ನಿರ್ದೇಶಕ ಗುರುಪ್ರಸಾದ್ ಬದುಕು ಹೆಚ್ಚೂಕಮ್ಮಿ ಕೇರ್ ಆಫ್ ಫುಟ್ ಪಾತ್ ಲೆವೆಲ್ಲಿಗೆ ಬಂದು ನಿಂತಿದೆ. ನಂಬಿದವರಿಗೆ ಲಕ್ಷಗಟ್ಟಲೆ ವಂಚಿಸಿದ ಪ್ರತಿಫಲವಾಗಿ ಮಠ ಗುರುಪ್ರಸಾದ ಜೈಲಿಗೆ ಹೋಗಿದ್ದಾನೆ.
ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆಯಾಗಿರುವವನು ನಿರ್ದೇಶಕ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಈಗ ಇವನ ಬದುಕೇ ಅಡ್ಡಾದಿಡ್ಡಿಯಾಗಿ ಸಾಗುತ್ತಿದೆ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ ಯಡವಟ್ಟುಗಳನ್ನು ಸ್ವತಃ ಮಾಡಿಕೊಂಡಿದ್ದಾನೆ. ನಂಬಿದವರನ್ನು ಮತ್ತೆ ಮತ್ತೆ ವಂಚಿಸಿದ್ದಾರೆ. ಎಲ್ಲರ ನಂಬಿಕೆ ಕಳೆದುಕೊಂಡಿದ್ದಾರೆ. ಮುಲಾಜಿಲ್ಲದೆ ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮನ್ನು ತಾನು ಸಮರ್ಥಿಸಿಕೊಳ್ಳುತ್ತಿದ್ದಾನೆ. ಒಳ್ಳೇದು ಹೇಳಿದವರಿಗೆ ಕೆಡುಕು ಮಾಡುತ್ತಿದ್ದಾನೆ. ಎಲ್ಲ ತಿಳಿದಿದ್ದೂ ಆತ್ಮದ್ರೋಹ ಮಾಡಿಕೊಳ್ಳುತ್ತಿದ್ದಾರೆ.
ಗುರುಪ್ರಸಾದ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಯೇ ಸಿನಿಮಾ ಮಾಡಬೇಕಿಲ್ಲ. ಗಟ್ಟಿಯಾದ ಕಂಟೆಂಟಿಗೆ ಮಜಬೂತಾದ ಮಾತುಗಳನ್ನು ಪೋಣಿಸಿ ಜನಮೆಚ್ಚುಗೆಯ ಚಿತ್ರವನ್ನು ಕಟ್ಟಿನಿಲ್ಲಿಸಬಹುದು ಅನ್ನೋದನ್ನು ತೋರಿಸಿಕೊಟ್ಟವನು. ಚಿತ್ರರಂಗಕ್ಕೆ ಬಂದು ಬೇರೆಲ್ಲರಂತೆ ಕಷ್ಟ ಪಡಬಾರದು; ಇತರರಿಗೆ ಹೊರೆಯಾಗಬಾರದು ಅಂತಾ ಎಷ್ಟು ವ್ಯವಸ್ಥಿತವಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟವನು ಗುರು ಪ್ರಸಾದ್. ಆದರೆ ಎಲ್ಲಿ ಎಡವಿದರೋ ಗೊತ್ತಿಲ್ಲ. ಈಗ ತಮ್ಮ ಬದುಕಿನ ಬಂಡಿಯನ್ನು ಅವ್ಯವಸ್ಥೆಯ ಗಟಾರದಲ್ಲಿ ಪಾರ್ಕಿಂಗ್ ಮಾಡಿದ್ದಾನೆ.
