ಕರಾವಳಿಯ ಪ್ರತಿಭಾತಟಾಕದಲ್ಲಿ ನವಕುಸುಮಗಳು ಕಲಾವಿದರಾಗಿ ಅರಳುವುದು ಹೊಸತೇನಲ್ಲ. ಅದರಲ್ಲೂ ಮಂಗಳೂರು ಭಾಗದ ಅನೇಕ ಕಲಾವಿದರು ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಮುಂತಾದೆಡೆಯೂ ತಮ್ಮ ಛಾಪು ಮೂಡಿಸಿದ್ದಾರೆ. ಇದೀಗ ಮಂಗಳೂರು ಸುತ್ತಮುತ್ತದ ಅನೇಕ ಉತ್ಸಾಹಿಗಳು ಕೂಡಿ ಒಂದು ಹೊಸ ಸಿನಿಮಾ ಮಾಡಿದ್ದಾರೆ. ಚಿತ್ರದ ಹೆಸರು ‘ಜಿ-ವನ ಯಜ್ಞ’
ಚಿತ್ರದ ಕಥೆ, ಸಂಭಾಷಣೆ, ಚಿತ್ರಕಥೆ, ಹಾಗೂ ನಿರ್ದೇಶನ ಮಾಡಿರುವವರು ಶಿವು ಸರಳೇಬೆಟ್ಟು. ಪಾರ್ಲೆ ಜಿ ಸಂತೋಷವನ್ನು ನೀಡಿದರೆ, ಗೂಗಲ್ ಹುಡುಕಾಟವನ್ನು ನಡೆಸುತ್ತದೆ. ಆ ಅರ್ಥದಲ್ಲಿ ಜಿ-ವನ ಯಜ್ಞ ಟೈಟಲ್ ನಲ್ಲಿ ಜಿ ಸೇರಿಸಲಾಗಿದೆ. ಕಥೆಯ ಒಳನೋಟಗಳು ಇದನ್ನು ತಿಳಿಸುತ್ತದೆ. ಭೂಮಿ, ಅಗ್ನಿ, ವಾಯು, ಜಲ, ಪೃಥ್ವಿ, ಆಕಾಶ ಎಂಬ ಪಂಚಭೂತಗಳಲ್ಲಿ ಜೀವನ ಪಯಣ ಸಾಗುತ್ತದೆ. ಇದರಲ್ಲಿ ನಾಲ್ಕು ಪಾತ್ರಗಳನ್ನು ಹೆಸರಿಸಲಾಗಿದೆ. ಕಣ್ಣು, ಕಿವಿ, ಮೆದುಳು ಮತ್ತು ಮನಸ್ಸಿನ ಜೊತೆಗೆ ಸಮಾಜ, ಚಿತ್ರದ ಭಿನ್ನಕೋನವಾಗಿದ್ದು, ಪ್ರೇಕ್ಷಕನಲ್ಲಿ ಕುತೂಹಲ ಕೆರಳಿಸಲಾಗಿದೆ. ಶಿಶುನಾಳ ಷರೀಫರು ಹಾಗೂ ಕನಕದಾಸರ ಒಂದೊಂದು ವಾಕ್ಯಗಳನ್ನು ಆರಿಸಿಕೊಂಡು, ಕಥೆ ಸಿದ್ಧಪಡಿಸಲಾಗಿದೆ ಎಂದಿದ್ದಾರೆ ಶಿವು.
ಮಠ ಕೊಪ್ಪಳ, ಮನೋಜ್ ಪುತ್ತೂರು, ಶೈನ್ ಶೆಟ್ಟಿ ಹಾಗೂ ಅನೂಪ್ ಸಾಗರ್ ಚಿತ್ರದ ನಾಯಕರಾದರೆ, ಸೌಜನ್ಯಹೆಗಡೆ, ಅನ್ವಿತಾಸಾಗರ್, ಆದ್ಯಾ ಆರಾಧನ್ ಚಿತ್ರದ ನಾಯಕಿಯರಾಗಿದ್ದಾರೆ. ಹಿರಿಯ ಕಲಾವಿದರಾದ ರಮೇಶ್ ಭಟ್ ಹಾಗೂ ಬಿ.ಜಯಶ್ರೀ ಅವರು ನಟಿಸಿರುವುದು ಚಿತ್ರತಂಡಕ್ಕೆ ಬೋನಸ್ ಆಗಿದೆ. ಮಂಗಳೂರಿನ ಹೊಸ ಜಾಗಗಳಲ್ಲಿ ಚಿತ್ರದ ಶೂಟಿಂಗ್ ಮಾಡಲಾಗಿದೆ. ರಿತೀಶ್ ರತ್ನಮಾಲಾ, ಸಂತು, ಶಿವು ಸರಳೇಬೆಟ್ಟು ಬರೆದಿರುವ ಹಾಡುಗಳಿಗೆ ಅಕ್ಷಯ್ ಮೈಕೆಲ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎರಡೂವರೆ ನಿಮಿಷದ ಹಾಡೊಂದರಲ್ಲೇ ಅರ್ಧ ಗಂಟೆಯ ಕಥೆಯನ್ನು ತೋರಿಸಿರುವುದು ವಿಶೇಷ. ಕಿರಣ್ ರೈ ಹಾಗೂ ರಂಜನ್ ಶೆಟ್ಟಿ ಜಂಟಿಯಾಗಿ ಕೆಆರ್ ಎಸ್ ಕುಡ್ಲ ಕಂಬೈನ್ಸ್ ಮೂಲಕ ನಿರ್ಮಾಣ ಮಾಡುತ್ತಿರುವ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.
#