ಜಿಮ್ ರವಿ ಅಂತಲೇ ಚಿತ್ರರಂಗದ ಪರಿಸರದಲ್ಲಿ ಫೇಮಸ್ಸಾಗಿರುವ ಎ ವಿ ರವಿ ಸಹಜ ದೇಹದಾರ್ಢ್ಯ ಹೊಂದಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇದರ ಜೊತೆಗೆ ಸಿನಿಮಾ ನಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಡ್ರಗ್ಸು, ಪೌಡರು, ಇಂಜೆಕ್ಷನ್ನುಗಳನ್ನೆಲ್ಲಾ ಬಳಸಿ ಜಿಮ್ ಮಾಡುವುದರ ವಿರುದ್ದ ಹೋರಾಟ ನಡೆಸಿಕೊಂಡು ಬಂದಿರುವ ರವಿ ನ್ಯಾಚುರಲ್ ಬಾಡಿ ಬಿಲ್ಡರ್ ಎನ್ನಿಸಿಕೊಂಡವರು. ಕೋಲಾರದಿಂದ ಬಂದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲೇರಿ ನಿಂತು, ಜಿಮ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ರವಿ ಈಗ ಚಿತ್ರರಂಗದಲ್ಲೂ ಮಹತ್ತರವಾದ ಘಟ್ಟಕ್ಕೆ ತಲುಪಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ  ʻಪುರುಷೋತ್ತಮʼ ಸಿನಿಮಾದೊಂದಿಗೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಹೊತ್ತಿನಲ್ಲಿ ರವಿ ಅವರ ಕುರಿತಾದ ಸಣ್ಣ ಪರಿಚಯ ಇಲ್ಲಿದೆ.

ಕನ್ನಡ ಚಿತ್ರರಂಗದ ಪ್ರತಿಯೊಬ್ಬರಿಗೂ ಪರಿಚಿತ ಹೆಸರು ಜಿಮ್ ರವಿ. ಮೂವತ್ತು ವರ್ಷಗಳಿಂದ ಸಿನಿಮಾರಂಗದಲ್ಲಿರುವ ಎ.ವಿ. ರವಿ ಕನ್ನಡ, ತೆಲುಗು, ತಮಿಳು  ಸೇರಿದಂತೆ ದಕ್ಷಿಣ ಭಾರತದಲ್ಲಿ ಸರಿಸುಮಾರು ನೂರ ನಲವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಮಾತ್ರವಲ್ಲದೆ ಕನ್ನಡದ ಬಹುತೇಕ ಹೀರೋಗಳ ಜೊತೆ ರವಿ ಪಾತ್ರ ನಿರ್ವಹಿಸಿದ್ದಾರೆ. ಡಾ. ರಾಜ್ ಕುಮಾರ್ ಅವರೊಂದಿಗೆ ಮಾತ್ರ ನಟಿಸುವ ಯೋಗ ಸಿಗಲಿಲ್ಲವಾದರೂ, ಅವರೊಂದಿಗೆ ತೀರಾ ಆತ್ಮೀಯ ಬಾಂಧವ್ಯ ಹೊಂದಿದ್ದವರು ರವಿ. ಅಣ್ಣಾವ್ರಿಗೆ ದೇಹವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಬಗ್ಗೆ ವಿಶೇಷ ಒಲವಿತ್ತು.

ರವಿ ಮೂಲತಃ ಸ್ಪೋರ್ಟ್ಸ್ ಫೀಲ್ಡಿನವರು. ಇವರ ಕುಟುಂಬದ ಹಿನ್ನೆಲೆಯಿಂದಲೂ ಯಾರೆಂದರೆ ಯಾರೂ ಚಿತ್ರರಂಗದ ನಂಟು ಹೊಂದಿದವರಲ್ಲ. ಆದರೆ ಸಿನಿಮಾ ಅನ್ನೋದು ರವಿ ಅವರಿಗೆ ಅಪಾರವಾಗಿ ಸೆಳೆಯುತ್ತಿತ್ತು. ಚಿಕ್ಕಂದಿನಲ್ಲೇ ತಾನೊಬ್ಬ ರಂಗಭೂಮಿ ಕಲಾವಿದನಾಗಬೇಕು, ಚಿತ್ರರಂಗಕ್ಕೆ ಸೇರಿ ನಟನಾಗಿ ಗುರುತಿಸಿಕೊಳ್ಳಬೇಕು ಎನ್ನುವ ಬಯಕೆ ಒಳಗೊಳಗೇ ಬೆಳೆದುನಿಂತಿತ್ತು. ಕ್ರೀಡಾ ಕ್ಷೇತ್ರದ ಅತ್ಯುನ್ನತ ಸ್ಥಾನಗಳಿಗೆ ರವಿ ತಲುಪಿಕೊಂಡಿದ್ದಾರೆ. ದೇಹದಾರ್ಢ್ಯದಲ್ಲಿ ಭಾರತಕ್ಕೆ ಕ್ಯಾಪ್ಟನ್ ಆಗಿದ್ದವರು. ವಿಶ್ವಮಟ್ಟದಲ್ಲಿ ಇಂಡೋ-ಪಾಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದರು. ದೇಹದಾರ್ಢ್ಯ ಸ್ಪರ್ಧೆಗಳಲ್ಲೇ ನೂರು ಚಿನ್ನದ ಪದಕವನ್ನು ಗಳಿಸಿರುವ ರವಿ ಈವರೆಗೆ ಕ್ರೀಡಾಕ್ಷೇತ್ರದಲ್ಲಿ ಪಡೆದಿರುವ ಚಿನ್ನದ ಪದಕಗಳ ಸಂಖ್ಯೆ ಬರೋಬ್ಬರಿ ಮುನ್ನೂರಕ್ಕೂ ಹೆಚ್ಚು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಮುಂಚೂಣಿಗೆ ಬಂದಿದ್ದರ ಜೊತೆ ಜೊತೆಗೆ ರವಿ ಸಿನಿಮಾ ನಂಟನ್ನೂ ಉಳಿಸಿಕೊಂಡಿದ್ದರು.

