ಒಂದು ಮೊಟ್ಟೆಯ ಕತೆ ಖ್ಯಾತಿಯ ರಾಜ್ ಬಿ ಶೆಟ್ಟಿ, ಚಮಕ್, ಅಯೋಗ್ಯ ಮತ್ತು ಬೀರ್ ಬಲ್ ಸಿನಿಮಾಗಳನ್ನು ನಿರ್ಮಿಸಿದ್ದ ಕ್ರಿಸ್ಟಲ್ ಸಿನಿಮಾಸ್’ನ ಚಂದ್ರಶೇಖರ್ ಅವರ ನಿರ್ಮಾಣದ ನಾಲ್ಕನೇ ಸಿನಿಮಾ, ಹಾಸ್ಯ ನಟನಾಗಿ ಹೆಸರು ಮಾಡಿರುವ ಸುಜಯ್ ಶಾಸ್ತಿ ನಿರ್ದೇಶನದ ಮೊದಲ ಚಿತ್ರ – ಹೀಗೆ ನಾಲ್ಕಾರು ಕಾರಣಕ್ಕಾಗಿ ಮುಖ್ಯವೆನಿಸಿದ್ದ ಸಿನಿಮಾ ಗುಬ್ಬಿಮೇಲೆ ಬ್ರಹ್ಮಾಸ್ತ್ರ.
ಮೊಟ್ಟೆಯ ಕತೆಯಂತೇ ಇಲ್ಲಿ ಕೂಡಾ ಕಥೆ ಶುರುವಾಗೋದು ಮದುವೆಯ ವಿಚಾರದಿಂದ. ತೆಳ್ಳಗಿನ, ಕೂದಲು ಕಡಿಮೆಯಿರುವ ಹುಡುಗನಿಗೆ ಮದುವೆ ಮಾಡಿಸೋ ಕನಸು ಹೆತ್ತವರದ್ದು. ಗುಬ್ಬಿ ದೇಹದ ಕ್ರಿಶ್ನನ್ನು ಒಪ್ಪಲು ಮನಸ್ಸು ಮಾಡಿದ ಹುಡುಗಿಯರಿಗೆ ಅವನ ಒಂದೂವರೆ ಲಕ್ಷ ಸಂಬಳದ ಮೇಲೇ ಹೆಚ್ಚು ಒಲವು. ಒಳಗಿಂದ ಪ್ರೀತಿ ಹುಟ್ಟಿದವಳೊಟ್ಟಿಗೆ ಬಾಳ್ವೆ ನಡೆಸಬೇಕೆನ್ನುವುದು ಗುಬ್ಬಿಯ ಬಯಕೆ. ಈ ಹಾದಿಯಲ್ಲಿ ಗುಬ್ಬಿ ಜೊತೆಯಾಗುವವಳು ಪರ್ಪಲ್ ಪ್ರಿಯಾ. ಅಂದುಕೊಂಡ ಹುಡುಗಿ ಸಿಕ್ಕಳು ಅನ್ನುವಷ್ಟರಲ್ಲಿ ಪೊಸೆಸಿವ್ ನೆಸ್ಸಿಗೆ ಬಿದ್ದ ಗೆಳೆಯ ಸೃಷ್ಟಿಸುವ ಅವಾಂತರಗಳು. ಕಡೆಗೆ ಗುಬ್ಬಿ ಮತ್ತವನ ಪರ್ಪಲ್ ಪ್ರಿಯೆ ಹೋಗಿ ಸಿಲುಕುವುದು ರಾಬಿನ್ ಹುಡ್ ರೆಡಿ ಮಾಡಿಟ್ಟ ಬೋನಿಗೆ. ತನ್ನುಡುಗಿಯನ್ನು ಬಿಡಿಸಿಕೊಳ್ಳಬೇಕೆಂದರೆ ಗುಬ್ಬಿ ರಾಬಿನ್ ಹುಡ್ ನೀಡೋ ಟಾಸ್ಕುಗಳನ್ನು ನಿಭಾಯಿಸಬೇಕು. ಹಾಗೆ ರಾಬಿನ್ ಹುಡ್ಡನ ಬ್ರಹ್ಮಾಸ್ತ್ರಗಳಿಂದ ಗುಬ್ಬಿ ಬಜಾವಾಗುತ್ತಾನಾ? ಆತ ಹೇಳಿದ್ದನ್ನೆಲ್ಲಾ ಮಾಡಿ ಪರ್ಪಲ್ ಹುಡುಗಿಯ ಜೊತೆಯಾಗುತ್ತಾನಾ? ಅನ್ನೋದು ಒಟ್ಟೂ ಸಿನಿಮಾದ ಕ್ಷಣಕ್ಷಣಕ್ಕೂ ಕಾಡಿಸುವ ಕುತೂಹಲ.
