ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ನಿರ್ದೇಶಕನಾಗಿ ಎಂಟ್ರಿ ಕೊಟ್ಟವರು ರಾಜ್ ಬಿ ಶೆಟ್ಟಿ. ಮನುಷ್ಯ ಸಹಜ ಒಳತೋಟಿಗಳಿಗೆ ಕನ್ನಡಿ ಹಿಡಿದಂಥಾ ಈ ಚಿತ್ರ ಹಿಟ್ ಆದ ನಂತರ ರಾಜ್ ನಟನಾಗಿಯೇ ನೆಲೆ ನಿಂತಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಅವರ ನಟನೆಯ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ಇದೇ ಆಗಸ್ಟ್ 15 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.
ವಿಶೇಷವೆಂದರೆ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದಾರಂತೆ. ಈ ಹಿಂದೆ ಒಂದು ಮೊಟ್ಟೆ ಕಥೆ ಕೂಡಾ ಕೆಲವು ಭಾಷೆಗಳಲ್ಲಿ ಮರುನಿರ್ಮಾಣಗೊಂಡಿತ್ತು. ರಾಜ್ ಬಿ. ಶೆಟ್ಟಿ ಅವರ ಸಿನಿಮಾಗಳಲ್ಲಿ ಟ್ರ್ಯಾಕ್ ಕಾಮಿಡಿ ಇಲ್ಲದೇ, ಸಬ್ಜೆಕ್ಟಿನಲ್ಲೇ ಹಾಸ್ಯ ಬೆಸೆದುಕೊಂಡಿರುತ್ತದಾದ್ದರಿಂದ ಪರಭಾಷೆಗಳಲ್ಲಿ ಇವರ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಸದ್ಯ ಚಿತ್ರತಂಡ ಕನ್ನಡ ಸಿನಿಮಾದ ಬಿಡುಗಡೆ ಬ್ಯುಸಿಯಲ್ಲಿರುವುದರಿಂದ ರಿಮೇಕ್ ಹಕ್ಕುಗಳ ಬಗ್ಗೆ ಮಾತಾಡಲು ಮುಂದಾಗಿಲ್ಲ. ಚಿತ್ರ ಬಿಡುಗಡೆಯಾಗುತ್ತಿದ್ದಂತೇ ಯಾವ್ಯಾವ ಭಾಷೆಗಳಿಂದ ಆಫರ್ ಬಂದಿವೆಯೋ ಅವರೆಲ್ಲರ ಬಳಿ ಕುಳಿತು ಮಾತಾಡಿ ಅಂತಿಮಗೊಳಿಸಲಿದ್ದಾರೆ ಅನ್ನೋ ಮಾಹಿತಿ ಇದೆ.
ಈ ಹಿಂದೆ ಚಮಕ್, ಅಯೋಗ್ಯದಂಥಾ ಚಿತ್ರಗಳಿಗೆ ಹಣ ಹೂಡಿರುವ ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಈ ಚಿತ್ರದ ಟ್ರೇಲರನ್ನು ನೋಡಿದ ಪ್ರೇಕ್ಷಕರೆಲ್ಲರೂ ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿಯೂ ಅದೇ ಮುಗ್ಧ ನೋಟದೊಂದಿಗೇ ಹೊಸಾ ಲುಕ್ಕಿನಲ್ಲಿ ಕಾಣಿಸಿಕೊಂಡಿರೋ ರಾಜ್ ಬಿ ಶೆಟ್ಟಿ ಮತ್ತೆ ಗೆಲ್ಲಬಹುದಾದ ಎಲ್ಲ ಲಕ್ಷಣಗಳೂ ಕಾಣಿಸಲಾರಂಭಿಸಿವೆ!