ಮೂವತ್ತು ವರ್ಷಗಳ ಹಿಂದೆಯೇ ವಿಜಯನಗರದಲ್ಲಿ ತಮ್ಮದೇ ಹೆಸರಿನಲ್ಲಿ ರವಿ ಜಿಮ್ ತರಬೇತಿ ಕೇಂದ್ರವನ್ನು ಆರಂಭಿಸಿದ್ದರು. ಅಲ್ಲಿಗೆ ಸಿನಿಮಾ ಸ್ಟಾರ್ʼಗಳು, ಐಎಎಸ್, ಐಪಿಎಸ್ ಅಧಿಕಾರಿಗಳೆಲ್ಲಾ ಬರಲು ಶುರು ಮಾಡಿದರು. ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಮುಂತಾದವರು ಆರಂಭದಲ್ಲೇ ರವಿ ಜಿಮ್ ಸ್ಟೂಡೆಂಟ್ಸ್ ಆಗಿದ್ದವರು. ಹಾಗೆ ಶುರುವಾದ ಸಿನಿಮಾ ಒಡನಾಟ ರವಿ ಅವರನ್ನು ಚಿತ್ರರಂಗದ ದಿಗ್ಗಜರಿಗೆಲ್ಲಾ ಪರಿಚಯವಾಗುವಂತೆ ಮಾಡಿತ್ತು. ಆ ಸಂದರ್ಭದಲ್ಲೇ ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರು ಕರೆದು ಸಿಪಾಯಿ ಚಿತ್ರದಲ್ಲಿ ಸಣ್ಣದೊಂದು ಪಾತ್ರ ನೀಡಿದರು. ಅಲ್ಲಿಂದ ಶುರುವಾಯ್ತು ನೋಡಿ ರವಿಯ ನಟನಾ ಹಾದಿ. ನಂತರ ಥ್ರಿಲ್ಲರ್ ಮಂಜು ಥ್ರಿಲ್ಲರ್-ಕಿಲ್ಲರ್ ಸಿನಿಮಾದಲ್ಲಿ ಛಾನ್ಸು ಕೊಟ್ಟರು.

ಹೀಗೇ ಒಂದಾದ ಮೇಲೊಂದು ಪಾತ್ರಗಳು ದಕ್ಕುತ್ತಾ ಹೋಯಿತು. ಹಾಗೆ ರವಿ ತಮಗೇ ಗೊತ್ತಿಲ್ಲದಂತೆ ನೂರನಲವತ್ತು ಸಿನಿಮಾಗಳಲ್ಲಿ ಅಭಿನಯಿಸಿಬಿಟ್ಟಿದ್ದರು. ಆರಂಭದ ದಿನದಿಂದ ಹಿಡಿದು ಇವತ್ತಿನ ತನಕ ರವಿ ಇಂಥದ್ದೇ ಪಾತ್ರ ಬೇಕು ಅಂತಾ ಕಾದು ಕೂತವರಲ್ಲ. ʻಪಾಲಿಗೆ ಬಂದಿದ್ದು ಪಂಚಾಮೃತʼ ಎನ್ನುವ ಮಾತನ್ನು ಅಕ್ಷರಶಃ ಪಾಲಿಸಿಕೊಂಡು ಬಂದವರು. ವಿಲನ್ನು, ಕಾಮಿಡಿ, ಪೋಷಕ ಪಾತ್ರ ಯಾವುದೇ ಇರಲಿ, ಸಿಕ್ಕಿರುವ ರೋಲು ಸಣ್ಣದಾ? ದೊಡ್ಡದಾ ಅಂತಲೂ ಯೋಚಿಸದೆ ಕೈಗೆಟುಕಿದ ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ನಿಭಾಯಿಸಿದರು.

