ತಿಪಟೂರಿನಲ್ಲಿ ಆಟೋ ಡ್ರೈವರ್ ಮತ್ತು ನಾಯಿಯ ನಡುವೆ ನಡೆದ ನೈಜ ಘಟನೆಯನ್ನು ಆಧರಿಸಿ ನಾನು ಮತ್ತು ಗುಂಡ ಸಿನಿಮಾ ತಯಾರಾಗಿದೆ. ಇಷ್ಟು ದಿನ ಹಾಸ್ಯ ನಟರಾಗಿ ಮಾತ್ರ ಪರಿಚಯವಿದ್ದ ಶಿವರಾಜ್ ಕೆ.ಆರ್. ಪೇಟೆ ಈ ಸಿನಿಮಾದಲ್ಲಿ ನಿಮ್ಮ ಕಣ್ಣಂಚಲ್ಲಿ ನೀರು ಜಿನುಗುವಂತೆ ಮಾಡಿದ್ದಾರೆ. ಅದು ಯಾಕೆ ಅಂತ ಅವರ ಮಾತಲ್ಲೇ ಕೇಳಿ…
ನಿರೂಪಣೆ: ಸುಮ ಜಿ
ನಾನು ಮತ್ತು ಗುಂಡ ಸಿನಿಮಾವನ್ನು ಒಪ್ಪಿಕೊಂಡ ಸಂದರ್ಭ ತಿಳಿಸಿ
ಕಾಮಿಡಿ ಕಿಲಾಡಿಗಳು ಮಾಡುವ ಮುನ್ನ ರಘು ಹಾಸನ್ ಅವರ ಒಂದು ಚಿತ್ರದಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದೆ. ಕಾಮಿಡಿ ಕಿಲಾಡಿಗಳು ಮಗಿದ ನಂತರ ರಘು ಅವರು ನನ್ನನ್ನು ಕರೆಸಿ, ಒಂದು ಕಥೆ ಹೇಳಿದ್ರು. ಹೇಗಿದೆ ಕಥೆ ಅಂತ ಕೇಳಿದ್ರು, ತುಂಬಾ ಚೆನ್ನಾಗಿದೆ ಅಂದೆ. ಅದರಲ್ಲಿ ಶಂಕರ ಅನ್ನೋ ಕ್ಯಾರೆಕ್ಟರ್ ಇದ್ಯಲ್ಲಾ ಅದು ನೀವೇ ಮಾಡ್ಬೇಕು ಅಂದ್ರು. ನನಗೆ ಆಶ್ಚರ್ಯವಾಯಿತು. ಇಡೀ ಸಿನಿಮಾದಲ್ಲಿ ಅದೊಂದು ಮುಖ್ಯವಾದ ಪಾತ್ರ… ಅದನ್ನ ನಾನು ಮಾಡ್ಬೇಕಾ ಅಂದೆ. ನಿಮ್ಮಲ್ಲಿರುವ ಮತ್ತೊಬ್ಬ ಕಲಾವಿದನನ್ನ ಹೊರತರಬೇಕು ಅಂದ್ರು.
ಈ ಸಿನಿಮಾದಲ್ಲಿ ನಿಮ್ಮ ಜೊತೆ ಒಂದು ನಾಯಿ ಕೂಡಾ ಪಾರ್ಟ್ ಮಾಡಿದೆ. ಅದರ ಬಗ್ಗೆ ಹೇಳಿ
ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ನನ್ನದೊಂದು ಆಟೋ ಡ್ರೈವರ್ ಪಾತ್ರ. ಸಿನಿಮಾದಲ್ಲಿ ೨ ಶ್ವಾನಗಳು ಪಾತ್ರ ನಿರ್ವಹಿಸಿವೆ. ಇಡೀ ಸಿನಿಮಾದ ಮೊದಲನೇ ಶಾಟ್ ಗುಂಡ ಎಂಬ ಒಂದು ಪುಟ್ಟ ಶ್ವಾನದ ಪಾತ್ರ. ನಾಯಿ ಮತ್ತು ಮನುಷ್ಯನ ಸಂಬಂಧ ಅನ್ನೋದಕ್ಕಿಂತ ನಾನು ಮತ್ತು ನನ್ನ ತಮ್ಮ ಆಕ್ಟ್ ಮಾಡ್ತಿದ್ದೇವೆ ಅನಿಸುತ್ತಿತ್ತು. ನಾವು ಶೂಟಿಂಗ್ ಮಾಡುವಾಗ ನಮಗೆ ಒಂದು ಟೈಮ್ ಬೌಂಡ್ ಇರುತ್ತೆ. ಆದರೆ ಪ್ರಾಣಿಗಳಿಗೆ ಅವುಗಳ ಮೂಡ್’ಗೆ ತಕ್ಕ ಹಾಗೆ ಶೂಟಿಂಗ್ ಮಾಡಬೇಕಿರುತ್ತದೆ. ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಸಕಲೇಶಪುರ ಈ ಸ್ಥಳಗಳಲ್ಲಿ ಸುಮಾರು ೩೦ ದಿನಗಳ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ವಿ. ಆದರೆ ೪೫ ದಿನಗಳು ಶೂಟಿಂಗ್ ಮಾಡಬೇಕಾಯಿತು. ಇದರಿಂದ ಬಜೆಟ್ಕೂಡ ಹೆಚ್ಚಾಗುತ್ತಾ ಹೋಗುತ್ತಿತ್ತು. ನಿರ್ಮಾಪಕರೂ ಸಹ ಎಲ್ಲೂ ಬೇಸರ ವ್ಯಕ್ತಪಡಿಸಲಿಲ್ಲ.
ಚಿತ್ರೀಕರಣದ ಸಂದರ್ಭ ಮತ್ತು ಅನುಭವವನ್ನು ತಿಳಿಸಿ
ಮರಿ ಗುಂಡ ದೊಡ್ಡ ಗುಂಡ ಇಬ್ಬರೊಂದಿಗೆ ಪಾತ್ರ ಮಾಡಿರೋದು ಬಹಳ ಖುಷಿ ತಂದಿದೆ ಜೊತೆಗೆ ಅವುಗಳಿಂದ ಕಲಿತಿರೋದು ಬಹಳ ಇದೆ. ಕೆಲವೊಂದು ಕಡೆ ಆಶ್ಚರ್ಯ, ಭಾವುಕತೆ ಎಲ್ಲವೂ ಇರುತ್ತಿತ್ತು. ಮೊದಮೊದಲು ಗುಂಡನೊಂದಿಗೆ ಪಾತ್ರ ಮಾಡುವಾಗ ಕಚ್ಚಿಬಿಡುತ್ತೇನೋ ಅಂತ ಭಯವೆನಿಸುತ್ತಿತ್ತು. ಆಮೇಲೆ ಗುಂಡನ್ನ ಬಿಟ್ಟು ಇರೋಕೇ ಆಗಲ್ಲ ಅನ್ನೋ ಭಾವನೆ ಬಂದುಬಿಡ್ತು. ಕೆಲವೊಮ್ಮೆ ಗುಂಡ ಮಾಡಿರೋ ಆಕ್ಟಿಂಗ್’ಗೆ ನಮ್ಮ ಕಣ್ಣು ತುಂಬಿಕೊಳ್ಳುವಂತಹ ಅನುಭವಕೂಡ ಆಗಿದೆ.