ವಿದೇಶೀ ಸಿನಿಮಾಗಳನ್ನು ಯಥಾವತ್ತಾಗಿ ನಕಲು ಮಾಡಿ ಸಿನಿಮಾ ಮಾಡೋದು ತೀರಾ ಹೊಸ ವಿಚಾರವಲ್ಲ. ಕನ್ನಡ ಮಾತ್ರವಲ್ಲ ನೆರೆಯ ತೆಲುಗು ತಮಿಳಿನಲ್ಲೂ ಎತ್ತುವಳಿ ವೀರರಿದ್ದಾರೆ. ಪರಭಾಷೆಯವರು ವಿದೇಶೀ ಸಿನಿಮಾಗಳನ್ನು ಸೃಜನಶೀಲವಾಗಿ ದೇಪುತ್ತಾರೆ. ತಮ್ಮ ನೇಟಿವಿಟಿಗೆ ತಕ್ಕಂತೆ ಎಲ್ಲವನ್ನೂ ಬದಲಾಯಿಸಿಕೊಳ್ಳುತ್ತಾರೆ. ಮೂಲ ಕತೆ ಬರೆದವನೇ ಬೆರಗಾಗುವಂತೆ ಅಚ್ಚುಕಟ್ಟಾಗಿ ಸಿನಿಮಾವನ್ನೂ ಮಾಡುತ್ತಾರೆ. ಗೆದ್ದು ತೋರಿಸುತ್ತಾರೆ. ಆದರೆ ಕನ್ನಡದಲ್ಲಿ ಹಾಗಿಲ್ಲ. ಸಿನಿಮಾವೊಂದನ್ನು ಯಥಾವತ್ತಾಗಿ ಎಗರಿಸೋದು ಮಾತ್ರವಲ್ಲ, ಅದೇ ಚಿತ್ರದ ಪೋಸ್ಟರನ್ನೂ ಮಕ್ಕಿಕಾಮಕ್ಕಿ ಭಟ್ಟಿ ಇಳಿಸಿಬಿಡುತ್ತಾರೆ. ಇಂಥವಕ್ಕೆ ಸಾಕಷ್ಟುಉದಾಹರಣೆಗಳೂ ಇವೆ!
ಸದ್ಯ ಶರಣ್ ನಾಯಕನಾಗಿ ನಟಿಸುತ್ತಿರುವ ಗುರು ಶಿಷ್ಯರು ಹೆಸರಿನ ಚಿತ್ರವೊಂದು ನಿರ್ಮಾಣ ಹಂತದಲ್ಲಿದೆ. ಈ ಹಿಂದೆ ಜಂಟಲ್ ಮನ್ ಎನ್ನುವ ಉತ್ತಮ ಸಿನಿಮಾವನ್ನು ನಿರ್ದೇಶಿದ್ದವರು ಜಡೇಶ್ ಹಂಪಿ. ಜಡೇಶ್ ಕೈಗೆತ್ತಿಕೊಂಡಿರುವ ಎರಡನೇ ಚಿತ್ರ ಗುರು ಶಿಷ್ಯರು. ಈಗ ಸ್ಟಾರ್ ಡೈರೆಕ್ಟರ್ ಲಿಸ್ಟಿನಲ್ಲಿರುವ ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಇವೆಲ್ಲ ಎಲ್ಲರಿಗೂ ಗೊತ್ತಿರುವ ಸಬ್ಜೆಕ್ಟು. ಗೊತ್ತಿಲ್ಲದ ಮತ್ತು ಅನುಮಾನಕ್ಕೆ ಕಾರಣವಾಗಿರುವ ವಿಚಾರವೂ ಇದೆ. ಅದೇನೆಂದರೆ, “ಗುರು ಶಿಷ್ಯರ ಮೇಲೆ ಚಿತ್ರ ರಷ್ಯಾದ ಲಕ್ಕಿ ಟ್ರಬಲ್ ಸಿನಿಮಾದ ಛಾಯೆ ಎದ್ದುಕಾಣುತ್ತಿದೆ” ಎನ್ನುವ ಗಾಳಿ ಸುದ್ದಿ ಹಬ್ಬಿದೆ. ಇದು ಬರಿಯ ಗಾಸಿಪ್ಪಾ ಅಂತಾ ತಲಾಷ್ ಮಾಡಿದರೆ, ʻಇದ್ದರೂ ಇರಬಹುದುʼ ಎನ್ನುವಂತಾ ಸಾಕ್ಷಿಗಳೇ ಲಭಿಸುತ್ತಿವೆ. ಸಿನಿಮಾದ ಒಳ ತಿರುಳು ನಿಜಕ್ಕೂ ಏನಿದೆಯೋ ಗೊತ್ತಿಲ್ಲ. ಮೇಲ್ನೋಟಕ್ಕೆ ಪೋಸ್ಟರ್ ಕೂಡಾ ಅದೇ ಲಕ್ಕಿ ಟ್ರಬಲ್ ಚಿತ್ರದ ವಿನ್ಯಾಸವನ್ನು ಹೋಲುತ್ತಿದೆ.
ಶರಣ್ ನಟನೆಯ ಈ ಹಿಂದಿನ ಕೆಲವು ಸಿನಿಮಾಗಳ ಮೇಲೆ ಪರಭಾಷೆಯ ಮತ್ತು ವಿದೇಶೀ ಚಿತ್ರಗಳ ನೆರಳಿದ್ದವು. ಕಾಮಿಡಿ ಹೀರೋಗಳು ದೂರದೂರಿನ ಸಿನಿಮಾಗಳನ್ನು ಹಿಡಿಹಿಡಿಯಾಗಿ ಎತ್ತಿಕೊಂಡು ಸಿನಿಮಾ ಮಾಡಿದ ನಿದರ್ಶನಗಳಿವೆ. ಕೊರಿಯನ್ ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡಿ, ಅಲ್ಲಿನ ಕಥಾವಸ್ತುಗಳನ್ನು ಕಳವು ಮಾಡುತ್ತಿದ್ದ ನಮ್ಮವರೀಗ ರಷ್ಯಾದ ಮೇಲೆ ಕಣ್ಣಿಟ್ಟಿರೋದು ಸದ್ಯದ ವಿಶೇಷ.
ಒಂದು ವೇಳೆ ಲಕ್ಕಿ ಟ್ರಬಲ್ ಚಿತ್ರದ ಸ್ಫೂರ್ತಿ ಪಡೆದು ಗುರು ಶಿಷ್ಯರು ರೂಪಿಸುತ್ತಿದ್ದಾರಾ ಅಥವಾ ಕಾಕತಾಳೀಯವಾಗಿ ಹಾಗನ್ನಿಸುತ್ತಿದೆಯಾ? ಚಿತ್ರತಂಡದವರೇ ಉತ್ತರಿಸಬೇಕು!
Comments