ತಮ್ಮದೇ ಒಡೆತನದ ಜಿಮ್ ಬದುಕಿಗೆ ಆಸರೆಯಾಗಿತ್ತು. ಕ್ರೀಡಾಕ್ಷೇತ್ರದಲ್ಲಿ ಯಶಸ್ಸಿನ ತುತ್ತತುದಿಯನ್ನೂ ಏರಿದರು. ಇದರ ನಡುವೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗುವ ಅವಕಾಶವೂ ಒದಗಿಬಂದು. ಅಲ್ಲಿ ರವಿಯವರ ಸನ್ನಡತೆಯನ್ನು ಕಂಡ ಜನ ʻನೀವು ಯಾಕೆ ಹೀರೋ ಆಗಬಾರದುʼ ಅಂತಾ ಹೋದಲ್ಲಿ ಬಂದಲ್ಲಿ ಕೇಳಲು ಶುರು ಮಾಡಿದರು. ಅದೇ ಹೊತ್ತಿಗೆ ನಿರ್ದೇಶಕ ಅಮರ್ ಕೂಡಾ ಚೆಂದದ ಕಥೆಯೊಂದನ್ನು ಹೇಳಿದ್ದರು. ಇಸವಿ 2010ರಲ್ಲಿ ದಿಲ್ದಾರ್ ಎನ್ನುವ ಸಿನಿಮಾವೊಂದು ತೆರೆಗೆ ಬಂದಿತ್ತು. ಅದು ನಿರ್ದೇಶಕ ಅಮರ್ ಅವರ ಮೊದಲ ಸಿನಿಮಾ. ದಿಲ್ದಾರ್ ತೆರೆಗೆ ಬಂದ ದಿನವೇ ʻಈತ ಟ್ಯಾಲೆಂಟೆಂಡ್ ಡೈರೆಕ್ಟರ್ʼ ಅಂತಾ ವಿಮರ್ಶಕರು ಸರ್ಟಿಫಿಕೇಟ್ ನೀಡಿದ್ದರು. ತೀರಾ ಇತ್ತೀಚೆಗೆ ʻನಾನು ನಮ್ ಹುಡ್ಗಿ.. ಖರ್ಚಿಗೊಂದ್ ಮಾಫಿಯಾʼ ಸಿನಿಮಾವನ್ನೂ ಅಮರ್ ಡೈರೆಕ್ಟ್ ಮಾಡಿದ್ದರು.

 

ಸದ್ಯ ಅಮರ್ ನಿರ್ದೇಶನದಲ್ಲಿ, ಎ. ವಿ. ರವಿ ನಟನೆಯ ʻಪುರುಷೋತ್ತಮʼ ಆರಂಭವಾಗುತ್ತಿದೆ. ಫೆಬ್ರವರಿ ಹದಿನಾಲ್ಕರಂದು ಈ ಚಿತ್ರದ ಮುಹೂರ್ತ ನೆರವೇರಲಿದೆ. ಕಳೆದ ಮೂರು ದಶಕಗಳಿಂದ ಸಿನಿಮಾರಂಗವನ್ನು ತೀರಾ ಹತ್ತಿರದಿಂದ ಕಂಡಿರುವ ರವಿ ʻತಾನು ಯಾರದ್ದೋ ದುಡ್ಡಿನಲ್ಲಿ ಹೀರೋ ಆಗಿ ಲಾಂಚ್ ಆಗುವುದು ಬೇಡ. ಹೋದರೂ ಬಂದರೂ ಅದು ನನ್ನದೇ ಆಗಲಿʼ ಎನ್ನುವ ಕಾರಣಕ್ಕೆ ತಮ್ಮದೇ ʻರವಿ ಜಿಮ್ ಪ್ರೊಡಕ್ಷನ್ಸ್ʼ ಆರಂಭಿಸಿದ್ದಾರೆ. ತಾವೇ ಹಣ ಹೂಡಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಫ್ಯಾಮಿಲಿ ಕಥಾ ಹಂದರವನ್ನು ಹೊಂದಿರುವ  ಪುರುಷೋತ್ತಮ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಅವರ ಮ್ಯೂಸಿಕ್ಕು, ಕುಮಾರ್ ಎಂ. ಕ್ಯಾಮೆರಾ, ಅರ್ಜುನ್ ಕಿಟ್ಟು ಸಂಕಲನ ಮತ್ತು ಚಲ ಅವರ ಸಹ ನಿರ್ದೇಶನವಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕನ್ನಡದ ನಿರ್ದೇಶಕರ ಮೇಲೆ ನಂಬಿಕೆ ಇಲ್ವಾ?

Previous article

ದಿನದಿಂದ ದಿನಕ್ಕೆ ರಂಗೇರುತ್ತಿದೆ ರಜಾ ದಿನ….

Next article

You may also like

Comments

Leave a reply

Your email address will not be published. Required fields are marked *