಕ್ಕಿದೆ.