ದಕ್ಷಿಣದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ವರ್ಷಗಳ ನಂತರ ನಟ ಸಿಂಬು ಜೊತೆ ತೆರೆಹಂಚಿಕೊಳ್ಳುವ ಸುದ್ದಿ ನೀಡಿದ್ದಾರೆ. ಸ್ವತಃ ಅವರೇ ಈ ಸುದ್ದಿಯನ್ನು ಟ್ವೀಟ್ ಮಾಡಿ ಖಚಿತಪಡಿಸಿರುವುದು ವಿಶೇಷ. ಈ ಹಿಂದೆ ‘ವಾಲು’, ‘ವೆಟ್ಟೈ ಮನ್ನನ್’ ತಮಿಳು ಚಿತ್ರಗಳಲ್ಲಿ ಸಿಂಬು ಮತ್ತು ಹನ್ಸಿಕಾ ಜೋಡಿಯಾಗಿ ನಟಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಪ್ರೀತಿ ಮೊಳೆತೆತ್ತು. ಇನ್ನೇನು ಇಬ್ಬರು ಮದುವೆಯಾಗುತ್ತಾರೆ ಎಂದೇ ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಅಷ್ಟರಲ್ಲಿ ಇವರ ಕುಟುಂಬದವರು ಮಧ್ಯೆ ಪ್ರವೇಶಿಸಿದ್ದರಿಂದ ಮದುವೆ ಮುರಿದುಬಿದ್ದಿತ್ತು. ನಂತರ ಬೇರ್ಪಟ್ಟ ಇಬ್ಬರು ವೃತ್ತಿ ಬದುಕಿನಲ್ಲಿ ಬಿಜಿಯಾದರು.
ಮತ್ತೆ ಇಬ್ಬರು ಜೊತೆಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಾರರು ಎನ್ನುವ ಹೊತ್ತಿನಲ್ಲಿ ಈ ಸುದ್ದಿ ಹೊರಬಿದ್ದಿದೆ. ಯು.ಆರ್.ಜಮೀಲ್ ನಿರ್ದೇಶನದ ‘ಮಹಾ’ ತಮಿಳು ಚಿತ್ರದಲ್ಲಿ ಸಿಂಬು ಮತ್ತು ಹನ್ಸಿಕಾ ತೆರೆಹಂಚಿಕೊಳ್ಳಲಿದ್ದಾರೆ. ಆದರೆ ಚಿತ್ರದಲ್ಲಿ ಇಬ್ಬರ ಪಾತ್ರಗಳು ಹೇಗಿರುತ್ತವೆ ಎನ್ನುವ ಕುರಿತಾಗಿ ನಿಖರ ಮಾಹಿತಿ ಲಭ್ಯವಿಲ್ಲ. ನಟಿ ಹನ್ಸಿಕಾ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಪ್ರೇಮಿಗಳು ಕೈಕೈ ಹಿಡಿದ ಒಂದು ಫೋಟೋ ಹಾಕಿ ಈ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ. ಇದು ಊಹಾಪೋಹಗಳಿಗೆ ಕಾರಣವಾಗಿದ್ದು, ಇಬ್ಬರ ಮಧ್ಯೆ ಪ್ರೀತಿಯಿನ್ನೂ ಜೀವಂತವಾಗಿದೆ ಎಂದೇ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಅಂದಹಾಗೆ ಹನ್ಸಿಕಾಗೆ ಇದು ಐವತ್ತನೇ ಚಿತ್ರವಾಗಿದ್ದು, ವೃತ್ತಿಬದುಕಿನ ಮೈಲುಗಲ್ಲು ಚಿತ್ರವಾಗಿಯೂ ದಾಖಲಾಗುತ್ತಿದೆ. ಶ್ರೀಕಾಂತ್, ತಂಬಿ ರಾಮಯ್ಯ, ಕರುಣಾಕರಣ್, ನಾಸರ್, ಜಯಪ್ರಕಾಶ್ ಚಿತ್ರದ ಇತರೆ ತಾರಾಬಳಗದಲ್ಲಿದ್ದಾರೆ.
No Comment! Be the first one.