ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಮೂಲಕ ಸಿ ನಂದ ಕಿಶೋರ್ ಅರ್ಪಿಸಿ, ಟಿ.ಆರ್. ಚಂದ್ರಶೇಖರ್ ನಿರ್ಮಿಸಿರುವ ಸಿನಿಮಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಹೆಸರು ಮಾಡಿರುವ ಸುಜಯ್ ಶಾಸ್ತ್ರಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಕವಿತಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ನಟ ಪ್ರಮೋದ್ ಶೆಟ್ಟಿ ಕಾಮಿಡಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರಂತೆ. ಮಣಿಕಾಂತ್ ಕದ್ರಿ ಗುಬ್ಬಿ ಹಾಡಿಗೆ ಸಂಗೀತ ನೀಡಿದ್ದಾರೆ. ಚಮಕ್, ಬೀರ್ ಬಲ್, ಮತ್ತು ಅಯೋಗ್ಯ ಸಿನಿಮಾಗಳನ್ನು ನಿರ್ಮಿಸಿರುವ ಕ್ರಿಸ್ಟಲ್ ಸಿನಿಮಾಸ್,ನ ನಾಲ್ಕನೇ ಕೊಡುಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಈವರೆಗೆ ಈ ಸಂಸ್ಥೆ ನೀಡಿರುವ ನಾಲ್ಕೂ ಚಿತ್ರಗಳೂ ಬೇರೆ ಬೇರೆ ಜಾನರಿನ ಕಥಾವಸ್ತುಗಳನ್ನು ಒಳಗೊಂಡಿದ್ದಾಗಿವೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಲ್ಲ ವರ್ಗಕ್ಕೂ ಇಷ್ಟವಾಗುವ ಚಿತ್ರವಂತೆ. ಹೀಗಾಗಿ ಈ ಚಿತ್ರವನ್ನು ಆಗಸ್ಟ್ 15ರ ಸ್ವತಂತ್ರ ದಿನದಂದು ತೆರೆಗೆ ತರುತ್ತಿದ್ದೇವೆ ಎಂದು ಸ್ವತಃ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಹೇಳಿದ್ದಾರೆ.
“ಆರಂಭದಿಂದ ಕೊನೆಯ ತನಕ ನಗಿಸುವುದೊಂದೇ ಈ ಚಿತ್ರದ ಉದ್ದೇಶ. ಹಾಗಂತ ಎಲ್ಲೂ ಹಾಸ್ಯ ದೃಶ್ಯಗಳನ್ನಾಗಲಿ, ಸೆಂಟಿಮೆಂಟುಗಳನ್ನು ತುರುಕುವ ಪ್ರಯತ್ನ ಮಾಡಿಲ್ಲ. ಕಥೆಯಲ್ಲೇ ಎಲ್ಲವೂ ಸಹಜವಾಗಿ ಬೆರೆತುಕೊಂಡಿದೆ… ಸಿನಿಮಾ ಮಾಡೋದು ಒಂದು ಕಲೆಯಾದರೆ ಅದನ್ನು ಜನಕ್ಕೆ ತಲುಪಿಸೋದು ಬೇರೆಯದ್ದೇ ಬಗೆ. ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಕ್ರಿಸ್ಟಲ್ ಪಾರ್ಕ್ ಸಂಸ್ಥೆಯ ನಿರ್ಮಾಣದಲ್ಲಿ ಸಿನಿಮಾ ಮಾಡಿರೋದು ಖುಷಿ ಕೊಟ್ಟಿದೆ. ಬ್ರಹ್ಮಾಸ್ತ್ರದಂಥಾ ಪರಿಸರದಲ್ಲಿ ಗುಬ್ಬಿ ಸಿಕ್ಕಿಕೊಂಡಾಗ ಏನಾಗುತ್ತದೆ ಅನ್ನೋದು ಚಿತ್ರದ ತಿರುಳು” ಅನ್ನೋದು ರಾಜ್ ಬಿ ಶೆಟ್ಟಿ ಅವರ ಅನಿಸಿಕೆಗಳು.
“ನಾನು ಸೀರಿಯಸ್ ಆದ ಪಾತ್ರಗಳನ್ನು ಮಾಡುತ್ತಾ ಬಂದವನು. ಕಾಮಿಡಿ ಪಾತ್ರದಲ್ಲಿ ಹೇಗೆ ನಟಿಸುತ್ತೇನೋ ಎನ್ನುವ ಅನುಮಾನವಿತ್ತು. ಆದರೆ ಸುಜೈ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಮಿಡಿ ಖಳನಟನಾಗಿ ಚಿತ್ರಿಸಿದ್ದಾರೆ” ಎಂದು ನಟ ಪ್ರಮೋದ್ ಶೆಟ್ಟಿ ಹೇಳಿಕೊಂಡರು. ಗುಬ್ಬಿ ಮತ್ತು ಬ್ರಹ್ಮಾಸ್ತ್ತದ ನಡುವಿನ ಪರ್ಪಲ್ ಪ್ರಿಯಾ ಪಾತ್ರದಲ್ಲಿ ಕವಿತಾ ಗೌಡ ನಟಿಸಿದ್ದಾರಂತೆ. ಅರ್ಜುನ್ ಗುರೂಜಿ ಈ ಚಿತ್ರದ ಟ್ರೇಲರನ್ನು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
No Comment! Be the first one.