ಸಹಜ ಅಭಿನಯದ ಮೂಲಕವೇ ನಗಿಸೋದು ನಟ ರಾಜ್ ಬಿ ಶೆಟ್ಟರ ತಾಕತ್ತು. ಅವರ ಜೊತೆಗೆ ನಿರ್ದೇಶಕ ಸುಜಯ್ ಶಾಸ್ತ್ರಿ ಕೂಡಾ ಸಿನಿಮಾದುದ್ದಕ್ಕೂ ಸಾಥ್ ನೀಡುತ್ತಾರೆ. ರಾಬಿನ್ ಕ್ಯಾರೆಕ್ಟರಿನಲ್ಲಿ, ಚಿತ್ರ ವಿಚಿತ್ರ ಪೋಷಾಕು ತೊಟ್ಟು ನಟಿಸಿರುವ ಪ್ರಮೋದ್ ಶೆಟ್ಟರ ಪಾಲಿಗಿದು ಭಿನ್ನ ರೋಲು. ಇಷ್ಟು ದಿನ ಸೀರಿಯಸ್ ಪಾತ್ರಗಳಲ್ಲಿ ನಟಿಸುತ್ತಿದ್ದ ಪ್ರಮೋದ್ ಇಲ್ಲಿ ಬೇರೆಯದ್ದೇ ಬಗೆಯಲ್ಲಿ ಅವತಾರವೆತ್ತಿದ್ದಾರೆ. ಹಾಸ್ಯ ಕಲಾವಿದ ಗಿರೀಶ್ ಕೂಡಾ ತೀರಾ ಹೊಸತೆನ್ನುವಂತೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿರುವ ಹಲ್ಲಿ ಪಾತ್ರಧಾರಿ ಭರವಸೆ ಹುಟ್ಟಿಸುತ್ತಾರೆ. ಪರ್ಪಲ್ ಪ್ರಿಯಾ ಆಗಿ ಕವಿತಾ ಗೌಡ ಇಷ್ಟವಾಗುತ್ತಾರೆ. ಹಲ್ಲಿ, ಶ್ರದ್ಧಾ ಶ್ರೀನಾಥ್, ಗುಬ್ಬಿ… ಸೇರಿದಂತೆ ಇಡೀ ಸಿನಿಮಾದಲ್ಲಿ ಬರುವ ಪಾತ್ರಗಳ ಹೆಸರೇ ನಗು ತರಿಸುವಂಥಾದ್ದು. ನಟ ರಾಜ್ ಶೆಟ್ಟಿ, ಡುಮ್ಮ ಗಿರಿ, ಸುಜಯ್ ಶಾಸ್ತ್ರಿ ಮತ್ತು ಪ್ರಮೋದ್ ಶೆಟ್ಟಿ ಜಿದ್ದಿಗೆ ಬಿದ್ದವರಂತೆ ನಟಿಸಿ ನಗಿಸುತ್ತಾರೆ. ಕದ್ರಿ ಮಣಿಕಾಂತ್ ಸಂಗೀತ ನಿರ್ದೇಶನದ ‘ಸ್ವಾಗತಂ ಕೃಷ್ಣಾ’ ಹಾಡು ಎದೆಗೆ ನಾಟುತ್ತದೆ. ಕದ್ರಿಯವರ ಹಿನ್ನೆಲೆ ಸಂಗೀತ ಕೂಡಾ ಚಿತ್ರಕ್ಕೆ ಪೂರಕವಾಗಿದೆ.
ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ತೀರಾ ಲಾಜಿಕ್ಕು ಹುಡುಕಬಾರದು ಅನ್ನೋದು ಗುಬ್ಬಿಗೂ ಅಪ್ಲೈ ಆಗುತ್ತದೆ. ಹೆಸರಿಗೆ ಕಾಮಿಡಿ ಆದರೂ ಟ್ರ್ಯಾಜಿಡಿ ಚಿತ್ರಗಳೇ ಜನ್ಮವೆತ್ತುತ್ತಿರುವ ಈ ಹೊತ್ತಿನಲ್ಲಿ ‘ಗುಬ್ಬಿ’ ತಿಳಿ ಹಾಸ್ಯದಿಂದ ತುಂಬಿರುವ ಅಪ್ಪಟ ನಗಿಸುವ ಚಿತ್ರ. ಇಷ್ಟೆಲ್ಲಾ ಇದ್ದೂ ಸಿನಿಮಾದ ದ್ವಿತೀಯಾರ್ಧದಲ್ಲಿ ಅಲ್ಲಲ್ಲಿ ಚಿತ್ರಕತೆಯನ್ನು ಎಳೆದಂತೆ ಕಾಣುತ್ತದೆ. ಇನ್ನೊಂಚೂರು ಗಮನ ಕೊಟ್ಟಿದ್ದರೂ ‘ಗುಬ್ಬಿ’ ಮತ್ತಷ್ಟು ಪುಷ್ಟಿ ಪಡೆಯುತ್ತಿತ್ತು. ಅದೇನೇ ಇದ್ದರೂ ಎಲ್ಲರೂ ಕೂತು ನಗುನಗುತ್ತಾ ಎಂಜಾಯ್ ಮಾಡಿಕೊಂಡು ನೋಡಬಹುದಾದ ಸಿನಿಮಾ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.