ಸರಿಸುಮಾರು 2015ರಿಂದ ಗುರುಪ್ರಸಾದ್ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಾ ಬಂದವರು ಶ್ರೀನಿವಾಸ್. ಎರಡನೇ ಸಲ ಸಿನಿಮಾ ಮೂಲಕ ಗುರುಪ್ರಸಾದ್ ಅವರ ಡೈರೆಕ್ಷನ್ ತಂಡ ಸೇರಿದರು. ಇದೇ ಸಿನಿಮಾ ಚಿತ್ರೀಕರಣ ಹಂತರದಲ್ಲಿದ್ದಾಗ ತಮಗೆ ಪರಿಚಯವಿದ್ದ ಮಾರ್ವಾಡಿಯೊಬ್ಬರಿಂದ ಹದಿನೇಳು ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ನಂತರ ತಮ್ಮ ಪತ್ನಿಯ ಒಡವೆಯನ್ನೆಲ್ಲಾ ಮಾರಿ ಹದಿಮೂರು ಲಕ್ಷ ರುಪಾಯಿಗಳನ್ನು ಗುರುಪ್ರಸಾದ್ ಕೈಗೊಪ್ಪಿಸಿದ್ದರು. ʻನಮ್ಮ ಡೈರೆಕ್ಟ್ರು ಕಷ್ಟದಲ್ಲಿದ್ದಾರೆ. ಆರ್ಥಿಕ ಸಂಕಷ್ಟಗಳು ಅವರ ಪ್ರತಿಭೆಯನ್ನು ನುಂಗಿಹಾಕಬಾರದುʼ ಅಂದುಕೊಂಡು ಗುರು ಕಷ್ಟದಲ್ಲಿದ್ದಾಗಲೆಲ್ಲಾ ಕೈ ಹಿಡಿದವರು ಶ್ರೀನಿವಾಸ್. ಆದರೆ ಗುರುಪ್ರಸಾದ್ ಯಾಕೋ ಶಿಷ್ಯನ ನಿಯತ್ತನ್ನು ಉಳಿಸಿಕೊಂಡಂತೆ ಕಾಣುತ್ತಿಲ್ಲ. ಕೊಟ್ಟ ಹಣ ವಾಪಾಸು ಕೇಳಿದರೆ ಈಗ, ಆಗ ಅಂತಾ ಆಟಾಡಿಸಿದ್ದಾರೆ. ಕಡೆಯದಾಗಿ ʻʻಜುಲೈ 27ನೇ ತಾರೀಖು ಬಾ. ಎಲ್ಲವನ್ನೂ ಕೊಡ್ತೀನಿʼʼ ಅಂತಾ ಹೇಳಿ ಜುಲೈ 18ಕ್ಕೇ ಗಾಯಬ್ ಆಗಿದ್ದ. ಶ್ರೀನಿವಾಸ್ ಅವರ ನಂಬರ್ನು ಕಂಪ್ಲೀಟ್ ಬ್ಲಾಕ್ ಮಾಡಿದ್ದಾರೆ. ಸಾಲದ್ದಕ್ಕೆ ತಮ್ಮ ಎರಡನೇ ಪತ್ನಿಯಿಂದ ಶ್ರೀನಿವಾಸ್ ಅವರ ಮೇಲೆ ಸುಳ್ಳು ದೂರು ನೀಡಿಸುವ ಸಂಚು ನಡೆಸಿ ವಿಫಲರಾಗಿದ್ದ.
ಇತ್ತ ಕಾಸು ಕೊಟ್ಟ ಮಾರ್ವಾಡಿ ಕಡೆಯಿಂದ ಶ್ರೀನಿವಾಸ್ ಅವರಿಗೆ ವಿಪರೀತ ಒತ್ತಡ ಶುರುವಾಗಿದೆ. ಇದ್ದ ಬದ್ದ ಒಡವೆಗಳನ್ನೆಲ್ಲಾ ಕೊಟ್ಟ ಶ್ರೀನಿವಾಸ್ ಅವರ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕಾಲೇಜು ಓದುತ್ತಿರುವ ಮಗಳಿಗೆ ಲ್ಯಾಪ್ ಟಾಪ್ ಕೊಡಿಸಲು ಐವತ್ತು ಸಾವಿರ ರುಪಾಯಿ ಕೂಡಾ ಇಲ್ಲದೆ ಪರದಾಡುತ್ತಿರುವ ಶ್ರೀನಿವಾಸ್ ಪರಿಸ್ಥಿತಿ ನೋಡಿದರೆ ಯಾರಿಗಾದರೂ ಅಯ್ಯೋ ಅನ್ನಿಸದೇ ಇರುವುದಿಲ್ಲ. ಇನ್ನು ಗುರುಪ್ರಸಾದ್ ಯಾಕೆ ಶಿಷ್ಯನನ್ನು ಈ ಮಟ್ಟಿಗೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಮೂಲ ಸಂಭಾಷಣೆ ಬರಹಾರರೂ ಆಗಿರುವ ಗುರುಪ್ರಸಾದ್ ಅದ್ಭುತ ಮಾತುಗಾರ. ತಮ್ಮ ಕಲರ್ ಫುಲ್ ಮಾತಿನಿಂದಲೇ ಎಂಥವರನ್ನೂ ಮೋಡಿ ಮಾಡಬಲ್ಲವರು. ಇರುವ ಪ್ರತಿಭೆಯನ್ನು ನೇರ್ಪಾಗಿ ಉಪಗೋಗಿಸಿಕೊಂಡಿದ್ದರೆ ಜೀವನಕ್ಕಾದರೂ ದಾರಿಯಾಗುತ್ತಿತ್ತು. ಅದುಬಿಟ್ಟು ಕಂಡವರ ಬದುಕನ್ನು ಹಾಳು ಮಾಡುವ ನೀಚ ಬುದ್ದಿ ಈ ಗಡ್ಡದ ಗುರುವಿಗೆ ಯಾಕೆ ಬಂತೋ ಗೊತ್ತಿಲ್ಲ
ಎಚ್ಚೂ ಕಮ್ಮಿ ಮಗಳ ವಯಸ್ಸಿನ ಸುಮಿತ್ರಾಳನ್ನು ಗುರುಪ್ರಸಾದ್ ಮದುವೆಯೇ ಆಗಿಬಿಟ್ಟಿದ್ದಾರೆ. ಜೊತೆಗೆ ಈಕೆಗೂ ಒಂದು ಹೆಣ್ಣು ಮಗುವನ್ನು ಪ್ರಾಪ್ತಿ ಮಾಡಿದ್ದಾರೆ. ಹೋಗಲಿ, ಇವರನ್ನಾದರೂ ನೆಟ್ಟಗೆ ಬಾಳಿಸಿದ್ದಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ತನ್ನ ಅರಾಜಕ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಗುರು ಪ್ರಸಾದ್ಗೆ ಕಾಸು ಕೊಟ್ಟು ತಗಲಾಕಿಕೊಂಡವರ ಮೇಲೆ ತನ್ನ ಎರಡನೇ ಪತ್ನಿಯನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾನೆ. ನೋಡೋ ತನಕ ನೋಡಿದ ಶ್ರೀನಿವಾಸ್ ಗುರು ಕೊಟ್ಟಿದ್ದ ಚೆಕ್ಕನ್ನು ಬ್ಯಾಂಕಿಗೆ ಹಾಕಿದ್ದರು. ಅದು ಬೌನ್ಸ್ ಆಗಿತ್ತು. ಈಗ ಶ್ರೀನಿವಾಸ್ ಕಾನೂನಿನ ಮೊರೆ ಹೋಗಿದ್ದಾರೆ. ಬಸವೇಶ್ವರ ನಗರದ ಇಂಜಿನಿಯರ್ಸ್ ಕ್ಲಬ್ಬಿನಲ್ಲಿ ರೂಮು ಪಡೆದು ಅಡಗಿಕೊಂಡಿದ್ದ ಗುರುವನ್ನು ಗಿರಿನಗರ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ದಿದ್ದಾರೆ!
ಇವತ್ತಿಗೂ ಕಾಲ ಮಿಂಚಿಲ್ಲ. ಕುಡಿತ, ಸುಳ್ಳು, ಅಶಿಸ್ತುಗಳಿಂದ ಹೊರಬಂದು, ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಬೇಕು. ಶ್ರದ್ದೆಯಿಂದ ಕೂತು ಕೆಲಸ ಮಾಡಿ ಮತ್ತೊಂದಿಷ್ಟು ಚಿತ್ರಗಳನ್ನು ಒಪ್ಪಿಕೊಂಡರೆ ಇರುವ ಸಾಲವನ್ನು ತೀರಿಸುವುದು ದೊಡ್ಡ ವಿಚಾರವೇ ಅಲ್ಲ. ಅದು ಬಿಟ್ಟು ಕಾಸು ಕೊಟ್ಟವರನ್ನು ಯಾಮಾರಿಸುವ ಸ್ಕೆಚ್ಚು, ನಂಬಿಬಂದವರನ್ನೇ ದಾಳವಾಗಿಸಿಕೊಳ್ಳುವ ಸ್ಕೀಮುಗಳನ್ನೆಲ್ಲಾ ಬಿಡಬೇಕು. ಇವೆಲ್ಲಾ ಸಾಧ್ಯವಾದರೆ ಮಾತ್ರ ಮಠ ಗುರುಪ್ರಸಾದ್ ಮತ್ತೆ ಹಳೇ ಫಾರ್ಮಿಗೆ ಬರಲು ಸಾಧ್ಯ.
No Comment! Be the first one.